ಖಾಸಗಿ ಶಾಲೆಗಳಲ್ಲೂ ಶೇ.25ರಷ್ಟು ಶಿಕ್ಷಕರ ಕೊರತೆ!

By Govindaraj SFirst Published Jun 26, 2022, 5:00 AM IST
Highlights

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ವಿಚಾರ ಸರ್ವೇ ಸಾಮಾನ್ಯ. ಆದರೆ ಈ ಸಮಸ್ಯೆ ಇದೀಗ ಖಾಸಗಿ ಶಾಲೆಗಳಲ್ಲೂ ಕಾಣಿಸಿಕೊಂಡಿದೆ. ರಾಜ್ಯದ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಪ್ರಕಾರ, ಖಾಸಗಿ ಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು ಶೇ.25ರಷ್ಟು ಶಿಕ್ಷಕರ ಕೊರತೆ ಕಾಡುತ್ತಿದೆ.

ಲಿಂಗರಾಜು ಕೋರಾ

ಬೆಂಗಳೂರು (ಜೂ.26): ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ವಿಚಾರ ಸರ್ವೇ ಸಾಮಾನ್ಯ. ಆದರೆ ಈ ಸಮಸ್ಯೆ ಇದೀಗ ಖಾಸಗಿ ಶಾಲೆಗಳಲ್ಲೂ ಕಾಣಿಸಿಕೊಂಡಿದೆ. ರಾಜ್ಯದ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಪ್ರಕಾರ, ಖಾಸಗಿ ಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಸುಮಾರು ಶೇ.25ರಷ್ಟು ಶಿಕ್ಷಕರ ಕೊರತೆ ಕಾಡುತ್ತಿದೆ. ಅದರಲ್ಲೂ ಕಂಪ್ಯೂಟರ್‌ ಶಿಕ್ಷಣ ಸೇರಿದಂತೆ ವಿವಿಧ ಕೌಶಲ್ಯಾಧಾರಿತ ವಿಷಯಗಳ ಶಿಕ್ಷಕರ ಕೊರತೆ ಹಾಗೂ ಸಮಾಜ ವಿಜ್ಞಾನ, ಗಣಿತ ಸೇರಿದಂತೆ ವಿಷಯಾಧಾರಿತ ಶಿಕ್ಷಕರ ಕೊರತೆ ಶೇ.25ರಿಂದ 30ರಷ್ಟಿದೆ. ಆಂಗ್ಲ ಭಾಷೆಯಲ್ಲಿ ಬೋಧಿಸುವ ಶಿಕ್ಷಕರ ಕೊರತೆ ಇನ್ನೂ ಹೆಚ್ಚಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸುಮಾರು 20 ಸಾವಿರ ಖಾಸಗಿ ಶಾಲೆಗಳಿದ್ದು, ಇವುಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ಶಾಲೆಗಳೇ ಹೆಚ್ಚು. ಈ ಶಾಲೆಗಳಲ್ಲಿ ಒಟ್ಟಾರೆ 2.70 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಕೋವಿಡ್‌ ಪೂರ್ವದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಪೈಕಿ ಶೇ.25ರಿಂದ 30ರಷ್ಟುಮಂದಿ ಈಗ ಶಿಕ್ಷಕರ ವೃತ್ತಿಯನ್ನೇ ತೊರೆದಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಸರ್ಕಾರಿ ಶಾಲೆಗಳಿಗೆ ಈ ಬಾರಿ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಈ ಎಲ್ಲ ಕಾರಣಗಳಿಂದ ಒಂದಷ್ಟುಪ್ರತಿಷ್ಠಿತ ಶಾಲೆಗಳನ್ನು ಹೊರತುಪಡಿಸಿದರೆ ಇನ್ನುಳಿದ ಬಹುತೇಕ ಶಾಲೆಗಳಲ್ಲಿ ಅದರಲ್ಲೂ ಬಡ, ಮಧ್ಯಮ ವರ್ಗದ ಮಕ್ಕಳು ಓದಬಹುದಾದ ಬಜೆಟ್‌ ಶಾಲೆಗಳು ದೊಡ್ಡ ಪ್ರಮಾಣದ ಶಿಕ್ಷಕರ ಕೊರತೆ ಎದುರಿಸುತ್ತಿವೆ ಎಂದು ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಗಳ ಒಕ್ಕೂಟ(ಕ್ಯಾಮ್ಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಹೇಳುತ್ತಾರೆ.

ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಸಿಎಂ ಬೊಮ್ಮಾಯಿಗೆ ಪತ್ರ ಬರೆದ ದೇವೇಗೌಡ

ಈ ಹೇಳಿಕೆ ಸಾಕ್ಷೀಕರಿಸುವಂತೆ ಬೆಂಗಳೂರು, ತುಮಕೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳ ಕೆಲ ರಸ್ತೆಗಳಲ್ಲಿ ಸಂಚರಿಸುವಾಗ ‘ಶಿಕ್ಷಕರು ಬೇಕಾಗಿದ್ದಾರೆ’, ‘ಶಿಕ್ಷಕರ ಹುದ್ದೆ ಖಾಲಿ ಇದೆ’ ಆಕರ್ಷಕ ವೇತನ ಎಂಬ ಬಿತ್ತಿಪತ್ರಗಳು, ಜಾಹೀರಾತಿನಂತಹ ಪತ್ರಗಳನ್ನು ಕಾಣಬಹುದಾಗಿದೆ. ಇಷ್ಟೇ ಅಲ್ಲದೆ, ಪ್ರತಿದಿನ ವಾಟ್ಸಾಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಯಾವ್ಯಾವುದೋ ಶಾಲೆಗಳ ಹೆಸರಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನದ ಮಾಹಿತಿಗಳು ಹರಿದಾಡುತ್ತಿವೆ.

ಉತ್ತಮ ವೇತನದ ಆಫರ್‌: 2022-23ನೇ ಶೈಕ್ಷಣಿಕ ಸಾಲಿನ ತರಗತಿ ಚಟುವಟಿಕೆಗಳು ಆರಂಭವಾಗಿ ಒಂದೂವರೆ ತಿಂಗಳಾಗುತ್ತಿದೆ. ಆದರೆ ರಾಜ್ಯದ ಬಹಳಷ್ಟುಶಾಲೆಗಳು ಖಾಸಗಿ ಶಾಲೆಗಳು ಇನ್ನೂ ಮಕ್ಕಳ ದಾಖಲಾತಿಗೆ ಅನುಗುಣವಾಗಿ ಶಿಕ್ಷಕರಿಗೆ ಹುಡುಕಾಟ ನಡೆಸುತ್ತಿವೆ. ಸಾಕಷ್ಟುಶಾಲೆಗಳಲ್ಲಿ ಮಾಸಿಕ 20 ರಿಂದ 25 ಸಾವಿರ ರು. ವರೆಗೆ ವೇತನದ ಆಫರ್‌ ನೀಡುತ್ತಿವೆ. ಆದರೂ ಶಿಕ್ಷಕರು ಸಿಗುತ್ತಿಲ್ಲ. ಅದರಲ್ಲೂ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸುವ ಹಾಗೂ ವಿಜ್ಞಾನ, ಗಣಿತ ವಿಷಯಗಳ ಶಿಕ್ಷಕರಿಗೆ ಭಾರೀ ಬೇಡಿಕೆ ಇದೆ ಎಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟದ (ರುಪ್ಸಾ ಕರ್ನಾಟಕ) ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆತಿಳಿಸಿದ್ದಾರೆ.

ಪರ್ಯಾಯ ವೃತ್ತಿ ಬಿಟ್ಟು ಬರ್ತಿಲ್ಲ ಶಿಕ್ಷಕರು: ಕೋವಿಡ್‌ ಪೂರ್ವದಲ್ಲಿ ಖಾಸಗಿ ಬಜೆಟ್‌ ಶಾಲೆಗಳಲ್ಲಿ ಕೇವಲ 10 ಸಾವಿರ ರು. ಮಾಸಿಕ ವೇತನಕ್ಕೆ ಶಿಕ್ಷಕರು ದುಡಿಯುತ್ತಿದ್ದರು. ಶಿಕ್ಷಕರ ವೃತ್ತಿಯಲ್ಲಿನ ಆಸಕ್ತಿ, ತಮ್ಮ ಶೈಕ್ಷಣಿಕ ಅರ್ಹತೆಗೆ ಇಂದಲ್ಲ ನಾಳೆ ಉತ್ತಮ ವೇತನ ಸಿಗಬಹುದೆಂಬ ಆಶಾಭಾವನೆಯಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದರು. ಕೋವಿಡ್‌ನಿಂದಾಗಿ ಇಂತಹ ಶಿಕ್ಷಕರನ್ನು ಸಂದರ್ಭದಲ್ಲಿ ಶಾಲೆಗಳು ಮಕ್ಕಳು ಬರಲಿಲ್ಲ ಎಂಬ ಕಾರಣಕ್ಕೆ ಅವರಿಗೆ ವೇತನ ನೀಡಲಿಲ್ಲ. ಈ ವೇಳೆ ಸಾಕಷ್ಟುಮಂದಿ ಶಿಕ್ಷಕ ವೃತ್ತಿ ಬಿಟ್ಟು ಜೀವನೋಪಾಯಕ್ಕೆ ತರಕಾರಿ ಮಾರಾಟ ಸೇರಿ ಬೇರೆ ಬೇರೆ ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡಿದ್ದು ಕಣ್ಣೆದುರಿಗಿದೆ. ಇನ್ನು ಒಂದಷ್ಟು ಜನ ತಮ್ಮ ಊರುಗಳಿಗೆ ತೆರಳಿ ಕೃಷಿ ಮತ್ತಿತರ ಚಟುವಟಿಕೆಯಲ್ಲಿ ತೊಡಗಿದ್ದಾರೆ. 

Udupi; ಬಡ ಮಕ್ಕಳ ಶಿಕ್ಷಣದ ಜೊತೆಗೆ ಮನೆ ಕಟ್ಟಿಸಿಕೊಡುವ ಅಪರೂಪದ ಸಂಸ್ಥೆ ಯಕ್ಷಗಾನ ಕಲಾರಂಗ

ಈಗ ಅವರಲ್ಲಿ ಬಹಳಷ್ಟುಜನ ಶಿಕ್ಷಕ ವೃತ್ತಿಗೆ ವಾಪಸ್‌ ಬರಲು ಸಿದ್ಧರಿಲ್ಲ. ಹಿಂದೆ ಶಿಕ್ಷಕರಾಗಿದ್ದಾಗ ಸಿಗುತ್ತಿದ್ದ ವೇತನಕ್ಕಿಂತ ಹೆಚ್ಚಿನ ಅಥವಾ ದುಪ್ಪಟ್ಟು, ಮೂರು ಪಟ್ಟು ದುಡಿಮೆಯನ್ನು ಪರ್ಯಾಯ ಕೆಲಸಗಳಲ್ಲಿ ಕಂಡುಕೊಂಡಿದ್ದಾರೆ. ಕೋವಿಡ್‌ ವರ್ಷಗಳ ಬಳಿಕ ಶಾಲೆಗಳ ಸಂಖ್ಯೆ ಏನೂ ಹೆಚ್ಚಾಗಿಲ್ಲ. ಕೆಲ ಶಾಲೆಗಳು ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚಿಹೋಗಿರುವ ನಿದರ್ಶನಗಳೂ ಇವೆ. ಹಾಗಾದರೆ ಶಿಕ್ಷಕರ ಕೊರತೆಗೆ ಕಾರಣವೇನು ಎಂಬ ಪ್ರಶ್ನೆಗೆ ಸಿಗುತ್ತಿರುವ ಉತ್ತರ ಕೋವಿಡ್‌ ಸಮಯದಲ್ಲಿ ಶಾಲೆಗಳು ಶಿಕ್ಷಕರನ್ನು ನಡೆಸಿಕೊಂಡ ರೀತಿ ಹಾಗೂ ಈ ವೇಳೆ ಅವರು ಎದುರಿಸಿದ ಆರ್ಥಿಕ ಸಂಕಷ್ಟಕಾರಣ ಎನ್ನುತ್ತಾರೆ ನಗರದ ಖಾಸಗಿ ಶಾಲಾ ಶಿಕ್ಷಕರಾದ ಸುಬ್ರಹ್ಮಣ್ಯ.

click me!