ದೇಶದಲ್ಲಿ ಕೊರೋನಾ ಎರಡನೇ ಅಲೆ ಶುರುವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಹೈದರಾಬಾದ್, (ಮಾ.23): ದೇಶದ ಕೆಲವು ರಾಜ್ಯಗಳಲ್ಲಿ ಕೊರೋನಾ 2ನೇ ಅಲೆ ಪ್ರಾರಂಭವಾಗಿದ್ದು, ಆತಂಕವನ್ನು ಸೃಷ್ಟಿಸುತ್ತಿದೆ.
ಇನ್ನೂ ತೆಲಂಗಾಣದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ಸರ್ಕಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಹೊರತುಪಡಿಸಿ ಬೇರೆಲ್ಲಾ ಸರ್ಕಾರಿ- ಖಾಸಗಿ ಶಾಲೆ, ಕಾಲೇಜು, ಹಾಸ್ಟೆಲ್, ಗುರುಕುಲಗಳಿಗೆ ರಜೆ ಘೋಷಿಸಿ ತೆಲಂಗಾಣ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕೊರೋನಾ 2ನೇ ಅಲೆ: ಕ್ಲಾಸ್, ಪರೀಕ್ಷೆ ನಡೆಸುವ ಬಗ್ಗೆ ಡಿಸಿಎಂ ಮಹತ್ವದ ಹೇಳಿಕೆ
ಈ ಬಗ್ಗೆ ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ರೆಡ್ಡಿ ಆದೇಶ ಹೊರಡಿಸಿದ್ದಾರೆ. ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲೂ ಆತಂಕ
ಹೌದು..ಕರ್ನಾಟಕದಲ್ಲೂ ಸಹ ಕೊರೋನಾ 2ನೇ ಅಲೆ ಶುರುವಾಗಿದ್ದು, ಪಾಸಿಟಿವ್ ಕೇಸ್‌ಗಳ ಸಂಖ್ಯೆಯಲ್ಲೂ ಸಹ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಆದ್ರೆ, ಪರೀಕ್ಷೆ, ಕಾಲೇಜುಗಳಿಗೆ ರಜೆ ಇಲ್ಲ. ಆನ್‌ಲೈನ್ ಕ್ಲಾಸ್ ಮುಂದುವರೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ಆರ್ಭಟ: ಮತ್ತೆ ಕರುನಾಡನ್ನೇ ಬೆಚ್ಚಿಬೀಳಿಸಿದ ಮಹಾಮಾರಿ
ಆದ್ರೆ, ಮತ್ತೊಂದೆಡೆ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ವಿದ್ಯಾರ್ಥಿಗಳ ಪೋಷಕರು ಆತಂಕಗೊಂಡಿದ್ದು, ಶಾಲಾ-ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿರುವ ಸುದ್ದಿಗಳು ಸಹ ಕೇಳಿಬರುತ್ತಿವೆ. ಪ್ರಸ್ತು ರಾಜ್ಯದಲ್ಲಿ 1ರಿಂದ 8ನೇ ತರಗತಿ ಹೊರತುಪಡಿಸಿ ಉಳಿದೆಲ್ಲ ಕ್ಲಾಸ್‌ಗಳು ಪ್ರಾರಂಭವಾಗಿವೆ.ಇನ್ನು ಕರ್ನಾಟಕದಲ್ಲಿ ಕೆಲವೆಡೆ ನರ್ಸರಿ ಸ್ಕೂಲ್‌ಗಳನ್ನ ಸಹ ಪ್ರಾರಂಭವಾಗಿವೆ. ಈ ಬಗ್ಗೆ ಸರ್ಕಾರ ಖಡಕ್ ಎಚ್ಚರಿಕೆ ಕೊಟ್ಟಿದೆ. ಆದ್ರೂ ಅದ್ಯಾವುದಕ್ಕೂ ಖಾಸಗಿ ಶಿಕ್ಷಣ ಸಂಸ್ಥೆಗಳು ಕ್ಯಾರೇ ಎನ್ನುತ್ತಿಲ್ಲ.
ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ
ವಿಮಾನಯಾನ ಸಂಚಾರದ ಮೇಲಿನ ನಿರ್ಬಂಧವನ್ನು ಮುಂದುವರಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿರ್ಧರಿಸಿದೆ. ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳ ಸಂಚಾರವನ್ನು ಏಪ್ರಿಲ್ 30ರವರೆಗೂ ಡಿಜಿಸಿಎ ನಿರ್ಬಂಧಿಸಿದೆ.