ಶಾಲೆಗೆ ಹೋಗಲು ಇಲ್ಲಿ ನಿತ್ಯ 12 ಕಿಮೀ ‘ಪಾದಯಾತ್ರೆ’ ಅನಿವಾರ್ಯ

By Kannadaprabha News  |  First Published Jan 16, 2021, 9:12 AM IST

ಕೊಪ್ಪಳ ತಾಲೂಕಿನ ಬಹದ್ದೂರುಬಂಡಿಯಿಂದ ಹ್ಯಾಟಿ ಗ್ರಾಮಕ್ಕೆ ನಿತ್ಯ ಕಾಲ್ನ​ಡಿ​ಗೆ| ಶಾಲಾ ಅವಧಿಗೆ ಬಸ್ಸಿಲ್ಲ, ನಿತ್ಯ ನಡೆಯುತ್ತಿರುವ 60 ವಿದ್ಯಾರ್ಥಿಗಳು| 


ಸೋಮರಡ್ಡಿ ಅಳವಂಡಿ

ಕೊಪ್ಪಳ(ಜ.16): ಇಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಪ್ರತಿದಿನ ಕನಿಷ್ಟ 12 ಕಿ.ಮೀ. ನಡೆಯಲೇ ಬೇಕು. ಪ್ರತಿ ದಿನ 6 ಕಿ.ಮೀ. ನಡೆದು ಶಾಲೆ ತಲುಪಬೇಕು, ಮತ್ತೆ ಸಂಜೆ 6 ಕಿ.ಮೀ. ಕ್ರಮಿಸಿ ಊರು ಸೇರಬೇಕು. ಇಷ್ಟೊಂದು ಕಷ್ಟಪಟ್ಟು, ತ್ರಾಸ್‌ ಮಾಡಿಕೊಂಡ ಬಳಿಕ ಓದುವುದು ಹೇಗೆ ಎಂಬುದು ಮಕ್ಕಳ ಪಾಲಕರ ಪ್ರಶ್ನೆ.

Latest Videos

undefined

ಇದು ಕೊಪ್ಪಳ ತಾಲೂಕಿನ ಬಹದ್ದೂರುಬಂಡಿ ಗ್ರಾಮದ ಮಕ್ಕಳ ಓದಿನ ಕಥೆ. ಇಲ್ಲಿಂದ ಸುಮಾರು 60 ವಿದ್ಯಾರ್ಥಿಗಳು ಹ್ಯಾಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಹೋಗುತ್ತಾರೆ. ಅದರಲ್ಲೂ 10 ನೇ ತರಗತಿಯ ವಿದ್ಯಾರ್ಥಿಗಳೇ ಅಧಿಕ. ವಿದ್ಯಾರ್ಥಿನಿಯರೂ ಅಧಿಕ ಸಂಖ್ಯೆಯಲ್ಲಿದ್ದಾರೆ.

ಈ ಗ್ರಾಮದ ಮಕ್ಕಳಿಗಿರುವ ಶಾಶ್ವತ ಸಮಸ್ಯೆಯಲ್ಲ. ಲಾಕ್‌ಡೌನ್‌ ವರೆಗೂ ಶಾಲೆಗೆ ಹೋಗುವ ಸಮಯಕ್ಕೆ ಸರಿಯಾಗಿ ಬಸ್‌ ಸೌಲಭ್ಯ ಇತ್ತು. ಮಕ್ಕಳು ಸಹ ನೆಮ್ಮದಿಯಿಂದಲೇ ಹೋಗಿ ಬರುತ್ತಿದ್ದರು. ಇದೀಗ ಶಾಲೆ ಸಮಯಕ್ಕೆ ಬಸ್‌ ಇಲ್ಲ. ಗ್ರಾಮಕ್ಕೆ ಬಸ್‌ ಬಿಡುತ್ತಿದ್ದರೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿಲ್ಲ. ಆದ್ದರಿಂದ ನಡಿಗೆ ಅನಿವಾರ್ಯ. ಇದರಿಂದ ಕೆಲ ವಿದ್ಯಾರ್ಥಿನಿಯರು ಕಲಿಕೆಗೆ ಶರಣು ಹೊಡೆದಿದ್ದೂ ಇದೆ. ಗ್ರಾಪಂ ಸದಸ್ಯರು ಸೇರಿದಂತೆ ಹಲವರು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

ತರಗತಿಗಳು ಸಂಪೂರ್ಣ ಕಾರ್ಯಾರಂಭ

ಇಲ್ಲಿಗೆ ಬಸ್‌ ಸಂಖ್ಯೆ ಹೆಚ್ಚಿಸಬೇಕೆಂದೇನೂ ಇಲ್ಲ. ಶಾಲೆ ಅವಧಿಯಲ್ಲಿ ಬಸ್‌ ಓಡಿಸಿದರೆ ಸಾಕು, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಬೆಳಗ್ಗೆ 9.30 ಕ್ಕೆ ಬಹದ್ದೂರುಬಂಡಿಯಿಂದ ಹ್ಯಾಟಿಗೆ, ಸಂಜೆ 5 ಗಂಟೆಗೆ ಹ್ಯಾಟಿಯಿಂದ ಬಹದ್ದೂರು ಬಂಡಿಗೆ ಬಸ್‌ ಬಿಟ್ಟರೆ ಸಾಕು ಎನ್ನುತ್ತಾರೆ ವಿದ್ಯಾರ್ಥಿಗಳು ಮತ್ತು ಪಾಲಕರು.

ಅನೇಕ ಕಡೆ ಸಮಸ್ಯೆ:

ಲಾಕ್‌ಡೌನ್‌ ಆದ ವೇಳೆಯಲ್ಲಿ ಬಂದ್‌ ಆಗಿದ್ದ ಬಸ್‌ಗಳನ್ನು ಈಗ ಪುನಃ ಪ್ರಾರಂಭಿಸಲಾಗಿದೆ. ಅನೇಕ ರೂಟ್‌ಗಳಲ್ಲಿ ಅಷ್ಟುಬಸ್‌ ಓಡಾಡಿಸುತ್ತಿಲ್ಲ. ಕೆಲವ​ನ್ನು ಮಾತ್ರ ಓಡಾಡಿಸಲಾಗುತ್ತದೆ. ಆದರೆ, ಸರ್ಕಾರ ಶಾಲೆಗಳನ್ನು ತೆರೆದ ಮೇಲೆ ಶಾಲಾ ಅವಧಿಗೆ ಇದ್ದ ಬಸ್‌ಗಳನ್ನು ತಪ್ಪದೆ ಪ್ರಾರಂಭಿಸಬೇಕಾಗಿತ್ತು. ಆದರೆ, ಪ್ರಾರಂಭಿಸಿಲ್ಲ. ಹೀಗಾಗಿಯೇ ಅನೇಕ ಗ್ರಾಮದ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದ ಜಿಲ್ಲಾದ್ಯಂತ ಅನೇಕ ಕಡೆ ಸಮಸ್ಯೆಯಾಗಿದೆ.

 

ಇತ್ತೀಚಿಗೆ 10 ಕಿ.ಮೀ. ವಿದ್ಯಾರ್ಥಿಗಳು ನಡೆದುಕೊಂಡು ಶಾಲೆಗೆ ಹೋಗುತ್ತಿರುವ ಕುರಿತು ವರದಿ ಬರ್ತುತಿದ್ದಂತೆ ಈಶಾನ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸ್ಪಂದಿಸಿ ತಕ್ಷಣ ಬಸ್‌ ಸೌಲಭ್ಯ ಕಲ್ಪಿಸಿ ವಿದ್ಯಾರ್ಥಿಗಳಿಗೆ ನೆರವಾಗಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಈ ಗ್ರಾಮದ ಸಮಸ್ಯೆಗೂ ಸ್ಪಂದಿಸಿ ಅವರ ವಿದ್ಯಾರ್ಜನೆಗೆ ಅನುಕೂಲ ಕಲ್ಪಿಸಬೇಕಿದೆ.

ನಮ್ಮ ಪಾಡು ಯಾರಿಗೆ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಶಾಲೆಗೆ ಹೋಗಬೇಕು ಎಂದರೆ ನಿತ್ಯವೂ 12 ಕಿಮೀ ನಡೆಯಲೇಬೇಕು. ಇಲ್ಲದಿದ್ದರೆ ನಾವು ಶಾಲೆಯಿಂದ ವಿಮುಖರಾಗಬೇಕು. ಈ ಸಮಸ್ಯೆಗೆ ಯಾರೂ ಸ್ಪಂದಿಸುತ್ತಲೇ ಇಲ್ಲ ಎಂದು ವಿದ್ಯಾರ್ಥಿನಿ ಶ್ವೇತಾ ತಿಳಿಸಿದ್ದಾರೆ. 

ಶಾಲಾ ವಿದ್ಯಾರ್ಥಿಗಳು ನಡೆದು ಹೋಗುತ್ತಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ನಿತ್ಯವೂ ಅವರು ಶಾಲೆಗೆ ಹೋಗಬೇಕು ಎಂದರೆ 12 ಕಿಮೀ ನಡೆಯಲೇಬೇಕು. ಅದರಲ್ಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಈ ರೀತಿ ಸುತ್ತಾಡಿ, ಓದುವುದು ತುಂಬಾನೆ ಕಷ್ಟ ಎಂದು ಬಹದ್ದೂರುಬಂಡಿ ಕ್ಲಸ್ಟರ್‌ ಹನುಮಂತಪ್ಪ ಕುರಿ ತಿಳಿಸಿದ್ದಾರೆ. 
 

click me!