Education: ಬೋರ್ಡ್‌ ಪರೀಕ್ಷೆ ವಿರುದ್ಧ ಶಾಲೆಗಳು ಹೈಕೋರ್ಟ್‌ಗೆ

Published : Jan 30, 2023, 10:54 AM ISTUpdated : Jan 30, 2023, 10:59 AM IST
Education: ಬೋರ್ಡ್‌ ಪರೀಕ್ಷೆ ವಿರುದ್ಧ ಶಾಲೆಗಳು  ಹೈಕೋರ್ಟ್‌ಗೆ

ಸಾರಾಂಶ

ರಾಜ್ಯದಲ್ಲಿ ಪ್ರಸಕ್ತ ಸಾಲಿನಿಂದಲೇ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮಂಡಳಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಒಂದೆಡೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಸರ್ಕಾರದ ಮಂಡಳಿ ಪರೀಕ್ಷೆಯನ್ನೇ ಪ್ರಶ್ನಿಸಿ ವಿವಿಧ ಖಾಸಗಿ ಶಾಲೆಗಳು ಹೈಕೋರ್ಟ್ ಮೆಟ್ಟಿಲೇರಿವೆ.

ಲಿಂಗರಾಜು ಕೋರಾ

ಬೆಂಗಳೂರು (ಜ.30) : ರಾಜ್ಯದಲ್ಲಿ ಪ್ರಸಕ್ತ ಸಾಲಿನಿಂದಲೇ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮಂಡಳಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಒಂದೆಡೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಸರ್ಕಾರದ ಮಂಡಳಿ ಪರೀಕ್ಷೆಯನ್ನೇ ಪ್ರಶ್ನಿಸಿ ವಿವಿಧ ಖಾಸಗಿ ಶಾಲೆಗಳು ಹೈಕೋರ್ಚ್‌ ಮೆಟ್ಟಿಲೇರಿವೆ.

ರಾಜ್ಯ ಪಠ್ಯಕ್ರಮದ ಖಾಸಗಿ ಶಾಲೆಗಳ ಸಂಘದಡಿ (ಅವರ್‌ ಸ್ಕೂಲ್ಸ್‌) ವಿವಿಧ ಸದಸ್ಯ ಶಾಲೆಗಳು ಈ ಸಂಬಂಧ ಹೈಕೋರ್ಟ್ ಗೆ ಇತ್ತೀಚೆಗಷ್ಟೆರಿಟ್‌ ಅರ್ಜಿ ಸಲ್ಲಿಸಿದ್ದು, ಶೀಘ್ರ ವಿಚಾರಣೆಗೆ ಬರುವ ಸಾಧ್ಯತೆ ಇದೆ. 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮಂಡಳಿ ಪರೀಕ್ಷೆ ನಡೆಸುವ ಬಗ್ಗೆ ಶೈಕ್ಷಣಿಕ ವರ್ಷ ಆರಂಭದಲ್ಲೇ ಮಾಹಿತಿ ನೀಡದೆ ಶೈಕ್ಷಣಿಕ ವರ್ಷ ಮುಕ್ತಾಯಕ್ಕೆ ಇನ್ನು ಕೆಲ ತಿಂಗಳು ಬಾಕಿ ಇರುವಾಗ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ಕ್ರಮ ಖಾಸಗಿ ಶಾಲೆಗಳ ಮಕ್ಕಳು ಹಾಗೂ ಪೋಷಕರಲ್ಲಿ ಆತಂಕ ಮತ್ತು ಮಾನಸಿಕ ಒತ್ತಡ ಹೆಚ್ಚಿಸಿದೆ. ಹಾಗಾಗಿ ಈ ವರ್ಷ ಮಂಡಳಿ ಪರೀಕ್ಷೆ ಬೇಡ ಎಂದು ಮನವಿ ಮಾಡಿದರೂ ಶಿಕ್ಷಣ ಇಲಾಖೆಯು ಸ್ಪಂದಿಸಿಲ್ಲ. ಇದರಿಂದ ಅನಿವಾರ್ಯವಾಗಿ ಕೋರ್ಚ್‌ ಮೆಟ್ಟಿಲೇರುವಂತಾಗಿದೆ ಎನ್ನುತ್ತಾರೆ ‘ಅವರ್‌ ಸ್ಕೂಲ್ಸ್‌’ ಖಾಸಗಿ ಶಾಲಾ ಸಂಘದ ಅದ್ಯಕ್ಷ ಪ್ರಭಾಕರ್‌ ರಾವ್‌.

ಶಿಕ್ಷಣ ಗುಣಮಟ್ಟ ಕುಸಿತ, 5 ಮತ್ತು 8ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಸರಕಾರ ತೀರ್ಮಾನ

ಕೋವಿಡ್‌ ಕಾರಣದಿಂದ ಮಕ್ಕಳು ಮೊದಲೇ ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಇದನ್ನು ಸರಿದೂಗಿಸಲು ಈ ವರ್ಷ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 9ನೇ ತರಗತಿ ಮಕ್ಕಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಆದರೆ, ರಾಜ್ಯ ಪಠ್ಯಕ್ರಮದ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ಮತ್ತೊಂದೆಡೆ ಪ್ರತೀ ವರ್ಷದಂತೆ ಈ ಬಾರಿಯೂ ರಾಜ್ಯ ಪಠ್ಯಕ್ರಮದ ಚೌಕಟ್ಟಿನಡಿಯಲ್ಲೇ ಖಾಸಗಿ ಪ್ರಕಾಶನದ ಪಠ್ಯಕ್ರಮ ಬೋಧಿಸಿರುವ ಶಾಲೆಗಳೂ ಇವೆ. ಹೀಗಾಗಿ ಸರ್ಕಾರ ಮುದ್ರಿಸಿರುವ ಪಠ್ಯಪುಸ್ತಕ ಆಧರಿಸಿ ಪ್ರಶ್ನೆ ಪತ್ರಿಕೆ ನೀಡಿದರೆ ಖಾಸಗಿ ಶಾಲಾ ಮಕ್ಕಳಿಗೆ ಪರೀಕ್ಷೆ ಕಷ್ಟವಾಗುತ್ತದೆ. ಸರ್ಕಾರ ವರ್ಷದ ಆರಂಭದಲ್ಲೇ ಬೋರ್ಡ್‌ ಪರೀಕ್ಷೆ ಬಗ್ಗೆ ಹೇಳಿದ್ದರೆ ಎಲ್ಲ ಶಾಲೆಗಳೂ ಸರ್ಕಾರ ನೀಡುವ ಪಠ್ಯಪುಸ್ತಕವನ್ನೇ ಬೋಧಿಸುತ್ತಿದ್ದವು ಎನ್ನುವುದು ಖಾಸಗಿ ಶಾಲೆಗಳ ವಾದವಾಗಿದೆ.

ಈ ಸಾಲಿನ ಬದಲು ಮುಂದಿನ ಸಾಲಿನಿಂದ ಬೇಕಿದ್ದರೆ ಪರೀಕ್ಷೆ ನಡೆಸಲು ನಾವು ಒಪ್ಪಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಹಾಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದೇವೆ. ಸೋಮವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದ್ದು, ನ್ಯಾಯಾಲಯಕ್ಕೆ ವಸ್ತು ಸ್ಥಿತಿಯನ್ನು ನಮ್ಮ ವಕೀಲರು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.

CBSE Board Exam 2023: CBSE ಪ್ರಾಯೋಗಿಕ ಪರೀಕ್ಷೆಯ ದಿನಾಂಕ ಬಿಡುಗಡೆ

ಮೊದಲೇ ಮಾಹಿತಿ ನೀಡಲಾಗಿತ್ತು: ಅಧಿಕಾರಿಗಳು

ಶಿಕ್ಷಣ ಇಲಾಖೆಯು ಕರ್ನಾಟಕ ರಾಜ್ಯ ಪಠ್ಯಪುಸ್ತಕ ಸಂಘದಿಂದ ರಾಜ್ಯ ಪಠ್ಯಕ್ರಮ ಚೌಕಟ್ಟಿನಡಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿ ಸರ್ಕಾರಿ ಶಾಲೆಗಳ ಜತೆಗೆ ಖಾಸಗಿ ಶಾಲೆಗಳಿಂದಲೂ ಬರುವ ಬೇಡಿಕೆಗೆ ಅನುಗುಣವಾಗಿ ಮುದ್ರಿಸಿ ಪ್ರತೀ ವರ್ಷ ಸರಬರಾಜು ಮಾಡುತ್ತದೆ. ಇದರ ನಡುವೆ ಒಂದಷ್ಟುಖಾಸಗಿ ಶಾಲೆಗಳು ಸರ್ಕಾರದ ಪಠ್ಯಪುಸ್ತಕಗಳು ಮುದ್ರಣವಾಗಿ ಬರುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಖಾಸಗಿ ಪ್ರಕಾಶಕರು ರಾಜ್ಯ ಪಠ್ಯಕ್ರಮ ಚೌಕಟ್ಟಿನಡಿ ಸಿದ್ಧಪಡಿಸಿರುವ ಬೇರೆ ಪಠ್ಯಪುಸ್ತಕಗಳನ್ನು ಖರೀದಿಸಿ ಮಕ್ಕಳಿಗೆ ಬೋಧಿಸುವ ಪರಿಪಾಠ ಬೆಳೆಸಿಕೊಂಡಿವೆ. ಆದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುವುದೇ ಬೇರೆ. 5 ರಿಂದ 8ನೇ ತರಗತಿಗೆ ಮಂಡಳಿ ಪರೀಕ್ಷೆ ಮಾಡುವ ವಿಷಯ ಶೈಕ್ಷಣಿಕ ವರ್ಷದ ಆರಂಭದಿಂದಲೇ ಚರ್ಚೆಯಲ್ಲಿತ್ತು. ಹಾಗಾಗಿ ಇಲಾಖೆ ನೀಡುವ ಪಠ್ಯಪುಸ್ತಕಗಳನ್ನೇ ಬೋಧಿಸುವಂತೆಯೂ ಖಾಸಗಿ ಶಾಲೆಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಮಕ್ಕಳಿಂದ ದೊಡ್ಡ ಮೊತ್ತ ವಸೂಲಿಗಾಗಿ ಬೇರೆ ಪುಸ್ತಕಗಳನ್ನು ನೀಡಿ ಶಾಲೆಗಳು ಪಾಠ ಮಾಡಿವೆ. ಇದಕ್ಕೆ ಇಲಾಖೆ ಹೊಣೆಯಾಗುವುದಿಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ಖಾಸಗಿ ಶಾಲೆಗಳ ತಪ್ಪನ್ನು ತಿಳಿಸಲಾಗುವುದು ಎಂದು ಅವರು ಹೇಳುತ್ತಾರೆ.

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ