ಬೆಂಗಳೂರು (ಸೆ.27) : ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಸೋಮವಾರ ಭರ್ಜರಿ ಕಾರ್ಯಾಚರಣೆ ನಡೆಸಿರುವ ರಾಜ್ಯ ಅಪರಾಧ ತನಿಖಾ ದಳವು (ಸಿಐಡಿ), ರಾಜ್ಯ ಸಮಗ್ರ ಶಿಕ್ಷಣ ಅಭಿಯಾನದ ನಿರ್ದೇಶಕಿ ಸೇರಿದಂತೆ ಶಿಕ್ಷಣ ಇಲಾಖೆಯ ಐವರು ಹಿರಿಯ ಅಧಿಕಾರಿಗಳು ಹಾಗೂ ಓರ್ವ ಕಂಪ್ಯೂಟರ್ ಆಪರೇಟರ್‌ನನ್ನು ಬಂಧಿಸಿದೆ. ರಾಜ್ಯ ಸಮಗ್ರ ಶಿಕ್ಷಣ ಅಭಿಯಾನದ ನಿರ್ದೇಶಕಿ ಗೀತಾ, ಪಠ್ಯ ಪುಸ್ತಕ ವಿಭಾಗದ ನಿರ್ದೇಶಕ ಮಾದೇಗೌಡ, ನಿವೃತ್ತ ಜಂಟಿ ನಿರ್ದೇಶಕರಾದ (ಜೆಡಿ) ಜಿ.ಆರ್.ಬಸವರಾಜ್, ಕೆ.ರತ್ನಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗದ ಕಚೇರಿ ಕಂಪ್ಯೂಟರ್ ಆಪರೇಟರ್ ನರಸಿಂಹರಾವ್ ಬಂಧಿತರಾಗಿದ್ದಾರೆ.
ಶಿಕ್ಷಕರ ನೇಮಕಾತಿ ಅಕ್ರಮ: ಬಿಜೆಪಿ ಮಾಡಿದ ಆರೋಪ ನಮ್ಮ ವ್ಯಾಪ್ತಿಯಲ್ಲಿ ನಡೆದಿಲ್ಲ ಎಂದ ಮಾಜಿ ಶಿಕ್ಷಣ ಸಚಿವ
ಬಂಧಿತರು ಯಾರು?
ಈ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಹಿನ್ನಲೆಯಲ್ಲಿ ಸಿಐಡಿ ತನಿಖಾ ತಂಡದ ಮುಂದೆ ಸೋಮವಾರ ಬೆಳಗ್ಗೆ ಅಧಿಕಾರಿಗಳು ಹಾಜರಾಗಿದ್ದರು. ಈ ಅಧಿಕಾರಿಗಳನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಕೆ.ವಿ.ಶರತ್‌ಚಂದ್ರ ನೇತೃತ್ವದ ತಂಡವು ಸುದೀರ್ಘ ವಿಚಾರಣೆ ನಡೆಸಿ ಅಂತಿಮವಾಗಿ ಬಂಧಿಸಿದೆ. ಇನ್ನು ಶಿಕ್ಷಣ ಇಲಾಖೆಯ ಕೆಲಸ ತೊರೆದು ನಾಲ್ಕು ವರ್ಷಗಳಿಂದ ತನ್ನೂರು ಆಂಧ್ರಪ್ರದೇಶದ ವರಂಗಲ್‌ನಲ್ಲಿದ್ದ ನರಸಿಂಹರಾವ್‌ನನ್ನು ಬಂಧಿಸಿ ನಗರಕ್ಕೆ ಸಿಐಡಿ ತಂಡ ಕರೆ ತಂದಿದೆ.
ನೇಮಕಾತಿ ಅಕ್ರಮ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತನಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ (ಬೆಂಗಳೂರು ವಿಭಾಗ) ಪ್ರಥಮ ದರ್ಜೆ ಸಹಾಯಕ ಪ್ರಸಾದ್ ವಿಚಾರಣೆ ವೇಳೆ ಆತ ನೀಡಿದ ಹೇಳಿಕೆ ಆಧರಿಸಿ ಶಿಕ್ಷಣ ಇಲಾಖೆಯ ಹಾಲಿ ಹಾಗೂ ನಿವೃತ್ತ ಹಿರಿಯ ಅಧಿಕಾರಿಗಳನ್ನು ಸಿಐಡಿ ಬೇಟೆಯಾಡಿದೆ. ಶಿಕ್ಷಕರ ನೇಮಕಾತಿ ಹಗರಣ ನಡೆದ ಸಂದರ್ಭದಲ್ಲಿ ಈ ಆರೋಪಿತ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗದಲ್ಲಿ ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು ಎಂದು ಸಿಐಡಿ ಹೇಳಿದೆ.
ಪ್ರಸಾದ್ ನೀಡಿದ ಪಟ್ಟಿಗೆ ಅಧಿಕಾರಿಗಳ ಅಸ್ತು:
2012-13 ಹಾಗೂ 2013-14ನೇ ಸಾಲಿನಲ್ಲಿ ಶಿಕ್ಷಕರ ನೇಮಕಾತಿ ಅಕ್ರಮ ನಡೆದಿದ್ದ ಬಗ್ಗೆ ಇತ್ತೀಚೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಗರಣದಲ್ಲಿ ಅರ್ಜಿ ಸಲ್ಲಿಸಿದವರ ಹೆಚ್ಚುವರಿ ಪಟ್ಟಿಯಲ್ಲಿದ್ದು ಶಿಕ್ಷಕ ಹುದ್ದೆ ಪಡೆದಿದ್ದ ಸಂಗತಿ ತನಿಖೆ ವೇಳೆ ಬಯಲಾಗಿತ್ತು. ಬಳಿಕ ಅಕ್ರಮವಾಗಿ ಶಿಕ್ಷಕರ ಹುದ್ದೆ ಪಡೆದಿದ್ದ 15 ಶಿಕ್ಷಕರು ಹಾಗೂ ಕೃತ್ಯಕ್ಕೆ ಸಹಕರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಫ್‌ಡಿಎ ಪ್ರಸಾದ್‌ನನ್ನು ಸಿಐಡಿ ಬಂಧಿಸಿತ್ತು.
ಬಳಿಕ ವಿಚಾರಣೆ ವೇಳೆ ಪ್ರಸಾದ್ ಹಾಗೂ ಆರೋಪಿತ ಶಿಕ್ಷಕರು ನೀಡಿದ ಹೇಳಿಕೆ ಆಧರಿಸಿ ಕಾರ್ಯಾಚರಣೆ ತೀವ್ರಗೊಳಿಸಿದ ಸಿಐಡಿ, ಶಿಕ್ಷಣ ಇಲಾಖೆಯ ಹಾಲಿ ಹಾಗೂ ಮಾಜಿ ಅಧಿಕಾರಿಗಳಿಗೆ ನೋಟಿಸ್ ನೀಡಿತ್ತು. ಅಂತೆಯೇ ವಿಚಾರಣೆಗೆ ಹಾಜರಾಗಿದ್ದ ಗೀತಾ, ಮಾದೇಗೌಡ, ಡಿ.ಕೆ.ಶಿವಕುಮಾರ್, ರತ್ನಯ್ಯ ಹಾಗೂ ಬಸವರಾಜು ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ನೇಮಕಾತಿ ನಡೆದ ವೇಳೆ ಬೆಂಗಳೂರು ವಿಭಾಗದ ಶಿಕ್ಷಣ ಇಲಾಖೆಯಲ್ಲಿ ಈ ಐವರು ಜಂಟಿ ನಿರ್ದೇಶಕರಾಗಿದ್ದರು. ಆಗ ಎಫ್‌ಡಿಎ ಪ್ರಸಾದ್ ನೀಡಿದ ಶಿಕ್ಷಕರ ಆಯ್ಕೆ ಪಟ್ಟಿಗೆ ಈ ಅಧಿಕಾರಿಗಳು ಅಸ್ತು ಎಂದಿದ್ದರು. ಇದಕ್ಕಾಗಿ 2 ರಿಂದ 3 ಲಕ್ಷ ರು ಹಣವನ್ನು ಅಧಿಕಾರಿಗಳು ಪಡೆದಿರುವ ಬಗ್ಗೆ ಶಂಕೆ ಇದೆ. ಈ ಹಣಕಾಸಿನ ಕುರಿತು ತನಿಖೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಬಂಧಿತರಾಗಿರುವ ಗೀತಾ ಅವರು, ಈ ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ (ಬೆಂಗಳೂರು) ಜಂಟಿ ನಿರ್ದೇಶಕರಾಗಿದ್ದರು. ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಯಲ್ಲಿ ಇತರೆ ಪರೀಕ್ಷೆಗಳ ನಿರ್ದೇಶಕಿ ಹಾಗೂ ನೇಮಕಾತಿ ವಿಭಾಗದ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ ಅವರು, ಪ್ರಸ್ತುತ ರಾಜ್ಯ ಸಮಗ್ರ ಶಿಕ್ಷಣ ಅಭಿಯಾನದ ನಿರ್ದೇಶಕಿಯಾಗಿದ್ದಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಡಿಡಿಪಿಐ ಆಗಿದ್ದ ಮಾದೇಗೌಡ, ಬೆಂಗಳೂರು ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದರು. ಪ್ರಸುತ್ತ ಪಠ್ಯ ಪುಸಕ್ತಗಳ ವಿಭಾಗದ ನಿರ್ದೇಶಕ ಹುದ್ದೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನುಳಿದ ಮೂವರು ಜೆಡಿಗಳಾಗಿ ನಿವೃತ್ತರಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪಟ್ಟಿತಿದ್ದಿದ್ದ ಕಂಪ್ಯೂಟರ್ ಆಪರೇಟರ್
ನೇಮಕಾತಿಯ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿದ್ದ ಅರ್ಹ ಅಭ್ಯರ್ಥಿಗಳ ಹೆಸರನ್ನು ಅಳಿಸಿ ತನಗೆ ಹಣ ಕೊಟ್ಟಿದ್ದ ಅಭ್ಯರ್ಥಿಗಳಿಗೆ ಬೆಂಗಳೂರು ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಫ್‌ಡಿಎ ಪ್ರಸಾದ್ ಹುದ್ದೆ ಕೊಡಿಸಿದ್ದ. ಈ ಕೃತ್ಯಕ್ಕೆ ಕಂಪ್ಯೂಟರ್ ಆಪರೇಟರ್ ನರಸಿಂಹರಾವ್‌ಗೆ ಹಣದಾಸೆ ತೋರಿಸಿ ಆತ ಬಳಸಿಕೊಂಡಿದ್ದ. ಪ್ರಸಾದ್ ಸೂಚನೆಯಂತೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಂಕ ನೀಡಿ ಹೆಚ್ಚುವರಿ ಪಟ್ಟಿಗೆ ಅವರ ಹೆಸರನ್ನು ನರಸಿಂಹರಾವ್ ಸೇರಿಸಿದ್ದ. ಆಯ್ಕೆ ಪಟ್ಟಿಯಲ್ಲಿದ್ದ ಅರ್ಹ ಅಭ್ಯರ್ಥಿಗಳ ಹೆಸರನ್ನು ನರಸಿಂಹರಾವ್ ಡಿಲೀಟ್ ಮಾಡಿದ್ದ. ಆನಂತರ ಈ ಪಟ್ಟಿಯನ್ನು ಜಂಟಿ ನಿರ್ದೇಶಕರ ಒಪ್ಪಿಗೆ ಪಡೆದು ಡಿಡಿಪಿಐಗಳಿಗೆ ಪ್ರಸಾದ್ ರವಾನಿಸಿದ್ದ. ಜಂಟಿ ನಿರ್ದೇಶಕ ಇಲಾಖೆಯಿಂದ ಬಂದ ನೇಮಕಾತಿ ಆದೇಶವನ್ನು ಶಿಕ್ಷಕರಿಗೆ ಡಿಡಿಪಿಐಗಳು ವಿತರಿಸಿದ್ದರು ಎಂದು ಸಿಐಡಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಸಿದ್ದರಾಮಯ್ಯ ಕಾಲದಲ್ಲಿ ಶಿಕ್ಷಕರ ನೇಮಕಾತಿ ಅಕ್ರಮ: ವಿಚಾರಣೆ ವೇಳೆ ಹೊರಬಿತ್ತು ಸ್ಪೋಟಕ ಮಾಹಿತಿ
ಬೆಂಗಳೂರು ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇರೆಗೆ ನರಸಿಂಹರಾವ್ ಕೆಲಸ ಮಾಡುತ್ತಿದ್ದ. ನಾಲ್ಕು ವರ್ಷಗಳ ಹಿಂದೆ ಕೆಲಸ ತೊರೆದು ಆತ, ತನ್ನೂರು ಆಂಧ್ರಪ್ರದೇಶದ ವರಂಗಲ್‌ನಲ್ಲಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.