ಕೃಷ್ಣ ಎನ್. ಲಮಾಣಿ
ಹೊಸಪೇಟೆ (ನ.26) : ಕನ್ನಡದ ಮುಕುಟಮಣಿಯಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ನೌಕರರ ಬಹು ವರ್ಷಗಳಿಂದ ಬಾಕಿ ಉಳಿದಿದ್ದ ವಿಶ್ರಾಂತಿ ವೇತನ ಮತ್ತು ವಂತಿಗೆ ಹಣವನ್ನು ರಾಜ್ಯ ಸರ್ಕಾರ ಒಟ್ಟೊಟ್ಟಿಗೆ ಬಿಡುಗಡೆಗೊಳಿಸಿದ್ದು, ನಿವೃತ್ತ ನೌಕರರಿಗೆ ನೆಮ್ಮದಿ ತಂದಿದೆ.
ಕನ್ನಡ ವಿಶ್ವವಿದ್ಯಾಲಯಕ್ಕೆ ವಿಶ್ರಾಂತಿ ವೇತನ ಮತ್ತು ನಿವೃತ್ತಿ ಸೌಲಭ್ಯ ಪಾವತಿಸಲು ಸಹಾಯಾನುದಾನ, ವಿಶ್ರಾಂತಿ ವೇತನಗಳ ಅಡಿಯ ಹೆಚ್ಚುವರಿಯಾಗಿ .10.56 ಕೋಟಿ ಅನುದಾನ ಬಿಡುಗಡೆಗೊಳಿಸಿ ಸರ್ಕಾರ ಆದೇಶ ನೀಡಿದೆ.
ಕನ್ನಡ ವಿವಿ ಅಭಿವೃದ್ಧಿಗೆ 20 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ
ಸಂಕಷ್ಟದಿಂದ ಚೇತರಿಕೆಯತ್ತ:
ಸಂಶೋಧನಾ ವಿದ್ಯಾರ್ಥಿಗಳಿಗೆ ಗೈಡ್‌ಗಳ ಸಮಸ್ಯೆ, ವಿದ್ಯುತ್ ಬಿಲ್ ಪಾವತಿಸಲು ಆಗದೇ ವಿವಿ ಕಂಗಾಲಾಗಿತ್ತು. ಈಗ ಕನ್ನಡ ವಿವಿಗೆ ಅನುದಾನದ ಮಹಾಪೂರವೇ ಹರಿದು ಬರುತ್ತಿದೆ. ಕನ್ನಡ ವಿವಿಗೆ ರಾಜ್ಯ ಸರ್ಕಾರ ಮುಕ್ತ ಮನಸ್ಸಿನಿಂದ ಅನುದಾನ ನೀಡುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳೊಳಗೆ ವಿವಿಗೆ .40 ಕೋಟಿ ಅನುದಾನ ಬಂದಿದೆ. ಇದು ಕನ್ನಡ ಕಾರ್ಯಕ್ಕೆ ಇಂಬು ನೀಡಿದೆ.
ನಿವೃತ್ತ ನೌಕರರು ಉಪಲಬ್ದಿ ಪಡೆಯುವ ಸಲುವಾಗಿ ಕಳೆದ ನಾಲ್ಕು ವರ್ಷಗಳಿಂದ ಅಲೆದಾಡುತ್ತಿದ್ದರು, ಈಗ ಅವರಿಗೆ ಇಡುಗಂಟು ದೊರೆಯಲಿದೆ. ಇದರಿಂದ ಅವರ ನಿವೃತ್ತಿ ಜೀವನವೂ ಹರ್ಷದಿಂದ ಸಾಗಲಿದೆ. ಕನ್ನಡ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸೇರಿ ಇತರೆ ನೌಕರರಿಗೆ ಕಳೆದ 2018ನೇ ಸಾಲಿನಿಂದ ಈವರೆಗೆ ನಾಲ್ಕು ವರ್ಷಗಳ ಕಾಲ ಉಪಲಬ್ದಿ ವೇತನ ಬಾಕಿ ಇತ್ತು. ಇದೇ ಕಾರಣಕ್ಕೆ ನಿವೃತ್ತರು ಪಿಂಚಣಿಗಾಗಿ ಕನ್ನಡ ವಿವಿಗೆ ಅಲೆದಾಡಿ ಮನವಿ ಪತ್ರ ಸಲ್ಲಿಸಿ ಸಾಕಾಗಿದ್ದರು. ಕನ್ನಡ ವಿವಿ ಕಟ್ಟಿಬೆಳೆಸಿದ ಹಲವು ಪ್ರಮುಖರ ಪಿಂಚಣಿಯನ್ನು ಸರ್ಕಾರ ಬಾಕಿ ಉಳಿಸಿಕೊಂಡಿತ್ತು. ನಿವೃತ್ತರಿಗೆ ಕೊಡುವ ವಂತಿಗೆ, ಉಪಲಬ್ದಿಗಳು ಪಾವತಿಸಲು ಸರ್ಕಾರ ಅನುದಾನ ಬಿಡುಗಡೆಗೊಳಿಸಿದ್ದು, ಕಳೆದ 2018-19, 2019-20, 2020-21, 2021-22ನೇ ಸಾಲಿನಲ್ಲಿ ಸುಮಾರು 33 ನಿವೃತ್ತ ನೌಕರರ ಬಾಕಿ ಇದ್ದು ಪಿಂಚಣಿ ಮತ್ತು ವಿಶ್ರಾಂತಿ ವೇತನ ಕೊಟ್ಟಿರುವುದು ಸಂತಸಕ್ಕೆ ಕಾರಣವಾಗಿದೆ.
.10.56 ಕೋಟಿ ಬಿಡುಗಡೆ:
ಕನ್ನಡ ವಿಶ್ವವಿದ್ಯಾಲಯದಲ್ಲಿ ಬೋಧಕ ಹಾಗು ಬೋಧಕೇತರರು ಸೇರಿ ಇತರೆ ಸಿಬ್ಬಂದಿ ಕಾಲಕಾಲಕ್ಕೆ ನಿವೃತ್ತಿಯಾಗುತ್ತಾರೆ. ಇವರಿಗೆ ವಿಶ್ರಾಂತಿ ವೇತನ ಹಾಗು ಪಿಂಚಣಿ ಸೌಲಭ್ಯ ಪಾವತಿಸುವುದು ಅತ್ಯಗತ್ಯ. ಹೀಗಾಗಿ ಸರ್ಕಾರಕ್ಕೆ ಅನುದಾನ ಮಂಜೂರು ಮಾಡುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿ .10.56 ಕೋಟಿ ಅನುದಾನ ಕಾಯ್ದಿರಿಸಿ ಕಳೆದ ಅ.29ರಂದು ಆದೇಶಿಸಿದೆ.
ನಿವೃತ್ತ ನೌಕರರಿಗೆ ಇಲ್ಲವೇ ಪಿಂಚಣಿದಾರರಿಗೆ ಕೊಡುವ ವಂತಿಗೆಗಳು,ಉಪಲಬ್ದಿಗಳನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು.ಈಗ ನಿವೃತ್ತ ನೌಕರರಿಗೆ ಅನುಕೂಲವಾಗಲಿದೆ. ಕಳೆದ ನಾಲ್ಕು ವರ್ಷದಲ್ಲಿ ಸರ್ಕಾರ ವಿವಿಗೆ ಈ ಅನುದಾನ ಬಿಡುಗಡೆ ಮಾಡಿರಲಿಲ್ಲ. ವಿವಿಯಿಂದ ಇದೇ ಕಾರಣಕ್ಕೆ ಸತತವಾಗಿ ಪತ್ರ ಬರೆದು ಅನುದಾನ ಕೇಳಲಾಗಿತ್ತು.ಅದೇ ರೀತಿ 2022-23ನೇ ಸಾಲಿನಲ್ಲಿ ವಿವಿಯಿಂದ ವಿಶ್ರಾಂತಿ ವೇತನಕ್ಕೆ ಬೇಕಾದ ಅನುದಾನ .3.63 ಕೋಟಿ ಕೇಳಲಾಗಿತ್ತು. ಇದಕ್ಕೆ .88.86 ಲಕ್ಷ ಬಿಡುಗಡೆಗೊಳಿಸಿದೆ.ಜತೆಗೆ ಪಿಂಚಣಿ ಸೌಲಭ್ಯಕ್ಕಾಗಿ ಬೇಕಾದ ಅನುದಾನ .9.68 ಕೋಟಿ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ. ಕನ್ನಡ ವಿವಿಯಲ್ಲಿ ಕುಲಪತಿಗಳಾಗಿ ನಿವೃತ್ತರಾದವರು, ಬೋಧಕ, ಬೋಧಕೇತರ ಸೇರಿ ಇತರೆ ಸಿಬ್ಬಂದಿ ವಿಶ್ರಾಂತಿ ವೇತನ, ಪಿಂಚಣಿ ಸೌಲಭ್ಯಗಳು ಸೇರಿ ಹಿರಿಯ ಪ್ರಾಧ್ಯಾಪಕರು ಹಾಗು ಇನ್ನಿತರರ ಪಿಂಚಣಿ ಬಾಕಿ ಉಳಿದಿದೆ.
Hosapete| ಹಂಪಿ ಕನ್ನಡ ವಿವಿ ಪಾವಿತ್ರ್ಯತೆ ಪುನರುಜ್ಜೀವನಕ್ಕೆ ಪತ್ರ ಚಳವಳಿ..!
ಹಂಪಿ ಕನ್ನಡ ವಿವಿಗೆ ಪಿಂಚಣಿ ಹಾಗೂ ಉಪಲಬ್ದಿಗೆ .10.56 ಕೋಟಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿ ಆದೇಶಿಸಿದೆ.ಇದರಿಂದ ಕನ್ನಡ ವಿವಿ ಎದುರಿಸುತ್ತಿದ್ದ ದೊಡ್ಡ ಸಂಕಷ್ಟದಿಂದ ಪಾರಾಗಿದಂತಾಗಿದೆ. ಕನ್ನಡ ವಿವಿ ಕೋವಿಡ್ ವೇಳೆ ಭಾರಿ ಸಂಕಷ್ಟಎದುರಿಸಿತ್ತು.ಈಗ ಸರ್ಕಾರ ವಿವಿ ಕೈಹಿಡಿಯುತ್ತಿದೆ. ಇದರಿಂದ ಕನ್ನಡ ಕಟ್ಟುವ ಕಾರ್ಯಕ್ಕೆ ಅನುಕೂಲವಾಗಲಿದೆ.
ಡಾ.ಸ.ಚಿ. ರಮೇಶ, ಕುಲಪತಿ ಹಂಪಿ ಕನ್ನಡ ವಿಶ್ವವಿದ್ಯಾಲಯ