ಕೊರೋನಾ ಆತಂಕದ ಮಧ್ಯೆ ಶಾಲಾ, ಕಾಲೇಜು ಆರಂಭಕ್ಕೆ ಸಿದ್ಧತೆ

By Kannadaprabha NewsFirst Published Oct 16, 2020, 10:53 AM IST
Highlights

ಬಿಬಿಎಂಪಿಯ ಶಾಲಾ-ಕಾಲೇಜುಗಳಿಗೆ| ನಿರೀಕ್ಷೆ ಮೀರಿ ವಿದ್ಯಾರ್ಥಿಗಳ ಪ್ರವೇಶ| 12,500 ವಿದ್ಯಾರ್ಥಿಗಳ ಪ್ರವೇಶಾತಿ| ಶಿಶು ವಿಹಾರ, ನರ್ಸರಿ ಶುರುವಾದರೆ ಮತ್ತಷ್ಟು ದಾಖಲಾತಿ| 

ಬೆಂಗಳೂರು(ಅ.16): ಕೊರೋನಾ ಸೋಂಕಿನ ಆತಂಕದ ನಡುವೆಯೂ ಬಿಬಿಎಂಪಿಯ ಶಾಲಾ, ಕಾಲೇಜುಗಳಿಗೆ ನಿರೀಕ್ಷೆಗೂ ಮೀರಿ 13 ಸಾವಿರ ವಿದ್ಯಾರ್ಥಿಗಳು 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಪಡೆದುಕೊಂಡಿದ್ದಾರೆ.

ಕೊರೋನಾ ಸೋಂಕಿನ ಭೀತಿಯಿಂದ ಅರ್ಧ ಶೈಕ್ಷಣಿಕ ವರ್ಷ ಕಳೆದರೂ ಶಾಲಾ-ಕಾಲೇಜುಗಳು ಆರಂಭವಾಗದೇ ಇದ್ದರೂ ಬಿಬಿಎಂಪಿ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ದಾಖಲಾಗುವ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಬಿಬಿಎಂಪಿಯ 16 ಪ್ರಾಥಮಿಕ, 33 ಪ್ರೌಢ ಶಾಲೆ, 15 ಪದವಿ ಪೂರ್ವ ಕಾಲೇಜು, ನಾಲ್ಕು ಪದವಿ ಕಾಲೇಜು ಹಾಗೂ ಎರಡು ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಈಗಾಗಲೇ ದಾಖಲಾತಿ ಆರಂಭಿಸಲಾಗಿದ್ದು, ಈವರೆಗೆ 12,579 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ.

ಸೋಂಕಿನ ಭೀತಿಯಿಂದ ಈ ವರ್ಷ ನರ್ಸರಿ ಮತ್ತು ಶಿಶುವಿಹಾರಗಳಿಗೆ ದಾಖಲಾತಿ ಆರಂಭಿಸಿಲ್ಲ. ನರ್ಸರಿ ಮತ್ತು ಶಿಶುವಿಹಾರಗಳ ಪ್ರವೇಶಾತಿ ಆರಂಭಗೊಂಡರೆ ಕಳೆದ ವರ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವ ಸಾಧ್ಯತೆಗಳಿವೆ. 2019-20ನೇ ಶೈಕ್ಷಣಿಕ ವರ್ಷದಲ್ಲಿ ನರ್ಸರಿ ಮತ್ತು ಶಿಶುವಿಹಾರ ಸೇರಿ 17 ಸಾವಿರ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದರು.

ಪಿಯು, ಡಿಗ್ರಿ ಕಾಲೇಜು ಆರಂಭಕ್ಕೆ ಟೈಮ್ ಫಿಕ್ಸ್?

ಹೊಸ ಶಾಲೆ-ಕಾಲೇಜು ಆರಂಭ

ಇನ್ನು 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಲಗ್ಗೆರೆಯಲ್ಲಿ ಪ್ರೌಢ ಶಾಲೆ ಹಾಗೂ ಕ್ಲೀವ್‌ ಲ್ಯಾಂಡ್‌ ಟೌನ್‌ನಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸೋಂಕಿನ ಭೀತಿ ಇದ್ದರೂ ದಾಖಲಾತಿ ಆರಂಭಿಸಲಾಗಿದ್ದು, ಲಗ್ಗೆರೆಯ ಪ್ರೌಢ ಶಾಲೆಗೆ 380 ಹಾಗೂ ಕ್ಲೀವ್‌ ಲ್ಯಾಂಡ್‌ ಟೌನ್‌ನ ಪದವಿ ಪೂರ್ವ ಕಾಲೇಜಿಗೆ 540 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದು, ಬಹುತೇಕ ಸೀಟುಗಳು ಭರ್ತಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ನಾಗೇಂದ್ರ ನಾಯ್ಕ್‌, ಬಿಬಿಎಂಪಿಯ ಶಾಲಾ-ಕಾಲೇಜುಗಳಿಗೆ ದಾಖಲಾತಿ ಪಡೆಯುವ ಪೈಕಿ ಬಹುತೇಕ ಮಕ್ಕಳು ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರ ಮಕ್ಕಳಾಗಿದ್ದಾರೆ. ಲಾಕ್‌ಡೌನ್‌ ಹಾಗೂ ಸೋಂಕಿನ ಭೀತಿಯಿಂದ ಅನೇಕರು ಬೆಂಗಳೂರು ನಗರ ಬಿಟ್ಟು ತಮ್ಮ ಸ್ವಂತ ಊರುಗಳಿಗೆ ಹೋಗಿದ್ದಾರೆ. ಆದರೂ ಈ ವರ್ಷ ನಿರೀಕ್ಷೆಗಿಂತ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದಾರೆ. ಕೊರೋನಾ ಸೋಂಕು ಕಡಿಮೆಯಾಗಿ ಶಾಲಾ-ಕಾಲೇಜು ಆರಂಭಗೊಂಡರೆ ಇನ್ನಷ್ಟು ವಿದ್ಯಾರ್ಥಿಗಳು ಪಾಲಿಕೆ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಪಡೆದುಕೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
 

click me!