ಸರ್ಕಾರಿ ಶಾಲಾ ಮಗುವಿನ ಖರ್ಚಿನ ಮಾಹಿತಿ ಕೊಡಿ: ಸರ್ಕಾರಕ್ಕೆ ಖಾಸಗಿ ಶಾಲೆಗಳ ಸವಾಲ್‌

By Kannadaprabha NewsFirst Published May 29, 2021, 7:54 AM IST
Highlights

* ಸಚಿವ ಎಸ್‌. ಸುರೇಶ್‌ಕುಮಾರ್‌ಗೆ ಪತ್ರ ಬರೆದು ಒತ್ತಾಯಿಸಿದ ಕ್ಯಾಮ್ಸ್‌
* ಖಾಸಗಿ ಶಾಲೆಗಳು ಮಕ್ಕಳ ಕಲಿಕೆಗೆ ತಗಲುವ ವೆಚ್ಚಕ್ಕಿಂತ ದುಬಾರಿ ವೆಚ್ಚ 
* ಸರ್ಕಾರ ಮಾತ್ರ ದುಬಾರಿ ಖರ್ಚು ಮಾಡಲಾಗುತ್ತಿದೆ ಎಂಬ ವಾದ 

ಬೆಂಗಳೂರು(ಮೇ.29): ಖರ್ಚಿಗಿಂತ ಹೆಚ್ಚಿನ ಶುಲ್ಕವನ್ನು ಮಕ್ಕಳಿಂದ ಖಾಸಗಿ ಶಾಲೆಗಳು ವಸೂಲಿ ಮಾಡುತ್ತಿವೆ ಎಂದು ಆರೋಪಿಸುವ ಸರ್ಕಾರ, ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಪ್ರತಿ ಮಗುವಿಗೆ ಮಾಡುತ್ತಿರುವ ಖರ್ಚಿನ ಮಾಹಿತಿಯನ್ನು ರಾಜ್ಯದ ಜನರ ಮುಂದಿಡುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಯು (ಕ್ಯಾಮ್ಸ್‌) ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದೆ.

ಈ ಕುರಿತು ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಖಾಸಗಿ ಶಾಲೆಗಳು ಮಕ್ಕಳ ಕಲಿಕೆಗೆ ತಗಲುವ ವೆಚ್ಚಕ್ಕಿಂತ ದುಬಾರಿ ವೆಚ್ಚ ಪಡೆಯುತ್ತಿವೆ ಎಂದು ರಾಜ್ಯದ ಜನರು ಹಾಗೂ ಪೋಷಕರಲ್ಲಿ ಸರ್ಕಾರ ಅಪನಂಬಿಕೆ ಹುಟ್ಟಿಸುತ್ತಿದೆ. ಸರ್ಕಾರಿ ಶಾಲೆಯ ಸೌಲಭ್ಯಗಳು ಮತ್ತು ಗುಣಮಟ್ಟದ ಶಿಕ್ಷಣಕ್ಕೆ ತಗುಲುವ ವೆಚ್ಚಕ್ಕಿಂತ ಖಾಸಗಿ ಶಾಲೆಗಳ ವೆಚ್ಚವು ಕಡಿಮೆಯೇ ಇದೆ. ಆದರೂ ಸರ್ಕಾರ ಮಾತ್ರ ದುಬಾರಿ ಖರ್ಚು ಮಾಡಲಾಗುತ್ತಿದೆ ಎಂದು ವಾದಿಸುತ್ತಿದೆ. ಆದ್ದರಿಂದ ಶಿಕ್ಷಣ ಇಲಾಖೆಯು ವಿವಿಧ ಶಾಲೆಗಳಲ್ಲಿ ತಗಲಬಹುದಾದ ವೆಚ್ಚವನ್ನು ರಾಜ್ಯದ ಜನರ ಮುಂದಿಡಬೇಕು ಎಂದು ಮನವಿ ಮಾಡಿದ್ದಾರೆ.

ಕೊರೋನಾತಂಕ: ಗೊಂದಲದಲ್ಲಿರುವ SSLC, PUC ವಿದ್ಯಾರ್ಥಿಗಳು

ಶಿಕ್ಷಣ ಇಲಾಖೆ ನ್ಯಾಯಾಲಯದ ಹಲವಾರು ಪ್ರಕರಣಗಳಲ್ಲಿಯೂ ಸುಳ್ಳು ದಾಖಲೆಗಳನ್ನು ನೀಡಿದೆ. ಶಿಕ್ಷಕರ ವೇತನ, ಸರ್ವ ಶಿಕ್ಷಣ ಅಭಿಯಾನ ಸಂಬಳದ ಖರ್ಚು, ಅತಿಥಿ ಉಪನ್ಯಾಸಕರ ಗೌರವಧನ (ಅದರಲ್ಲೂ ಸುಳ್ಳು ಮಾಹಿತಿ), ಸರ್ಕಾರಿ ಶಾಲೆಗಳ ದುರಸ್ತಿ ಕಾಮಗಾರಿ ಹಾಗೂ ಸರ್ಕಾರಿ ಶಾಲೆಯ ನಿರ್ವಹಣೆ ಮೊತ್ತ ಮಾತ್ರ ಲೆಕ್ಕ ತೋರಿಸಿದೆ. ಇದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಂಚಿಸುವಂತಹ ನಡೆಯಾಗಿದೆ ಎಂದು ಆರೋಪಿಸಿದ್ದಾರೆ.
 

click me!