ಏ.2ರಿಂದ ರಾಜ್ಯದಲ್ಲಿ ಮತ್ತೊಂದು ಶೈಕ್ಷಣಿಕ ಅಭಿಯಾನ

Kannadaprabha News   | Asianet News
Published : Mar 30, 2021, 08:42 AM IST
ಏ.2ರಿಂದ ರಾಜ್ಯದಲ್ಲಿ ಮತ್ತೊಂದು ಶೈಕ್ಷಣಿಕ ಅಭಿಯಾನ

ಸಾರಾಂಶ

ರಾಜ್ಯದಲ್ಲಿ ಏಪ್ರಿಲ್ 2 ರಿಂದ ಹೊಸ ಶೈಕ್ಷಣಿಕ ಅಭಿಯಾನ ಒಂದು ಆರಂಭವಾಗಲಿದೆ.  3.20 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ‘ಓದು-ಬರಹ’ ಅಭಿಯಾನಕ್ಕೆ ಚಾಲನೆ ನೀಡುತ್ತಿದೆ. 

ಬೆಂಗಳೂರು (ಮಾ.30):  ರಾಜ್ಯದ ವಿವಿಧ ಜಿಲ್ಲೆಗಳ 3.20 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ‘ಓದು-ಬರಹ’ ಅಭಿಯಾನಕ್ಕೆ ಏಪ್ರಿಲ್‌ 2ರಿಂದ ಚಾಲನೆ ನೀಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ ಕುಮಾರ್‌ ಹೇಳಿದರು.

ಸೋಮವಾರ ಲೋಕ ಶಿಕ್ಷಣ ನಿರ್ದೇಶನಾಲಯದ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಯಚೂರು, ಯಾದಗಿರಿ, ಕಲಬುರಗಿ, ವಿಜಯಪುರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಏ.2ರಿಂದ ಮೇ ವರೆಗೆ ಓದು-ಬರಹ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. 15ರಿಂದ 50 ವರ್ಷದ 2.4 ಲಕ್ಷ ಮಹಿಳೆಯರು ಮತ್ತು 80 ಸಾವಿರ ಪುರುಷ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಗುರಿ ಹೊಂದಲಾಗಿದೆ. ಕಲಿಕೆ ಪೂರ್ಣಗೊಂಡ ನಂತರ ಪ್ರತಿಯೊಬ್ಬರಿಗೂ ಪರೀಕ್ಷೆ ನಡೆಸಿ ಉತ್ತೀರ್ಣರಾದವರಿಗೆ ಇಲಾಖೆಯಿಂದ ಸಾಕ್ಷರತಾ ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಗುರುತಿಸಲಾಗಿರುವ 1.26 ಕೋಟಿ ಅನಕ್ಷರಸ್ಥರ ಪೈಕಿ ಈಗಾಗಲೇ 57 ಲಕ್ಷ ಜನರನ್ನು ಸಾಕ್ಷರರನ್ನಾಗಿಸಲಾಗಿದೆ. ಹಂತ ಹಂತವಾಗಿ ಉಳಿದವರನ್ನೂ ಅಕ್ಷರಸ್ಥರನ್ನಾಗಿಸಲಾಗುವುದು. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಸಾಕ್ಷರತೆಯ ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲು ಇಲಾಖೆಯು ಕ್ರಿಯಾಯೋಜನೆಯನ್ನು ರೂಪಿಸುತ್ತಿದೆ. ನವ ಸಾಕ್ಷರರ ಜೀವನೋಪಾಯಕ್ಕೆ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದರು.

1ರಿಂದ 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಬಗ್ಗೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್ ..

ಇತ್ತೀಚೆಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾಗಿರುವ ಅನಕ್ಷರಸ್ಥ ಸದಸ್ಯರಿಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸಹಯೋಗದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯದಿಂದ ನಿರಂತರ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲು ಸಂಬಂಧಿಸಿದ ಇಲಾಖಾ ಮುಖ್ಯಸ್ಥರೊಂದಿಗೆ ಚರ್ಚಿಸಿ ಕೂಡಲೇ ಕ್ರಿಯಾಯೋಜನೆಯನ್ನು ಸಿದ್ಧಪಡಿಸಬೇಕು. ಸ್ವಯಂ ಪ್ರೇರಿತವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡ ನವ ಸಾಕ್ಷರರ ಯಶೋಗಾಥೆಯನ್ನು ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಲು ಯೋಜನೆ ರೂಪಿಸಬೇಕೆಂದು ಇದೇ ವೇಳೆ ಸಚಿವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸಭೆಯಲ್ಲಿ ಲೋಕ ಶಿಕ್ಷಣ ಇಲಾಖೆಯ ನಿರ್ದೇಶಕಿ ಸುಷ್ಮಾ ಗೋಡಬೋಲೆ ಹಾಗೂ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ