5, 8, 9ನೇ ಕ್ಲಾಸ್‌ ಮಕ್ಕಳಿಗೆ ಮತ್ತೆ ಪರೀಕ್ಷೆ: ಬೋರ್ಡ್ ಎಕ್ಸಾಂ ಲೆಕ್ಕಕ್ಕಿಲ್ಲ!

By Kannadaprabha News  |  First Published Apr 1, 2024, 5:03 AM IST

ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ಮಕ್ಕಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮೂಲಕ ಸರ್ಕಾರ ನಡೆಸಿದ ಮೌಲ್ಯಾಂಕನ ಪರೀಕ್ಷೆ (ಮಂಡಳಿ ಪರೀಕ್ಷೆ) ಕೆಲ ಖಾಸಗಿ ಶಾಲೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. 


ಲಿಂಗರಾಜು ಕೋರಾ

ಬೆಂಗಳೂರು (ಏ.01): ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ಮಕ್ಕಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮೂಲಕ ಸರ್ಕಾರ ನಡೆಸಿದ ಮೌಲ್ಯಾಂಕನ ಪರೀಕ್ಷೆ (ಮಂಡಳಿ ಪರೀಕ್ಷೆ) ಕೆಲ ಖಾಸಗಿ ಶಾಲೆಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಏಕೆಂದರೆ, ಈಗಷ್ಟೇ ಮಂಡಳಿ ಪರೀಕ್ಷೆ ಎದುರಿಸಿರುವ ಈ ಮೂರೂ ತರಗತಿ ಮಕ್ಕಳಿಗೆ ವಿವಿಧೆಡೆ ಖಾಸಗಿ ಶಾಲೆಗಳು ಶಾಲಾ ಮಟ್ಟದಲ್ಲಿ ತಮ್ಮದೇ ಆದ ಮತ್ತೊಂದು ಪರೀಕ್ಷೆ ನಡೆಸಲು ತಯಾರಿ ಮಾಡಿಕೊಂಡಿವೆ. ಈ ಸಂಬಂಧ ಈಗಾಗಲೇ ಮಕ್ಕಳು ಹಾಗೂ ಪೋಷಕರಿಗೆ ಮಾಹಿತಿ ನೀಡಲಾಗಿದೆ. 

Tap to resize

Latest Videos

undefined

ಏ.11ರಿಂದ ಈ ಸಾಲಿನ ಬೇಸಿಗೆ ರಜೆ ಆರಂಭವಾಗಲಿದೆ. ಅಷ್ಟರೊಳಗೆ ಪರೀಕ್ಷೆ ಮುಗಿಸಲು ಶಾಲೆಗಳು ಮುಂದಾಗಿವೆ. ಇದರಿಂದ ಈಗಷ್ಟೇ ಸರ್ಕಾರವೇ ಸಿದ್ಧಪಡಿಸಿ ನೀಡಿದ್ದ ಪ್ರಶ್ನೆ ಪತ್ರಿಕೆಗಳಿಗೆ ಪರೀಕ್ಷೆಗೆ ಬರೆದು ಈ ವರ್ಷದ ಪರೀಕ್ಷೆ ಮುಗಿಯಿತು ಎಂದು ನಿರಾಳವಾಗಿದ್ದ ಮಕ್ಕಳಿಗೆ ಮತ್ತೊಂದು ಪರೀಕ್ಷೆಯ ಹೊರೆ ಬೀಳುತ್ತಿದೆ. ಇದನ್ನು ತಪ್ಪಿಸಲು ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪೋಷಕರ ವಲಯದಲ್ಲಿ ಆಗ್ರಹ ವ್ಯಕ್ತವಾಗುತ್ತಿದೆ. ಬೆಂಗಳೂರಿನ ರಾಜಾಜಿನಗರದ ಶಾಲೆಯೊಂದು 5, 8 ಮತ್ತು 9ನೇ ತರಗತಿ ಮಕ್ಕಳಿಗೆ ಮತ್ತೊಂದು ಪರೀಕ್ಷೆ ನಡೆಸುವುದಾಗಿ ಪೋಷಕರಿಗೆ ಮಾಹಿತಿ ನೀಡಿದೆ. 

4 ವರ್ಷದ ಡಿಗ್ರಿ ಬೇಕಾ? ಬೇಡ್ವಾ?: ಪದವಿ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹ

ಅದೇ ರೀತಿ ತುಮಕೂರಿನ ಸರಸ್ವತಿಪುರಂನ ಪ್ರತಿಷ್ಠಿತ ಶಾಲೆ, ಗುಬ್ಬಿ ಪಟ್ಟಣದಲ್ಲೇ ಇರುವ ಪ್ರಮುಖ ಶಾಲೆಯೊಂದರಲ್ಲಿ ಕೂಡ ಸೋಮವಾರದಿಂದಲೇ ಪರೀಕ್ಷೆ ಇದ್ದು, ಯಾವುದೇ ಮಕ್ಕಳು ತಪ್ಪದೇ ಬರಬೇಕೆಂದು ಸೂಚಿಸಿವೆ. ಈ ಬಗ್ಗೆ ಕೆಲ ಪೋಷಕರು ಶಾಲೆಯವರನ್ನು ಪ್ರಶ್ನಿಸಿದರೆ, ಬೋರ್ಡ್‌ ಪರೀಕ್ಷೆ ಸರ್ಕಾರದ ಮಾಹಿತಿಗೆ ಅಷ್ಟೆ. ನಿಮ್ಮ ಮಕ್ಕಳಿಗೆ ಶಾಲೆಯಿಂದ ನೀಡುವ ಅಂಕಪಟ್ಟಿಯಲ್ಲಿ ಈಗ ನಡೆಸುವ ಶಾಲಾ ಮಟ್ಟದ ಪರೀಕ್ಷೆಯ ಅಂಕಗಳನ್ನೇ ದಾಖಲಿಸುತ್ತೇವೆ ಎಂದು ಹೇಳುತ್ತಿರುವುದಾಗಿ ಪೋಷಕರು ಹೇಳುತ್ತಿದ್ದಾರೆ.

ಮತ್ತೊಂದು ಪರೀಕ್ಷೆಗೇನು ಕಾರಣ?: ಸರ್ಕಾರದಿಂದ ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದರೂ ಪೋಷಕರಿಗೆ ತಮ್ಮದು ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮದ ಶಾಲೆ ಎಂದು ಸುಳ್ಳು ಮಾಹಿತಿ ನೀಡಿರುವ ಶಾಲೆಗಳು ಪೋಷಕರ ಕೆಂಗಣ್ಣಿನಿಂದ ಪಾರಾಗಲು ಇಂತಹ ಪ್ರಯತ್ನ ನಡೆಸಿವೆ ಎನ್ನಲಾಗುತ್ತಿದೆ. ಇನ್ನು ಕೆಲ ಶಾಲೆಗಳು ಸರ್ಕಾರ ನೀಡುವ ಪಠ್ಯಪುಸ್ತಕದ ಬದಲು ಖಾಸಗಿ ಪುಸ್ತಕಗಳನ್ನು ಮಕ್ಕಳಿಗೆ ಬೋಧಿಸಿವೆ. ಹಾಗಾಗಿ ತಾವು ಬೋಧಿಸಿರುವ ಪಠ್ಯಕ್ಕೆ ಅನುಗುಣವಾಗಿ ಪರೀಕ್ಷೆ ನಡೆಸದ ಹೊರತು ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿಲ್ಲ. ಹೇಗಿದ್ದರೂ ಬೋರ್ಡ್‌ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಸರ್ಕಾರ ನೀಡಿದರೂ, ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಪ್ರಕಟಣೆ ಎಲ್ಲವೂ ಶಾಲಾ ಹಂತದಲ್ಲೇ ನಡೆಯುತ್ತದೆ. ಹಾಗಾಗಿ ಬೋರ್ಡ್‌ ಪರೀಕ್ಷೆಯ ಅಂಕಗಳನ್ನು ಅಂಕಪಟ್ಟಿಯಲ್ಲಿ ನೀಡಿದರೆ ಪೋಷಕರ ಕೈಯಲ್ಲಿ ಸಿಕ್ಕಿ ಬೀಳುವ ಕಾರಣಕ್ಕೆ ಮತ್ತೊಂದು ಪರೀಕ್ಷೆ ನಡೆಸಿ ಆ ಅಂಕಗಳನ್ನು ಅಂಕಪಟ್ಟಿಯಲ್ಲಿ ನಮೂದಿಸಲು ಮುಂದಾಗಿವೆ ಎಂದು ತಿಳಿದು ಬಂದಿದೆ.

5, 8 ಮತ್ತು 9ನೇ ತರಗತಿ ಮಕ್ಕಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮೂಲಕ ಸರ್ಕಾರ ನಡೆಸಿರುವ ಮೌಲ್ಯಾಂಕನ ಪರೀಕ್ಷೆ ಹೊರತುಪಡಿಸಿ ಶಾಲೆಗಳು ಮತ್ತೆ ಪರೀಕ್ಷೆ ನಡೆಸಲು ಅವಕಾಶವಿಲ್ಲ. ಹಾಗೇನಾದರೂ ಮಾಡಿದರೆ ಅದು ಕಾನೂನು ಪ್ರಕಾರ ತಪ್ಪು. ಮಕ್ಕಳಿಗೂ ಹೊರೆಯಾಗಲಿದೆ. ಈ ರೀತಿ ಯಾವುದಾದರೂ ಶಾಲೆಗಳು ಮತ್ತೊಂದು ಪರೀಕ್ಷೆ ನಡೆಸುವುದಾಗಿ ಹೇಳಿದ್ದರೆ ಪೋಷಕರು ಇಲಾಖೆಗೆ ಮಾಹಿತಿ ನೀಡಲಿ. ತಕ್ಷಣ ಪರೀಕ್ಷೆ ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು.
-ರಿತೇಶ್‌ ಕುಮಾರ್‌ ಸಿಂಗ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ

3-6ನೇ ಕ್ಲಾಸ್ ಸಿಬಿಎಸ್‌ಇ ಪಠ್ಯಕ್ರಮ ಬದಲಿಕೆಗೆ ಸಮ್ಮತಿ: ಹೊಸತು ಬರುವ ಶೈಕ್ಷಣಿಕ ವರ್ಷವೇ ಜಾರಿಗೆ ಆದೇಶ

ರಾಜ್ಯ ಪಠ್ಯಕ್ರಮಕ್ಕೆ ಮಾನ್ಯತೆ ಪಡೆದು ತಮ್ಮದು ಸಿಬಿಎಸ್‌ಇ, ಐಸಿಎಸ್‌ಇ ಶಾಲೆ ಅಂತ ಆ ಪಠ್ಯಕ್ರಮ ಬೋಧಿಸಿರುವ ಬೆರಳೆಣಿಕೆಯಷ್ಟು ಶಾಲೆಗಳು ಪೋಷಕರ ಮನವೊಲಿಸಲು ಈ ರೀತಿ ಪ್ರಯತ್ನ ಮಾಡುತ್ತಿರಬಹುದು. ಆದರೆ, ರಾಜ್ಯ ಪಠ್ಯಕ್ರಮದ ಯಾವುದೇ ಶಾಲೆಗಳು ತಾವೇ ಮತ್ತೊಂದು ಪರೀಕ್ಷೆ ನಡೆಸುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸಿ ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ.
-ಡಿ.ಶಶಿಕುಮಾರ್‌, ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ

click me!