ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡಿದೆ. ಪ್ರತಿದಿನದ ಸೋಂಕು ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿದೆ.
ಚೆನ್ನೈ, (ಏ.18): ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ 12ನೇ ತರಗತಿ ಪರೀಕ್ಷೆಗಳನ್ನು ತಮಿಳುನಾಡು ಸರ್ಕಾರ ಮುಂದೂಡಿದೆ.
ಇಂದು ( ಏಪ್ರಿಲ್ 18) ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದಲ್ಲಿ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದರೂ, ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Fact Check: ಭಾರತದಲ್ಲಿ ಲಾಕ್‌ಡೌನ್ ಜಾರಿ ಸುದ್ದಿ ಸುಳ್ಳು!
ಇನ್ನು ಭಾನುವಾರ ಸಂಜೆ ಸರ್ಕಾರ ಹೊರಡಿಸಿರುವ ನೂತನ ನಿಯಮಾವಳಿ ಪ್ರಕಾರ ಏಪ್ರಿಲ್ 20 ರಿಂದ ಪ್ರತಿದಿನ ರಾತ್ರಿ 10 ರಿಂದ ಬೆಳಿಗ್ಗೆ 4 ಗಂಟೆಯವರೆಗೆ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಾಗಲಿದೆ. ಈ ಅವಧಿಯಲ್ಲಿ ಕೇವಲ ಮೂಲಭೂತ ಸೌಲಭ್ಯಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದೆ.
ರಾತ್ರಿ ಕರ್ಫ್ಯೂ ಅವಧಿಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಂಚಾರ ವ್ಯವಸ್ಥೆಯ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅಷ್ಟೇ ಅಲ್ಲದೆ ಹೊರ ರಾಜ್ಯಗಳ ವಾಹನ ಸಂಚಾರವನ್ನೂ ಬಂದ್ ಮಾಡಲಾಗಿದೆ.
ತುರ್ತು ಆರೋಗ್ಯ ಕೇಂದ್ರ, ರೈಲು ಹಾಗೂ ವಿಮಾನ ನಿಲ್ದಾಣಗಳಿಂದ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾ ಸೇವೆಗೆ ಯಾವುದೇ ನಿರ್ಬಂಧ ಹೇರಿಲ್ಲ. ಹಾಲು ಹಾಗೂ ದಿನಪತ್ರಿಕೆಗಳ ವಿತರಣೆಗೆ ಅನುಮತಿ ನೀಡಲಾಗಿದೆ.