7ನೇ ಕ್ಲಾಸ್‌ವರೆಗೆ ಇಂಗ್ಲಿಷ್‌ ಮೀಡಿಯಂ, 8ಕ್ಕೆ ಕನ್ನಡ ಮಾಧ್ಯಮ! ಪ್ರೌಢಶಾಲೆಗಳು ಇಲ್ಲದೆ 30,000 ಮಕ್ಕಳು ಅತಂತ್ರ

Kannadaprabha News   | Kannada Prabha
Published : Jul 17, 2026, 08:28 AM IST
English Medium Ends at Class 7 30 000 Students Forced Back to Kannada Medium in Class 8

ಸಾರಾಂಶ

2018-19ರಲ್ಲಿ ಆರಂಭವಾದ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 7ನೇ ತರಗತಿ ಪೂರೈಸಿದ ಸುಮಾರು 30 ಸಾವಿರ ವಿದ್ಯಾರ್ಥಿಗಳು, 8ನೇ ತರಗತಿಗೆ ಪ್ರವೇಶವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದಿಂದ 8ನೇ ತರಗತಿಗೆ ಮಂಜೂರಾತಿ ಸಿಗದ ಕಾರಣ,  ಅನಿವಾರ್ಯವಾಗಿ ಮತ್ತೆ ಕನ್ನಡ ಮಾಧ್ಯಮಕ್ಕೆ ದಾಖಲು.

ಏನಿದು ಸಮಸ್ಯೆ?

  •  2018- 19ನೇ ಸಾಲಿನಲ್ಲಿ ರಾಜ್ಯಾದ್ಯಂತ 1001 ಸರ್ಕಾರಿ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಿದ್ದ ಸರ್ಕಾರ
  •  ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿ 7ನೇ ತರಗತಿ ಪೂರೈಸಿದ ಮಕ್ಕಳು. 8ನೇ ತರಗತಿ ಸೇರಲು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಇಲ್ಲ
  • ಆರ್ಥಿಕ ಶಕ್ತಿ ಇಲ್ಲದ ಕಾರಣ, ಶಾಲೆ ಆರಂಭವಾಗಿ 2 ತಿಂಗಳಾಗಿರುವ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳು ಸೇರ್ಪಡೆ

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

ಸರ್ಕಾರಿ ಆಂಗ್ಲ ಶಾಲೆಯಲ್ಲಿ ಓದಿ 30 ಸಾವಿರ ಮಕ್ಕಳಿಗೆ ಸಮಸ್ಯೆಯಾಗಿರುವ ಕುರಿತು ‘ಕನ್ನಡಪ್ರಭ’ ಮಾತ್ರ ಜೂ.14ರಂದು ವರದಿ ಪ್ರಕಟಿಸಿತ್ತು.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ (ಜು.17):

7ನೇ ತರಗತಿ ಉತ್ತೀರ್ಣರಾಗಿರುವ ರಾಜ್ಯದ 1001 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳ 30 ಸಾವಿರ ಮಕ್ಕಳು ಈಗ ಅನಿವಾರ್ಯವಾಗಿ ಕನ್ನಡ ಮಾಧ್ಯಮವನ್ನು ಅಪ್ಪಿಕೊಳ್ಳುವಂತಾಗಿದೆ. ಇಂಗ್ಲಿಷ್‌ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳನ್ನು ಪಾಲಕರಿಂದ ಅನುಮತಿ ಪತ್ರ ಪಡೆದು ಕನ್ನಡ ಮಾಧ್ಯಮ ಶಾಲೆಗಳಿಗೆ 8ನೇ ತರಗತಿಗೆ ದಾಖಲು ಮಾಡಿಕೊಳ್ಳಲಾಗುತ್ತಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 2 ತಿಂಗಳು ಕಳೆಯುತ್ತಾ ಬಂದರೂ ಆಂಗ್ಲ ಮಾಧ್ಯಮದ 8ನೇ ತರಗತಿಗೆ ಸರ್ಕಾರ ಮಂಜೂರಾತಿ ನೀಡಿಲ್ಲ. ಈವರೆಗೂ ಈ ಮಕ್ಕಳಿಗೆ ಹಾಜರಾತಿಯೂ ಇಲ್ಲ. ಪಠ್ಯಪುಸ್ತಕಗಳಿಲ್ಲ. ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ನುರಿತ ಶಿಕ್ಷಕರಿಲ್ಲ. ಕೆಲವೆಡೆ ತರಗತಿ ನಡೆಸಲು ಕೊಠಡಿಗಳಿಲ್ಲ.

ಹಾಗಾಗಿ ಮಕ್ಕಳು ವಿಧಿ ಇಲ್ಲದೆ ಕನ್ನಡ ಮಾಧ್ಯಮದಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಶಿಕ್ಷಕರೂ ಮುಂದಾಗಿ ಕನ್ನಡ ಮಾಧ್ಯಮಕ್ಕೆ ಇವರನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವ ರಾಜ್ಯದಲ್ಲಿ 30 ಸಾವಿರ ಮಕ್ಕಳು ಈಗ ತಮ್ಮ ಮುಂದಿನ ಓದನ್ನು ಕನ್ನಡ ಮಾಧ್ಯಮದಲ್ಲಿ ಮಾಡಬೇಕಿದೆ.

ಪಾಲಕರಿಂದ ಒಪ್ಪಿಗೆ ಪತ್ರ:

ರಾಜ್ಯದ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗಳಿಗೆ 8ನೇ ತರಗತಿಗೆ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ. ಅಲ್ಲಿ ಆಂಗ್ಲ ಮಾಧ್ಯಮದ ಬದಲು ಕನ್ನಡ ಮಾಧ್ಯಮದಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ನಮ್ಮಲ್ಲಿ ಈವರೆಗೂ ಆಂಗ್ಲ ಮಾಧ್ಯಮ ಶಾಲೆ ಮಂಜೂರಾತಿ ಇಲ್ಲ. ಅಲ್ಲಿಯವರೆಗೂ ಕನ್ನಡ ಮಾಧ್ಯಮದಲ್ಲಿ ದಾಖಲಾತಿ ಪಡೆಯಲು ತಾವು ಅನುಮತಿ ನೀಡಬೇಕು. ಸರ್ಕಾರದಿಂದ ಆಂಗ್ಲ ಮಾಧ್ಯಮ ಶಾಲೆ ಮಂಜೂರಾದ ಬಳಿಕ ವಿದ್ಯಾರ್ಥಿಗಳನ್ನು ಮತ್ತೆ ಆಂಗ್ಲ ಮಾಧ್ಯಮ ಶಾಲೆಗೆ ಮರು ದಾಖಲಾತಿ ಮಾಡಿಕೊಳ್ಳುತ್ತೇವೆ ಎಂದು ಪಾಲಕರಿಂದ ಅನುಮತಿ ಪಡೆದುಕೊಳ್ಳಲಾಗುತ್ತಿದೆ.

ಈ 8ನೇ ತರಗತಿಗೆ ಮಕ್ಕಳ ದಾಖಲಾತಿಯನ್ನು ಆನ್‌ಲೈನ್‌ನಲ್ಲಿ ಮಾಡಬೇಕಿದೆ. ಇದಕ್ಕಾಗಿ ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ (ಶಾಟ್ಸ್‌ ಆ್ಯಪ್‌) ಅಪ್‌ಲೋಡ್‌ ಮಾಡಿದ ಬಳಿಕ ಆ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಬಿಸಿಯೂಟ, ಹಾಲು, ಮೊಟ್ಟೆ ಮತ್ತು ಬಾಳೆಹಣ್ಣು ನೀಡಲು ಅವಕಾಶವಿದೆ.

ಮರು ದಾಖಲಾತಿ ಮಾಡುತ್ತೇವೆ

ಸರ್ಕಾರ ಆಂಗ್ಲ ಮಾಧ್ಯಮದ 8ನೇ ತರಗತಿಗೆ ಮಂಜೂರಾತಿ ನೀಡಿಲ್ಲ. ಆ ಮಕ್ಕಳನ್ನು ಸರ್ಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮಕ್ಕೆ ದಾಖಲಾತಿ ನಡೆಸುವ ಪ್ರಕ್ರಿಯೆ ನಡೆದಿದೆ. ದಾಖಲಾತಿ ಇಲ್ಲದಿದ್ದರೆ ಅವರಿಗೆ ಹಾಜರಾತಿ ಸಿಗಲ್ಲ. ಆಂಗ್ಲ ಮಾಧ್ಯಮ ಮಂಜೂರು ಆದ ಕೂಡಲೇ ಅವರನ್ನು ಮರು ದಾಖಲಾತಿ ಮಾಡಲಾಗುವುದು.

-ಕೆ.ಮಂಗಳಾ, ಕ್ಷೇತ್ರ ಶಿಕ್ಷಣಾಧಿಕಾರಿ, ಹೂವಿನಹಡಗಲಿ

ಕನ್ನಡ ಮಾಧ್ಯಮಕ್ಕೆ ದಾಖಲು

ವಿದ್ಯಾರ್ಥಿಗಳು 7ನೇ ತರಗತಿ ಆಂಗ್ಲ ಮಾಧ್ಯಮ ಶಾಲೆಯಿಂದ ಪಾಸ್‌ ಆಗಿದ್ದಾರೆ. ಅವರಿಗೆ 8ನೇ ತರಗತಿ ಆಂಗ್ಲ ಮಾಧ್ಯಮ ವ್ಯವಸ್ಥೆ ಇಲ್ಲ. ವಿಧಿ ಇಲ್ಲದೇ ಶಿಕ್ಷಕರು ಪಾಲಕರ ಅನುಮತಿ ಪತ್ರ ಪಡೆದು ಕನ್ನಡ ಮಾಧ್ಯಮದಲ್ಲೇ ಅವರನ್ನು ದಾಖಲಾತಿ ಮಾಡಿಕೊಳ್ಳುತ್ತಿದ್ದಾರೆ.

-ಜಯಪ್ರಕಾಶ ನಾರಾಯಣ, ಪಾಲಕ, ಮಾಗಳ ಗ್ರಾಮ.

PREV
Read more Articles on
click me!

Recommended Stories

Breaking: NEET-UG 2026 ಫಲಿತಾಂಶ ಪ್ರಕಟಿಸಿದ NTA, 11.21 ಲಕ್ಷ ವಿದ್ಯಾರ್ಥಿಗಳ ಅರ್ಹತೆ
2ನೇ ಕ್ಲಾಸ್‌ ಹಿಂದೂ ಮಗುವಿಗೆ ಇಸ್ಲಾಮಿಕ್ 'ಕಲ್ಮಾ' ಹೋಮ್‌ವರ್ಕ್; ಶಾಲೆಯ ವಿರುದ್ಧ ಭುಗಿಲೆದ್ದ ಆಕ್ರೋಶ!