* ಖಾಸಗಿ ಶಾಲೆಗಳ ದುಬಾರಿ ಶುಲ್ಕ
* ಸರ್ಕಾರಿ ಶಾಲೆಗಳಲ್ಲಿ ಕಳೆದ ವರ್ಷಗಿಂತಲೂ ಪ್ರವೇಶಾತಿ ಹೆಚ್ಚಳ ಸಾಧ್ಯತೆ
* ಸರ್ಕಾರಿ ಶಾಲೆಗಳಲ್ಲೂ ಇದೀಗ ಆಂಗ್ಲ ಭಾಷೆಗೆ ಹೆಚ್ಚು ಒತ್ತು
ಶಿವಾನಂದ ಗೊಂಬಿ
ಹುಬ್ಬಳ್ಳಿ(ಜು.22): ಕೊರೋನಾ ಎಫೆಕ್ಟ್, ಖಾಸಗಿ ಶಾಲೆಗಳ ದುಬಾರಿ ಶುಲ್ಕದಿಂದಾಗಿ ಪಾಲಕರು ಇದೀಗ ಸರ್ಕಾರ ಶಾಲೆಗಳತ್ತ ಮುಖಮಾಡಿದ್ದಾರೆ. ಮಕ್ಕಳನ್ನು ಗಳಿಗೆ ಸೇರಿಸುವ ಪಾಲಕರ ಸಂಖ್ಯೆ ಹೆಚ್ಚುತ್ತಿದೆ.
ಕೊರೋನಾ ಹಾವಳಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಶಾಲೆಗಳು ಸರಿಯಾಗಿ ನಡೆದಿಲ್ಲ. ಬರೀ ಆನ್‌ಲೈನ್‌ನಲ್ಲೇ ತರಗತಿಗಳು ನಡೆಯುತ್ತಿವೆ. ಅದರಲ್ಲೂ ಎಲ್‌ಕೆಜಿ, ಯುಕೆಜಿ ಮಕ್ಕಳಿಗೂ ಆನ್‌ಲೈನ್‌ನಲ್ಲಿ ತರಗತಿ ನಡೆಸುತ್ತಿವೆ. ಆದಾಗ್ಯೂ ಕೆಲ ಶಾಲೆಗಳು ಶುಲ್ಕದ ಪ್ರಮಾಣವನ್ನು ಶೇ. 15ರಿಂದ 30ರ ವರೆಗೆ ಇಳಿಸಿವೆ. ಕೆಲ ಶಾಲೆಗಳು ಸರ್ಕಾರದ ಸೂಚನೆಗೂ ಕ್ಯಾರೆ ಎನ್ನದೇ ಪೂರ್ಣ ಪ್ರಮಾಣದ ಶುಲ್ಕ ಆಕರಿಸುತ್ತಿವೆ.
ಬದಲಿಗೆ ಇಷ್ಟು ದಿನದೊಳಗೆ ಶುಲ್ಕ ಪಾವತಿಸಿ ಎಂದು ಪದೇ ಪದೇ ಪಾಲಕರ ಮೊಬೈಲ್‌ಗಳಿಗೆ ಮೆಸೇಜ್ ಕಳುಹಿಸುತ್ತಿವೆ. ಶುಲ್ಕ ಪಾವತಿಸದ ಮಕ್ಕಳನ್ನು ವ್ಯಾಟ್ಸ್‌ಆ್ಯಪ್ ಗ್ರೂಪಿನಿಂದ ತೆಗೆದು ಹಾಕುತ್ತಿವೆ. ಇದೆಲ್ಲದರ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಪ್ರಮಾಣ ಹೆಚ್ಚಾಗುತ್ತಿದೆ. ಕೊರೋನಾದಿಂದಾಗಿ ಉದ್ಯೋಗ ಕಳೆದುಕೊಂಡ ಪಾಲಕರೂ ಸರ್ಕಾರಿ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲೂ ಇದೀಗ ಆಂಗ್ಲ ಭಾಷೆಗೆ ಹೆಚ್ಚು ಒತ್ತುಕೊಡಲಾಗುತ್ತಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ತೆರೆದಿರುವ ಪಬ್ಲಿಕ್ ಶಾಲೆಗಳಲ್ಲಂತೂ ಪ್ರವೇಶಾತಿ ಪ್ರಮಾಣ ಇನ್ನು ಹೆಚ್ಚಿದೆ.
ಪದವಿ, ಪಿಜಿ ಪರೀಕ್ಷೆ ನಡೆಸಲು ಕರ್ನಾಟಕ ವಿವಿ ತೀರ್ಮಾನ
ಎಷ್ಟೆಷ್ಟು ಪ್ರಮಾಣ?
ಸರ್ಕಾರಿ ಶಾಲೆಗಳಲ್ಲಿ 1ನೆಯ ತರಗತಿಗೆ ಈವರೆಗೆ ಜಿಲ್ಲೆಯಲ್ಲಿ 13225 ಮಕ್ಕಳ ಪ್ರವೇಶಾತಿ ಆಗಿದೆ. ಕಳೆದ ವರ್ಷ ಈ ಸಂಖ್ಯೆ 16517 ಇತ್ತು. ಇನ್ನೂ ಪ್ರವೇಶಾತಿ ನಡೆಯುತ್ತಿದ್ದರಿಂದ ಕಳೆದ ವರ್ಷಕ್ಕಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ. ಅನುದಾನಿತ ಗಳಲ್ಲಿ ಕಳೆದ ವರ್ಷ 2524 ಮಕ್ಕಳು 1ನೆಯ ತರಗತಿಗೆ ಪ್ರವೇಶ ಪಡೆದಿದ್ದರು. ಈ ವರ್ಷ ಆ ಸಂಖ್ಯೆ 1420ಕ್ಕೆ ಇಳಿದಿದೆ. ಅನುದಾನರಹಿತ ಶಾಲೆಗಳಲ್ಲಿ ಕಳೆದ ವರ್ಷ ಈವರೆಗೆ 14022 ಮಕ್ಕಳು ಪ್ರವೇಶ ಪಡೆದಿದ್ದರು. ಈ ವರ್ಷ 5815 ಮಕ್ಕಳ ಪ್ರವೇಶವಾಗಿದೆ.
8ನೆಯ ತರಗತಿಗೆ ಸರ್ಕಾರಿ ಶಾಲೆಗಳಲ್ಲಿ ಕಳೆದ ವರ್ಷ 12619 ಪ್ರವೇಶ ಪಡೆದಿದ್ದರು. ಈ ವರ್ಷ ಈವರೆಗೆ 10822 ಮಕ್ಕಳು ಪ್ರವೇಶ ಪಡೆದಿದ್ದಾರೆ. ಅನುದಾನಿತ ಖಾಸಗಿ ಶಾಲೆಗಳಲ್ಲಿ ಕಳೆದ ವರ್ಷ ಈವರೆಗೆ 8651 ಮಕ್ಕಳು ಪ್ರವೇಶ ಪಡೆದಿದ್ದರೆ, ಈ ವರ್ಷ 4323 ಮಕ್ಕಳು ಪ್ರವೇಶ ಪಡೆದಿದ್ದಾರೆ. ಅನುದಾನ ರಹಿತ ಶಾಲೆಗಳಲ್ಲಿ ಕಳೆದ ವರ್ಷ 10303 ಮಕ್ಕಳು ಪ್ರವೇಶ ಪಡೆದಿದ್ದರು. ಈ ವರ್ಷ 9843 ಮಕ್ಕಳು ಪ್ರವೇಶ ಪಡೆದಿದ್ದಾರೆ. ಇನ್ನೂ ಪ್ರವೇಶಾತಿ ಇರುವ ಕಾರಣ ಇಷ್ಟೇ ಪ್ರಮಾಣ ಹೆಚ್ಚಾಗಿದೆ ಎಂದು ಹೇಳುವುದು ಕಷ್ಟ. ಆದರೆ ಕಳೆದ ಎರಡು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಪ್ರಮಾಣ ಹೆಚ್ಚಾಗುತ್ತಿದೆ. ಇದು ಬರೀ ಒಂದು ಹಾಗೂ 8ನೆಯ ತರಗತಿ ಅಂಕಿ ಅಂಶ ಮಾತ್ರ. ಕೆಲವರಂತೂ ಖಾಸಗಿ ಶಾಲೆಗಳಿಂದ ಬಿಡಿಸಿ ಬೇರೆ ಬೇರೆ ತರಗತಿಗೂ ಸೇರಿಸುತ್ತಿದ್ದಾರೆ. ಪ್ರವೇಶಾತಿ ಪ್ರಕ್ರಿಯೆ ಮುಗಿದ ನಂತರ ನಿಖರವಾಗಿ ಎಷ್ಟು ಪ್ರಮಾಣ ಹೆಚ್ಚಾಗಿದೆ ಎಂದು ಹೇಳಬಹುದು ಎಂಬುದು ಅಧಿಕಾರಿಗಳ ಮಾತು.
ಸ್ಪೆಷಲ್ ಆಫರ್! ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ರೆ ಅಕೌಂಟ್‌ಗೆ 1 ಸಾವಿರ ರೂ ಜಮಾ.!
ಕಳೆದ ವರ್ಷದಿಂದ ಸರ್ಕಾರಿ ಶಾಲೆಗಳ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಈ ವರ್ಷವಂತೂ ಕೊಂಚ ಜಾಸ್ತಿಯೇ ಆಗಿದೆ. ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯ, ಖಾಸಗಿ ಶಾಲೆಗಳ ದುಬಾರಿ ಶುಲ್ಕದ ಪರಿಣಾಮದಿಂದ ಈ ರೀತಿ ಆಗುತ್ತಿರಬಹುದು. ಪ್ರವೇಶಾತಿ ಪ್ರಕ್ರಿಯೆ ಪೂರ್ಣವಾದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಡಿಡಿಪಿಐ ಮೋಹನ ಹಂಚಾಟೆ ತಿಳಿಸಿದ್ದಾರೆ.
ಉತ್ತಮ ಶಿಕ್ಷಣ ಕೊಡಿಸಬೇಕೆಂದು ಖಾಸಗಿ ಶಾಲೆಗೆ ಎಲ್‌ಕೆಜಿ, ಯುಕೆಜಿಗೆ ಸೇರಿಸಿದ್ದೆ. ಆದರೆ ತರಗತಿ ನಡೆಸದಿದ್ದರೂ ಪೂರ್ಣ ಪ್ರಮಾಣದ ಶುಲ್ಕವನ್ನೇ ಭರಿಸುವಂತೆ ಒತ್ತಾಯಿಸುತ್ತಾರೆ. ಕೊರೋನಾದಿಂದ ನನ್ನ ಉದ್ಯೋಗ ಹೋಗಿದೆ. ಶುಲ್ಕ ಭರಿಸುವುದು ಕಷ್ಟವಾಗುತ್ತಿದೆ. ಈಗ ಸರ್ಕಾರಿ ಶಾಲೆಯಲ್ಲಿ ನನ್ನ ಮಗನನ್ನು ಸೇರಿಸಿದ್ದೇನೆ ಎಂದು ಪಾಲಕರು ಮಂಜುನಾಥ ಹೇಳಿದ್ದಾರೆ.