ಹಿಂದುಳಿದ ಜಿಲ್ಲೆಯಂದೇ ಖ್ಯಾತಿ ಹೊಂದಿರುವ ಯಾದಗಿರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭದ ಕನಸು ಈಗ ನನಸಾಗಿದೆ. ಬಹುವರ್ಷದ ಬೇಡಿಕೆಗೆ ಕೇಂದ್ರ ಸರಕಾರ ಗ್ರಿನ್ ಸಿಗ್ನಲ್ ನೀಡಿದ್ದು, ಶೈಕ್ಷಣಿಕ ವರ್ಷ ಮೆಡಿಕಲ್ ಕಾಲೇಜ್ ಆರಂಭಕ್ಕೆ ಅನುಮತಿ ಸಿಕ್ಕಿದೆ. ಇದರಿಂದಾಗಿ ದಶಕದ ಹೋರಾಟಕ್ಕೆ ಈಗ ಫಲ ಸಿಕ್ಕಿದೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ: ಹಿಂದುಳಿದ ಜಿಲ್ಲೆಯಂದೇ ಖ್ಯಾತಿ ಹೊಂದಿರುವ ಯಾದಗಿರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭದ ಕನಸು ಈಗ ನನಸಾಗಿದೆ. ಬಹುವರ್ಷದ ಬೇಡಿಕೆಗೆ ಕೇಂದ್ರ ಸರಕಾರ ಗ್ರಿನ್ ಸಿಗ್ನಲ್ ನೀಡಿದ್ದು, ಶೈಕ್ಷಣಿಕ ವರ್ಷ ಮೆಡಿಕಲ್ ಕಾಲೇಜ್ ಆರಂಭಕ್ಕೆ ಅನುಮತಿ ಸಿಕ್ಕಿದೆ. ಇದರಿಂದಾಗಿ ದಶಕದ ಹೋರಾಟಕ್ಕೆ ಈಗ ಫಲ ಸಿಕ್ಕಿದೆ.
150 ಸೀಟುಗಳ ಪ್ರವೇಶಾತಿಗೆ ಅನುಮೋದನೆ
undefined
ಯಾದಗಿರಿಯ ಮೆಡಿಕಲ್ ಕಾಲೇಜ್ ಆರಂಭಕ್ಕೆ ಈಗ ಕೇಂದ್ರ ಹಸಿರು ನಿಶಾನೆ ನೀಡಿದೆ. ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಯ ಆರಂಭಕ್ಕೆ ಗ್ರಿನ್ ಸಿಗ್ನಲ್ ಸಿಕ್ಕಿದ್ದು, 2022-23 ನೇ ಸಾಲಿನಲ್ಲಿ 150 ಎಂ.ಬಿ.ಬಿ.ಎಸ್ ಸೀಟುಗಳಿಗೆ ನ್ಯಾಷನಲ್ ಮೆಡಿಕಲ್ ಕಮೀಷನ್ (ರಾಷ್ಟ್ರೀಯ ಆರೋಗ್ಯ ಆಯೋಗ) ಅನುಮತಿ ನೀಡಿದೆ. ಆಯೋಗವು ಕಾಲೇಜು ಆರಂಭಕ್ಕೆ ಮಂಜೂರಾತಿ ಮಾಡಿದ್ದು ಖುಷಿ ತಂದಿದೆ. ದಶಕದ ಹೋರಾಟದ ಪ್ರತಿಫಲವಾಗಿ ಯಾದಗಿರಿಗೆ ಕೇಂದ್ರ ಸರಕಾರ ಬಂಪರ್ ಗಿಫ್ಟ್ ನೀಡಿದೆ. ಈ ಬಗ್ಗೆ ಮಾಜಿ ಶಾಸಕ ಹಾಗೂ ಹಿರಿಯ ವೈದ್ಯರಾದ ಡಾ.ವೀರಬಸವಂತರೆಡ್ಡಿ ಮುದ್ನಾಳ ಅವರು ಮಾತನಾಡಿ, ಮೆಡಿಕಲ್ ಕಾಲೇಜು ಆರಂಭದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್ ಓದಲು ಅನುಕೂಲವಾಗುವ ಜೊತೆ ಸಕಾಲಕ್ಕೆ ವೈದ್ಯಕೀಯ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಸಿಗಲಿದೆ ಎಂದರು.
300 ಕೋಟಿ ರೂ. ಅನುದಾನದಲ್ಲಿ ಬೃಹತ್ ಮೆಡಿಕಲ್ ಕಾಲೇಜು ನಿರ್ಮಾಣ
ಮೆಡಿಕಲ್ ಕಾಲೇಜ್ ನಿರ್ಮಾಣ ಕಾಮಗಾರಿಯು ಭರದಿಂದ ಸಾಗಿದೆ. ಯಾದಗಿರಿ ಜಿಲ್ಲೆಯ ಮುದ್ನಾಳ ಸಮೀಪ ಮೆಡಿಕಲ್ ಕಾಲೇಜ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಳೆದ ಜನವರಿ 6 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರು ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಮೆಡಿಕಲ್ ಕಾಲೇಜು ನಿರ್ಮಾಣ ಕಾಮಗಾರಿಯ ಪ್ರತಿಶತ 50 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
300 ಹಾಸಿಗೆ ಸೌಲಭ್ಯವುಳ್ಳ ಜಿಲ್ಲಾ ಆಸ್ಪತ್ರೆ ಕಟ್ಟಡದ ಹಿಂಭಾಗದಲ್ಲಿಯೇ ನೂತನ ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಲಾಗುತ್ತಿದೆ. ಕೇಂದ್ರ ಸರಕಾರದ 300 ಕೋಟಿ ರೂಪಾಯಿ ಅನುದಾನದಲ್ಲಿ ಬೃಹತ್ ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಲಾಗುತ್ತಿದೆ. 30 ಎಕರೆ ಭೂಮಿಯಲ್ಲಿ ಕಾಲೇಜು ನಿರ್ಮಾಣ ಮಾಡಲಾಗುತ್ತಿದ್ದು, ಮೆಡಿಕಲ್ ಕಾಲೇಜ್ ಗೆ 70 ಎಕರೆ ಮೀಸಲಿಡಲಾಗಿದ್ದು, 30 ಎಕರೆ ಭೂಮಿಯಲ್ಲಿ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ.
ಹಿಂದುಳಿದ ಯಾದಗಿರಿ ಜಿಲ್ಲೆಗೆ ಮೆಡಿಕಲ್ ಕಾಲೇಜಿನಿಂದ ಅನುಕೂಲ
ಕೇಂದ್ರದ ನೀತಿ ಆಯೋಗದ ವರದಿ ಪ್ರಕಾರ ಯಾದಗಿರಿ ಜಿಲ್ಲೆಯು ದೇಶದಲ್ಲಿಯೇ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಹಿಂದುಳಿದ ಜಿಲ್ಲೆಯಲ್ಲಿ ಆರೋಗ್ಯದ ಸೌಲಭ್ಯ ಕಲ್ಪಿಸಿ ಸುಧಾರಣೆಗಾಗಿ ಕೇಂದ್ರ ಸರಕಾರ ಮೆಡಿಕಲ್ ಕಾಲೇಜ್ ಆರಂಭಕ್ಕೆ ಹಸಿರು ನಿಶಾನೆ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಆರಂಭ ಮಾಡಿದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ. ಯಾದಗಿರಿ ಜಿಲ್ಲೆಯಲ್ಲಿ ಈಗಾಗಲೇ ವೈದ್ಯರ ಕೊರತೆ ಹಾಗೂ ಅಗತ್ಯ ಆರೋಗ್ಯ ಸೌಲಭ್ಯ ಈಗ ಮರಿಚಿಕೆಯಾಗಿ ರೋಗಿಗಳು ದೂರದ ಬೆಂಗಳೂರು, ಮಹಾರಾಷ್ಟ್ರದ ಸೊಲ್ಲಾಪುರ, ಕಲಬುರಗಿ ಹಾಗೂ ವಿವಿಧೆಡೆ ಚಿಕಿತ್ಸೆ ಪಡೆಯಲು ತೆರಳುತ್ತಾರೆ. ಅಂದುಕೊಂಡಂತೆ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯದೊಂದಿಗೆ ಮೆಡಿಕಲ್ ಕಾಲೇಜು ಆರಂಭ ಮಾಡಿದರೆ ರೋಗಿಗಳ ಅಲೆದಾಟ ತಪ್ಪಲಿದೆ.