* ಪ್ರಾಥಮಿಕ ಶಾಲೆಗಳನ್ನೇ ಮೊದಲು ಆರಂಭಿಸಿ!
* ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕು ನಿರ್ವಹಣೆ ಸಾಮರ್ಥ್ಯ ಹೆಚ್ಚು
* 9- 12ನೇ ತರಗತಿ ಬದಲು 1-5ನೇ ತರಗತಿ ಆರಂಭ ಸೂಕ್ತ: ಐಸಿಎಂಆರ್
ನವದೆಹಲಿ(ಜು.21): ಕೊರೋನಾ ಅಲೆ ಇಳಿಯುತ್ತಲೇ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಕಾಲೇಜು, ಹೈಸ್ಕೂಲ್ ಆರಂಭಕ್ಕೆ ಸಿದ್ಧತೆ ನಡೆಯುತ್ತಿರುವಾಗ, ಮೊದಲಿಗೆ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದು ಒಳ್ಳೆಯದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಲಹೆ ನೀಡಿದೆ. ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಚಿಕ್ಕ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಸುತರಾಂ ನಿರಾಕರಿಸುತ್ತಿರುವಾಗ ಹೊರಬಿದ್ದಿರುವ ಈ ಸಲಹೆ ಭಾರೀ ಅಚ್ಚರಿಗೆ ಕಾರಣವಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಐಸಿಎಂಆರ್ ಮುಖ್ಯಸ್ಥ ಬಲರಾಮ್ ಭಾರ್ಗವ ‘ವಯಸ್ಕರಿಗೆ ಹೋಲಿಸಿದರೆ ಮಕ್ಕಳು ಕೊರೋನಾ ವೈರಸ್ ಅನ್ನು ಉತ್ತಮವಾಗಿ ನಿಭಾಯಿಸಬಲ್ಲರು. ಹೀಗಾಗಿ 9ರಿಂದ 12ನೇ ತರಗತಿಯನ್ನು ಆರಂಭಿಸುವುದಕ್ಕೂ ಮುನ್ನ ಪ್ರಾಥಮಿಕ ಶಾಲೆಗಳನ್ನು ತೆರೆಯುವುದು ಸೂಕ್ತ. 1ರಿಂದ 5ನೇ ತರಗತಿಯನ್ನು ಮೊದಲು ಆರಂಭಿಸಬೇಕು. ಆದರೆ ಹೀಗೆ ಪ್ರಾಥಮಿಕ ಶಾಲೆಗಳನ್ನು ತೆರೆಯುವ ಮೊದಲು, ಎಲ್ಲಾ ಸಿಬ್ಬಂದಿ ಮತ್ತು ಶಿಕ್ಷಕರಿಗೆ ಲಸಿಕೆ ನೀಡಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕಾರಣ ಏನು?:
ಮಕ್ಕಳಲ್ಲಿ ಉಸಿರಾಟ ಸಂಬಂಧಿತ ಸಮಸ್ಯೆಗಳು ತೀರಾ ಅಪರೂಪವಾದ ಕಾರಣ ಅವರು ವೈರಸ್ ಅನ್ನು ಉತ್ತಮವಾಗಿ ನಿಭಾಯಿಸಬಲ್ಲರು. ಜೊತೆಗೆ ಯಾವುದೇ ವೈರಸ್‌ಗಳು ಬಂದು ಅಂಟಿಕೊಳ್ಳುವ ರಿಸೆಪ್ಟರ್ ಪ್ರಮಾಣವೂ ಮಕ್ಕಳಲ್ಲಿ ಕಡಿಮೆ ಇರುತ್ತದೆ. ಹೀಗಾಗಿ ಅವರನ್ನು ಸೋಂಕು ಬಾಧಿಸುವ ಸಾಧ್ಯತೆ ಕಡಿಮೆ. ಬಾಧಿಸಿದರೂ, ತೀವ್ರತೆ ಕಡಿಮೆ. ಇತ್ತೀಚೆಗೆ ಐಸಿಎಂಆರ್ ನಡೆಸಿದ ಸೆರೋ ಸರ್ವೇ ವೇಳೆಯೂ 6-9ರ ವಯೋಮಾನದ ಶೇ.57.2ರಷ್ಟುಮಕ್ಕಳಲ್ಲಿ ಸೋಂಕು ಬಂದು ಹೋಗಿದ್ದು ಕಂಡುಬಂದಿದೆ. ಇದು ಹಿರಿಯರಲ್ಲಿ ಇದ್ದಷ್ಟೇ ಪ್ರಮಾಣ ಎಂದು ಡಾ.ಭಾರ್ಗವ ಹೇಳಿದ್ದಾರೆ.
ಶಾಲೆ ಬಂದ್ ಆಗಿಲ್ಲ:
ವಿಶ್ವದ ಇತರೆ ಕೆಲವು ದೇಶಗಳಲ್ಲಿ ಅದರಲ್ಲೂ ಉತ್ತರ ಯುರೋಪ್‌ನ ಹಲವು ದೇಶಗಳಲ್ಲಿ ಮೊದಲ, ಎರಡನೇ ಮತ್ತು ಮೂರನೇ ಅಲೆಯ ವೇಳೆ ಬೇರೆಲ್ಲಾ ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಂಡಿದ್ದರೂ, ಪ್ರಾಥಮಿಕ ಶಾಲೆಗಳನ್ನು ಮಾತ್ರ ಯಾವುದೇ ಸಮಯದಲ್ಲೂ ಮುಚ್ಚಿರಲಿಲ್ಲ ಎಂದು ಮಕ್ಕಳಿಗೆ ಸೋಂಕಿನಿಂದ ಇರುವ ಸುರಕ್ಷತೆ ಬಗ್ಗೆ ಉದಾಹರಣೆ ನೀಡಿದ್ದಾರೆ.