
ಬೆಂಗಳೂರು (ಜು.05): ಬೆಂಗಳೂರು ವಿಶ್ವವಿದ್ಯಾಲಯದ 2026ನೇ ಸಾಲಿನ ಪಿಹೆಚ್.ಡಿ. ಪ್ರವೇಶ ಪರೀಕ್ಷೆಯನ್ನು ಭಾನುವಾರ ಯಶಸ್ವಿಯಾಗಿ ನಡೆಸಲಾಯಿತು. ಒಟ್ಟು 1,299 ಅರ್ಜಿಗಳು ಅನುಮೋದನೆಗೊಂಡಿದ್ದು, 870 ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು. 429 ಅಭ್ಯರ್ಥಿಗಳು ಗೈರಾಗಿದ್ದರು.
ಕಲಾ, ವಿಜ್ಞಾನ, ವಾಣಿಜ್ಯ, ನಿರ್ವಹಣೆ, ದೈಹಿಕ ಶಿಕ್ಷಣ ಹಾಗೂ ಕಾನೂನು ನಿಕಾಯಗಳ ಅಭ್ಯರ್ಥಿಗಳಿಗಾಗಿ ನಗರದ ಸುರಾನ ಕಾಲೇಜು ಹಾಗೂ ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲಾಯಿತು.
ಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಪ್ರಶ್ನೆಪತ್ರಿಕೆಗಳನ್ನು ಭದ್ರತಾ ಸಿಬ್ಬಂದಿಯ ಬೆಂಗಾವಲಿನಲ್ಲಿ ಸಾಗಿಸಲಾಯಿತು. ಪರೀಕ್ಷಾ ಕೇಂದ್ರಗಳಲ್ಲಿ ಬಹುಹಂತದ ತಪಾಸಣೆ ನಡೆಸಲಾಗಿದ್ದು, ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಎಸ್.ಎಂ., ಕುಲಸಚಿವೆ ಕೆ.ಟಿ. ಶಾಂತಲಾ ಹಾಗೂ ಕುಲಸಚಿವರು (ಮೌಲ್ಯಮಾಪನ) ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ಪಿಹೆಚ್.ಡಿ. ಪ್ರವೇಶದ ಮೌಖಿಕ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಜುಲೈ 11ರಂದು ಪ್ರಕಟಿಸಲಾಗುವುದು. ಜುಲೈ 14 ಮತ್ತು 15ರಂದು ಸಂಬಂಧಿತ ಸ್ನಾತಕೋತ್ತರ ವಿಭಾಗಗಳಲ್ಲಿ ಮೌಖಿಕ ಪರೀಕ್ಷೆ ನಡೆಯಲಿದೆ. ಜುಲೈ 17ರಂದು ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುವುದು. ನಂತರ ಜುಲೈ 20ರಂದು ಪಿಹೆಚ್.ಡಿ. ಸೀಟುಗಳ ಹಂಚಿಕೆಗಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನಡೆಸಲಾಗುವುದು.