
ಬೆಂಗಳೂರು (ಜೂ.17): ಯುದ್ಧದ ಕಾರಣದಿಂದ ದೇಶದಲ್ಲಿ ತಲೆದೋರಿರುವ ಇಂಧನ ಕೊರತೆ, ನಿತ್ಯ ಎದುರಿಸುತ್ತಿರುವ ಸಂಚಾರ ದಟ್ಟಣೆ, ಮಾಲಿನ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು(VTU) ಇನ್ನು ಮುಂದೆ ಪ್ರತೀ ಶನಿವಾರ ಆನ್‌ಲೈನ್ ತರಗತಿ(Online Class) ನಡೆಸಲು ನಿರ್ಧರಿಸಿದೆ.
ಇದರಿಂದಾಗಿ ವಿದ್ಯಾರ್ಥಿಗಳು ತರಗತಿಗಳಿಗಾಗಿ ಕಾಲೇಜಿಗೆ ಆಗಮಿಸುವ ಅಗತ್ಯತೆ ಇಲ್ಲ. ಮನೆಯಲ್ಲೇ ಕುಳಿತು ತಮ್ಮ ಮೊಬೈಲ್, ಲ್ಯಾಪ್‌ಟಾಪ್, ಡೆಸ್ಕ್‌ಟಾಪ್‌ಗಳಲ್ಲಿ ಆನ್‌ಲೈನ್ ಮೂಲಕ ತರಗತಿ ಪಾಠಗಳನ್ನು ಆಲಿಸಬಹುದಾಗಿದೆ.
ಇತ್ತೀಚೆಗೆ ವಿಟಿಯು ನಡೆಸಿದ ಕಾರ್ಯಕಾರಿ ಪರಿಷತ್ತಿನ ಸಭೆಯಲ್ಲಿ ಶನಿವಾರ ಆನ್‌ಲೈನ್ ತರಗತಿಗೆ ಒತ್ತು ನೀಡುವ ವಿಷಯ ಪ್ರಸ್ತಾಪಿಸಿ ಎಲ್ಲ ಸದಸ್ಯರ ಸಹಮಿತಿಯೊಂದಿಗೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಇದರಿಂದ ವಿಟಿಯು ವ್ಯಾಪ್ತಿಯಲ್ಲಿರುವ ಎಲ್ಲ 220 ಎಂಜಿನಿಯರಿಂಗ್ ಕಾಲೇಜು ಹಾಗೂ 2 ಲಕ್ಷ ವಿದ್ಯಾರ್ಥಿಗಳಿಗೆ ಇದು ಅನ್ವಯಿಸಲಿದೆ. ಸಾಮಾನ್ಯವಾಗಿ ವಿಟಿಯು 1 ಮತ್ತು 3ನೇ ಶನಿವಾರವನ್ನು ಸಾರ್ವತ್ರಿಕ ರಜೆ ದಿನವಾಗಿ ಘೋಷಿಸಿದೆ. ಉಳಿದ 2, 4 ಮತ್ತು 5ನೇ ಶನಿವಾರ ಎಂದಿನಂತೆ ತರಗತಿಗಳು ನಡೆಯುತ್ತಿದ್ದವು. ಇದೀಗ ಈ ಶನಿವಾರದ ದಿನಗಳಂದು ಸಹ ಆನ್‌ಲೈನ್ ತರಗತಿಗಳು ನಡೆಯಲಿವೆ.
ಇದು ತತ್ ಕ್ಷಣದಿಂದಲೇ ಜಾರಿಗೆ ಬರಲಿದ್ದು, ಎಲ್ಲಾ ಕಾಲೇಜಿನ ಪ್ರಾಂಶುಪಾಲರು ಇದನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದೆ. ಅಲ್ಲದೆ, ಇದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆಯೂ ತಿಳಿಸಿದೆ.
ಕೊರೋನಾ ನಂತರದಲ್ಲಿ ಇದೇ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ತರಗತಿಗಳನ್ನು ಆಯೋಜನೆ ಮಾಡುತ್ತಿರುವುದರಿಂದ ಆರಂಭದ ದಿನಗಳಲ್ಲಿ ಕೆಲವು ಅಡೆ-ತಡೆಗಳಿರಬಹುದು. ಆನಂತರದಲ್ಲಿ ಆಫ್ ಲೈನ್‌ನಲ್ಲಿ ತರಗತಿಗಳು ನಡೆಯುವ ಮಾದರಿಯಲ್ಲೇ ಆನ್‌ಲೈನ್‌ನಲ್ಲಿ ಪಾಠ ನಡೆಯಲಿದೆ. ಹೀಗಾಗಿ ಹೆಚ್ಚಿನ ಸಮಸ್ಯೆ ಉದ್ಭವಿಸುವುದಿಲ್ಲ.
ಬೋಧಕ ಸಿಬ್ಬಂದಿ ಆನ್‌ಲೈನ್‌ನಲ್ಲಿ ತರಗತಿಗಳನ್ನು ತೆಗೆದುಕೊಳ್ಳಬೇಕಿದೆ. ಅದು ಸಹ ಕಾಲೇಜಿಗೆ ಆಗಮಿಸಿ ಅಲ್ಲಿಂದಲೇ ಆನ್‌ಲೈನ್ ತೆಗೆದುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಮಾತ್ರವೇ ಕಾಲೇಜಿಗೆ ಬರುವ ಅವಶ್ಯಕತೆ ಬೀಳುವುದಿಲ್ಲ. ಆದರೆ, ಬೋಧಕೇತರ ಸಿಬ್ಬಂದಿ ಎಂದಿನಂತೆ ವಿಶ್ವವಿದ್ಯಾಲಯ, ಕಾಲೇಜಿಗೆ ಆಗಮಿಸಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಇಂಧನ ಉಳಿತಾಯ
ನಮ್ಮಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಾರದಲ್ಲಿ ಈಗಾಗಲೇ 1, 3ನೇ ಶನಿವಾರ ರಜೆ ಇದೆ. ಉಳಿದ ಶನಿವಾರ ಆನ್‌ಲೈನ್ ತರಗತಿ ತೆಗೆದುಕೊಳ್ಳುವುದರಿಂದ ವಿದ್ಯಾರ್ಥಿಗಳು ಕಾಲೇಜುಗಳಿಗೆ ಓಡಾಡುವುದು ತಪ್ಪಲಿದೆ. ಇದರಿಂದ ಇಂಧನ ಉಳಿತಾಯದ ಜತೆಗೆ ವಾಯು ಮಾಲಿನ್ಯ ಕೂಡ ತಗ್ಗಲಿದೆ.
-ಪ್ರೊ.ಎಸ್.ವಿದ್ಯಾಶಂಕರ್, ಕುಲಪತಿ, ವಿಟಿಯು.