ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವುದು ಸಹಿಸಲ್ಲ: ಹೈಕೋರ್ಟ್‌ ಎಚ್ಚರಿಕೆ! ಏನಿದು ಪ್ರಕರಣ?

Kannadaprabha News   | Kannada Prabha
Published : Jul 07, 2026, 09:46 AM IST
High court

ಸಾರಾಂಶ

ಯುಕೆಜಿ ವಿದ್ಯಾರ್ಥಿನಿಗೆ ಕೋಲಿನಿಂದ ಹೊಡೆದ ಆರೋಪ ಎದುರಿಸುತ್ತಿರುವ ಶಿಕ್ಷಕಿ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಮಕ್ಕಳಿಗೆ ಹೊಡೆದು ಪಾಠ ಕಲಿಸುವುದನ್ನು ನ್ಯಾಯಾಲಯ ಸಹಿಸುವುದಿಲ್ಲ ಎಂದು ನ್ಯಾಯಪೀಠ ಕಟುವಾಗಿ ಹೇಳಿದ್ದು, ಶಿಕ್ಷಕಿ ವಿರುದ್ಧ ಮುಂದುವರಿದ ವಿಚಾರಣೆ.

ಬೆಂಗಳೂರು (ಜು.7): ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವುದನ್ನು ಸಹಿಸುವುದಿಲ್ಲ ಎಂದು ಕಟುವಾಗಿ ನುಡಿದಿರುವ ಹೈಕೋರ್ಟ್, ‌ಯುಕೆಜಿ ವಿದ್ಯಾರ್ಥಿನಿಗೆ‌ ಕೋಲಿನಿಂದ ಹೊಡೆದ ಪ್ರಕರಣದಲ್ಲಿ ಶಿಕ್ಷಕಿ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

 ಮಗುವಿಗೆ ಹೊಡೆದ ಪ್ರಕರಣ ಸಂಬಂಧ ‌ಮಂಗಳೂರಿನಲ್ಲಿರುವ 2ನೇ ಜೆಎಂಎಫ್‌ಸಿ ಕೋರ್ಟ್ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಸುರತ್ಕಲ್ ನ‌‌ ಹೋಲಿ ಫ್ಯಾಮಿಲಿ ಶಾಲೆಯ‌ ಶಿಕ್ಷಕಿ ಆಶಾ ಕ್ರಾಸ್ತಾ ಹೈಕೋರ್ಟ್‌ಗೆ ಅರ್ಜಿ‌ ಸಲ್ಲಿಸಿದ್ದರು. ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆಯೇ ಅರ್ಜಿದಾರ ಪರ ವಕೀಲರನ್ನುದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಉದ್ದೇಶಿಸಿ ಶಿಕ್ಷಕಿ ಯಾಕೆ ಮಗುವನ್ನು ಹೊಡೆದರು ಎಂದು ಪ್ರಶ್ನಿಸಿತು. ಅರ್ಜಿದಾರ ಪರ ವಕೀಲರು, ನಾವಲ್ಲ ಎಂದು ಹೇಳುತ್ತಿದ್ದಂತೆಯೇ ಕೋಪಗೊಂಡ ನ್ಯಾಯಪೀಠ, ಶಿಕ್ಷಕರು ಮಕ್ಕಳಿಗೆ ಹೊಡೆದು ಪಾಠ ಕಲಿಸುವ ಅಗತ್ಯವಿಲ್ಲ.‌‌ ಇಂಥ ನಡೆ ನ್ಯಾಯಾಲಯ ಸಹಿಸಲ್ಲ ಎಂದು ಕಟುವಾಗಿ ನುಡಿಯಿತು.

ನಂತರ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿದಾರರ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲು ನಿರಾಕರಿಸಿದ ನ್ಯಾಯಾಲಯ, ಅರ್ಜಿ ಸಂಬಂಧ‌ ಸುರತ್ಕಲ್ ಪೊಲೀಸ್ ಠಾಣಾಧಿಕಾರಿಗೆ ಮತ್ತು ದೂರುದಾರೆಯಾದ ಮಗುವಿನ ತಾಯಿಗೆ ಶ್ರಫೀನಾಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?:

ಶ್ರಫೀನಾ ಅವರು 2026ರ ಜ.31ರಂದು ಸುರತ್ಕಲ್ ಠಾಣೆ ದೂರು ನೀಡಿ, ನನ್ನ 6 ವರ್ಷದ ಮಗಳು ಸುರತ್ಕಲ್‌ನ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಎಲ್‌ಕೆಜಿ ವ್ಯಾಸಂಗ ಮಾಡುತ್ತಿದ್ದಾಳೆ. ಮಗಳಿಗೆ ಶಿಕ್ಷಕಿ ಆಶಾ ಕ್ರಾಸ್ತಾ ತರಗತಿ ವೇಳೆ ಹೊಡೆದಿದ್ದರು‌ ಎಂದು ಆರೋಪಿಸಿದ್ದರು.

ಅಲ್ಲದೆ, ಘಟನೆಯನ್ನು ಶಾಲೆ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಮಾತುಕತೆ ನಡೆಸಿ ಮುಕ್ತಾಯಗೊಳಿಸಲಾಗಿತ್ತು. ಈ ಬಗ್ಗೆ ಶಿಕ್ಷಕಿ ಆಶಾ ಕ್ರಾಸ್ತಾ ಅವರಿಗೂ ತಿಳಿಸಲಾಗಿತ್ತು. ಇಷ್ಟಾದರೂ ಮತ್ತೆ 2026ರ ಜ.30ರಂದು ನನ್ನ ಮಗಳಿಗೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ‌. ಹಾಗಾಗಿ, ಶಿಕ್ಷಕಿ ಆಶಾ ಕ್ರಾಸ್ತಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಅದನ್ನು ಆಧರಿಸಿ ಪೊಲೀಸರು, ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 75 (ಮಕ್ಕಳ ಮೇಲಿನ ಕ್ರೌರ್ಯ ಎಸಗಿದ) ಮತ್ತು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 118(1) ಹೊಡೆದು ದೈಹಿಕ ನೋವು ಅಥವಾ ಗಾಯ ಉಂಟುಮಾಡಿದ ಅಡಿ ಎಫ್ಐಆರ್ ದಾಖಲಿಸಿದ್ದರು. ನಂತರ ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ‌ಪಟ್ಟಿ ‌ಸಲ್ಲಿಸಿದ್ದರು. ಪ್ರಕರಣವು ಮಂಗಳೂರಿನ 2ನೇ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿತ್ತು.

- ಯುಕೆಜಿ ವಿದ್ಯಾರ್ಥಿನಿಗೆ ಕೋಲಿಂದ ಏಟು । ಶಿಕ್ಷಕಿ ವಿರುದ್ಧ ಅಧೀನ ಕೋರ್ಟ್‌ ವಿಚಾರಣೆ । ಇದಕ್ಕೆ ತಡೆ ನೀಡಲು ಹೈಕೋರ್ಟ್‌ ನಿರಾಕರಣೆ

PREV
Read more Articles on
click me!

Recommended Stories

ಅಂದು 15 ಸಾವಿರ ಫೀಸ್​ಗೆ ಅಮ್ಮ ಬಳೆ ಮಾರಿದ್ರು: ಈಗ 1.9 ಕೋಟಿ ಸಂಬಳ- ಬೆಂಗಳೂರು ಯವಕನ ಹೃದಯಸ್ಪರ್ಶಿ ಬರಹ
ಕಾಡಂಚಿನ ಶಾಲಾ ಶಿಕ್ಷಕರಿಗೆ ಕಂಠಕ ತಂದ 'ಕರ್ತವ್ಯ' ಆ್ಯಪ್‌; ಆನ್‌ಲೈನ್ ಹಾಜರಾತಿ ದುಸ್ತರ