ನೀಟ್ ಪರೀಕ್ಷೆ ರದ್ದತಿಗೆ ವಿಪಕ್ಷಗಳ ಟೀಕೆ, ರಾಜ್ಯದಲ್ಲಿ ಎಷ್ಟೋ ಬಾರಿ ಪರೀಕ್ಷೆಗಳು ಮುಂದೂಡಿಕೆಯಾಗಿವೆ: HDK ತಿರುಗೇಟು!

Gowthami K   | PTI
Published : May 12, 2026, 05:24 PM IST
HD Kumaraswamy

ಸಾರಾಂಶ

2026ರ ನೀಟ್ ಯುಜಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಿಂದ ರದ್ದಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ಕೆಪಿಎಸ್‌ಸಿಯಲ್ಲಿ ನಡೆದ ಅಕ್ರಮಗಳನ್ನು ಉಲ್ಲೇಖಿಸಿ, ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ್ದಾರೆ.

2026ನೇ ಸಾಲಿನ NEET UG ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಕೇಳಿಬಂದ ಹಿನ್ನೆಲೆ, ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡು ಮೇ 3ರಂದು ದೇಶಾದ್ಯಂತ ನಡೆದಿದ್ದ ಪರೀಕ್ಷೆಯನ್ನು ರದ್ದುಪಡಿಸಿದೆ. ಈ ಬೆಳವಣಿಗೆ ದೇಶದಾದ್ಯಂತ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದೆ. ಕರ್ನಾಟಕದಲ್ಲಿಯೂ ಸುಮಾರು 1.45 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಡೆಯುವ ಈ ಪರೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ.

ಕಾಂಗ್ರೆಸ್ ಆಡಳಿತದಲ್ಲೂ ಅನೇಕ ಅನಾಹುತಗಳು ನಡೆದಿವೆ

ಈ ಹಿನ್ನೆಲೆಯಲ್ಲಿ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು ನೀಟ್ ಪರೀಕ್ಷೆ ರದ್ದು ಮತ್ತು ಮರುಪರೀಕ್ಷೆ ಕುರಿತಾಗಿ ನಡೆದಿರುವ ರಾಜಕೀಯ ಚರ್ಚೆಗಳಿಗೆ ಪ್ರತಿಕ್ರಿಯೆ ನೀಡಿ, “ನಮ್ಮ ರಾಜ್ಯದಲ್ಲೇ ಎಷ್ಟು ಬಾರಿ ಪರೀಕ್ಷೆಗಳು ಮುಂದೂಡಿಕೆ ಆಗಿವೆ? ಕಾಂಗ್ರೆಸ್ ಆಡಳಿತದಲ್ಲೂ ಅನೇಕ ಅನಾಹುತಗಳು ನಡೆದಿವೆ. ಈಗ ಮಾತ್ರ ನೈತಿಕತೆ ಬಗ್ಗೆ ಮಾತನಾಡುವುದು ಹೇಗೆ?” ಎಂದು ಪ್ರಶ್ನಿಸಿದರು.

ಕೆಪಿಎಸ್‌ಸಿ ಬಗ್ಗೆ ಪ್ರಶ್ನೆ ಎತ್ತಿದ ಹೆಚ್‌ಡಿಕೆ

ವಿಶೇಷವಾಗಿ ಕರ್ನಾಟಕ ಲೋಕ ಸೇವಾ ಆಯೋಗ (KPSC) ಕಾರ್ಯವೈಖರಿಯನ್ನು ಉಲ್ಲೇಖಿಸಿ, ರಾಜ್ಯದಲ್ಲಿ ಕೆಪಿಎಸ್ಸಿ ಸಂಸ್ಥೆಯನ್ನು ಸರಿಪಡಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಈ ಸಂಸ್ಥೆ ಹಾಳಾಗಲು ಕಾಂಗ್ರೆಸ್ ಆಡಳಿತವೇ ಕಾರಣ. ಜನರು ಇಂದು ಕೆಪಿಎಸ್ಸಿ ಬಗ್ಗೆ ಯಾವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದಲ್ಲದೆ, ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪವಿರುವ ವ್ಯಕ್ತಿಯನ್ನೇ ಕೆಪಿಎಸ್ಸಿ ಅಧ್ಯಕ್ಷನನ್ನಾಗಿ ನೇಮಕ ಮಾಡಲಾಗಿದೆ. ಸಾರ್ವಜನಿಕವಾಗಿ ಹುದ್ದೆಗಳಿಗೆ ಹಣ ನಿಗದಿ ಮಾಡಿ, ಬೀದಿ ಬೀದಿಯಲ್ಲಿ ಚರ್ಚೆಯಾಗುವಂತಹ ಪರಿಸ್ಥಿತಿಯನ್ನು ತಂದದ್ದು ಕಾಂಗ್ರೆಸ್ ಆಡಳಿತ ಎಂದು ಅವರು ಕಿಡಿಕಾರಿದರು.

ರಾಜಸ್ಥಾನದಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಉಲ್ಲೇಖಿಸಿದ ಅವರು, ಅಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣ ಮರುಪರೀಕ್ಷೆ ನಡೆಸಲಾಗುತ್ತಿದೆ. ಕೆಲವರ ತಪ್ಪಿಗೆ ಸಂಪೂರ್ಣ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ನಮ್ಮ ರಾಜ್ಯದಲ್ಲಿಯೂ ಇದೇ ರೀತಿಯ ಘಟನೆಗಳು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದಿವೆ ಎಂದು ಹೇಳಿದರು.

ನೀಟ್ ಪರೀಕ್ಷೆ ಮರುಪರೀಕ್ಷೆ ಮುಂದೂಡಿಕೆಯ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಪ್ರತಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಬಳಸಿಕೊಳ್ಳುತ್ತಿವೆ. ಆದರೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕು ಅವರಿಗೆ ಇಲ್ಲ ಎಂದು ಹೇಳಿದರು. ಒಟ್ಟಿನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶದ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಹೊಡೆತ ನೀಡಿದೆಯಾದರೂ, ಈ ವಿಚಾರ ರಾಜಕೀಯ ಆರೋಪ-ಪ್ರತ್ಯಾರೋಪಗಳ ವೇದಿಕೆಯಾಗಿರುವುದು ಗಮನಾರ್ಹವಾಗಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಷ್ಠೆಯನ್ನು ಕಾಪಾಡುವುದು ಸರ್ಕಾರಗಳ ಪ್ರಮುಖ ಜವಾಬ್ದಾರಿಯಾಗಿದೆ.

 

PREV
Read more Articles on
click me!

Recommended Stories

Breaking: ಪ್ರಶ್ನೆ ಪತ್ರಿಕೆ ಸೋರಿಕೆ ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದು, ಸಿಬಿಐ ತನಿಖೆಗೆ ಆದೇಶ
ಕಾಶ್ಮೀರ ವಿವಾದ, ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ 2 ವರ್ಷಗಳ ಕಾಲ ವಿದ್ಯಾರ್ಥಿ ಅಮಾನತು