* ಹಿಂದಿನ ದಿನವೇ ಶಾಲಾ ಮುಖ್ಯಸ್ಥರಿಂದ ವಿದ್ಯಾರ್ಥಿಗಳಿಗೆ ಎಸ್‌ಎಂಎಸ್
* ಪರೀಕ್ಷಾ ಕೇಂದ್ರದಲ್ಲಿ ಜನಜಂಗುಳಿ, ನೂಕುನುಗ್ಗಲು ತಡೆಯಲು ಈ ಕ್ರಮ
* ಧಾರವಾಡ ಶಿಕ್ಷಣ ಇಲಾಖೆಯಿಂದ ರಾಜ್ಯದಲ್ಲೇ ಮೊದಲ ಬಾರಿ ಜಾರಿಗೆ
ಹುಬ್ಬಳ್ಳಿ(ಜು.15): ಪರೀಕ್ಷೆಯ ದಿನ ಪರೀಕ್ಷಾ ಕೊಠಡಿ ಸಂಖ್ಯೆ ಹುಡುಕಾಡುವುದು ವಿದ್ಯಾರ್ಥಿಗಳಿಗೆ ದೊಡ್ಡ ಟೆನ್ಷನ್. ಜತೆಗೆ ಜನಜಂಗುಳಿ ಆಗುತ್ತದೆ. ಇದನ್ನು ತಪ್ಪಿಸಲು ಪರೀಕ್ಷೆಯ ಹಿಂದಿನ ದಿನವೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಹಾಗೂ ಕೊಠಡಿ ಸಂಖ್ಯೆ ಎಸ್‌ಎಂಎಸ್ ಮೂಲಕ ಕಳುಹಿಸಲು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ ಇಂತಹದೊಂದು ಪ್ರಯೋಗ ನಡೆಯುತ್ತಿರುವುದು ಇದೇ ಮೊದಲಾಗಿದೆ.
ಸಕಲ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ 19 ಹಾಗೂ 22ರಂದು ಎರಡು ದಿನ ಪರೀಕ್ಷೆ ನಡೆಯಲಿದ್ದು ಜಿಲ್ಲೆಯಲ್ಲಿ 29,464 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದ್ದು ಪ್ರತಿಯೊಂದು ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಒಬ್ಬ ನರ್ಸ್ ಸೇರಿದಂತೆ ಇಬ್ಬರು ಸಿಬ್ಬಂದಿ ಇರಲಿದ್ದಾರೆ.
ಮಕ್ಕಳಿಗೆ ಅವರು ಕಲಿತಿರುವ ಶಾಲೆ ಅಥವಾ ಅವರ ವಾಸಸ್ಥಾನದ ಸಮೀಪದಲ್ಲಿನ ಶಾಲೆಯಲ್ಲಿ ತೆರೆದಿರುವ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆಯ ದಿನ ಕೇಂದ್ರಕ್ಕೆ ಆಗಮಿಸಿ ಪರೀಕ್ಷಾ ಕೊಠಡಿ ಸಂಖ್ಯೆ ಹುಡುಕಿಕೊಂಡು ಆ ಕೊಠಡಿಗೆ ಹೋಗಿ ಪರೀಕ್ಷೆ ಬರೆಯುವುದು ಮಾಮೂಲಿ. ಇದರಿಂದ ಪರೀಕ್ಷಾ ಕೇಂದ್ರದಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಉಂಟು. ಇದನ್ನು ತಪ್ಪಿಸುವುದಕ್ಕಾಗಿ ಮಕ್ಕಳಿಗೆ ಅಥವಾ ಅವರ ಪಾಲಕರ ಮೊಬೈಲ್‌ಗಳಿಗೆ ಪರೀಕ್ಷೆಯು ಯಾವ ಕೇಂದ್ರ ಹಾಗೂ ಯಾವ ಕೊಠಡಿಯಲ್ಲಿ ಆ ವಿದ್ಯಾರ್ಥಿಯ ನಂಬರ್ ಬಂದಿದೆ ಎಂಬ ಮಾಹಿತಿ ಹಿಂದಿನ ದಿನವೇ ಎಸ್‌ಎಂಎಸ್ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಲಭ್ಯ ಖಚಿತಪಡಿಸಿ
ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಆ ಕೇಂದ್ರದಲ್ಲಿ ಯಾವ ಶಾಲೆಯ, ಯಾವ್ಯಾವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಅದರ ಆಧಾರದ ಮೇಲೆ ಆಯಾ ಶಾಲಾ ಮುಖ್ಯಸ್ಥರಿಗೆ ಆ ಮಾಹಿತಿ ರವಾನಿಸಲಾಗುತ್ತದೆ. ಶಾಲಾ ಮುಖ್ಯಸ್ಥರು, ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಕೊಠಡಿ ಮಾಹಿತಿಯನ್ನು ಮೊಬೈಲ್ ಮೂಲಕ ರವಾನಿಸುತ್ತಾರೆ. ಪರೀಕ್ಷೆಯ ಹಿಂದಿನ ದಿನವೇ ಮಕ್ಕಳಿಗೆ ಕೊಠಡಿ ಮಾಹಿತಿ ಲಭ್ಯವಾಗುವುದರಿಂದ ಯಾವುದೇ ಕಿರಿಕಿರಿ, ತಾಪತ್ರಯ, ಕೊನೆಯ ಹಂತದ ನೂಕುನುಗ್ಗಲು, ಗಡಿಬಿಡಿಗಳಿಲ್ಲದೆ ನೇರವಾಗಿ ಆ ಕೊಠಡಿಗೆ ಹೋಗಲು ಅನುಕೂಲವಾಗುತ್ತದೆ. ಶಿಕ್ಷಣ ಇಲಾಖೆಯ ಈ ಕ್ರಮಕ್ಕೆ ಜಿಲ್ಲಾಡಳಿತ ಕೂಡ ಮೆಚ್ಚುಗೆ ಸೂಚಿಸಿದೆ.
ಹಿಂದಿನ ದಿನವೇ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರ ಹಾಗೂ ಕೊಠಡಿಯ ಮಾಹಿತಿ ಎಸ್‌ಎಂಎಸ್ ಮೂಲಕ ರವಾನಿಸಲು ನಿರ್ಧರಿಸಲಾಗಿದೆ. ರಾಜ್ಯದಿಂದೇನೂ ಈ ನಿರ್ದೇಶನ ಬಂದಿಲ್ಲ. ನಾವೇ ಎಲ್ಲ ಬಿಇಒ, ಶಾಲಾ ಮುಖ್ಯಸ್ಥರೊಂದಿಗೆ ಚರ್ಚಿಸಿ ನಿರ್ಧರಿಸಿದ್ದೇವೆ. ಪರೀಕ್ಷಾ ಕೇಂದ್ರದಲ್ಲಿನ ಜನಸಂದಣಿ ತಡೆಯುವುದಕ್ಕಾಗಿ ಈ ನಿರ್ಧಾರ ಎಂದು ಧಾರವಾಡ ಡಿಡಿಪಿಐ ಮೋಹನ ಹಂಚಾಟೆ ತಿಳಿಸಿದ್ದಾರೆ.