ಕಾಲೇಜು ಪ್ರಾರಂಭವಾದರೂ ಪಾಠ ಮಾಡೋಕೆ ಉಪನ್ಯಾಸಕರೇ ಇಲ್ಲ..!

By Kannadaprabha News  |  First Published Jan 16, 2021, 9:24 AM IST

ಸರ್ಕಾರಿ ಕಾಲೇಜುಗಳು ನಡೆಯುತ್ತಿರುವುದೇ ಅತಿಥಿ ಉಪನ್ಯಾಸಕರಿಂದ| ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಆದೇಶವನ್ನೇ ಮಾಡಿಲ್ಲ| ವಿಧಿಯಿಲ್ಲದೆ ಅನೇಕ ಕಾಲೇಜುಗಳಿಗೆ ಬಂದು, ವಾಪಸ್‌ ಹೋದ ವಿದ್ಯಾರ್ಥಿಗಳು| 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಜ.16): ಸರ್ಕಾರ ಪದವಿ ಕಾಲೇಜುಗಳನ್ನೇನೋ ಶುಕ್ರವಾರ (ಜ.15ರಂದು) ಆರಂಭಿಸುವಂತೆ ಆದೇಶ ಹೊರಡಿಸಿದೆ. ಕಾಲೇಜು ಪ್ರಾರಂಭವಾದರೆ ಅಲ್ಲಿ ಪಾಠ ಮಾಡಲು ಉಪನ್ಯಾಸಕರೇ ಇಲ್ಲ!

Tap to resize

Latest Videos

ಹೌದು, ರಾಜ್ಯಾದ್ಯಂತ 430 ಸರ್ಕಾರಿ ಪದವಿ ಕಾಲೇಜು, ಅನುದಾನ ರಹಿತ ಹಾಗೂ ಅನುದಾನಿತ ಕಾಲೇಜುಗಳು ಸೇರಿ ಸುಮಾರು 600ಕ್ಕೂ ಹೆಚ್ಚು ಪದವಿ ಕಾಲೇಜುಗಳಿವೆ. ಇಲ್ಲಿ ಖಾಯಂ ಉಪನ್ಯಾಸಕರ ಸಂಖ್ಯೆ ಶೇ. 20ರಷ್ಟೂಇಲ್ಲ. ಈಗಾಗಲೇ ಪ್ರಾರಂಭವಾಗಿರುವ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳನ್ನು ಬೋಧನೆ ಮಾಡಲು ಆಗುತ್ತಿಲ್ಲ. ಅಂಥದ್ದರಲ್ಲಿ ಈಗ ಮತ್ತೆ ಸರ್ಕಾರ ಪದವಿ ಕಾಲೇಜಿನ ಎಲ್ಲ ತರಗತಿಗಳನ್ನು ಪ್ರಾರಂಭಿಸಿ ಆದೇಶ ಹೊರಡಿಸಿದೆ. ಆದರೆ, ಪಾಠ ಮಾಡಲು ಉಪನ್ಯಾಸಕರು ಇಲ್ಲದಿರುವುದು ಸರ್ಕಾರದ ಆದೇಶ ಅಪಹಾಸ್ಯಕ್ಕೀಡಾಗಿದೆ.

ಸರ್ಕಾರಿ ಕಾಲೇಜಿನಲ್ಲಿಯೇ ದೊಡ್ಡ ಗೋಳು

ರಾಜ್ಯದ 412 ಸರ್ಕಾರಿ ಪದವಿ ಕಾಲೇಜಿನಲ್ಲಿ ಸುಮಾರು 4500 ಕಾಯಂ ಉಪನ್ಯಾಸಕರಿದ್ದಾರೆ. ಇನ್ನು ಅತಿಥಿ ಉಪನ್ಯಾಸಕರ ಸಂಖ್ಯೆ 14400 ಇದೆ. ಅಂದರೆ ಸರ್ಕಾರಿ ಪದವಿ ಕಾಲೇಜು ನಡೆಯುತ್ತಿರುವುದೇ ಅತಿಥಿ ಉಪನ್ಯಾಸಕರಿಂದ. ಕೋವಿಡ್‌ ಸಮಯದಲ್ಲಿ ಅತಿಥಿ ಉಪನ್ಯಾಸಕರನ್ನು ಮತ್ತೆ ನೇಮಕ ಮಾಡಿಕೊಳ್ಳಲಿಲ್ಲ. ಕಳೆದ ವರ್ಷದಲ್ಲಿ ಪಾಠ ಮಾಡಿದವರನ್ನು ಮುಂದುವರಿಸಿ ಆದೇಶವನ್ನೂ ಹೊರಡಿಸಿಲ್ಲ. ರಾಜ್ಯದ 412 ಸರ್ಕಾರಿ ಪದವಿ ಕಾಲೇಜಿನಲ್ಲಿರುವ ಸುಮಾರು 3.5 ಲಕ್ಷ ವಿದ್ಯಾರ್ಥಿಗಳಿಗೆ ಕೇವಲ 6500 ಶಿಕ್ಷಕರಿಂದ ಪಾಠ ಮಾಡುವುದು ಅಸಾಧ್ಯವಾದ ಮಾತು. ಹೀಗಾಗಿ, ಸರ್ಕಾರ ಸರ್ಕಾರಿ ಪದವಿ ಕಾಲೇಜು ಪ್ರಾರಂಭ ಮಾಡಿ ಆದೇಶ ಹೊರಡಿಸಿದರೂ ಬಹುತೇಕ ಕಾಲೇಜುಗಳಲ್ಲಿ ಪದವಿ ತರಗತಿಗಳು ಪ್ರಾರಂಭವಾಗಿಯೇ ಇಲ್ಲ.

ಶಾಲೆಗೆ ಹೋಗಲು ಇಲ್ಲಿ ನಿತ್ಯ 12 ಕಿಮೀ ‘ಪಾದಯಾತ್ರೆ’ ಅನಿವಾರ್ಯ

ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿಯೇ ಇರುವ ಸರ್ಕಾರಿ ಪದವಿ ಕಾಲೇಜಿನಲ್ಲಿ 2800 ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ ಕೇವಲ 18. ಅದರಲ್ಲಿಯೂ ಕರ್ತವ್ಯದಲ್ಲಿರುವ ಕಾಯಂ ಉಪನ್ಯಾಸಕರ ಸಂಖ್ಯೆ 10 ಮಾತ್ರ. ಇವರಷ್ಟೇ 2800 ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಅಸಾಧ್ಯ. ಇಲ್ಲಿ ಸುಮಾರು 80 ಅತಿಥಿ ಉಪನ್ಯಾಸಕರಿದ್ದು, ಇವರೀಗ ಕರ್ತವ್ಯದಲ್ಲಿ ಇಲ್ಲ. ಅವರು ಕರ್ತವ್ಯ ನಿಭಾಯಿಸುವುದಕ್ಕೆ ಸರ್ಕಾರ ಇನ್ನೂ ಆದೇಶ ನೀಡಿಲ್ಲ ಅಥವಾ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಆದೇಶ ಹೊರಡಿಸಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕೇವಲ 10 ಕಾಯಂ ಉಪನ್ಯಾಸಕರಿಂದ ಅಷ್ಟುತರಗತಿಗಳನ್ನು ಪ್ರಾರಂಭಿಸುವುದಾದರೂ ಹೇಗೆ ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಕಾಯಂ ಉಪನ್ಯಾಸಕರು.

ಈ ಕುರಿತು ವಿವಿ ಮತ್ತು ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಿಗೂ ಮಾಹಿತಿ ನೀಡಲಾ​ಗಿದೆ. ಇನ್ನೆರಡು ದಿನ ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ ಎನ್ನುತ್ತಾರೆ. ಇನ್ನು ಅನುದಾನಿತ ಮತ್ತು ಅನುದಾನ ರಹಿತ ಕಾಲೇಜುಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಅಲ್ಲಿಯೂ ಕೋವಿಡ್‌ ಸಂಕಷ್ಟದಿಂದಾಗಿ ಆರ್ಥಿಕ ಹೊರೆ ಕಡಿಮೆ ಮಾಡಲು ಅತಿಥಿ ಉಪನ್ಯಾಸನಕರನ್ನು ಬಿಡುಗಡೆ ಮಾಡಿದ್ದಾರೆ. ಈಗ ಪುನಃ ನೇಮಕ ಮಾಡಿಕೊಂಡಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಏಕಾಏಕೀ ಸರ್ಕಾರಿ ಪದವಿ ಕಾಲೇಜಿನ ಅಷ್ಟೂ ತರಗತಿಗಳನ್ನು ಪ್ರಾರಂಭಿಸಿದ್ದರಿಂದ ಅಲ್ಲಿ ಪಾಠ ಮಾಡುವವರೇ ಇಲ್ಲದಂತಾಗಿದೆ. ಇದರಿಂದ ವಿಧಿಯಿಲ್ಲದೆ ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಂದು, ವಾಪಸ್‌ ಹೋಗಿದ್ದಾರೆ. ಉಪನ್ಯಾಸಕರೇ ಇಲ್ಲದೆ ಕಾಲೇಜು ಪ್ರಾರಂಭಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದ ಸರ್ಕಾರ ಕೇವಲ ಪದವಿ ಕಾಲೇಜುಗಳನ್ನು ಪ್ರಾರಂಭಿಸಿದೆ. ಆದರೆ, ಅಲ್ಲಿರುವ ಶೇ. 20ರಷ್ಟುಕಾಯಂ ಉಪನ್ಯಾಸಕರು ಅಷ್ಟುತರಗತಿಗಳಿಗೂ ಪಾಠ ಮಾಡಲು ಹೇಗೆ ಸಾಧ್ಯ? ಸರ್ಕಾರ ತಕ್ಷಣ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕು ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ. ವೀರಣ್ಣ ಸಜ್ಜನ್‌ ತಿಳಿಸಿದ್ದಾರೆ. 

ಸರ್ಕಾರ ಕಾಲೇಜು ಪ್ರಾರಂಭಿಸಿ ಆದೇಶ ಹೊರಡಿಸಿದೆ. ನಮ್ಮಲ್ಲಿ ಕೇವಲ 10 ಕಾಯಂ ಉಪನ್ಯಾಸಕರಿದ್ದು, 80 ಅತಿಥಿ ಉಪನ್ಯಾಸಕರಿದ್ದಾರೆ. ಅತಿಥಿ ಉಪನ್ಯಾಸಕರನ್ನು ಇನ್ನೂ ನೇಮಿಸಿಕೊಂಡಿಲ್ಲವಾದ್ದರಿಂದ ತರಗತಿಗಳನ್ನು ನಡೆಸಲು ಕಷ್ಟವಾಗುತ್ತದೆ. ಈ ಮಾಹಿತಿಯನ್ನು ಈಗಾಗಲೇ ಸಲ್ಲಿಸಿದ್ದೇವೆ ಎಂದು ಕೊಪ್ಪಳದ ಸರ್ಕಾರಿ ಪದವಿ ಕಾಲೇಜಿನ  ಪ್ರಾಚಾರ್ಯ ಮಾರುತೇಶ ಹೇಳಿದ್ದಾರೆ. 
 

click me!