ಪಠ್ಯ ಬಗ್ಗೆ ಬರಗೂರು ಜತೆ ಚರ್ಚೆಗೆ ಸಿದ್ಧ: ಸಚಿವ ನಾಗೇಶ್‌

By Girish Goudar  |  First Published May 24, 2022, 4:47 AM IST

*   ಕುವೆಂಪು, ಗಾಂಧಿ, ಅಂಬೇಡ್ಕರ್‌ ಪಠ್ಯವನ್ನೇ ಅವರು ತೆಗೆಸಿದ್ದರು
*  ಇಂದಿರಾಗೆ ನೆಹರು ಬರೆದಿದ್ದ ಪತ್ರವನ್ನು ಸೇರ್ಪಡೆ ಮಾಡಿದ್ದರು
*  ಪಠ್ಯದ ಬಗ್ಗೆ ವಿವಾದ ಸೃಷ್ಟಿಸುವವರು ಆಗ ಏಕೆ ಸುಮ್ಮನಿದ್ದರು?
 


ಬೆಂಗಳೂರು(ಮೇ.24):   ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಮಾಡಿದ ಹಲವು ಬದಲಾವಣೆಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು, ಈ ಸಂಬಂಧ ಡಾ.ಬರಗೂರು ರಾಮಚಂದ್ರಪ್ಪ ಅವರು ಇಚ್ಛಿಸಿದರೆ ಮುಖಾಮುಖಿ ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಹಿತ್‌ ಚಕ್ರತೀರ್ಥ ಅವರ ನೇತೃತ್ವದ ಸಮಿತಿ ಮಾಡಿರುವ ಪಠ್ಯಪರಿಷ್ಕರಣೆ ಬಗ್ಗೆ ಪ್ರಶ್ನಿಸಿ ವಿವಾದ ಸೃಷ್ಟಿಸುತ್ತಿರುವವರು, ಬರಗೂರು ರಾಮಚಂದ್ರಪ್ಪ ಅವರ ಸಮಿತಿ ಕುವೆಂಪು, ಗಾಂಧಿ, ಅಂಬೇಡ್ಕರ್‌ ಅವರ ಪಠ್ಯಗಳನ್ನು ತೆಗೆದುಹಾಕಿದರೂ ಏಕೆ ಪ್ರಶ್ನಿಸಲಿಲ್ಲ? ಸಿಂಧೂ ಸಂಸ್ಕೃತಿ ಪಾಠ ತೆಗೆದು ಜವಾಹರಲಾಲ್‌ ನೆಹರು ಅವರು ಇಂದಿರಾಗಾಂಧಿ ಅವರಿಗೆ ಬರೆದಿರುವ ಪತ್ರವನ್ನು ಸೇರ್ಪಡೆ ಮಾಡಲಾಗಿತ್ತು. ಅಪ್ಪ ಮಗಳಿಗೆ ಬರೆದಿರುವ ಪಾಠವನ್ನು ನಮ್ಮ ಮಕ್ಕಳು ಏಕೆ ಓದಬೇಕು? ಆ ಸಮಿತಿ ಮಾಡಿದ್ದೆಲ್ಲವೂ ಸರಿಯಾಗಿತ್ತಾ ಎಂದು ಪ್ರಶ್ನಿಸಿದರು.

Tap to resize

Latest Videos

ಭಗತ್‌ಸಿಂಗ್‌ ಪಠ್ಯ ಬಿಟ್ಟಿಲ್ಲ-ಪೂರ್ಣ ಸತ್ಯ ಹೇಳಲು ಪಠ್ಯ ಪರಿಷ್ಕರಣೆ: ಸಚಿವ ನಾಗೇಶ್‌

ಬರಗೂರು ರಾಮಚಂದ್ರಪ್ಪ ಅವರ ಸಮಿತಿ ಮಾಡಿದ ಪಠ್ಯ ಬದಲಾವಣೆಗಳ ಬಗ್ಗೆ ನಮ್ಮ ಆಕ್ಷೇಪಗಳು ಸಾಕಷ್ಟುಇವೆ. ಅವರು ದೊಡ್ಡ ಸಾಹಿತಿಗಳು. ನಾನು ಅವರಷ್ಟುಪಾರಂಗತನಲ್ಲ. ಆದರೂ ಅವರು ಚರ್ಚೆಗೆ ಬರುವುದಾದರೆ ನಮ್ಮ ಆಕ್ಷೇಪಣೆಗಳ ಬಗ್ಗೆ ಚರ್ಚೆಗೆ ಸಿದ್ಧವಿರುವುದಾಗಿ ಹೇಳಿದರು. ಇದೇ ವೇಳೆ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಮತ್ತು ಇತರೆ ಸದಸ್ಯರ ಅರ್ಹತೆ ಹಾಗೂ ಅವರ ಶಿಫಾರಸುಗಳನ್ನು ಸಮರ್ಥಿಸಿಕೊಂಡರು. ಹಿಂದಿನ ಸಮಿತಿಯು ಪಠ್ಯದಲ್ಲಿದ್ದ ಹಿಂದೂ ಮಹಾಸಾಗರ, ಮಾತೃಭೂಮಿ, ತಾಯಿನಾಡು ಎಂಬ ವಿಷಯಗಳಲ್ಲಿ ‘ಹಿಂದೂ’, ‘ಮಾತೃ’, ‘ತಾಯಿ’ ಇಂತಹ ಪದಗಳನ್ನು ತೆಗೆದುಹಾಕಿದ್ದರ ಹಿಂದಿನ ಉದ್ದೇಶವೇನು? ಒಂದನೇ ತರಗತಿಯಲ್ಲಿದ್ದ ಕಯ್ಯಾರ ಕಿಣ್ಣಯ್ಯ ರೈ ಅವರ ‘ಹಾರುತಿರುವುದು ಏರುತಿರುವುದು ನೋಡು ನಮ್ಮ ಬಾವುಟ’ ಪದ್ಯ ತೆಗೆಯಲಾಗಿತ್ತು. ದೇಶದ ಬಾವುಟ ಹಾರಿದರೆ ಅವರು ಸಹಿಸಲ್ಲ, ಪಾಕಿಸ್ತಾನದ ಬಾವುಟ ಹಾರಿದ್ದರೆ ಖುಷಿ ಪಡುತ್ತಿದ್ದರೇನೋ ಎಂದು ವ್ಯಂಗ್ಯವಾಡಿದರು.

ಕುವೆಂಪು, ಗಾಂಧಿ, ಅಂಬೇಡ್ಕರ್‌ ಯಾಕೆ ಕೈಬಿಟ್ಟಿದ್ದರು:

ಅದೇ ರೀತಿ ಆ ಸಮಿತಿ ಗಾಂಧಿ, ಅಂಬೇಡ್ಕರ್‌ ಉದಾತ್ತ ಚಿಂತನೆಗಳನ್ನು ಕೈಬಿಟ್ಟಿತ್ತು. ವಿವೇಕಾನಂದರನ್ನು ವಿಕೃತಗೊಳಿಸಿ ಹಿಂದೂ ಸಮಾಜದ ವಿರೋಧಿ ಎಂದು ಬಿಂಬಿಸಲಾಗಿತ್ತು. ರಾಮಾಯಣದ ಮೂಲಕ ದೇಶದ ಸಂಸ್ಕೃತಿ ತಿಳಿಸಿದ್ದ ಕುವೆಂಪು ಅವರ ಪಾಠವನ್ನು ತೆಗೆದಿತ್ತು. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಪಾಠವನ್ನೂ ಕೈಬಿಟ್ಟಿತ್ತು. ಬೆಂಗಳೂರು ಕುರಿತು ಮಸೀದಿ, ಚಚ್‌ರ್‍ ಮತ್ತು ಮಂದಿರ ಎಂಬ ಪಾಠವಿದೆ. 2015ರಲ್ಲಿ ನಿರ್ಮಿಸಿರುವ ಮಸೀದಿ ಹಾಗೂ ಚಚ್‌ರ್‍ ಫೋಟೋಗಳನ್ನು ಹಾಕಲಾಗಿದೆ. ಇಲ್ಲಿ ದೇವಸ್ಥಾನಗಳ ಫೋಟೋ ತೆಗೆದಿದ್ದೇಕೆ ಎಂದು ಪ್ರಶ್ನಿಸಿದರು.

ಮೊಘಲರು ಭಾರತದ ಮೇಲೆ ನಡೆಸಿದ ಆಕ್ರಮಣ ವಿಚಾರಗಳನ್ನು ಎಲ್ಲಿಯೂ ಹೇಳಿಲ್ಲ. ಕೇವಲ ಆಡಳಿತವನ್ನು ಮಾತ್ರ ತಿಳಿಸಿದೆ. ಹಿಂಬಾಗಿಲಿನಿಂದ ಹೇಗೆ ಯುದ್ಧ ಮಾಡಿದರು ಎಂಬ ವಿಚಾರಗಳನ್ನು ಏಕೆ ತಿಳಿಸಲಿಲ್ಲ? ಇಂತಹ ವಿಷಯಗಳನ್ನು ಕೈಬಿಡಲಾಗಿತ್ತು. ರಾಜ್ಯಕ್ಕೆ ಸಾಕಷ್ಟುಕೊಡುಗೆ ನೀಡಿರುವ ಬಗ್ಗೆ 5 ಪುಟವಿದ್ದ ಮೈಸೂರು ರಾಜಮನೆತನದ ಒಡೆಯರ್‌ ಪಾಠವನ್ನು ಕೇವಲ 4 ಸಾಲುಗಳಿಗೆ ಇಳಿಸಿ, ಒಂದು ಪುಟವಿದ್ದ ಟಿಪ್ಪು ಸುಲ್ತಾನ್‌ ಪಾಠವನ್ನು 6 ಪುಟಕ್ಕೆ ಹೆಚ್ಚಿಸಲಾಯಿತು. ಟಿಪ್ಪು ಪಾಠ ಹೆಚ್ಚಳ ಮಾಡಿದ್ದು ವೋಟ್‌ ಬ್ಯಾಂಕ್‌ ರಾಜಕೀಯವಲ್ಲವಾ? ಇವುಗಳನ್ನೆಲ್ಲಾ ಬುದ್ಧಿಜೀವಿಗಳು ಎನಿಸಿಕೊಂಡವರು ಏಕೆ ಪ್ರಶ್ನಿಸಲಿಲ್ಲ ಎಂದು ಸಚಿವರು ತಿರುಗೇಟು ನೀಡಿದರು.

'ಪಠ್ಯ ಪರಿಷ್ಕರಣೆ ವಿವಾದ, ಶಿಕ್ಷಣದ ಮೂಲಕ ಆರ್ ಎಸ್ ಎಸ್ ತನ್ನ ಅಜೆಂಡಾವನ್ನ ಬಿತ್ತರಿಸುತ್ತಿದೆ'

ಟಿಪ್ಪು ಮಾತ್ರವಲ್ಲ, ಬ್ರಿಟಿಷರ ವಿರುದ್ಧ ಹೋರಾಡಿದ ಸಂಗೊಳ್ಳಿ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಹೋರಾಡಿದ್ದರು. ಅವರನ್ನು ಏಕೆ ಸೇರಿಸಲಿಲ್ಲ? ಆದ್ದರಿಂದ ಬ್ರಿಟಿಷರ ವಿರುದ್ಧ ಹೋರಾಡಿದ ಕಾಶ್ಮೀರದ ಮಹಾರಾಜ, ಅಸ್ಸಾಮಿನ ಮಹಾರಾಜ, ಶಿವಾಜಿ, ತಮಿಳುನಾಡಿನ ಕಟ್ಟಬೊಮ್ಮನ್‌ ಅವರನ್ನು ಸೇರ್ಪಡೆ ಮಾಡಿದ್ದೇವೆ. ಬರಗೂರು ರಾಮಚಂದ್ರಪ್ಪ ಸಮಿತಿ ಕೂಡ ಪ್ರೊ.ಸಾ.ಶಿ.ಮರುಳಯ್ಯ, ಸಿದ್ದಯ್ಯ ಪುರಾಣಿಕ್‌, ಸಂಗಮೇಶ ನಿಡಗುಂದಿ, ಸರ್ಪಭೂಷಣ ಶಿವಯೋಗಿ ಅವರ ಪಾಠಗಳನ್ನೂ ತೆಗೆದುಹಾಕಿತ್ತು. ಆಗ ಈ ಬುದ್ಧಿಜೀವಿಗಳು ಎಲ್ಲಿದ್ದರು ಎಂದು ಪ್ರಶ್ನಿಸಿದರು.

ಚಕ್ರತೀರ್ಥ ಐಐಟಿ ಪ್ರಾಧ್ಯಾಪಕ

ಪಠ್ಯಪುಸ್ತಕ ಸಮಿತಿಗೆ ನೇಮಕ ಮಾಡಲು ಮಾನದಂಡಗಳ ನಿಯಮವಿಲ್ಲ. ಮಾನದಂಡ ಪ್ರಶ್ನಿಸುವುದಾದರೆ ಬರಗೂರು ಅವರನ್ನು ಯಾವ ಮಾನದಂಡದ ಮೇಲೆ ಹಿಂದಿನ ಸರ್ಕಾರ ಆಯ್ಕೆ ಮಾಡಿತ್ತು. ರೋಹಿತ್‌ ಚಕ್ರತೀರ್ಥ ಅವರು ಐಐಟಿ ಪ್ರಾಧ್ಯಾಪಕರಾಗಿದ್ದಾರೆ. ಆ ಆಧಾರದಲ್ಲಿ ಪಠ್ಯಪುಸ್ತಕ ಸಮಿತಿ ಪರಿಷ್ಕರಣೆ ನೇತೃತ್ವ ನೀಡಲಾಗಿತ್ತು ಅಂತ ಶಿಕ್ಷಣ ಸಚಿವ  ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.  
 

click me!