
ಬೆಂಗಳೂರು(ಜು.05): ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಶಾಲೆ ಪಠ್ಯ ಪುಸ್ತಕದಲ್ಲಿ ವಿಜಯಪುರ ಜಿಲ್ಲೆಯ ಶ್ರೀ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಜೀವನ ಚರಿತ್ರೆ ಕುರಿತ ಪಠ್ಯ ಸೇರ್ಪಡೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಕಾಂಗ್ರೆಸ್‌ನ ಯಶವಂತರಾಯ ಗೌಡ ಪಾಟೀಲ್ ಅವರ ಪ್ರಸ್ತಾವನೆಗೆ ಉತ್ತರಿಸಿದ ಮಧು ಬಂಗಾರಪ್ಪ, ಪ್ರಸಕ್ತ ಸಾಲಿನ ಪಠ್ಯಗಳು ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿದೆ. ಹೀಗಾಗಿ ಈ ವರ್ಷ ಯಾವುದೇ ಹೊಸ ಪಠ್ಯ ಸೇರ್ಪಡೆಗೆ ಅವಕಾಶವಿಲ್ಲ. ಹೀಗಾಗಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಜೀವನ ಚರಿತ್ರೆ ಕುರಿತ ಪಠ್ಯ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಪಠ್ಯ ಪರಿಷ್ಕರಣೆ ಸಮಿತಿಗೂ ಸೂಚಿಸಲಾಗುವುದು ಎಂದು ಹೇಳಿದರು.
ಸಿದ್ದೇಶ್ವರ ಶ್ರೀಗಳ ಆಶಯದಂತೆ ನೀರಾವರಿ ಕೆಲಸ: ಎಂ.ಬಿ.ಪಾಟೀಲ
ಅತಿಥಿ ಶಿಕ್ಷಕರ ಕಾಯಂ ಕುರಿತು ಪರಿಶೀಲನೆ:
ರಾಜ್ಯದಲ್ಲಿನ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸುವ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಆದರೂ, ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.
ಕಾಂಗ್ರೆಸ್‌ನ ಕೆ.ವೈ. ನಂಜೇಗೌಡ ಅವರ ಪ್ರಸ್ತಾವನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 33 ಸಾವಿರಕ್ಕೂ ಹೆಚ್ಚಿನ ಅತಿಥಿ ಶಿಕ್ಷಕರಿದ್ದಾರೆ. ಆದರೂ, ರಾಜ್ಯದ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರ ಅಗತ್ಯವಿದೆ. ಹೀಗಾಗಿ ಕಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಉಳಿದಂತೆ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸುವ ಭರವಸೆ ಸದ್ಯಕ್ಕೆ ನೀಡಲು ಸಾಧ್ಯವಿಲ್ಲ. ಆದರೂ, ಆ ಕುರಿತು ಪ್ರರಿಶೀಲನೆ ನಡೆಸಲಾಗುವುದು ಎಂದರು.