ಭಾರತದಲ್ಲಿ 9 ವರ್ಷದ ಒಳಗಿನ ಶೇ.55ರಷ್ಟು ಮಕ್ಕಳು ಭಾಷೆ ಮತ್ತು ಅಂಕಿಗಳ ಜ್ಞಾನದಲ್ಲಿ ಹಿಂದುಳಿದಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆ/ ಅಂಗನವಾಡಿ ಮಕ್ಕಳಿಗೆ ಹಂತ ಹಂತವಾಗಿ ಜ್ಞಾನವನ್ನು ಅಭಿವೃದ್ಧಿಗೊಳಿಸುವ ಯೋಜನೆಯೇ ‘ನಿಪುಣ ಭಾರತ’.
ಡಾ. ಸಿ ಎನ್ ಅಶ್ವತ್ಥನಾರಾಯಣ, ಮಾಜಿ ಉಪ ಮುಖ್ಯಮಂತ್ರಿ, ಶಾಸಕರು: ಮಲ್ಲೇಶ್ವರ
ಡಿಸೆಂಬರ್ 25 ಭಾರತದ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ದೇಶದ ವಿಕಾಸಕ್ಕೆ ಹೊಸ ದಿಕ್ಕು ಮತ್ತು ಭರವಸೆಗಳನ್ನು ತೋರಿಸಿದ ಅವರು ಇಂದು ನಮ್ಮೊಂದಿಗಿದ್ದಿದ್ದರೆ ಸರಿಯಾಗಿ 100 ವರ್ಷ ತುಂಬುತ್ತಿತ್ತು (ಜನನ: 1924ರ ಡಿ.25). ದೇಶಕ್ಕೆ ಸದೃಢ ಪರ್ಯಾಯ ರಾಜಕಾರಣದ ಸಂಸ್ಕೃತಿಯನ್ನು ಪರಿಚಯಿಸಿದ ಮತ್ತು ಸಾರ್ವಜನಿಕ ಬದುಕಿನಲ್ಲಿ ಪಾರದರ್ಶಕತೆಗೆ ಒತ್ತು ಕೊಟ್ಟ ವಾಜಪೇಯಿ ಅವರ ಜನ್ಮದಿನವನ್ನು 2014ರಿಂದಲೂ ‘ಸುಶಾಸನ ದಿವಸ’ವನ್ನಾಗಿ ಆಚರಿಸಲಾಗುತ್ತಿದೆ. ಈ ಉಪಕ್ರಮವನ್ನು ಆರಂಭಿಸಿದ್ದು ಪ್ರಧಾನಿಗಳಾದ ನರೇಂದ್ರ ಮೋದಿ. ಇದರ ಅಂಗವಾಗಿ ನಾನು ಪ್ರತಿನಿಧಿಸುತ್ತಿರುವ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಕೇಂದ್ರ ಸರಕಾರದ ಶಿಕ್ಷಣ ಇಲಾಖೆಯ ‘ನಿಪುಣ ಭಾರತ’ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ವಿಶೇಷ ಒತ್ತು ನೀಡಿ, ಚಾಲನೆ ನೀಡಲಾಗುತ್ತಿದೆ. ಇದಕ್ಕೆ ‘ಶಿಕ್ಷಣ ಫೌಂಡೇಶನ್’ ನಮ್ಮೊಂದಿಗೆ ಕೈಜೋಡಿಸಿದೆ.
undefined
ಮಕ್ಕಳಿಗೆ ಸಾಮಾನ್ಯ ಭಾಷೆ, ಅಂಕಿಗಳ ಅರಿವು: 3ನೇ ತರಗತಿಯಿಂದ ಮೇಲ್ಪಟ್ಟಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ 9ನೇ ವಯಸ್ಸಿನ ಒಳಗೆ ಭಾಷೆ ಮತ್ತು ಅಂಕಿಸಂಖ್ಯೆಗಳನ್ನು ಸರಿಯಾಗಿ ಕಲಿತಿರಬೇಕು ಎನ್ನುವುದು ‘ನಿಪುಣ ಭಾರತ’ ಉಪಕ್ರಮದ ಗುರಿಯಾಗಿದೆ. ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಶೇ.55ರಷ್ಟು ಶಾಲಾ ಮಕ್ಕಳು ಇದರಲ್ಲಿ ಹಿಂದುಳಿದಿದ್ದಾರೆ. ಇದು ಭವಿಷ್ಯದ ದೃಷ್ಟಿಯಿಂದ ನೋಡಿದರೆ ತುಂಬಾ ಕಳವಳಕಾರಿ ಸಂಗತಿ. ಏಕೆಂದರೆ ಭಾಷೆ ಮತ್ತು ಅಂಕಿಸಂಖ್ಯೆಗಳ ಅರಿವು ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಅವಿಭಾಜ್ಯವಾದ ಕೌಶಲಗಳಾಗಿವೆ. ಇದರ ಮುಂದುವರಿದ ಭಾಗವಾಗಿ ಆತ್ಮವಿಶ್ವಾಸ, ವ್ಯಕ್ತಿತ್ವ, ನಾಯಕತ್ವ, ಉದ್ಯಮಶೀಲತೆ ಇತ್ಯಾದಿಗಳು ಬರುತ್ತವೆ. ಜೊತೆಗೆ ಪರಿಣಾಮಕಾರಿ ಸಂವಹನವಿಲ್ಲದೆ ಬೇರೇನನ್ನೂ ಮಾಡಲು ಸಾಧ್ಯವಿಲ್ಲ. ಈಗಿನ ಪ್ರಕಾರ, 2026-27ನೇ ಶೈಕ್ಷಣಿಕ ಸಾಲಿನ ಅಂತ್ಯದ ವೇಳೆಗೆ ಇದನ್ನು ಸಾಧಿಸಬೇಕಾಗಿದೆ.
ಸಿ.ಟಿ.ರವಿ ಕ್ಷಮೆ ಕೇಳಿದ್ದರೆ ಮರ್ಯಾದೆ ಉಳೀತಿತ್ತು: ಸಚಿವ ಚಲುವರಾಯಸ್ವಾಮಿ
ಆದರೆ, ನಾವು ಮಲ್ಲೇಶ್ವರಕ್ಕೆ ಸಂಬಂಧಿಸಿದಂತೆ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಯೋಚಿಸುತ್ತಿದ್ದೇವೆ. ನಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗ 12 ಸರಕಾರಿ ಶಾಲೆಗಳಿವೆ. ಇವು ಕೋದಂಡರಾಮಪುರ, ಸುಬೇದಾರ್ ಪಾಳ್ಯ, ಮತ್ತೀಕೆರೆ, ಐಐಎಸ್ಸಿ ಕ್ಯಾಂಪಸ್, ಮಲ್ಲೇಶ್ವರಂ, ಯಶವಂತಪುರ, ಪೂರ್ಣಪುರ, ತಿರುವಳ್ಳಪುರ, ಮಾರುತಿ ಬಡಾವಣೆ ಮತ್ತು ಅರಮನೆ ನಗರಗಳಲ್ಲಿವೆ. ಜೊತೆಗೆ ಒಂದಿಷ್ಟು ಅಂಗನವಾಡಿಗಳೂ ಇವೆ. ಮುಂಬರುವ ದಿನಗಳಲ್ಲಿ ನಮ್ಮ ಕ್ಷೇತ್ರದಲ್ಲಿ ಇನ್ನೂ 40 ಅಂಗನವಾಡಿಗಳನ್ನು ತೆರೆಯಲಾಗುವುದು. ಇಲ್ಲೆಲ್ಲಾ ಅಂಗನವಾಡಿ/ಶಾಲೆಗೆ ಬರುವ ಮೊದಲ ದಿನದಿಂದಲೇ ಮಕ್ಕಳಿಗೆ ಭಾಷೆ ಮತ್ತು ಗಣಿತಕ್ಕೆ ತಳಹದಿಯಾಗಿರುವ ಸಂಖ್ಯೆಗಳ ಕಲಿಕೆಯನ್ನು ಆರಂಭಿಸಬೇಕು ಎನ್ನುವುದು ನಮ್ಮ ಸಂಕಲ್ಪವಾಗಿದೆ. ಇದಕ್ಕಾಗಿ ಶಾಲೆಗಳ ಮಟ್ಟದಲ್ಲೇ ಯೋಜನೆ ರೂಪಿಸಿ, ಕಾರ್ಯಗತ ಗೊಳಿಸಲಾಗುವುದು.
ಆಧುನಿಕ ಜಗತ್ತಿನ ನಿರೀಕ್ಷೆಗೆ ಮಕ್ಕಳ ತಯಾರಿ: ಇದು ಸ್ಪರ್ಧಾತ್ಮಕ ಯುಗ. ಸರಕಾರಿ ಶಾಲೆಗಳಿಗೆ ಬರುವವರು ಸಮಾಜದ ತೀರಾ ದುರ್ಬಲ ವರ್ಗಗಳ, ಕೂಲಿ ಕಾರ್ಮಿಕರ ಮಕ್ಕಳು. ನಾವು ಈ ಮಕ್ಕಳನ್ನು ಕೂಡ ಆಧುನಿಕ ಜಗತ್ತಿನ ನಿರೀಕ್ಷೆಗಳಿಗೆ ತಕ್ಕಂತೆ ವಿದ್ಯಾವಂತರನ್ನಾಗಿ ಮಾಡಬೇಕು. ಹೀಗಾಗಿ ನಾವು ‘ನಿಪುಣ ಭಾರತ’ದಡಿ ಮೊದಲಿಗೆ ತುಸು ಹಿಂದೆ ಬಿದ್ದಿರುವ 4ರಿಂದ 7ನೇ ತರಗತಿಯ ಮಕ್ಕಳನ್ನು ಪತ್ತೆ ಹಚ್ಚಿ, ಅವರಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸಿ, ವಿಶೇಷ ಗಮನ ಕೊಡಲಿದ್ದೇವೆ. ಇದರ ಭಾಗವಾಗಿ ಪ್ರತಿಯೊಂದು ಶಾಲೆಯಲ್ಲೂ ಪ್ರತೀ ತಿಂಗಳೂ ಸೂಕ್ತ ಪರಿಶೀಲನೆ ನಡೆಸಲಾಗುವುದು. ಬಳಿಕ ಶೈಕ್ಷಣಿಕ ವರ್ಷದ ಆರಂಭದಲ್ಲೂ ಕೊನೆಯಲ್ಲೂ ಸಾಮರ್ಥ್ಯ ಪರೀಕ್ಷೆ ನಡೆಸಿ, ಫಲಿತಾಂಶದ ಆಧಾರದ ಮೇಲೆ ಮುಂದಿನ ಯೋಜನೆ ರೂಪಿಸಲಿದ್ದೇವೆ. ಒಟ್ಟಿನಲ್ಲಿ ಮುಂದಿನ ಇನ್ನೊಂದು ವರ್ಷದಲ್ಲಿ ಶೇಕಡ 100ರಷ್ಟು ಗುರಿ ಸಾಧಿಸಬೇಕೆಂಬುದು ನಮ್ಮ ಮಹತ್ತ್ವಾಕಾಂಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಪೋಷಕರಿಗೂ ನಾವು ಅರಿವು ಮೂಡಿಸಲಿದ್ದೇವೆ.
ಸಿ.ಟಿ.ರವಿ ಅವಾಚ್ಯ ಶಬ್ದ ಕೇಸ್ ಸಿಐಡಿಗೆ: ತನಿಖಾ ತಂಡ ರಚನೆ
ಇದರ ಜೊತೆಗೆ ಮಲ್ಲೇಶ್ವರಂ ಕ್ಷೇತ್ರದಲ್ಲಿರುವ ಎಲ್ಲ ಸರಕಾರಿ ಮತ್ತು ಬಿಬಿಎಂಪಿ ಶಾಲೆಗಳಲ್ಲಿ ಹಂತಹಂತವಾಗಿ ನರ್ಸರಿ ಶಿಕ್ಷಣವನ್ನು ಪರಿಚಯಿಸಲಾಗುವುದು. ಇದು ಮೊದಲಿಗೆ 20 ಕೇಂದ್ರಗಳಲ್ಲಿ ಜಾರಿಗೆ ಬರಲಿದೆ. ಪ್ರತಿಯೊಂದು ಮಗುವಿಗೂ ಶೈಕ್ಷಣಿಕ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಒದಗಿಸುವುದು ನಾವು ತಾಳಿರುವ ಬದ್ಧತೆಯಾಗಿದೆ. ಇದು ಈ ವರ್ಷದ ‘ಸುಶಾಸನ ದಿವಸ’ಕ್ಕೆ ನಮ್ಮ ರಚನಾತ್ಮಕ ಉಪಕ್ರಮವಾಗಿದೆ. ಇದಕ್ಕೆ ಡಿ.25ರಂದು ದಿವಾನರ ಪಾಳ್ಯದ ಚಂದ್ರೋದಯ ಕನ್ನಡ ಮಾಧ್ಯಮ ಶಾಲೆಯ ಆವರಣದಿಂದ ಚಾಲನೆ ನೀಡಲಾಗುವುದು. ಇದು ವಾಜಪೇಯಿಯವರಿಗೂ ನಿಜವಾದ ಗೌರವ; ಈ ಮೂಲಕ ಸುಂದರ ಸಮಾಜ ನಿರ್ಮಿಸುವತ್ತ ಒಂದು ದಾಪುಗಾಲು!