ಹಾಲಿನ ಪುಡಿ ಕೊರತೆಯಿಂದಾಗಿ ಜಿಲ್ಲೆಯ ಬಹುತೇಕ ಅಂಗನವಾಡಿಗಳಲ್ಲಿ ಮಕ್ಕಳಿಗೆ ಕಳೆದ ಒಂದು ತಿಂಗಳಿನಿಂದ ಹಾಲು ಪೂರೈಕೆಯಾಗುತ್ತಿಲ್ಲ. ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೊಪ್ಪಳ ಡಿ.(7) : ಹಾಲಿನ ಪುಡಿ ಕೊರತೆಯಿಂದಾಗಿ ಜಿಲ್ಲೆಯ ಬಹುತೇಕ ಅಂಗನವಾಡಿಗಳಲ್ಲಿ ಮಕ್ಕಳಿಗೆ ಕಳೆದ ಒಂದು ತಿಂಗಳಿನಿಂದ ಹಾಲು ಪೂರೈಕೆಯಾಗುತ್ತಿಲ್ಲ. ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಾಲು ಒಕ್ಕೂಟದವರು ಹಾಲಿನ ಪುಡಿ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಜಿಲ್ಲೆಯ ಬಹುತೇಕ ಅಂಗನವಾಡಿಗಳಲ್ಲಿ ಕಳೆದೊಂದು ತಿಂಗಳಿಂದ ಹಾಲು ವಿತರಿಸಿಲ್ಲ. ಇದಕ್ಕೆ ಪರ್ಯಾಯವಾಗಿ ಬೇರೆ ಏನಾದರೂ ಕೊಡಬೇಕಿತ್ತು ಎನ್ನುವುದು ಹೆಸರು ಹೇಳದ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ. ಆದರೆ, ಇದ್ಯಾವುದಕ್ಕೂ ಮೇಲಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುತ್ತಿದ್ದಾರೆ.
ಆದರೆ, ಇಲಾಖೆಯ ಅಧಿಕಾರಿಗಳು ಹೇಳುವುದೇ ಬೇರೆ. ಹಾಲಿನ ಪುಡಿ ಸಮಸ್ಯೆಯಾಗಿರುವುದು ಸತ್ಯ. ಆದರೆ ಈಗಾಗಲೇ ಇರುವ ದಾಸ್ತಾನಿನಿಂದ ಹಲವೆಡೆ ಪೂರೈಕೆ ಮಾಡಲಾಗುತ್ತದೆ. ಕೇವಲ ಕೊಪ್ಪಳ, ಗಂಗಾವತಿ ಮತ್ತು ಕನಕಗಿರಿ ತಾಲೂಕಿನಲ್ಲಿ ಮಾತ್ರ ಸಮಸ್ಯೆಯಾಗಿದೆ. ಉಳಿದ ಕಡೆ ಸಮಸ್ಯೆ ಉಂಟಾಗಿಲ್ಲ ಎನ್ನುತ್ತಾರೆ.
undefined
ಈ ಬಗ್ಗೆ ಹಾಲು ಒಕ್ಕೂಟದವರಿಗೆ ಅನೇಕ ಬಾರಿ ಸಂಪರ್ಕಿಸಿ ಹಾಲಿನ ಪುಡಿ ಪೂರೈಕೆ ಮಾಡುವಂತೆ ಕೋರಲಾಗಿದೆಯಾದರೂ ಅವರು ಪೂರೈಸುತ್ತಿಲ್ಲ. ಕೊರತೆ ಇದೆ ಎನ್ನುವ ಕಾರಣಕ್ಕಾಗಿ ವಿಳಂಬವಾಗುತ್ತಿದೆ ಎನ್ನುತ್ತಿದ್ದಾರೆ. ಶೀಘ್ರದಲ್ಲಿಯೇ ಪೂರೈಕೆ ಮಾಡುವುದಾಗಿ ಹೇಳುತ್ತಿದ್ದಾರೆ ಎನ್ನುತ್ತಾರೆ.
ಮಕ್ಕಳು ಮತ್ತು ಗರ್ಭಿಣಿ ಬಾಣಂತಿಯರಿಗೆ ಪೂರೈಕೆಯಾಗುವ ಆಹಾರ ಮಾರಿದ ಅಧಿಕಾರಿಗಳು!
ಹಾಲಿನ ಪುಡಿ ಪೂರೈಕೆ ಸಮಸ್ಯೆಯಿಂದಾಗಿ ಮೂರು ತಾಲೂಕಿನಲ್ಲಿ ಸಮಸ್ಯೆಯಾಗಿದ್ದು, ಉಳಿದ ತಾಲೂಕಿನಲ್ಲಿ ಇರುವ ದಾಸ್ತಾನಿನಲ್ಲಿ ಕೆಲವೆಡೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಹಾಲು ಒಕ್ಕೂಟದವರಿಗೆ ತಕ್ಷಣ ಹಾಲಿನ ಪುಡಿ ಪೂರೈಕೆ ಮಾಡುವಂತೆ ಕೋರಿದ್ದೇವೆ.
ಪದ್ಮಜ, ಡಿಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೊಪ್ಪಳ