ಶಾಲಾ ಮಕ್ಕಳಿಗೆ ಸದ್ಯಕ್ಕಿಲ್ಲ ಶೂ, ಸಾಕ್ಸ್‌ ಧರಿಸುವ ಭಾಗ್ಯ..!

By Kannadaprabha News  |  First Published Jul 26, 2023, 6:00 AM IST

ಬಿಬಿಎಂಪಿ ಅಡಿಯಲ್ಲಿನ 161 ನರ್ಸರಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿವರ್ಷ ಶೂ, ಸಾಕ್ಸ್‌ ನೀಡಲಾಗುತ್ತಿದೆ. ಸದ್ಯ ಬಿಬಿಎಂಪಿಯ ಶಾಲೆ, ಕಾಲೇಜುಗಳಲ್ಲಿನ 22 ಸಾವಿರ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ ವಿತರಿಸಬೇಕಿದೆ. 


ಗಿರೀಶ್‌ ಗರಗ

ಬೆಂಗಳೂರು(ಜು.26):  ಬಿಬಿಎಂಪಿ ಶಾಲೆ ಮಕ್ಕಳಿಗೆ ಈ ವರ್ಷವೂ ಶೂ ಧರಿಸುವ ಭಾಗ್ಯ ವಿಳಂಬವಾಗಲಿದೆ. ಬಿಬಿಎಂಪಿ ಅಧಿಕಾರಿಗಳು ಶೂ ಖರೀದಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳದ ಕಾರಣ ಶಾಲಾ ಮಕ್ಕಳು ಇನ್ನೂ ಮೂರ್ನಾಲ್ಕು ತಿಂಗಳು ಶೂಗಳಿಲ್ಲದೆ, ಸ್ವೆಟರ್‌ ಧರಿಸದೆ ಶಾಲೆಗೆ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

Tap to resize

Latest Videos

undefined

ಒಂದೆಡೆ ಖಾಸಗಿ ಶಾಲೆಗಳಿಗಿಂತ ಸರ್ಕಾರಿ, ಬಿಬಿಎಂಪಿ ಶಾಲೆಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ವ್ಯವಸ್ಥೆ ನೀಡುತ್ತೇವೆಂದು ಸರ್ಕಾರ ಹೇಳುತ್ತಿದೆ. ಆದರೆ, ಬಿಬಿಎಂಪಿ ಶಾಲೆಯ ಮಕ್ಕಳಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡಲು ಅಧಿಕಾರಿಗಳು ಇನ್ನೂ ಸೂಕ್ತ ವ್ಯವಸ್ಥೆಯನ್ನೇ ಮಾಡಿಕೊಂಡಿಲ್ಲ. ಹೀಗಾಗಿ ಶಾಲೆ ಆರಂಭವಾಗುವ ಸಂದರ್ಭದಲ್ಲೇ ನೀಡಬೇಕಿದ್ದ ಶೂ, ಸಾಕ್ಸ್‌, ಸ್ವೆಟರ್‌ ಸೇರಿದಂತೆ ಇನ್ನಿತರ ವಸ್ತುಗಳು ಶಾಲೆ ಆರಂಭವಾಗಿ ಎರಡು ತಿಂಗಳಾದರೂ ಮಕ್ಕಳಿಗೆ ಕೊಡಲು ಬಿಬಿಎಂಪಿಗೆ ಸಾಧ್ಯವಾಗಿಲ್ಲ. ಅಲ್ಲದೆ, ಇದೀಗ ಶೂ, ಸಾಕ್ಸ್‌ಗಳನ್ನು ನೇರವಾಗಿ ಖರೀದಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಬಿಬಿಎಂಪಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.

ವರ್ಷಕ್ಕೆ 2 ಸಲ ಪಿಯು ಪೂರಕ ಪರೀಕ್ಷೆಗೆ ಉಪನ್ಯಾಸಕರ ಸಂಘ ತೀವ್ರ ಆಕ್ಷೇಪ

ಬಿಬಿಎಂಪಿ ಅಡಿಯಲ್ಲಿನ 161 ನರ್ಸರಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿವರ್ಷ ಶೂ, ಸಾಕ್ಸ್‌ ನೀಡಲಾಗುತ್ತಿದೆ. ಸದ್ಯ ಬಿಬಿಎಂಪಿಯ ಶಾಲೆ, ಕಾಲೇಜುಗಳಲ್ಲಿನ 22 ಸಾವಿರ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ ವಿತರಿಸಬೇಕಿದೆ. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ಟೆಂಡರ್‌ ಪ್ರಕ್ರಿಯೆಯನ್ನೂ ಬಿಬಿಎಂಪಿ ನಡೆಸಿದೆ. ಆದರೆ, ಟೆಂಡರ್‌ನಲ್ಲಿ ಎರಡೂ ಬಾರಿ ಕೇವಲ ಒಂದೊಂದು ಸಂಸ್ಥೆ ಮಾತ್ರ ಪಾಲ್ಗೊಂಡಿದ್ದವು. ಹೀಗಾಗಿ ಟೆಂಡರ್‌ ಪ್ರಕ್ರಿಯೆಯನ್ನು ಬಿಬಿಎಂಪಿ ರದ್ದುಗೊಳಿಸಿದೆ. ಇವೆಲ್ಲ ಪ್ರಕ್ರಿಯೆಗಳು ನಡೆದು ಎರಡು ತಿಂಗಳಾಗಿವೆ.

ಈಗ ಶೂ ಮತ್ತು ಸಾಕ್ಸ್‌ಗಳನ್ನು ಖಾಸಗಿ ಸಂಸ್ಥೆಯಿಂದ ನೇರವಾಗಿ ಖರೀದಿಸಲು ಅನುಮತಿ ನೀಡುವಂತೆ (4ಜಿ ವಿನಾಯಿತಿ) ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರ್ಥಿಕ ಇಲಾಖೆ ಆ ಪ್ರಸ್ತಾವನೆಯನ್ನು ಪರಿಶೀಲಿಸಿ, ಅನುಮತಿ ನೀಡಲು ಕನಿಷ್ಠ ಒಂದೂವರೆಯಿಂದ ಎರಡು ತಿಂಗಳು ಬೇಕಾಗಲಿದೆ. ಅದಾದ ನಂತರ ಬಿಬಿಎಂಪಿ ಶೂ ಮತ್ತು ಸಾಕ್ಸ್‌ ಪೂರೈಸುವ ಸಂಸ್ಥೆಯನ್ನು ಗುರುತಿಸಿ, ಕಾರ್ಯಾದೇಶ ನೀಡಿ ಖರೀದಿಸುವುದಕ್ಕೆ ಮತ್ತೊಂದು ತಿಂಗಳು ಬೇಕಾಗಲಿದೆ. ಇದೆಲ್ಲವನ್ನು ಗಮನಿಸಿದರೆ ಮುಂದಿನ ಮೂರ್ನಾಲ್ಕು ತಿಂಗಳವರೆಗೆ ಬಿಬಿಎಂಪಿ ಶಾಲೆ-ಕಾಲೇಜು ಮಕ್ಕಳಿಗೆ ಶೂ ಮತ್ತು ಸಾಕ್ಸ್‌ ಸಿಗುವುದು ಅನುಮಾನವಾಗಿದೆ.

ಮಂಗಳೂರು: ಪ್ರವಾಹದಲ್ಲೇ ಸಾಗಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು!

ಸ್ವೆಟರ್‌ ಖರೀದಿ ಹಣ ವಿಳಂಬ

ಬಿಬಿಎಂಪಿ ಶಾಲಾ ಮಕ್ಕಳಿಗೆ ಪ್ರತಿ ವರ್ಷ ಸ್ವೆಟರ್‌ ನೀಡಲಾಗುತ್ತಿತ್ತು. ಆದರೆ, ಕಳೆದ ವರ್ಷದಿಂದ ಸ್ವೆಟರ್‌ ಖರೀದಿ ವಿಳಂಬವಾಗುವ ಕಾರಣ ವಿದ್ಯಾರ್ಥಿಗಳ ಅಥವಾ ಅವರ ಪೋಷಕರ ಬ್ಯಾಂಕ್‌ ಖಾತೆಗೆ ಸ್ವೆಟರ್‌ ಖರೀದಿಗಾಗಿ ಹಣ ಪಾವತಿಸಲಾಗುತ್ತಿದೆ. ಈ ವರ್ಷವೂ ಅದೇ ಪದ್ಧತಿ ಅನುಸರಿಸಲು ಬಿಬಿಎಂಪಿ ಶಿಕ್ಷಣ ವಿಭಾಗ ನಿರ್ಧರಿಸಿದೆ. ಅದಕ್ಕಾಗಿ ಬಿಬಿಎಂಪಿ ಶಾಲೆ ಮತ್ತು ಕಾಲೇಜಿಗೆ ಸೇರ್ಪಡೆ ಆಗುತ್ತಿರುವ ವಿದ್ಯಾರ್ಥಿಗಳಿಂದ ಅವರ ಅಥವಾ ಪೋಷಕರ ಬ್ಯಾಂಕ್‌ ಖಾತೆ ವಿವರ ಪಡೆಯಲಾಗುತ್ತಿದೆ. ಈ ಪ್ರಕ್ರಿಯೆ ಇನ್ನೂ ಒಂದೂವರೆ ತಿಂಗಳು ಕಾಲ ನಡೆಯಲಿದ್ದು, ಅಲ್ಲಿಯವರೆಗೆ ಶಾಲಾ ಮಕ್ಕಳಿಗೆ ಸ್ವೆಟರ್‌ ಖರೀದಿಗೆ ಹಣ ಸಿಗುವುದಿಲ್ಲ.

ಬಿಬಿಎಂಪಿ ಶಾಲೆ-ಕಾಲೇಜುಗಳ ವಿವರ

ನರ್ಸರಿ: 4,695 ವಿದ್ಯಾರ್ಥಿಗಳು
ಪ್ರಾಥಮಿಕ ಶಾಲೆ: 3,744
ಪ್ರೌಢಶಾಲೆ: 8,110
ಪಿಯು ಕಾಲೇಜು: 5375
ಪದವಿ ಕಾಲೇಜು: 1,525
ಒಟ್ಟು 23,450
ಸ್ವೆಟರ್‌ ಖರೀದಿಗೆ ನೀಡಲಾಗುವ ಹಣ
ನರ್ಸರಿ ಮಕ್ಕಳಿಗೆ: .650
ಪ್ರಾಥಮಿಕ ಶಾಲಾ ಮಕ್ಕಳಿಗೆ: .800
ಪ್ರೌಢಶಾಲಾ ಮಕ್ಕಳಿಗೆ: .1,050
ಪಿಯು ವಿದ್ಯಾರ್ಥಿಗಳಿಗೆ: .1,150
ಪದವಿ ವಿದ್ಯಾರ್ಥಿಗಳಿಗೆ: .1,200

ಬಿಬಿಎಂಪಿ ಶಾಲಾ ಮಕ್ಕಳಿಗೆ ಶೂ-ಸಾಕ್ಸ್‌ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಶೂ-ಸಾಕ್ಸ್‌ ಖರೀದಿಗೆ 4ಜಿ ವಿನಾಯಿತಿ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಅದರ ಜತೆಗೆ ಸ್ವೆಟರ್‌ ಖರೀದಿಗೆ ವಿದ್ಯಾರ್ಥಿಗಳ ಹಾಗೂ ಪೋಷಕರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಪಾವತಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಸಹಾಯಕ ಆಯುಕ್ತ (ಶಿಕ್ಷಣ) ಡಾ. ಎನ್‌.ಸಿ. ವೆಂಕಟರಾಜು ತಿಳಿಸಿದ್ದಾರೆ. 

click me!