ಭಾರೀ ಮಳೆಯ ಮುನ್ಸೂಚನೆ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

By Suvarna News  |  First Published Jun 30, 2022, 8:14 PM IST

* ಕರಾವಳಿ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರ ಮಳೆ 
* ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ 
* ಎರಡು ಜಿಲ್ಲೆಗಳಿಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ


ಉಡುಪಿ/ಮಂಗಳೂರು, (ಜೂನ್.30): ಕರಾವಳಿ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕುಗಳ ರಸ್ತೆಗಳು ನದಿಂತಾಗಿವೆ. ರಸ್ತೆಗಳಲ್ಲಿ ರಭಸದಿಂದ ನೀರು ಹರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಇನ್ನು ಹವಾಮಾನ ಇಲಾಖೆ ಮುಂದಿನ ಎರಡು ದಿನ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ (ಜುಲೈ 01) ಘೋಷಿಸಲಾಗಿದೆ. ಸತತ ಮೂರು ದಿನಗಳಿಂದ ಮಳೆ ಹಿನ್ನೆಲೆಯಲ್ಲಿ ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ ಹೊರಡಿಸಿದ್ದಾರೆ.

Tap to resize

Latest Videos

ಕರಾವಳಿಯಲ್ಲಿ ಇಂದು, ನಾಳೆ ಭಾರೀ ಮಳೆ: ಆರೆಂಜ್‌ ಅಲರ್ಟ್‌ ಘೋಷಣೆ

ಉಡುಪಿಯಲ್ಲಿ ಸರಾಸರಿ 80mlನಷ್ಟು ಮಳೆ
ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸರಾಸರಿ 80mlನಷ್ಟು ಮಳೆಯಾಗುತ್ತಿದೆ. ಕಳೆದ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮುಂಜಾನೆಯಿಂದ ಸಂಜೆವರೆಗೂ ಮಳೆಯಾಗುತ್ತಿದೆ. ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು ಜುಲೈ 1ಕ್ಕೂ ವಿಸ್ತರಣೆ ಮಾಡಿದೆ. ಜಿಲ್ಲೆಯ ಏಳು ತಾಲೂಕಿನಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ ಹೀಗಾಗಿ ರಜೆ ಘೋಷಿಸಲು ಜಿಲ್ಲಾಡಳಿತ ನಿರ್ಧರಿಸಿದೆ

ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಪ್ರಕಟಣೆ ಹೊರಡಿಸಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಅಂಗನವಾಡಿಯಿಂದ ಪದವಿ ತರಗತಿಯವರೆಗಿನ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜ್‍ಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ತಮ್ಮ ವ್ಯಾಪ್ತಿಯ ಎಲ್ಲಾ ಶಾಲಾ-ಕಾಲೇಜ್‍ಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಈ ಆದೇಶದ ಪ್ರತಿಯನ್ನು ರವಾನಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದ್ದು, ನಾಳೆ(ಶುಕ್ರವಾರ) ಬೆ.8.30ರವರೆಗೆ ಆರೆಂಜ್ ಅಲರ್ಟ್ ಘೋಷಿಸಿಲಾಗಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ‌ಹಾಗೂ ಪದವಿ ತರಗತಿಗಳಿಗೆ ರಜೆ ನೀಡಿದ ದ‌ಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಬುಧವಾರ ಬೆಳಗ್ಗಿನಿಂದಲೇ ಗ್ರಾಮಾಂತರ ಪ್ರದೇಶದ ಅಲ್ಲಲ್ಲಿ ಮಳೆ ಸುರಿಯತೊಡಗಿತ್ತು. ದಿನವಿಡೀ ಮೋಡ ಹಾಗೂ ಮಳೆಯಾಗಿದ್ದು, ಜನತೆಯನ್ನು ಚಳಿ ಹಿಡಿಸಿದೆ. ಎಡೆಬಿಡದೆ ಸುರಿದ ಮಳೆಗೆ ಮಂಗಳೂರು ನಗರದ ತಗ್ಗು ಪ್ರದೇಶದ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ. ನಾಗುರಿಯ ಕಪಿತಾನಿಯಾ ಬಳಿ ಮಂಗಳವಾರ ರಾತ್ರಿ ರಸ್ತೆ ಬದಿ ಸರಕು ಕಂಟೈನ್‌ ಲಾರಿ ಕೆಸರಿಗೆ ಸಿಲುಕಿದ್ದು ಬುಧವಾರ ಮಧ್ಯಾಹ್ನ ವೇಳೆಗೆ ಅದನ್ನು ಕ್ರೇನ್‌ ಮೂಲಕ ತೆರವುಗೊಳಿಸಲಾಯಿತು.

ದ.ಕ. ಜಿಲ್ಲೆಯಲ್ಲಿ ದಿನದ ಸರಾಸರಿ ಮಳೆ 42.3 ಮಿಲಿ ಮೀಟರ್‌ ಆಗಿದೆ. ಜಿಲ್ಲೆಯ ಬೆಳ್ತಂಗಡಿ 36.6 ಮಿ.ಮೀ, ಬಂಟ್ವಾಳ 68.7 ಮಿ.ಮೀ, ಮಂಗಳೂರು 28.5 ಮಿ.ಮೀ, ಪುತ್ತೂರು39.7 ಮಿ.ಮೀ, ಸುಳ್ಯ 32.5 ಮಿ.ಮೀ, ಮೂಡುಬಿದಿರೆ 56.5 ಮಿ.ಮೀ, ಹಾಗೂ ಕಡಬದಲ್ಲಿ 43.4 ಮಿ.ಮೀ. ಮಳೆ ದಾಖಲಾಗಿದೆ.

click me!