ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಕೈಗೊಂಡಿರುವ ಹತ್ತಾರು ಕಾರ್ಯಕ್ರಮಗಳು ಅತ್ಯಂತ ಶ್ಲಾಘನೀಯ ಹಾಗೂ ಅನ್ಯ ರಾಜ್ಯಗಳಿಗೆ ಅನುಕರಣೀಯ ಎಂದು ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರಾದ ಪ್ರೊ.ಎಂ.ಆರ್.ದೊರೆಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರು (ನ.17): ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಕೈಗೊಂಡಿರುವ ಹತ್ತಾರು ಕಾರ್ಯಕ್ರಮಗಳು ಅತ್ಯಂತ ಶ್ಲಾಘನೀಯ ಹಾಗೂ ಅನ್ಯ ರಾಜ್ಯಗಳಿಗೆ ಅನುಕರಣೀಯ ಎಂದು ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರಾದ ಪ್ರೊ.ಎಂ.ಆರ್.ದೊರೆಸ್ವಾಮಿ ತಿಳಿಸಿದ್ದಾರೆ. ಸರ್ಕಾರ ಸರ್ಕಾರಿ ಶಾಲೆಗಳ ದತ್ತು ನೀತಿ, 15 ಸಾವಿರ ಶಿಕ್ಷಕರ ನೇಮಕಾತಿ, 8100 ಶಾಲಾ ಕೊಠಡಿಗಳ ನಿರ್ಮಾನಕ್ಕೆ ಶಂಕುಸ್ಥಾಪನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮಾದರಿಯಾಗಿದೆ.
ಇದಕ್ಕಾಗಿ ಕರ್ನಾಟಕದ ಜನತೆಯ ಪರವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಮತ್ತು ವಿಶ್ವವಿದ್ಯಾಲಯಗಳು ಶಾಲಾ ದತ್ತು ನೀತಿಯಲ್ಲಿ ಪಾಲ್ಗೊಂಡು ಕ್ರಮವಾಗಿ ತಲಾ ಕನಿಷ್ಠ 3 ರಿಂದ ಗರಿಷ್ಠ 10 ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವುದು.
ಶಿಕ್ಷಕರ ಪರಸ್ಪರ ವರ್ಗದ 1 ಸಲದ ಮಿತಿ ರದ್ದು: ಶಿಕ್ಷಕರ ವರ್ಗಾವಣೆ ಕರಡು ನಿಯಮಾವಳಿ ಪ್ರಕಟ
ಜ್ಞಾನಪೀಠ ಪುರಸ್ಕೃತರು ಓದಿದ 8 ಶಾಲೆಗಳ ಅಭಿವೃದ್ಧಿ, 7601 ಶಾಲಾ ಕೊಠಡಿ ನಿರ್ಮಾಣಕ್ಕೆ ವಿವೇಕಾ ಕಾರ್ಯಕ್ರಮದಡಿ ಶಂಕುಸ್ಥಾಪನೆ, ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು, 250 ಕೋಟಿ ರು. ವೆಚ್ಚದಲ್ಲಿ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ ಕ್ರಮ, ಶಾಲಾ ಶಿಕ್ಷಣದಲ್ಲೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, ಸರ್ಕಾರ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ, ಅಗತ್ಯ ಚಿಕಿತ್ಸಾ ಕ್ರಮ, ಕೋವಿಡ್ ಹಿನ್ನೆಲೆಯಲ್ಲಿ ಉಂಟಾಗಿರುವ ಕಲಿಕಾ ಕೊರತೆ ನೀಗಿಸಲು ವಿಶೇಷ ಕಾರ್ಯಕ್ರಮ ಜಾರಿ- ಸೇರಿದಂತೆ ನಾನು ಸರ್ಕಾರಕ್ಕೆ ಸಲ್ಲಿಸಿದ್ದ ಶಿಫಾರಸುಗಳನ್ನು ಅನುಷ್ಠಾನಗೊಳಿಸಿದ್ದಕ್ಕಾಗಿ ಮುಖ್ಯಮಂತ್ರಿಗಳು ಹಾಗೂ ಸಚಿವರಿಬ್ಬರಿಗೂ ಧನ್ಯವಾದ ತಿಳಿಸುವುದಾಗಿ ದೊರೆಸ್ವಾಮಿ ಹೇಳಿದ್ದಾರೆ.
ಮೌಲ್ಯಯುತ ಶಿಕ್ಷಣಕ್ಕೆ ‘ಕಥಾ ಲೋಕ’ ಪುಸ್ತಕ: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಲು ನೀತಿ ಕಥೆಗಳ ಸಂಕಲನವಾದ ‘ಕಥಾ ಲೋಕ’ ಕೃತಿಯನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆಗಿರುವ ರಾಜ್ಯ ಶಿಕ್ಷಣ ಸುಧಾರಣೆಗಳ ಸಲಹೆಗಾರ ಡಾ.ಎಂ.ಆರ್.ದೊರೆಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಇಎಸ್ ವಿವಿಯ ಪ್ರಾಧ್ಯಾಪಕರಿಂದ ರಚನೆಯಾಗಿರುವ 35 ನೀತಿ ಕಥೆಗಳ ಸಂಕಲನವಾದ ‘ಕಥಾ ಲೋಕ’ ಪುಸ್ತಕವನ್ನು ಈಗಾಗಲೇ ಸಾವಿರ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿತರಿಸಲಾಗಿದೆ. ಇದನ್ನು ರಾಜ್ಯದ 40 ಸಾವಿರ ಸರ್ಕಾರಿ ಶಾಲೆಗಳ 5ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಒಂದೊಮ್ಮೆ ಸರ್ಕಾರ ವಿತರಿಸದಿದ್ದರೆ ವಿವಿಯಿಂದಲೇ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
Ricky Kej: ಗ್ರ್ಯಾಮಿಗೆ ರಿಕ್ಕಿ ಕೇಜ್ 3ನೇ ಬಾರಿ ನಾಮ ನಿರ್ದೇಶನ
ಉತ್ತರ ಪ್ರದೇಶದ ಸರ್ಕಾರ ಶಾಲೆಗಳಲ್ಲಿ ಯೋಗ ಶಿಕ್ಷಣ ಕಡ್ಡಾಯ ಮಾಡಿದ್ದು ರಾಜ್ಯದಲ್ಲೂ ಕಡ್ಡಾಯ ಮಾಡಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ತರಬೇತಿ ನೀಡಬೇಕು. ಶಾಲಾ ಮಕ್ಕಳಿಗೆ ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್, ಫಾರ್ಮಸಿ ಕಾಲೇಜುಗಳು ಉಚಿತ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯ ಕಾರ್ಡ್ ನೀಡಬೇಕು. ಇದರಿಂದ ಅಪೌಷ್ಟಿಕತೆ, ಸೇರಿದಂತೆ ಆರೋಗ್ಯ ಸಮಸ್ಯೆ ಪರಿಹರಿಸಬಹುದು. ಆರೋಗ್ಯ ಸಚಿವ ಡಾ.ಸಿ.ಸುಧಾಕರ್ ಈ ಯೋಜನೆ ಜಾರಿಗೆ ಒಲವು ತೋರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.