* ಸರ್ಕಾರದ ವಿಳಂಬದಿಂದ ಶಾಲೆಗಳಿಗೆ ತೊಂದರೆ
* ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಪತ್ರ ಬರೆದ ರುಪ್ಸಾ
* ಆರ್‌ಟಿಇ ನಿಯಮದಂತೆ ವೇಳಾಪಟ್ಟಿ ಪ್ರಕಟಿಸಬೇಕು
ಬೆಂಗಳೂರು(ಮೇ.28): ಮುಂದಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಅನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ (ರುಪ್ಸಾ-ಕರ್ನಾಟಕ) ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದೆ.
ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಕಳೆದ ವರ್ಷ ಶಾಲೆಗಳು ಸರಿಯಾಗಿ ನಡೆಯದೇ ದಾಖಲಾತಿ, ಪ್ರವೇಶ ಶುಲ್ಕ, ಪಠ್ಯ ಬೋಧನೆ, ಪರೀಕ್ಷೆ ವಿಚಾರ ಸೇರಿ ಸಾಕಷ್ಟುಸಮಸ್ಯೆಗಳಾಗಿದೆ. ಆದರೂ ಎಚ್ಚೆತ್ತುಕೊಳ್ಳದೆ ಇಲಾಖೆಯು 2021-22ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಪ್ರಕಟಿಸದೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ತರಗತಿಯನ್ನು ಭೌತಿಕ ಅಥವಾ ಆನ್ಲೈನ್ ಮೂಲಕ ನಡೆಸಬೇಕೆ, ಆನ್ಲೈನ್ ಶಿಕ್ಷಣ ಅನಿವಾರ್ಯವಾದಲ್ಲಿ, ಅದಕ್ಕೆ ಪೂರಕವಾದ ವೈಜ್ಞಾನಿಕ ನಿರ್ದೇಶನ ಹೊರಡಿಸಬೇಕು. ಕನಿಷ್ಠ 210ದಿನ ಆನ್ಲೈನ್ ಅಥವಾ ಭೌತಿಕ ತರಗತಿ ನಡೆಸಲು ರೂಪಣಾತ್ಮಕ, ಸಂಕಲನಾತ್ಮಕ ಮೌಲ್ಯಮಾಪನಕ್ಕೆ ಪೂರಕವಾಗಿ ಆರ್‌ಟಿಇ ನಿಯಮದಂತೆ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಆಗ್ರಹಿಸಿದೆ.
undefined
ಫೀ ಕಡಿತ ನಿರ್ಧಾರಕ್ಕೆ ಖಾಸಗಿ ಶಾಲಾ ಒಕ್ಕೂಟಗಳಲ್ಲಿ ಭಿನ್ನತೆ
ಹೊಸ ಶಾಲೆಗೆ ಅರ್ಜಿಸಲ್ಲಿಸುವ ಶಾಲೆಗಳಿಗೆ ತಕ್ಷಣ ಆರಂಭಕ್ಕೆ ಆದೇಶ ನೀಡಬೇಕು. ಮುಂದಿನ ಶೈಕ್ಷಣಿಕ ವರ್ಷದ ಕಡ್ಡಾಯ ದಾಖಲಾತಿ ದಿನಾಂಕ ನಿರ್ಧರಿಸಿ, ಎಲ್ಲರೂ ದಾಖಲಾಗುವಂತೆ ಮಾಡಬೇಕು. ಹಿಂದಿನ ವರ್ಷದ ಆರ್‌ಟಿಇ ಶುಲ್ಕವನ್ನು ತಕ್ಷಣ ಮರುಪಾವತಿ ಮಾಡಬೇಕು. ಶಾಲಾ ಮಾನ್ಯತೆ ನವೀಕರಣಗಳನ್ನು ಆನ್‌ಲೈನ್ ಮೂಲಕ ನಡೆಸಬೇಕು ಎಂದು ಸಚಿವರನ್ನು ರುಪ್ಸಾ-ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ.