ರಾಜ್ಯದ 3800 ಸರ್ಕಾರಿ ಶಾಲೆಯಲ್ಲಿ 5ಕ್ಕಿಂತಲೂ ಕಡಿಮೆ ಮಕ್ಕಳಿಂದ ಓದು: ಸಚಿವ ಬಿಸಿ ನಾಗೇಶ್

By Kannadaprabha NewsFirst Published Dec 31, 2022, 7:32 PM IST
Highlights

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳು ಸಹಕಾರಿಯಾಗಿದ್ದು ಇದರ ಜೊತೆಗೆ ಮಕ್ಕಳಿಗೆ ಮಾತೃಭಾಷೆಯ ಶಿಕ್ಷಣ ನೀಡಿದಾಗ ಭಾಷೆ ಮಹತ್ವ ಮತ್ತಷ್ಟು ಹೆಚ್ಚಾಗಲಿದೆ ಎಂದು ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್‌ ಹೇಳಿದ್ದಾರೆ.

ತಿಪಟೂರು (ಡಿ.31): ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳು ಸಹಕಾರಿಯಾಗಿದ್ದು ಇದರ ಜೊತೆಗೆ ಮಕ್ಕಳಿಗೆ ಮಾತೃಭಾಷೆಯ ಶಿಕ್ಷಣ ನೀಡಿದಾಗ ಭಾಷೆ ಮಹತ್ವ ಮತ್ತಷ್ಟುಹೆಚ್ಚಾಗಲಿದೆ ಎಂದು ಸಾಕ್ಷರತಾ ಶಾಲಾ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್‌ ತಿಳಿಸಿದರು. ತಾಲೂಕಿನ ಬಳುವನೇರಲು ಗ್ರಾಮದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಮತ್ತು ಹೊನ್ನವಳ್ಳಿ ಹೋಬಳಿ ಘಟಕದ ಸಹಯೋಗದೊಂದಿಗೆ ನಡೆದ ಹೊನ್ನವಳ್ಳಿ ಹೋಬಳಿ ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷ ಎಂ. ಬಸವರಾಜಪ್ಪ ಮಾತನಾಡಿ, 107 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯದಿಂದಿಡಿದು ಹೋಬಳಿ ಘಟಕಗಳವರೆಗೂ ವಿಸ್ತರಿಸಿಕೊಂಡು ಕನ್ನಡ ಭಾಷೆ, ಸಾಹಿತ್ಯದ ಬೆಳವಣಿಗೆಯ ಜತೆಗೆ ಯುವ ಕವಿಗಳಿಗೆ ಪೋ›ತ್ಸಾಹಿಸುವ ಕೆಲಸ ಮಾಡುತ್ತಿದೆ. ಸಾಹಿತ್ಯ ಸಮ್ಮೇನಗಳು ಕಸಾಪದ ಅವಿಭಾಜ್ಯ ಅಂಗವಾಗಿದ್ದು, ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಸಮ್ಮೇಳನಗಳು ಜಾತ್ರೆಯಂತೆ ನಡೆಯುತ್ತಿದ್ದು ಇದು ಸೌಹಾರ್ದತೆಯನ್ನು ಸೂಚಿಸುತ್ತಿದೆ ಎಂದರು.

ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಸಾಹಿತಿ ಆರ್‌.ಕೆ. ಶಿವಶಂಕರಪ್ಪ ಮಾತನಾಡಿ, ಕನ್ನಡ ಭಾಷೆ ಸಾವಿರಾರು ವರ್ಷಗಳಷ್ಟುಪ್ರಾಚೀನವಾದುದಾಗಿದ್ದು ಹಲವಾರು ಕವಿಗಳು ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ತಾಯಿಯನ್ನು ಪ್ರೀತಿಸುವ ಹಾಗೆ ಭಾಷೆಯನ್ನು ಪ್ರೀತಿಸಿದ್ದರೆ ನಮ್ಮ ಕನ್ನಡ ಭಾಷೆಗೆ ಮತ್ತಷ್ಟುಮೆರೆಗು ಬರುತ್ತಿತ್ತು. ಅನ್ಯ ಭಾಷೆಗಳ ಹಾವಳಿಯಿಂದ ಕನ್ನಡ ಭಾಷಾ ಬಳಕೆ ಕಡಿಮೆಯಾಗುತ್ತಿದ್ದು, ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಕನ್ನಡ ಭಾಷೆಯಲ್ಲಿ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಕನ್ನಡ ಮನಸ್ಸುಗಳು ಒಂದಾಗಿ ಭಾಷೆಯ ಉಳಿವಿಗೆ ಹೋರಾಡಬೇಕಿದೆ. ಕನ್ನಡ ಭಾಷೆಯ ಅರಿವಿರುವವನಲ್ಲಿ ಮಾನವೀಯತೆ, ಸಮಾನತೆಯ ಗುಣಗಳು ಹುಟ್ಟಿನೊಂದಿಗೆ ಬೆರೆಯುವ ಮೂಲಕ ಎಲ್ಲಾ ಭಾಷೆಗಳನ್ನು ಪ್ರೀತಿಸುವ ಶಕ್ತಿ ಇರುತ್ತದೆ. ನಮ್ಮ ಜೊತೆ ಬದುಕು ಕಟ್ಟಿಕೊಂಡಿರುವ ಪ್ರತಿಯೊಬ್ಬರು ಕನ್ನಡದ ಬಗ್ಗೆ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ತಾಲೂಕಿನ ಹೋಬಳಿ ಕೇಂದ್ರ ಹೊನ್ನವಳ್ಳಿ ಉತ್ತಮ ಪರಿಸರ ಹೊಂದಿದ್ದು 11ನೇ ಶತಮಾನಕ್ಕಿಂತ ಪುರಾತನವಾಗಿದೆ. ಬಳವನೇರಲು ತಾಲೂಕಿನ ಗಡಿಯಲ್ಲಿದ್ದು, ನಗರದಿಂದ 22 ಕಿಮೀ ದೂರದಲ್ಲಿದೆ. ಗ್ರಾಮ ಉತ್ತಮ ಪರಿಸರ, ವಾತಾವರಣ ಹೊಂದಿದ್ದು ನೈಸರ್ಗಿಕ ಸೌಂದರ್ಯದ ನೆಲೆವೀಡಾಗಿದೆ. ನನಗೆ ಸಮ್ಮೇಳನಾಧ್ಯಕ್ಷ ಸ್ಥಾನ ನೀಡಿದ ಕನ್ನಡಾಭಿಮಾನಿಗಳಿಗೆ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದರು.

ದೊಡ್ಡಮೇಟಿಕುರ್ಕೆಯ ಬೂದಾಳು ಮಠದ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಳುವನೇರಲು ಗ್ರಾ.ಪಂ ಅಧ್ಯಕ್ಷೆ ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಭಾಗ್ಯಮ್ಮ, ಸುರಭಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕೆ.ಜಿ. ಕೃಷ್ಣಮೂರ್ತಿ, ಬೆಂಗಳೂರು ಬಿ. ಸತ್ಯನಾರಾಯಣ, ನಿವೃತ್ತ ಶಿಕ್ಷಣಾಧಿಕಾರಿ ಎಚ್‌.ಡಿ. ಪರಶುರಾಮನಾಯಕ್‌, ಸಾರ್ಥವಳ್ಳಿ ಗ್ರಾಪಂ ಅಧ್ಯಕ್ಷೆ ಸರೋಜಮ್ಮ, ಪಿಡಿಓ ಅನಂತ್‌ಕುಮಾರ್‌, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎನ್‌. ಚನ್ನಬಸಪ್ಪ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜು, ಬೆಸ್ಕಾಂ ನಂದೀಶ್‌, ಪದಾಧಿಕಾರಿಗಳಾದ ಸಾರ್ಥವಳ್ಳಿ ಶಿವಕುಮಾರ್‌, ಪಟೇಲ್‌ ಸಿದ್ದಪ್ಪ, ಜಯರಾಂ, ಹರೀಶ್‌, ತಿಮ್ಮೇಗೌಡ, ಕೊಬ್ಬರಿ ವರ್ತಕ ಜಗದೀಶಾರಾಧ್ಯ ಸೇರಿದಂತೆ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಕೃಷಿಗೋಷ್ಠಿ, ಸಾಹಿತ್ಯ ಗೋಷ್ಠಿ, ಕವಿಗೋಷ್ಠಿಗಳು ನಡೆದವು. ಸಮಾರಂಭಕ್ಕೂ ಮುನ್ನಾ ತಾಯಿ ಭುವನೇಶ್ವರಿ, ಗ್ರಾಮ ದೇವತೆ ಉಡುಸಲಮ್ಮ ಹಾಗೂ ಸಮ್ಮೇಳನಾಧ್ಯಕ್ಷರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.

ಮಕ್ಕಳಿಗೆ ಶಿಕ್ಷಣದ ಮೂಲಕ ಭಾಷೆ, ಸಂಸ್ಕೃತಿಯನ್ನು ತಿಳಿಸುವ ನಿಟ್ಟಿನಲ್ಲಿ ಶಿಕ್ಷಣ ಪದ್ದತಿಯಲ್ಲಿ ಬದಲಾವಣೆ ಮಾಡಿ ಪ್ರಧಾನಿ ಮೋದಿಯವರು ಹೊಸ ರಾಷ್ಟ್ರೀಯ ನೀತಿಯನ್ನು ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ 3800 ಸರ್ಕಾರಿ ಶಾಲೆಗಳಲ್ಲಿ 5ಕ್ಕಿಂತ ಕಡಿಮೆ ಮಕ್ಕಳು ಓದುತ್ತಿದ್ದಾರೆ. ಆದರೂ ಸರ್ಕಾರಿ ಶಾಲೆಗಳನ್ನು ಮುಚ್ಚಿಲ್ಲ. ಪೋಷಕರು ಇಂಗ್ಲಿಷ್‌ನ ವ್ಯಾಮೋಹಕ್ಕೆ ಒಳಗಾಗದೆ ಸಾಧ್ಯವಾದಷ್ಟುತಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಮಾತೃಭಾಷೆಯ ಶಿಕ್ಷಣ ಕೊಡಿಸುವ ಪ್ರಯತ್ನವಾಗಬೇಕು.

ಬಿ.ಸಿ.ನಾಗೇಶ್‌ ಶಿಕ್ಷಣ ಸಚಿವ

 

click me!