ಕೋವಿಡ್‌: ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರ ನಿರಾಸಕ್ತಿ

By Kannadaprabha NewsFirst Published Jul 8, 2021, 9:26 AM IST
Highlights
  • ರಾಜ್ಯದ ಪ್ರತಿ ವರ್ಷ 1ನೇ ತರಗತಿಗೆ ಪ್ರವೇಶ ಪಡೆಯುವ ಮೂಲಕ ಶಾಲಾ ಮೆಟ್ಟಿಲು ಹತ್ತುತ್ತಿದ್ದ ಮಕ್ಕಳ ಸಂಖ್ಯೆ 10 ಲಕ್ಷಕ್ಕಿಂತ ಹೆಚ್ಚು
  • ಈ ವರ್ಷ ಕೋವಿಡ್‌ ಆತಂಕದಿಂದ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಪೋಷಕರು ಹಿಂದೇಟು

 ಬೆಂಗಳೂರು (ಜು.08):  ರಾಜ್ಯದ ಪ್ರತಿ ವರ್ಷ 1ನೇ ತರಗತಿಗೆ ಪ್ರವೇಶ ಪಡೆಯುವ ಮೂಲಕ ಶಾಲಾ ಮೆಟ್ಟಿಲು ಹತ್ತುತ್ತಿದ್ದ ಮಕ್ಕಳ ಸಂಖ್ಯೆ 10 ಲಕ್ಷಕ್ಕಿಂತ ಹೆಚ್ಚು. ಆದರೆ, ಈ ವರ್ಷ ಕೋವಿಡ್‌ ಆತಂಕದಿಂದ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಪೋಷಕರು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ.

2021-22ನೇ ಸಾಲಿನ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭಗೊಂಡು ತಿಂಗಳಾಗುತ್ತಿದ್ದರೂ ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ 1ನೇ ತರಗತಿಗೆ ಪ್ರವೇಶ ಪಡೆದ ಮಕ್ಕಳ ಸಂಖ್ಯೆ ಕೇವಲ 2.63 ಲಕ್ಷ ಅಷ್ಟೆ. ಶಿಕ್ಷಣ ಇಲಾಖೆಯೇ ಈ ಬಾರಿ 10.21 ಲಕ್ಷ ಮಕ್ಕಳು 1ನೇ ತರಗತಿಗೆ ದಾಖಲಾಗಬಹುದೆಂದು ಅಂದಾಜಿಸಿದೆ. ಆದರೆ, ಈ ಅಂದಾಜಿಗೆ ಹೋಲಿಸಿದರೆ ಇದುವರೆಗೆ ದಾಖಲಾಗಿರುವ ಮಕ್ಕಳ ಸಂಖ್ಯೆ ಕೇವಲ ಶೇ. 25.81ರಷ್ಟುಆಗಿದೆ. ಜೂ.15ರಿಂದ ಆರಂಭವಾಗಿರುವ ಶಾಲಾ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಆ.30ರವರೆಗೆ ಸಮಯಾವಕಾಶ ಇದೆಯಾದರೂ ಪ್ರಸ್ತುತ ಕೋವಿಡ್‌ ತಹಬದಿಗೆ ಬಂದಿರುವಾಗಲೇ ಮಕ್ಕಳ ದಾಖಲಾತಿಗೆ ಆಸಕ್ತಿ ತೋರದ ಪೋಷಕರು ಇನ್ನು ಕೆಲವೇ ತಿಂಗಳಲ್ಲಿ ಕೋವಿಡ್‌ 3ನೇ ಅಲೆ ಆರಂಭವಾದರೆ ಎಲ್ಲಿ ಮುಂದೆ ಬರುತ್ತಾರೆ ಎಂಬ ಆತಂಕ ಶಿಕ್ಷಣ ಇಲಾಖೆಯನ್ನು ಕಾಡುತ್ತಿದೆ.

ಕೂಡಲೇ ಶಾಲೆ ಆರಂಭಿಸಲು ಶಿಕ್ಷಣ ತಜ್ಞರ ಆಗ್ರಹ .

ಶಿಕ್ಷಣ ಇಲಾಖೆಯ ವಿದ್ಯಾರ್ಥಿ ಅಚೀವ್ಮೆಂಟ್‌ ಟ್ರಾಕಿಂಗ್‌ ಸಿಸ್ಟಮ್‌ (ಎಸ್‌ಎಎಸ್‌ಟಿ) ಪೋರ್ಟಲ್‌ನಲ್ಲಿ ರಾಜ್ಯದ ಸರ್ಕಾರ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳು ದಾಖಲಿಸಿರುವ ತಮ್ಮ ತಮ್ಮ ಶಾಲೆಗಳ ದಾಖಲಾತಿ ಅಂಕಿ ಅಂಶಗಳ ಪ್ರಕಾರ, ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಗೆ 2.02 ಲಕ್ಷ ಮಕ್ಕಳು ದಾಖಲಾಗಿದ್ದಾರೆ. ಇದು ಇಲಾಖೆ ನಿರೀಕ್ಷಿಸಿರುವ 4.72 ಲಕ್ಷ ಮಕ್ಕಳ ದಾಖಲಾತಿ ಸಂಖ್ಯೆಗೆ ಹೋಲಿಸಿದರೆ ಶೇ.42ರಷ್ಟುಮಾತ್ರ ಪ್ರಗತಿ ಸಾಧಿಸಿದೆ. ಇನ್ನು ಅನುದಾನಿತ ಶಾಲೆಗಳಿಗೆ ಈ ಬಾರಿ 63 ಸಾವಿರಕ್ಕೂ ಹೆಚ್ಚು ಮಕ್ಕಳು ದಾಖಲಾಗಬಹುದೆಂದು ಅಂದಾಜಿಸಲಾಗಿದೆ. ಆದರೆ, ಇದುವರೆಗೆ 20 ಸಾವಿರ ದಾಟಿಲ್ಲ. ಅನುದಾನ ರಹಿತ ಖಾಸಗಿ ಶಾಲೆಗಳ ದಾಖಲಾತಿ ಇನ್ನೂ ಕಡಿಮೆ. ಈ ಶಾಲೆಗಳಿಗೆ ಪ್ರತೀ ಬಾರಿಯಂತೆ 4.76 ಲಕ್ಷಕ್ಕೂ ಹೆಚ್ಚು ಮಕ್ಕಳು 1ನೇ ತರಗತಿಗೆ ದಾಖಲಾಗಬಹುದೆಂದು ಸರ್ಕಾರ ಅಂದಾಜಿಸಿದೆಯಾದರೂ ಇದುವರೆಗೆ ದಾಖಲಾದವರ ಸಂಖ್ಯೆ ಕೇವಲ 40 ಸಾವಿರ. ಅಂದರೆ ನಿರೀಕ್ಷಿಸಿದ್ದರಲ್ಲಿ ಶೇ.8ರಷ್ಟುಮಕ್ಕಳು ಮಾತ್ರ ದಾಖಲಾತಿ ಪಡೆದಿದ್ದಾರೆ.

ಆ.9ರಿಂದ ರಾಜ್ಯದಲ್ಲಿ ಪದವಿ ತರಗತಿ ಆರಂಭಕ್ಕೆ ಸಲಹೆ ...

1ರಿಂದ 10ನೇ ತರಗತಿ ದಾಖಲಾತಿ ಶೇ.62ರಷ್ಟು!:  ಇನ್ನು, ಪ್ರಸಕ್ತ ಸಾಲಿನಲ್ಲಿ 1ರಿಂದ 10ನೇ ತರಗತಿ ವರೆಗೆ ಮಕ್ಕಳ ದಾಖಲಾತಿ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಕಳೆದ ಮೂರು ವಾರದಿಂದ ಶೇ.62ರಷ್ಟುಮಕ್ಕಳು ದಾಖಲಾತಿ ಪಡೆದಿದ್ದಾರೆ.

ಅಂದರೆ ಇಲಾಖೆಯ ಅಂದಾಜಿತ ಅಂಕಿ ಅಂಶಗಳ ಪ್ರಕಾರ ಪ್ರತೀ ವರ್ಷ 1.05 ಕೋಟಿ ಮಕ್ಕಳು ದಾಖಲಾತಿ ಪಡೆಯಬೇಕು. ಇದರಲ್ಲಿ ಸದ್ಯದ ವರೆಗೆ 65.77 ಲಕ್ಷ ಮಕ್ಕಳನ್ನು ಪೋಷಕರು ವಿವಿಧ ತರಗತಿಗಳಿಗೆ ದಾಖಲಿಸಿರುವುದು ಕಂಡುಬಂದಿದೆ. ಈ ಪೈಕಿ ಸರ್ಕಾರಿ ಶಾಲೆಗಳಿಗೆ 45 ಲಕ್ಷ ಮಕ್ಕಳ ದಾಖಲಾತಿ ಅಂದಾಜಿಸಲಾಗಿದ್ದು ಇದುವರೆಗೆ 35 ಲಕ್ಷಕ್ಕೂ ಹೆಚ್ಚು ಮಕ್ಕಳು (ಶೇ.76) ದಾಖಲಾಗಿದ್ದಾರೆ. ಇನ್ನು, ಅನುದಾನಿತ ಶಾಲೆಗಳಿಗೆ 10 ಲಕ್ಷ ಮಕ್ಕಳ ದಾಖಲಾತಿ ನಿರೀಕ್ಷಿಸಿದ್ದು ಇದುವರೆಗೆ 8.71 ಲಕ್ಷ (ಶೇ.80) ಮಕ್ಕಳು, ಇನ್ನು ಅನುದಾನರಹಿತ ಖಾಸಗಿ ಶಾಲೆಗಳಿಗೆ 46.36 ಲಕ್ಷ ಮಕ್ಕಳ ದಾಖಲಾತಿ ನಿರೀಕ್ಷಿಸಿದ್ದು ಈ ಪೈಕಿ 20 ಲಕ್ಷ ಮಕ್ಕಳು ಈಗಾಗಲೇ ದಾಖಲಾತಿ ಪಡೆದಿದ್ದಾರೆ. ಇವುಗಳನ್ನು ಹೊರತುಪಡಿಸಿ ಇತರೆ ಶಾಲೆಗಳಿಗೆ 26 ಸಾವಿರ ಮಕ್ಕಳ ದಾಖಲಾತಿ ನಿರೀಕ್ಷಿಸಿದ್ದು 17 ಸಾವಿರ ಮಕ್ಕಳು ಈವರೆಗೆ ದಾಖಲಾಗಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!