ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಿದರೂ, ಇಲ್ಲಿನ ಶಾಲೆಯ ಮಕ್ಕಳಿಗೆ ಬಯಲೇ ಶೌಚಾಯ!

By Kannadaprabha NewsFirst Published Aug 19, 2024, 5:38 PM IST
Highlights

ಬಂಗಾರಪೇಟೆ ತಾಲೂಕಿನ ಗಾಜಗ ಗ್ರಾಮದ ಪ್ರೌಢಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಸರ್ಕಾರ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಿದರೂ, ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ರಮೇಶ್ ಕೆ

ಬಂಗಾರಪೇಟೆ/ಕೋಲಾರ (ಆ.19): ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದಿದ್ದರೂ ಸಹ ಇಂದಿಗೂ ಬಹಳಷ್ಟು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಮಾಡದ ಕಾರಣ ಮಕ್ಕಳಿಗೆ ಬಯಲು ಶೌಚಾಲಯವೇ ಗತಿ ಎಂಬಂತಾಗಿದೆ.

Latest Videos

ಇದಕ್ಕೊಂದು ಉದಾಹರಣೆ ತಾಲೂಕಿನ ಗಾಜಗ ಗ್ರಾಮದ ಪ್ರೌಢಶಾಲೆ. ಇಲ್ಲಿ ಶೌಚಾಲಯ ಭಾಗ್ಯವನ್ನು ಕಲ್ಪಿಸದ ಕಾರಣ ವಿದ್ಯಾರ್ಥಿಗಳು ಬಯಲಿನಲ್ಲಿಯೇ ಮೂತ್ರ ವಿಸರ್ಜನೆ ಮಾಡಬೇಕಾದ ಪರಿಸ್ಥಿತಿ ಇದೆ.

ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ?: ಪ್ರತಿಯೊಬ್ಬರೂ ಶೌಚಾಲಯವನ್ನು ಕಡ್ಡಾಯವಾಗಿ ಬಳಸಬೇಕು ಮತ್ತು ಬಯಲಿನಲ್ಲಿ ಯಾರೂ ಸಹ ಮಲ ಮೂತ್ರ ವಿಸರ್ಜನೆ ಮಾಡಬಾರದು ಎಂಬ ಉದ್ದೇಶದಿಂದ ಸರ್ಕಾರ ಪ್ರತಿಯೊಂದು ಮನೆಗೂ ಶೌಚಾಲಯವನ್ನು ನಿರ್ಮಿಸಲು ಅನುದಾನ ನೀಡುವ ಮೂಲಕ ಉತ್ತೇಜ ನೀಡುತ್ತಿದೆ. ಅದರಂತೆ ಈ ಹಿಂದೆಯೇ ಕೋಲಾರ ಜಿಲ್ಲೆಯನ್ನು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಆದರೆ ತಾಲ್ಲೂಕಿನ ಕೆಲವು ಶಾಲೆಗಳಲ್ಲಿ ಶೌಚಾಲಯ ಸಮಸ್ಯೆ ಇರುವುದರಿಂದ ಬಯಲು ಶೌಚಾಲಯಕ್ಕೆ ವಿದ್ಯಾರ್ಥಿಗಳು ಅನಿವಾರ್ಯವಾಗಿದೆ.

5 ಪುಟಗಳ ಡೆತ್ ನೋಟ್ ಬರೆದಿಟ್ಟು ದಂಪತಿ ಸಾವಿಗೆ ಶರಣು, 16 ಮಂದಿ ವಿರುದ್ಧ ದೂರು!

ಇಲ್ಲಿನ ಶಾಲೆಯಲ್ಲಿ 8 ರಿಂದ 10 ನೇ ತರಗತಿ ವರೆಗೂ ಓದುವ 100 ವಿದ್ಯಾರ್ಥಿಗಳಿದ್ದಾರೆ. ಇಷ್ಟೂ ಮಕ್ಕಳ ಬಳಕೆಗೆ ಒಂದೇ ಒಂದು ಶೌಚಾಲಯವನ್ನು ನಿರ್ಮಿಸಿಲ್ಲ. ಸುಮಾರು ಮೂರ‍್ನಾಲ್ಕು ವರ್ಷಗಳ ಹಿಂದೆ ಗ್ರಾಮದಲ್ಲಿ ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನ ಯೋಜನೆಯ ಮೂಲಕ ಸುಮಾರು 70 ಲಕ್ಷ ವೆಚ್ಚದಲ್ಲಿ ನೂತನ ಪ್ರೌಢಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ.

ನೂತನ ಕಟ್ಟಡಲ್ಲಿ ಶೌಚಾಲಯ ಇಲ್ಲ: ಈ ಕಟ್ಟಡದ ನಿರ್ಮಾಣವನ್ನು ಬೆಂಗಳೂರು ಮೂಲದ ನಿರ್ಮಾಣ ಕಂಪನಿಯವರು ನಿರ್ಮಿಸಿದ್ದು, ನಿರ್ಮಾಣದ ವೇಳೆ ಕನಿಷ್ಠ ಒಂದೇ ಒಂದು ಶೌಚಾಲಯವನ್ನು ನಿರ್ಮಿಸಿಲ್ಲ ಮತ್ತು ಕಾಂಪೋಂಡ್ ಸಹ ನಿರ್ಮಿಸಿಲ್ಲ. ಶಾಲೆಗೆ ಕಾಂಪೌಂಡ್ ಇಲ್ಲದ ಕಾರಣ ಮಳೆ ಬಂದರೆ ಶಾಲೆಯ ಆವರಣದಲ್ಲಿ ಮಳೆ ನೀರು ತುಂಬಿಕೊಳ್ಳುತ್ತಿದೆ.

ಕೆಆರ್‌ಎಸ್‌ ಮೂಲವಾಗಿರುವ ಮಂಡ್ಯದಲ್ಲಿ ಅಂತರ್ಜಲ ಮಟ್ಟ ಕುಸಿತ, ಆತಂಕದ ಮುನ್ಸೂಚನೆ!

ಶಾಲೆಯಲ್ಲಿ ಶೌಚಾಲಯವಿಲ್ಲದ ಪರಿಣಾಮ ಕಳೆದ ಮೂರ‍್ನಾಲ್ಕು ವರ್ಷಗಳಿಂದ ವಿದ್ಯಾರ್ಥಿನಿಯರು ಪ್ರಾಥಮಿಕ ಶಾಲೆಯ ಶೌಚಾಲಯವನ್ನು ಬಳಸುತ್ತಿದ್ದು, ಹುಡುಗರು ಬಯಲಿನಲ್ಲಿ ಮೂತ್ರ ವಿಸರ್ಜನೆಗೆ ತೆರಳುತ್ತಾರೆ. ಇತ್ತ ಶಿಕ್ಷಕರಿಗೂ ಶೌಚಾಲಯ ಇಲ್ಲದ ಕಾರಣ ಶಾಲೆಯ ಪಕ್ಕದ ಮನೆಯವರ ಶೌಚಾಲಯ ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ.

ನರೇಗಾ ಯೋಜನೆಯ ಮತ್ತು ಇತರೆ ಯೋಜನೆಗಳ ಮೂಲಕ ಅನುದಾನವನ್ನು ಒಗ್ಗೂಡಿಸಿಕೊಂಡು ಶಾಲೆಯಲ್ಲಿ ಶೌಚಾಲಯ ನಿರ್ಮಿಸಲು ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು, ಅನುಮೋದನೆ ಸಹ ದೊರಕಿದೆ. ನರೇಗಾ ಯೋಜನೆಯಿಂದ 74231 ರೂ ಮತ್ತು ಶಿಕ್ಷಣ ಇಲಾಖೆಯಿಂದ 445769 ರೂ ಸೇರಿದಂತೆ ಒಟ್ಟು 5.20 ಲಕ್ಷ ಅನುದಾನ ಬಳಸಿ ಶೌಚಾಲಯ ನಿರ್ಮಿಸಲಾಗುವುದು.

click me!