ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂನ್ 24): ಅದೊಂದು ಸ್ವಾತಂತ್ರ ಪೂರ್ವದಲ್ಲಿ ನಿರ್ಮಾಣ ವಾಗಿರೋ ಇತಿಹಾಸವಿರುವ ಕಾಲೇಜು. ಅಲ್ಲಿ ಮೂಲಭೂತ ಸೌಕರ್ಯಗಳಿಲ್ಲ, ಶಿಥಿಲಾವಸ್ಥೆಯಲ್ಲಿದೆ ಅಂತ ಹೋರಾಟ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಿಸಿದ ವಿದ್ಯಾರ್ಥಿಗಳಿಗೆ ಆ ನೂತನ ಕಟ್ಟಡದಲ್ಲಿ ಓದುವ ಭಾಗ್ಯವೇ ಸಿಕ್ಲಿಲ್ಲ.
ಕೋಟೆನಾಡು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಸತತ ಐದಾರು ವರ್ಷಗಳಿಂದ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳಿಗಾಗಿ ಹೊಸ ಕಾಲೇಜನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಈ ವರ್ಷದಿಂದ ಹೊಸ ಕಾಲೇಜಿನಲ್ಲಿ ಪಾಠ ಕೇಳಬಹುದೆಂಬ ನಿರೀಕ್ಷೆಯಲ್ಲಿದ್ದ ವಿಧ್ಯಾರ್ಥಿಗಳಿಗೆ ಸರ್ಕಾರ ನಿರಾಸೆ ಮೂಡಿಸಿದೆ. ಈ ಹೊಸ ಕಾಲೇಜು ಕಟ್ಟಡದಲ್ಲಿ ತಾತ್ಕಾಲಿಕವಾಗಿ ಮೆಡಿಕಲ್ ಕಾಲೇಜಿನ ಒಂದು ವಿಂಗ್ ಆರಂಭಿಸಲು ಮುಂದಾಗಿದೆ. ಅಲ್ಲದೇ ಸೈನ್ಸ್ ಕಾಲೇಜಿನ Bsc ವಿಧ್ಯಾರ್ಥಿಗಳನ್ನು ಪಕ್ಕದಲ್ಲಿರುವ ಹಳೆಯ ಕಲಾ ಕಾಲೇಜು ಕಟ್ಟಡಕ್ಕೆ ಶಿಫ್ಟ್ ಮಾಡಲು ಯೋಚಿಸಿದೆ.
ಆಘಾತ ತಂದ ಪಿ.ಯು ಫಲಿತಾಂಶ, ಚಿತ್ರದುರ್ಗದಲ್ಲಿ ಆತ್ಮಾವಲೋಕನ ಸಭೆ
ಹೀಗಾಗಿ ಆಕ್ರೋಶಗೊಂಡ ಸೈನ್ಸ್ ಕಾಲೇಜು ವಿದ್ಯಾರ್ಥಿಗಳು ನಮ್ಮ ಕಾಲೇಜು ಬಿಟ್ಟು ನಾವು ಹೋಗಲ್ಲ. ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ಬಂದ್ರೆ ಮುಂದಿರುವ ಎಲ್ಲಾ ಮರಗಳನ್ನು ಕಡಿದು ನಾಶ ಮಾಡಬೇಕಾಗುತ್ತದೆ. ಜೊತೆಗೆ ಇದ್ರಿಂದ ಪರಿಸರ ಹಾನಿ ಆಗುತ್ತದೆ. ಗ್ರಾಮಾಂತರ ಭಾಗದಿಂದ ವಿದ್ಯಾರ್ಥಿಗಳು ವ್ಯಾಸಾಂಗಕ್ಕೆ ಬರುತ್ತಿದ್ದು, ಮುಂದೆ ಬದಲಾದಲ್ಲಿ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆ ಆಗುತ್ತದೆ. ಒಂದು ವೇಳೆ ಬಿಡಲೇಬೇಕೆಂದು ಅಧಿಕಾರಿಗಳು ಸೂಚಿಸಿದ್ರೆ ಉಪವಾಸ ಧರಣಿ ಕೂರ್ತಿವೆಂದು ಜಿಲ್ಲಾಡಳಿತ ಕ್ಕೆ ಹೋರಾಟದ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು ಈ ಬಗ್ಗೆ ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತ ಮನ್ನಿಕೇರಿಯವರನ್ನು ಕೇಳಿದ್ರೆ, ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸರ್ಕಾರದಿಂದ ಈಗಾಗಲೇ ಅನುಮೋದನೆ ಸಿಕ್ಕಿದೆ. ಆದ್ರೆ ಕಾಲೇಜು ಆರಂಭಿಸಲು ಸರ್ಕಾರಿ ಕಟ್ಟಡಗಳ ಸಮಸ್ಯೆ ಎದುರಾಗಿದೆ. ಹೀಗಾಗಿ ತಾತ್ಕಲಿಕವಾಗಿ, ಮೆಡಿಕಲ್ ಕಾಲೇಜು ಆರಂಭಿಸಲು ಸ್ಪೆಷಲ್ ಮೆಡಿಕಲ್ ಆಫೀಸರ್ ಸ್ಥಳ ಪರಿಶೀಲನೆ ನಡೆಸಲು ಸೂಚಿಸಲಾಗಿದೆ.
ಆದ್ರೆ ನಮಗೆ ಮೆಡಿಕಲ್ ಕಾಲೇಜು ಬೇಕು ಜೊತೆಗೆ ಸೈನ್ಸ್ ಕಾಲೇಜು ವಿಧ್ಯಾರ್ಥಿಗಳ ಭವಿಷ್ಯವೂ ಮುಖ್ಯ. ಈ ಬಗ್ಗೆ ಕೂಡಲೇ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
Teachers National Award 2022; ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಒಟ್ಟಾರೆ ಕೋಟೆನಾಡಿಗೆ ಮೆಡಿಕಲ್ ಕಾಲೇಜು ಬಂತು ಅನ್ನೋ ಖುಷಿ ಒಂದೆಡೆಯಾದ್ರೆ, ಸೈನ್ಸ್ ಕಾಲೇಜು ವಿದ್ಯಾರ್ಥಿಗಳಿಗೆ ಇದರಿಂದ ಸಮಸ್ಯೆ ತಲೆದೂರಿದೆ. ಹೊಸ ಕಟ್ಟಡದಲ್ಲಿ ಪಾಠ ಕೇಳುವ ಭಾಗ್ಯವೇ ಇಲ್ಲದಂತಾಗಿದೆ. ಹೀಗಾಗಿ ಜಿಲ್ಲಾಡಳಿತ ಸೈನ್ಸ್ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗೊಂದು ಶಾಶ್ವತ ಪರಿಹಾರ ಹುಡುಕಲು ಮುಂದಾಗಬೇಕಿದೆ.