ಬೆಂಗಳೂರು: ಶಿಕ್ಷಣ ಸಂಸ್ಥೆಗಳಿಂದ ಇನ್ನು ಶೇ.100 ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ ಸಜ್ಜು

By Kannadaprabha NewsFirst Published Dec 31, 2022, 1:15 PM IST
Highlights

ಕಳೆದ ವರ್ಷದಿಂದ ಬಿಬಿಎಂಪಿ ಕಾಯ್ದೆ-2020 ಜಾರಿಗೊಳಿಸಲಾಗಿದೆ. ಈ ಕಾಯ್ದೆ ಪ್ರಕಾರ ಧರ್ಮಾರ್ಥ ಉದ್ದೇಶಕ್ಕಾಗಿ ಬಳಕೆ ಮಾಡುವ ಸ್ಥಳಗಳಿಗೆ ಮಾತ್ರ ಆಸ್ತಿ ತೆರಿಗೆ ವಿನಾಯಿತಿ. 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಡಿ.31):  ಡೋನೆಶನ್‌ ನೆಪದಲ್ಲಿ ಫೋಷಕರಿಂದ ಲಕ್ಷಾಂತರ ರೂಪಾಯಿ ಪಡೆದರೂ ಶಿಕ್ಷಣ ಸೇವೆ ಹೆಸರಿನಲ್ಲಿ ಬಿಬಿಎಂಪಿಗೆ ಪಾವತಿಸಬೇಕಾದ ಆಸ್ತಿ ತೆರಿಗೆ ವಿನಾಯಿತಿ ಪಡೆಯುತ್ತಿದ್ದ ಶೈಕ್ಷಣಿಕ ಸಂಸ್ಥೆಗಳಿಗೆ ಪೂರ್ಣ ಪ್ರಮಾಣದ ತೆರಿಗೆ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ. 

ನಗರದ ಸಾವಿರಾರು ಶಿಕ್ಷಣ ಸಂಸ್ಥೆಗಳಿಗೆ ಈ ಹಿಂದೆ ಬಿಬಿಎಂಪಿಯಲ್ಲಿ ಜಾರಿಯಲ್ಲಿದ್ದ ‘ಕರ್ನಾಟಕ ಮುನ್ಸಿಪಲ್‌ ಕಾಪೋರೇಷನ್‌ ಕಾಯ್ದೆ-1976’ (ಕೆಎಂಸಿ)ಯಲ್ಲಿ ಆಸ್ತಿ ತೆರಿಗೆಯಲ್ಲಿ ಶೇ.75 ರಷ್ಟು ರಿಯಾಯಿತಿ ನೀಡಿ ಕೇವಲ ಶೇ.25 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಕಳೆದ ವರ್ಷದಿಂದ ಬಿಬಿಎಂಪಿ ಕಾಯ್ದೆ-2020 ಜಾರಿಗೊಳಿಸಲಾಗಿದೆ. ಈ ಕಾಯ್ದೆ ಪ್ರಕಾರ ಧರ್ಮಾರ್ಥ ಉದ್ದೇಶಕ್ಕಾಗಿ ಬಳಕೆ ಮಾಡುವ ಸ್ಥಳಗಳಿಗೆ ಮಾತ್ರ ಆಸ್ತಿ ತೆರಿಗೆ ವಿನಾಯಿತಿ ನೀಡಲಾಗಿದೆ.
ಜತೆಗೆ ಸರ್ಕಾರದಿಂದ ಅನುಮೋದನೆ ಪಡೆದು ಉಚಿತವಾಗಿ ಸೇವೆ ನೀಡುವ ಶಾಲೆ, ಅನಾಥಾಲಯ, ಕಿವುಡು ಹಾಗೂ ಮೂಕರಿಗಾಗಿ ಆಶ್ರಮಗಳಿಗೆ ಆಸ್ತಿ ತೆರಿಗೆ ವಿನಾಯಿತಿ ದೊರೆಯಲಿದೆ. ಉಳಿದಂತೆ ಇತರರಿಗೆ ನೀಡಲಾದ ವಿನಾಯಿತಿಯನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗಿದೆ. ಹೀಗಾಗಿ, ನಗರದ ಬಹುತೇಕ ಎಲ್ಲಾ ಶಿಕ್ಷಣ ಸಂಸ್ಥೆಗಳೂ ಸಹ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿ ಮಾಡಬೇಕಿದೆ.

ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಿಬಿಎಂಪಿ ಭರದ ಸಿದ್ಧತೆ

ಶಿಕ್ಷಣ ಸಂಸ್ಥೆಗಳಿಗೆ ಅರಿವಿಲ್ಲ

ನಗರದಲ್ಲಿರುವ ಬಹುತೇಕ ಶಿಕ್ಷಣ ಸಂಸ್ಥೆಗಳಿಗೆ ಬಿಬಿಎಂಪಿಯ ಹೊಸ ಕಾಯ್ದೆ ಪ್ರಕಾರ ಶೇ.100 ರಷ್ಟುಆಸ್ತಿ ತೆರಿಗೆ ಪಾವತಿ ಮಾಡಬೇಕೆಂಬ ಅರಿವು ಇಲ್ಲ. ಹೀಗಾಗಿ, ಹಳೇ ಪದ್ಧತಿಯಂತೆ ತೆರಿಗೆ ಮೊತ್ತದಲ್ಲಿ ಶೇ.25 ರಷ್ಟುತೆರಿಗೆ ಕಟ್ಟಿಕೈತೊಳೆದುಕೊಳ್ಳುತ್ತಿದ್ದಾರೆ. ಹಾಗಾಗಿ, ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಪ್ರತಿಯೊಂದು ಶಿಕ್ಷಣ ಸಂಸ್ಥೆಯ ಆಸ್ತಿ ತೆರಿಗೆ ಪಾವತಿ ಬಗ್ಗೆ ಪರಿಶೀಲನೆ ಆರಂಭಿಸಿದ್ದಾರೆ. ಈ ಪೈಕಿ ಈವರೆಗೆ 54 ಶಿಕ್ಷಣ ಸಂಸ್ಥೆಗಳು ಪ್ರಸಕ್ತ ವರ್ಷವೂ ಶೇ.25 ರಷ್ಟುಆಸ್ತಿ ತೆರಿಗೆ ಕಟ್ಟಿರುವುದು ಪತ್ತೆಯಾಗಿದೆ. ಈ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್‌ ನೀಡಿ ಪೂರ್ಣ ಪ್ರಮಾಣ ತೆರಿಗೆ ಪಾವತಿ ಮಾಡುವಂತೆ ಸೂಚನೆ ನೀಡಲಾಗುತ್ತಿದೆ.

ರಿಯಾಯಿತಿ ನೀಡಿದರೂ ತೆರಿಗೆ ಪಾವತಿಸಿಲ್ಲ

ಈ ಹಿಂದಿನ ವರ್ಷಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಶೇ.75 ರಷ್ಟುರಿಯಾಯಿತಿ ನೀಡಿದರೂ ನಗರದ 127 ಶಿಕ್ಷಣ ಸಂಸ್ಥೆಗಳು ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಈ ಶಿಕ್ಷಣ ಸಂಸ್ಥೆಗಳಿಂದ ಬಿಬಿಎಂಪಿಗೆ 19.31 ಕೋಟಿ ರು. ಆಸ್ತಿ ತೆರಿಗೆ ವಸೂಲಿ ಆಗಬೇಕಿದೆ ಎಂಬುದು ಪರಿಶೀಲನೆ ವೇಳೆ ತಿಳಿದು ಬಂದಿದ್ದು, ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್‌ ಜಾರಿ ಮಾಡಲಾಗುತ್ತಿದೆ.

ಕಾರ್ಡ್ ರಸ್ತೆ ಫ್ಲೈ ಓವರ್ ಜನವರಿಗೆ ಲೋಕಾರ್ಪಣೆ, ಸ್ವಕ್ಷೇತ್ರದಲ್ಲಿ ಸೋಮಣ್ಣ ಸುತ್ತಾಟ

ತೆರಿಗೆ ವ್ಯಾಪ್ತಿಗೆ ಬರದ ಶಿಕ್ಷಣ ಸಂಸ್ಥೆಗಳು ಪತ್ತೆ

ಶಿಕ್ಷಣ ಸಂಸ್ಥೆಗಳ ಆಸ್ತಿ ತೆರಿಗೆ ಪಾವತಿ ಪರಿಶೀಲನೆ ವೇಳೆ ನಗರದ ಸುಮಾರು 50 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ತೆರಿಗೆ ಪಾವತಿ ಮಾಡದೇ ಬಿಬಿಎಂಪಿಗೆ ಹಲವಾರು ವರ್ಷದಿಂದ ವಂಚನೆ ಮಾಡುತ್ತಿರುವುದು ಪತ್ತೆಯಾಗಿದೆ. ಇನ್ನಷ್ಟುಈ ರೀತಿ ತೆರಿಗೆ ವಂಚನೆ ಮಾಡುತ್ತಿರುವ ಸಾಕಷ್ಟುಶಿಕ್ಷಣ ಸಂಸ್ಥೆಗಳು ನಗರದಲ್ಲಿವೆ. ಅವುಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳು ಆಸ್ತಿ ತೆರಿಗೆ ಪಾವತಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಿಗೆ ಈ ಹಿಂದೆ ನೀಡಲಾದ ರಿಯಾಯಿತಿ ಮುಂದುವರೆಸುವುದಕ್ಕೆ ಬಿಬಿಎಂಪಿ ಕಾಯ್ದೆ-2020ಯಲ್ಲಿ ಅವಕಾಶವಿಲ್ಲ. ಹಾಗಾಗಿ, ಶಿಕ್ಷಣ ಸಂಸ್ಥೆಗಳು ಪೂರ್ಣ ಪ್ರಮಾಣದ ತೆರಿಗೆ ಪಾವತಿ ಅನಿವಾರ್ಯವಾಗಿದೆ ಅಂತ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಆರ್‌.ಎಲ್‌.ದೀಪಕ್‌ ತಿಳಿಸಿದ್ದಾರೆ.  

click me!