ಕೇಂದ್ರ ಸರ್ಕಾರದ ಎನ್‌ಐಆರ್‌ಎಫ್ ರ‍್ಯಾಂಕ್ ಪ್ರಕಟಿಸಿದ್ದು ಬೆಂಗಳೂರಿನ ಐಐಎಸ್‌ಸಿ ದೇಶದ ನಂ.1 ವಿವಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಮದ್ರಾಸ್ ಐಐಟಿ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎನಿಸಿಕೊಂಡಿದೆ
ನವದೆಹಲಿ (ಜು.16): ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಪ್ರತಿ ವರ್ಷ ವಿವಿಧ ವಿಭಾಗಗಳಲ್ಲಿ ದೇಶದ ಶಿಕ್ಷಣ ಸಂಸ್ಥೆಗಳಿಗೆ ನೀಡುವ ರ‍್ಯಾಂಕ್ ಶುಕ್ರವಾರ ಪ್ರಕಟವಾಗಿದ್ದು, ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಪಡೆದಿದೆ. ಒಟ್ಟಾರೆ ವಿಭಾಗದಲ್ಲಿ ಮದ್ರಾಸ್ ಐಐಟಿ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಅಲ್ಲದೆ, ದೇಶದ ಅತ್ಯುತ್ತಮ ಕಾನೂನು ಕಾಲೇಜುಗಳ ಪಟ್ಟಿಯಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ನಂ.1 ಸ್ಥಾನ ಪಡೆದಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕ್ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್) ರಾರಯಂಕ್‌ಗಳನ್ನು ಪ್ರಕಟಿಸಿದರು. ಐಐಎಸ್‌ಸಿ ದೇಶದ ನಂ.1 ವಿಶ್ವವಿದ್ಯಾಲಯ ಎಂಬ ರಾರಯಂಕ್ ಜೊತೆಗೆ ಒಟ್ಟಾರೆ ವಿಭಾಗದಲ್ಲಿ ದೇಶದ 2ನೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಹಾಗೂ ದೇಶದ ನಂ.1 ಸಂಶೋಧನಾ ಸಂಸ್ಥೆಯ ಸ್ಥಾನ ಕೂಡ ಗಳಿಸಿದೆ.
ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು: ಮದ್ರಾಸ್ ಐಐಟಿ ನಂ.1, ಐಐಎಸ್‌ಸಿ ಬೆಂಗಳೂರು ನಂ.2, ಐಐಟಿ ಬಾಂಬೆ ನಂ.3. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯು ಈ ವಿಭಾಗದಲ್ಲಿ 17ನೇ ರಾರಯಂಕ್ ಗಳಿಸಿದೆ.
ಅತ್ಯುತ್ಯಮ ವಿಶ್ವವಿದ್ಯಾಲಯ: ಐಐಎಸ್‌ಸಿ ಬೆಂಗಳೂರು ನಂ.1, ಜೆಎನ್‌ಯು ದೆಹಲಿ ನಂ.2, ಜಾಮಿಯಾ ಮಿಲಿಯಾ ಇಸ್ಲಾಮಿಯಾ ದೆಹಲಿ ನಂ.3.
ಅತ್ಯುತ್ತಮ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆ: ಐಐಟಿ ಮದ್ರಾಸ್ ನಂ.1, ಐಐಟಿ ದೆಹಲಿ ನಂ.2, ಐಐಟಿ ಬಾಂಬೆ ನಂ.3.
ಅತ್ಯುತ್ತಮ ಸಂಶೋಧನಾ ಸಂಸ್ಥೆ: ಐಐಎಸ್‌ಸಿ ಬೆಂಗಳೂರು ನಂ.1, ಐಐಟಿ ಮದ್ರಾಸ್ ನಂ.2, ಐಐಟಿ ದೆಹಲಿ ನಂ.3.
ಅತ್ಯುತ್ತಮ ಕಾನೂನು ಕಾಲೇಜು: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಬೆಂಗಳೂರು ನಂ.1, ನ್ಯಾಷನಲ್ ಲಾ ಯುನಿವರ್ಸಿಟಿ ದೆಹಲಿ ನಂ.2, ಸಿಂಬಯೋಸಿಸ್ ಲಾ ಸ್ಕೂಲ್ ಪುಣೆ ನಂ.3.
NIRF Rankings 2022: ಶಿವಮೊಗ್ಗದ ಕುವೆಂಪು ವಿವಿಗೆ 86ನೇ ರ‍್ಯಾಂಕ್
ಅತ್ಯುತ್ತಮ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆ: ಐಐಎಂ ಅಹಮದಾಬಾದ್ ನಂ.1, ಐಐಎಂ ಬೆಂಗಳೂರು ನಂ.2, ಐಐಎಂ ಕಲ್ಕತ್ತಾ ನಂ.3.
ಅತ್ಯುತ್ತಮ ದಂತವೈದ್ಯ ಕಾಲೇಜು: ಸವಿತಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಂಡ್ ಟೆಕ್ನಿಕಲ್ ಸೈನ್ಸಸ್ ಚೆನ್ನೈ ನಂ.1, ಮಣಿಪಾಲ್ ಡೆಂಟಲ್ ಸೈನ್ಸಸ್ ಉಡುಪಿ ನಂ.2, ಡಾ.ಡಿ.ವೈ.ಪಾಟೀಲ್ ವಿದ್ಯಾಪೀಠ ಪುಣೆ ನಂ.3.
ಅತ್ಯುತ್ತಮ ಫಾರ್ಮಸಿ ಶಿಕ್ಷಣ ಸಂಸ್ಥೆ: ಜಾಮಿಯಾ ಹಮ್‌ದದ್‌ರ್ ದೆಹಲಿ ನಂ.1, ಎನ್‌ಐಪಿಇಆರ್ ಮೊಹಾಲಿ ನಂ.2, ಪಂಜಾಬ್ ವಿಶ್ವವಿದ್ಯಾಲಯ ನಂ.3.
ಅತ್ಯುತ್ತಮ ಕಾಲೇಜು: ಮಿರಾಂಡಾ ಹೌಸ್ ದೆಹಲಿ ನಂ.1, ಹಿಂದು ಕಾಲೇಜ್ ದೆಹಲಿ ನಂ.2, ಪ್ರೆಸಿಡೆನ್ಸಿ ಕಾಲೇಜ್ ಚೆನ್ನೈ ನಂ.3.
ಅತ್ಯುತ್ತಮ ಮೆಡಿಕಲ್ ಕಾಲೇಜು: ಏಮ್ಸ್ ದೆಹಲಿ ನಂ.1, ಪಿಜಿಐಎಂಇಆರ್ ಚಂಡೀಗಢ ನಂ.2, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ವೆಲ್ಲೂರ್ ನಂ.3.
ಅತ್ಯುತ್ತಮ ಆರ್ಕಿಟೆಕ್ಚರ್ ಕಾಲೇಜು: ಐಐಟಿ ರೂರ್ಕಿ ನಂ.1, ಎನ್‌ಐಟಿ ಕ್ಯಾಲಿಕಟ್ ನಂ.2, ಐಐಟಿ ಖರಗ್‌ಪುರ ನಂ.3.
ಕುವೆಂಪು ವಿವಿಗೆ 86ನೇ ರ‍್ಯಾಂಕ್: ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯವು 86ನೇ ರ‍್ಯಾಂಕ್ ಗಳಿಸುವುದರೊಂದಿಗೆ ಸತತ ಐದನೇ ವರ್ಷ ದೇಶದ ಟಾಪ್ 100ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ರಾಜ್ಯಗಳ ಸಾಂಪ್ರದಾಯಿಕ ವಿ.ವಿ.ಗಳ ಪೈಕಿ ಕಳೆದ ಬಾರಿಯಂತೆಯೇ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ.
ದೇಶದ 4100ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಭಾಗವಹಿಸಿದ್ದ ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿ.ವಿ. 42.44 ಅಂಕಗಳನ್ನು ಪಡೆಯುವ ಮೂಲಕ ಇಡೀ ದೇಶದ ವಿಶ್ವವಿದ್ಯಾಲಯಗಳ ಪೈಕಿ 86ನೇ ಸ್ಥಾನ ಪಡೆದಿದೆ. 2017ರಲ್ಲಿ 150ರಿಂದ 200ರ ವರ್ಗದಲ್ಲಿ ಸ್ಥಾನ ಪಡೆದಿದ್ದ ವಿಶ್ವವಿದ್ಯಾಲಯ, 2018ರಲ್ಲಿ ಭಾರಿ ಜಿಗಿತ ಕಂಡಿದ್ದು 78ನೇ ಸ್ಥಾನಕ್ಕೇರಿತ್ತು. ಪ್ರಸಕ್ತ ಸಾಲಿನಲ್ಲಿ 86ನೇ ರ‍್ಯಾಂಕ್ ಪಡೆಯುವುದರೊಂದಿಗೆ, ಕೋವಿಡ್-19 ಮತ್ತು ವಿವಿಯ ಸುಮಾರು 10 ಪ್ರಾಧ್ಯಾಪಕರು ನಿವೃತ್ತರಾದ ಕಾರಣದಿಂದ ಉನ್ನತ ಶಿಕ್ಷಣದ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದ್ದರೂ, ಟಾಪ್ 100ರೊಳಗೆ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.