ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವ ಸಂಬಂಧ ಕರ್ನಾಟಕ ಶಿಕ್ಷಣ ಆಯೋಗ ಕಾರ್ಯಪಡೆ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿದೆ. ಇದರ ಮತ್ತಷ್ಟು ವಿವರ ಈ ಕೆಳಗಿನಂತಿದೆ.
ಬೆಂಗಳೂರು, (ನ.07): ರಾಜ್ಯದಲ್ಲಿ “ರಾಷ್ಟ್ರೀಯ ಶಿಕ್ಷಣ ನೀತಿ-2020” ಅನುಷ್ಠಾನಗೊಳಿಸುವ ಸಂಬಂಧ ರಚನೆಗೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ.ರಂಗನಾಥ್ ಅವರ ನೇತೃತ್ವದ ಕಾರ್ಯಪಡೆಯು ಕರ್ನಾಟಕ ಶಿಕ್ಷಣ ಆಯೋಗ (ಕೆಎಸ್ಎ/ಕೆಇಸಿ), ಅನುಷ್ಠಾನ ಮಿಷನ್, ಇನ್ನಿತರ ಹಲವು ಹೊಸ ಸಂಸ್ಥೆಗಳ ಸ್ಥಾಪನೆ ಸೇರಿದಂತೆ ಹಲವು ಸಲಹೆಗಳಿರುವ ಅಂತಿಮ ವರದಿಯನ್ನು ಶನಿವಾರ ಸರ್ಕಾರಕ್ಕೆ ಸಲ್ಲಿಸಿತು.
ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ವಿಧಾನಸೌಧದಲ್ಲಿ ಅಂತಿಮ ವರದಿ ಸಲ್ಲಿಸಿದರು.
ಮೋದಿ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ ಅಭಿಯಾನಕ್ಕೆ ಡಿಸಿಎಂ ಚಾಲನೆ
ನಂತರ ಪತ್ರಿಕೋಷ್ಠಿ ಉದ್ದೇಶಿಸಿ ಮಾತನಾಡಿದ ಅಶ್ವತ್ಥ ನಾರಾಯಣ ಅವರು, ವಿವಿಧ ಇಲಾಖೆಗಳು, ಕಾರ್ಯಗಳು, ಸಂಸ್ಥೆಗಳು ಹಾಗೂ ಘಟಕಗಳ ನಡುವೆ ಸಮನ್ವಯತೆ ಸಾಧಿಸುವುದಕ್ಕಾಗಿ ಕರ್ನಾಟಕ ಶಿಕ್ಷಣ ಆಯೋಗ (ಕೆಎಸ್ಎ)/(ಕೆಇಸಿ) ವನ್ನು ಸ್ಥಾಪಿಸಬೇಕು; ಪ್ರಾಥಮಿಕ-ಪ್ರೌಢ ಹಾಗೂ ಉನ್ನತ ಶಿಕ್ಷಣ ಇವೆರಡೂ ಈ ಆಯೋಗದಡಿ ಕೆಲಸ ಮಾಡಬೇಕು; ಈ ಆಯೋಗಕ್ಕೆ ಮುಖ್ಯಮಂತ್ರಿ ಅವರು ಅಧ್ಯಕ್ಷರಾಗಿದ್ದುಕೊಂಡು ವರ್ಷಕ್ಕೆ ಕನಿಷ್ಠ ಎರಡು ಸಲ ಅಥವಾ ಅಗತ್ಯವಿದ್ದರೆ ಅದಕ್ಕಿಂತ ಹೆಚ್ಚು ಸಲ ಸಭೆಗಳನ್ನು ನಡೆಸಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಬೇಕು; ಉನ್ನತ ಶಿಕ್ಷಣ ಸಚಿವರು ಹಾಗೂ ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವರು ಇದರ ಉಪಾಧ್ಯಕ್ಷರಾಗಿರಬೇಕು ಎಂಬುದು ಸೇರಿದಂತೆ ಹಲವು ಪ್ರಮುಖ ಕ್ರಮಗಳ ಬಗ್ಗೆ ಸಲಹೆಗಳನ್ನು ಈ ವರದಿ ಒಳಗೊಂಡಿದೆ ಎಂದು ತಿಳಿಸಿದರು.
2021-22ನೇ ಶೈಕ್ಷಣಿಕ ವರ್ಷದಿಂದ ಇದನ್ನು ಹಂತ ಹಂತವಾಗಿ ಅಳವಡಿಸಲಾಗುತ್ತದೆ. ಅದಕ್ಕೆ ಮುನ್ನ ಎಲ್ಲಾ ಹಿತಾಸಕ್ತಿದಾರರೊಂದಿಗೆ ವರದಿ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ನೀತಿಯನ್ನು ಪೂರ್ತಿಯಾಗಿ ಅಳವಡಿಸಲು 15 ವರ್ಷಗಳ ಕಾಲಾವಕಾಶವಿದೆ. ಆದರೆ ಕರ್ನಾಟಕ ಸರ್ಕಾರವು 10 ವರ್ಷಗಳೊಳಗೇ ಇದರ ಅಳವಡಿಕೆ ಪ್ರಕ್ರಿಯೆಯನ್ನು ಮುಗಿಸುವ ಗುರಿ ಹೊಂದಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.
ಮಾರ್ಚ್ 4ರಂದು ರಚನೆಗೊಂಡಿದ್ದ ಈ ಪಡೆಯು ಮೂರು ಉಪ ಸಮಿತಿಗಳ ನೆರವಿನಿಂದ ಹಲವು ಸುತ್ತುಗಳಲ್ಲಿ ಸಮಾಲೋಚನೆ ನಡೆಸಿ ವರದಿಯನ್ನು ಅಂತಿಮಗೊಳಿಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ಕಾರ್ಯಪಡೆ ಸದಸ್ಯ ಎಂ.ಕೆ.ಶ್ರೀಧರ್ ಮತ್ತಿತರರು ಗೋಷ್ಠಿಯಲ್ಲಿದ್ದರು.
ವರದಿಯಲ್ಲಿರುವ ಇತರ ಪ್ರಮುಖ ಸಲಹೆಗಳು ಈ ಕೆಳಕಂಡಂತಿವೆ:
• ನಿರ್ದಿಷ್ಟ ಗುರಿಗಳೊಂದಿಗೆ ಅನುಷ್ಠಾನ ಮಿಷನ್ ಅನ್ನು ಸ್ಥಾಪಿಸಬೇಕು. ಪ್ರತಿ ಮೂರು ತಿಂಗಳ ಅವಧಿಗೆ ನಿಗದಿ ಮಾಡಲಾದ ಗುರಿಗಳ ಕ್ಯಾಲೆಂಡರ್ ಅನ್ನು ಮುಂದಿನ 3 ವರ್ಷಗಳ ಅವಧಿಗಾಗಿ ಸಿದ್ಧಪಡಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಅನುಷ್ಠಾನ ಪ್ರಗತಿ ಕುರಿತು ಸಾರ್ವಜನಿಕ ಅವಲೋಕನ ನಡೆಸಬೇಕು. ಇದಕ್ಕಾಗಿ ಅನುಷ್ಠಾನ ಕಾರ್ಯಪಡೆ (ಐಟಿಎಫ್) ರಚಿಸಬೇಕು.
• ಎಸ್.ಎಸ್.ಕೆ. (ಸಮಗ್ರ ಶಿಕ್ಷಣ) ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯಲ್ಲಿ (KSHEC) ತಕ್ಷಣವೇ “ಅನುಷ್ಠಾನ ನಿಧಿ”ಗೆ ಅನುವು ಮಾಡಿಕೊಡಬೇಕು.
• ರಾಜ್ಯ ಶಾಲಾ ಪ್ರಮಾಣೀಕರಣ ಪ್ರಾಧಿಕಾರ (ಎಸ್ಎಸ್ಎಸ್ಎ) ಮತ್ತು ಕರ್ನಾಟಕ ಉನ್ನತ ಶಿಕ್ಷಣ ನಿಯಂತ್ರಣ ಮಂಡಳಿ (ಕೆಎಚ್ಇಆರ್ ಸಿ) ಎಂಬ ನಿಯಂತ್ರಣ ಸಂಸ್ಥೆಗಳನ್ನು ಸ್ಥಾಪಿಸಬೇಕು.
• ಹೊಸ ನೀತಿಯಲ್ಲಿ ಪ್ರಸ್ತಾವಿಸಲಾಗಿರುವ ಉನ್ನತ ಶಿಕ್ಷಣ ಸಂರಚನೆಯನ್ನು ಕಾರ್ಯರೂಪಕ್ಕಿಳಿಸಲು ಹೊಸ ಕೆಎಸ್ ಯು (ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ) ಕಾಯಿದೆ ರೂಪಿಸಬೇಕು.
• ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ ಇರುವ ಸಂಸ್ಥೆಗಳ ನಡುವೆ ಪ್ರತ್ಯೇಕ ಅಧಿಕಾರ ವ್ಯಾಪ್ತಿಯನ್ನು ನಿಗದಿಗೊಳಿಸಬೇಕು.
• ಕೆಪಿಎಸ್/ ಶಾಲಾ ಸಮುಚ್ಚಯಗಳಲ್ಲಿ ಸೇವಾ ನಿಯಮಗಳು- ಟೆನ್ಯೂರ್ ಶಿಪ್ ಗಳಿಗೆ ತಿದ್ದುಪಡಿಗಳನ್ನು ತರಬೇಕು; ಶಿಕ್ಷಕರ ವೃತ್ತಿ ಬೆಳವಣಿಗೆ ಹಾಗೂ ವೃತ್ತಿ ಬೆಳವಣಿಗೆ ಉನ್ನತಿ ಕುರಿತು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು.
• ರಾಜ್ಯದಲ್ಲಿ ಗುರುತಿಸಲಾದ ವಲಯಗಳಾದ್ಯಂತ ವಿಶೇಷ ಶೈಕ್ಷಣಿಕ ವಲಯಗಳನ್ನು (ಎಸ್ಇಝಡ್) ಸ್ಥಾಪಿಸಬೇಕು.
• ಆರ್ಥಿಕ-ಸಾಮಾಜಿಕವಾಗಿ ಹಿಂದುಳಿದ (ಎಸ್ಇಡಿ) ಮಕ್ಕಳಿಗಾಗಿ ಲಿಂಗತ್ವ ಮತ್ತು ವಿಶೇಷ ಸಾಮರ್ಥ್ಯವುಳ್ಳವರಿಗಾಗಿ (ವಿಕಲ ಚೇತನರು) ಅನುದಾನ ಸೇರಿದಂತೆ ಇತರ ಸಮಷ್ಟಿ ಶಿಕ್ಷಣಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕು.
ಶಾಲಾ ಶಿಕ್ಷಣ ಹಂತಕ್ಕೆ ನಿರ್ದಿಷ್ಟ ಕ್ರಮಗಳು:
• ಬುನಾದಿ (ಫೌಂಡೇಷನಲ್) ವರ್ಷಗಳ ಶಾಖೆ ಮತ್ತು ಅಕ್ಷರ ಜ್ಞಾನ- ಸಂಖ್ಯಾ ಜ್ಞಾನ ಶಾಖೆಗಳನ್ನು ಸ್ಥಾಪಿಸಬೇಕು.
• ಶಾಲಾ ಶಿಕ್ಷಣದ ಮರುಸಂರಚನೆ
• ಮಗುವಿನ 3ನೇ ಆರಂಭದಿಂದ ಬಾಲ್ಯಾರಂಭ ಶಿಕ್ಷಣ ಆರಂಭವಾಗಲಿದೆ. ಒಟ್ಟಾರೆ ಶಾಲಾ ಶಿಕ್ಷಣವು 5+3+3+4 (ಬುನಾದಿ ಹಂತ, ಪೂರ್ವಸಿದ್ಧತೆ ಹಂತ ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣ ಹಂತ) ತರಗತಿಗಳನ್ನು ಒಳಗೊಂಡಿರುತ್ತದೆ. ಒಂದೆಡೆ, 11 ಮತ್ತು 12ನೇ ತರಗತಿಗಳನ್ನು ಪ್ರೌಢ ಶಿಕ್ಷಣ ಹಂತದೊಂದಿಗೆ ಸಂಯೋಜಿಸಲು ಗಮನ ಕೇಂದ್ರೀಕರಿಸಲಾಗುವುದು. ಮತ್ತೊಂದೆಡೆ, ಬುನಾದಿ ಶಿಕ್ಷಣವು 5 ವರ್ಷಗಳ ಸಮಗ್ರ ಪಠ್ಯಕ್ರಮ ಹೊಂದಿರುತ್ತದೆ. ಶಾಲಾ ಹಂತದ ಬುನಾದಿ ಹಂತ ಮತ್ತು ಪೂರ್ವಸಿದ್ಧತಾ ಮಟ್ಟಗಳಿಗಾಗಿ ಪಠ್ಯಕ್ರಮ ಹಾಗೂ ಶಿಕ್ಷಣ ಶಾಸ್ತ್ರದ ಪರಿಷ್ಕರಣೆ ಕಾರ್ಯವನ್ನು ಡಿಎಸ್ಇಆರ್ ಟಿ ಕೈಗೆತ್ತಿಕೊಳ್ಳಬೇಕು.
• ಬಾಲ್ಯಾರಂಭ ಶಿಕ್ಷಣಕ್ಕೆ ಅನುಗುಣವಾಗಿ ನಲಿ ಕಲಿ ಪಠ್ಯಕ್ರಮವನ್ನು ಪರಿಷ್ಕರಿಸಲಾಗುವುದು. ಈ ಬಾಲ್ಯಾರಂಭ ಶಿಕ್ಷಣವು ರಾಜ್ಯದಾದ್ಯಂತ “ಚಿಲಿ ಪಿಲಿ ಪ್ಲಸ್” ಪಠ್ಯಕ್ರಮ ಆಧಾರಿತವಾಗಿರುತ್ತದೆ.
• ಯಶಸ್ವಿ ಶಾಲೆಗಳನ್ನು, ಅದರಲ್ಲೂ ಮುಖ್ಯವಾಗಿ ಕೆಪಿಎಸ್ ಮತ್ತು ಇನ್ನಿತರ ವಿಶೇಷ ಶಾಲೆಗಳನ್ನು ಗುರುತಿಸಿ ಅವುಗಳನ್ನು ಶಾಲಾ ಸಮುಚ್ಚಯ ಕೇಂದ್ರಗಳಾಗಿ ನಿರ್ಮಿಸಬೇಕು.
• ‘ಗುರು ಚೇತನ’ ಯೋಜನೆಯನ್ನು ಸದೃಢಗೊಳಿಸಿ ಅದನ್ನು ರಾಜ್ಯದಲ್ಲಿ ವಿಶೇಷ ಶಿಕ್ಷಣ ವೃತ್ತಿ ಬೆಳವಣಿಗೆ ವೇದಿಕೆಯನ್ನಾಗಿ ರೂಪಿಸಬೇಕು.
ಉನ್ನತ ಶಿಕ್ಷಣ ಹಂತಕ್ಕೆ ನಿರ್ದಿಷ್ಟ ಕ್ರಮಗಳು
• ಕರ್ನಾಟಕ ಶಿಕ್ಷಣ ಕಾಯಿದೆಯು (ಕೆಎಸ್ ಯು) ಕೆಎಚ್ಇಸಿ, ಕೆಎಚ್ಇಜಿಸಿ, ಕೆಎಚ್ಇಆರ್ ಸಿ, ಮತ್ತು ಕೆಆರ್ ಐಸಿಯಂತಹ ಸ್ವತಂತ್ರ ಹಾಗೂ ಸ್ವಾಯತ್ತ ಸಂಸ್ಥೆಗಳ ರಚನೆ, ನೇಮಕಾತಿ, ಕಾರ್ಯನಿರ್ವಹಣಾ ಸ್ವರೂಪ, ನಿಯಮಗಳು ಹಾಗೂ ನಿಬಂಧನೆಗಳಿಗೆ ಅನುವು ಮಾಡಿಕೊಡುತ್ತದೆ. ವಿಶ್ವವಿದ್ಯಾಲಯಗಳ ಪರಿಕಲ್ಪನೆ, ಸ್ವತಂತ್ರ ಆಡಳಿತ ಮಂಡಳಿಗಳು, ಸಂಯೋಜಿತ ಕಾಲೇಜುಗಳ ಸಶಕ್ತೀಕರಣ, ಸಂಯೋಜಿತ ಕಾಲೇಜುಗಳಿತ ಶ್ರೇಣೀಕೃತ ಸ್ವಾಯತ್ತತೆ, ಸಾಂಸ್ಥಿಕ ಅಭಿವೃದ್ಧಿ ಯೋಜನೆ (ಐಡಿಪಿ), ನಾವೀನ್ಯತೆಯನ್ನು ಉತ್ತೇಜಿಸುವ ಜೊತೆಗೆ ಪ್ರಕ್ರಿಯೆಯಲ್ಲಿ ಬಿಗುವಿನಿಂದ ಕೂಡಿದ ನಿಯಮಗಳನ್ನು ನಿವಾರಿಸುವುದು, ಪ್ರವೇಶಾತಿಗೆ ಭೌಗೋಳಿಕ ಕಟ್ಟುಪಾಡಗಳನ್ನು ತೆಗೆದು ಹಾಕುವುದು ಇತ್ಯಾದಿ ಬಗ್ಗೆ ಇದು ಒತ್ತು ನೀಡುತ್ತದೆ.
• ಉನ್ನತ ಶಿಕ್ಷಣ ಸಂಸ್ಥೆಗಳು ಆಡಳಿತ ಮಂಡಳಿಯನ್ನು (BoG) ರಚಿಸಬೇಕು; ಮೊದಲಿಗೆ, ಕೆಎಸ್ಎಚ್ಇಸಿ ಮಾರ್ಗದರ್ಶನ ಕೇಂದ್ರಗಳ ಬಗ್ಗೆ ಗಮನ ಕೇಂದ್ರೀಕರಿಸಿ ಒತ್ತಾಸೆ ಒದಗಿಸಬೇಕು. ನಂತರ ಈ ಕೇಂದ್ರಗಳು ಇತರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ (HEI) ಮಾರ್ಗದರ್ಶನ ಕೇಂದ್ರಗಳಾಗಬೇಕು.
• ಮಾರ್ಗದರ್ಶನ ಕೇಂದ್ರಗಳನ್ನು ಗುರುತಿಸಬೇಕು. ರಾಷ್ಟ್ರೀಯ ಶಿಕ್ಷಣ ಕಾರ್ಯನೀತಿಯ ತತ್ತ್ವಗಳ ಅನುಪಾಲನೆಯನ್ನು ಖಾತ್ರಿಗೊಳಿಸಲು ಕಾರ್ಯಾಗಾರಗಳನ್ನು ನಡೆಸಬೇಕು.
• ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು (HEI) ಸಾಂಸ್ಥಿಕ ಅಭಿವೃದ್ಧಿ ಯೋಜನೆ (ಐಡಿಪಿ) ಗಳನ್ನು ಅಭಿವೃದ್ಧಿಪಡಿಸಬೇಕು; ಆರಂಭಿಕ ಹಂತದಲ್ಲಿ ಕೆಎಸ್ಎಚ್ಇಸಿ ಮತ್ತು ಮಾರ್ಗದರ್ಶಕ ಸಂಸ್ಥೆಗಳು ಒತ್ತಾಸೆ ನೀಡಬೇಕು.
• ಸಂಶೋಧನಾ ಆದ್ಯತೆಯ ವಿಶ್ವವಿದ್ಯಾಲಯಗಳು (ಆರ್.ಎಸ್.ಯು.) ಹಾಗೂ ಬೋಧನಾ ಆದ್ಯತೆಯ ವಿಶ್ವವಿದ್ಯಾಲಯಗಳು (ಟಿ.ಐ.ಯು.) ಎಂಬ ವರ್ಗೀಕರಣ
• ಕರ್ನಾಟಕ ಉನ್ನತ ಶಿಕ್ಷಣ ಆಯೋಗವು (ಕೆಎಚ್ಇಸಿ) ಸ್ವತಂತ್ರ ಮತ್ತು ಸ್ವಾಯತ್ತ ಸಂಸ್ಥೆಗಳ ಮೇಲ್ವಿಚಾರಣೆ ಸೇರಿದಂತೆ ಉನ್ನತ ಶಿಕ್ಷಣ ವಲಯದ ಆಡಳಿತ ಮತ್ತು ನಿಯಂತ್ರಣವನ್ನು ನಿರ್ವಹಿಸುತ್ತದೆ. ಕರ್ನಾಟಕ ಉನ್ನತ ಶಿಕ್ಷಣ ಅನುದಾನ ಮಂಡಳಿ (ಕೆಎಚ್ಇಸಿ), ಕರ್ನಾಟಕ ಸಂಶೋಧನಾ ಮತ್ತು ನಾವೀನ್ಯತಾ ಮಂಡಳಿ (ಕೆಆರ್ ಐಸಿ), ಕರ್ನಾಟಕ ಉನ್ನತ ಶಿಕ್ಷಣ ನಿಯಂತ್ರಣ ಮಂಡಳಿ (ಕೆಎಚ್ಇಆರ್ ಸಿ) ಇತ್ಯಾದಿಯನ್ನು ಇದು ಒಳಗೊಳ್ಳುತ್ತದೆ.