* 19000 ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ
* 13 ದಿನಗಳಿಂದ ಪದವಿ ಕಾಲೇಜುಗಳು ಬಂದ್
* ಅಧಿವೇಶನದಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆ ಕುರಿತು ಚರ್ಚೆ
ಕೊಪ್ಪಳ(ಡಿ.23): ಸೇವಾ ಭದ್ರತೆ(Service Security) ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ(Karnataka) ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ(Protest) ಬುಧವಾರ 13ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು(Students) ಪಾಠ-ಪ್ರವಚನ ಇಲ್ಲದೆ ಪರದಾಡುವಂತಾಗಿದೆ.
ರಾಜ್ಯದಲ್ಲಿ 420 ಸರ್ಕಾರಿ ಪದವಿ ಕಾಲೇಜುಗಳಿದ್ದು, 8 ಲಕ್ಷ ವಿದ್ಯಾರ್ಥಿಗಳಿದ್ದಾರೆ. ನಾಲ್ಕು ಸಾವಿರ ಕಾಯಂ ಉಪನ್ಯಾಸಕರಿದ್ದರೆ, 19 ಸಾವಿರ ಅತಿಥಿ ಉಪನ್ಯಾಸಕರು(Guest Lecturers) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊಪ್ಪಳ(Koppal) ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ 3,500 ವಿದ್ಯಾರ್ಥಿಗಳಿಗೆ 7 ಕಾಯಂ ಉಪನ್ಯಾಸಕರಿದ್ದರೆ, 130 ಅತಿಥಿ ಉಪನ್ಯಾಸಕರಿದ್ದಾರೆ. ಗ್ರಾಮೀಣ ಭಾಗದ ಅನೇಕ ಕಾಲೇಜುಗಳಲ್ಲಿ ಒಂದಿಬ್ಬರು ಕಾಯಂ ಉಪನ್ಯಾಸಕರಿದ್ದರೆ, ಉಳಿದವರೆಲ್ಲರೂ ಅತಿಥಿ ಉಪನ್ಯಾಸಕರೇ ಆಗಿದ್ದಾರೆ. ಒಂದು ರೀತಿಯಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿಗಳು ನಡೆಯುತ್ತಿರುವುದೇ ಅತಿಥಿ ಉಪನ್ಯಾಸಕರಿಂದಾಗಿ ಎನ್ನುವಂತಾಗಿದೆ.
undefined
National Education Policy: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಯಾವಾಗ? ಸ್ಪಷ್ಟನೆ ಕೊಟ್ಟ ಸಚಿವ
ಕೊರೋನಾ(Coronavirus) 2ನೇ ಅಲೆಯಿಂದಾಗಿ ಸರಿಯಾಗಿ ಪಾಠ-ಪ್ರವಚನಗಳು ನಡೆದಿರಲಿಲ್ಲ. ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿ ಮೂರ್ನಾಲ್ಕು ತಿಂಗಳಷ್ಟೇ ಕಳೆದಿದೆ. ಇನ್ನು ಅತಿಥಿ ಉಪನ್ಯಾಸಕರನ್ನು ವಿಳಂಬವಾಗಿ ಅಂದರೆ ಒಂದೂವರೆ ತಿಂಗಳ ಹಿಂದಷ್ಟೇ ಕೆಲಸಕ್ಕೆ ನಿಯೋಜಿಸಿಕೊಂಡ ಹಿನ್ನೆಲೆಯಲ್ಲಿ ಬಹುತೇಕ ಕಾಲೇಜುಗಳಲ್ಲಿ ಸರಿಯಾಗಿ ತರಗತಿಗಳೇ ನಡೆದಿರಲಿಲ್ಲ. ಇದೀಗ ಕಳೆದೆರಡು ವಾರಗಳಿಂದ ಅತಿಥಿ ಉಪನ್ಯಾಸಕರೇ ಪ್ರತಿಭಟನೆಗೆ ಇಳಿದಿರುವ ಕಾರಣ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದೆ. ಪರೀಕ್ಷೆಗೆ(Examination) ಸಿದ್ಧತೆ ನಡೆಸುವುದು ಹೇಗೆನ್ನುವ ಆತಂಕ ಕಾಡಲು ಶುರುವಾಗಿದೆ.
ಆಯಾ ಕಾಲೇಜುಗಳ ಮುಂಭಾಗ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದು, ಬೇಡಿಕೆ ಈಡೇರಿಸುವರೆಗೂ ತರಗತಿ ತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ. 50-60 ತರಗತಿಗಳನ್ನು 7 ಕಾಯಂ ಉಪನ್ಯಾಸಕರು ತೆಗೆದುಕೊಳ್ಳಲಾಗದೆ ಪರದಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಆಕ್ರೋಶ:
ಉತ್ತಮ ಭವಿಷ್ಯದ ದೃಷ್ಟಿಯಿಂದ ಗ್ರಾಮೀಣ ಪ್ರದೇಶದಿಂದ ನಿತ್ಯ ಬಸ್ ಹಿಡಿದುಕೊಂಡು ಕಾಲೇಜಿಗೆ ಬರುತ್ತಿದ್ದೇವೆ. ಆದರೆ, ಇಲ್ಲಿ ಕಾಯಂ ಉಪನ್ಯಾಸಕರೇ ಇಲ್ಲ. ಇರುವ ಅತಿಥಿ ಉಪನ್ಯಾಸಕರೂ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಹೀಗಾದರೆ ನಾವು ಪರೀಕ್ಷೆ ಎದುರಿಸುವುದು ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ವಿದ್ಯಾರ್ಥಿಗಳು.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ(Belagavi Assembly Session) ಅತಿಥಿ ಉಪನ್ಯಾಸಕರ ಸಮಸ್ಯೆ ಕುರಿತು ಚರ್ಚೆಯಾಗಿದೆ. ಸುವರ್ಣ ಸೌಧದ ಹೊರಗೂ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಉನ್ನತ ಶಿಕ್ಷಣ ಸಚಿವರು ಬೇಡಿಕೆ ಈಡೇರಿಸುವ ಭರವಸೆಯನ್ನೂ ನೀಡಿದ್ದಾರೆ. ಆದರೆ, ಸೇವಾಭದ್ರತೆ ಹಾಗೂ ವಿವಿಧ ಬೇಡಿಕೆ ಈಡೇರಿಕೆ ಕುರಿತು ಲಿಖಿತ ಭರವಸೆ ನೀಡುವಂತೆ ಉಪನ್ಯಾಸಕರು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರೆದಿದೆ.
Karnataka Higher Education: ಎಲ್ಲ ಜಿಲ್ಲೆಗೂ ವಿವಿ ಭಾಗ್ಯ, ಐಐಟಿ ಮಟ್ಟಕ್ಕೆ ವಿಟಿಯು
ನಮ್ಮ ಬೇಡಿಕೆ ನ್ಯಾಯಯುತವಾಗಿದ್ದು, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. 15-20 ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದೇವೆ. ಇನ್ನಾದರೂ ನಮಗೆ ಸೇವಾ ಭದ್ರತೆ ನೀಡಬೇಕು ಅಂತ ಕೊಪ್ಪಳ ಅಧ್ಯಕ್ಷ ಅತಿಥಿ ಉಪನ್ಯಾಸಕರ ಸಂಘ ವೀರೇಶ ಸಜ್ಜನ ತಿಳಿಸಿದ್ದಾರೆ.
9 ದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಮುಷ್ಕರ
ಮೈಸೂರು(Mysuru): ತಮ್ಮ ಸೇವೆಯನ್ನು ಕಾಯಂಗೊಳಿಸಲು ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ನೇತೃತ್ವದಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು ಇಂದಿಗೆ(ಗುರುವಾರ) 9ನೇ ದಿನಕ್ಕೆ ಕಾಲಿಟ್ಟಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ವಿಲೀನಗೊಳಿಸುವ ನಿರ್ಣಯವನ್ನು ಉಭಯ ಸದನಗಳಲ್ಲಿ ಅಂಗೀಕರಿಸಬೇಕು. ಅತಿಥಿ ಉಪನ್ಯಾಸಕರನ್ನು ಸೇವಾ ವಿಲೀನಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಹಾಯಕ ಪ್ರಾಧ್ಯಾಪಕರ ನೇಮಕ ತಡೆಹಿಡಿಯಬೇಕು ಎಂದು ಅವರು ಆಗ್ರಹಿಸಿದರು. ಸಮಿತಿ ಜಿಲ್ಲಾಧ್ಯಕ್ಷ ಹನುಮಂತೇಶ್, ಉಪಾಧ್ಯಕ್ಷರಾದ ಡಾ.ಜಿ. ಮಹೇಶ್, ಡಾ.ಜಿ. ಶಾಮಲಾ, ಪ್ರಧಾನ ಕಾರ್ಯದರ್ಶಿ ಎನ್.ಎಂ. ಮಾನಸ ಮೊದಲಾದವರು ಇದ್ದರು.