ನೀಟ್ ಪರೀಕ್ಷೆ ಪೇಪರ್ ಲೀಕ್; ಸುಧಾರಣೆ ತರಲು ಶಿರಸಿಯ ನಂದನ್ ನಿಲೇಕಣಿ ನೇಮಿಸಿದ ಪ್ರಧಾನಿ, ಯಾರದು?

Published : Jul 27, 2026, 11:00 AM IST
NEET Paper Leak Who Is Nandan Nilekani Picked by PM to Lead Exam Reforms

ಸಾರಾಂಶ

ನೀಟ್‌ ಪೇಪರ್‌ ಲೀಕ್‌ ಬಳಿಕ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ನಂದನ್‌ ನಿಲೇಕಣಿ ನೇತೃತ್ವದ ಕಾರ್ಯಪಡೆ ರಚನೆಯಾಗಿದ್ದು, ಶಿರಸಿ ಮೂಲದ ಈ ಕನ್ನಡಿಗನ ಉದ್ಯಮ, ಆಧಾರ್‌ ಯೋಜನೆ ಮತ್ತು ವೃತ್ತಿಜೀವನದ ಸಾಧನೆಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ.

ನೀಟ್‌ ಸೇರಿದಂತೆ ರಾಷ್ಟ್ರೀಯ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಪರೀಕ್ಷೆಗಳಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳ ಕುರಿತು ಶಿಫಾರಸು ಮಾಡಲು ಇನ್ಫೋಸಿಸ್ ಸಹ-ಸಂಸ್ಥಾಪಕ ಹಾಗೂ ಆಧಾರ್‌ ಯೋಜನೆಯ ಪ್ರಮುಖ ರೂವಾರಿಗಳಲ್ಲಿ ಒಬ್ಬರಾದ ನಂದನ್‌ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆ ರಚಿಸಲಾಗಿದೆ.

ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಭದ್ರತೆ ಮತ್ತು ತಂತ್ರಜ್ಞಾನ ಬಳಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಕಾರ್ಯಪಡೆ ಮಹತ್ವದ ಶಿಫಾರಸುಗಳನ್ನು ನೀಡಲಿದೆ. ನಂದನ್‌ ನಿಲೇಕಣಿ ನೇತೃತ್ವದ ಈ ಸಮಿತಿಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಎಸ್‌. ಸೋಮನಾಥ್‌, ಗುಪ್ತಚರ ಬ್ಯೂರೋ ಮಾಜಿ ನಿರ್ದೇಶಕ ತಪನ್‌ ಡೇಕಾ, ಐಐಟಿ ಮದ್ರಾಸ್‌ ನಿರ್ದೇಶಕ ವಿ. ಕಾಮಕೋಟಿ, ಮಾಜಿ ಶಿಕ್ಷಣ ಕಾರ್ಯದರ್ಶಿ ಅನಿತಾ ಕವಲ್‌ ಹಾಗೂ ಲಾಜಿಸ್ಟಿಕ್ಸ್‌ ತಜ್ಞ ಅಮೃತ್‌ ಲಾಲ್‌ ಮೀನಾ ಸೇರಿದಂತೆ ಹಲವು ಕ್ಷೇತ್ರಗಳ ತಜ್ಞರು ಇದ್ದಾರೆ.

ಈ ಘೋಷಣೆಯ ಬೆನ್ನಲ್ಲೇ ಮತ್ತೊಮ್ಮೆ ನಂದನ್‌ ನಿಲೇಕಣಿ ಯಾರು? ಅವರ ಹಿನ್ನೆಲೆ ಏನು? ಶಿರಸಿಗೂ ಅವರಿಗೂ ಇರುವ ಸಂಬಂಧವೇನು? ಅವರು ಹೇಗೆ ಇನ್ಫೋಸಿಸ್‌ ಸಹ-ಸಂಸ್ಥಾಪಕರಾದರು? ಆಧಾರ್‌ ಯೋಜನೆಯಲ್ಲಿ ಅವರ ಪಾತ್ರವೇನು? ಎಂಬ ಕುತೂಹಲ ಜನರಲ್ಲಿ ಮೂಡಿದೆ.

ಯಾರಿವರು ನಂದನ್‌ ನಿಲೇಕಣಿ?

ನಂದನ್‌ ಮೋಹನ್‌ರಾವ್‌ ನಿಲೇಕಣಿ ಭಾರತದ ಅತ್ಯಂತ ಪ್ರಮುಖ ಉದ್ಯಮಿಗಳು ಹಾಗೂ ತಂತ್ರಜ್ಞಾನ ತಜ್ಞರಲ್ಲಿ ಒಬ್ಬರು. ಇನ್ಫೋಸಿಸ್‌ ಸಂಸ್ಥೆಯನ್ನು ಕಟ್ಟಿದ ಪ್ರಮುಖ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಭಾರತದ ಡಿಜಿಟಲ್‌ ಗುರುತಿನ ವ್ಯವಸ್ಥೆಯಾದ ಆಧಾರ್‌ ಯೋಜನೆ ರೂಪಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

2009ರಿಂದ 2014ರವರೆಗೆ ಅವರು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ನ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ದೇಶದ ಕೋಟ್ಯಂತರ ಜನರಿಗೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸುವ ಮಹತ್ವಾಕಾಂಕ್ಷೆಯ ಆಧಾರ್‌ ಯೋಜನೆಯ ಅನುಷ್ಠಾನದಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಂದನ್‌ ನಿಲೇಕಣಿ ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಶಿರಸಿ ಮೂಲದ ಕನ್ನಡಿಗ

ನಂದನ್‌ ನಿಲೇಕಣಿ ಅವರು 1955ರ ಜೂನ್‌ 2ರಂದು ಬೆಂಗಳೂರಿನಲ್ಲಿ ಜನಿಸಿದರು. ಆದರೆ ಅವರ ಕುಟುಂಬದ ಮೂಲ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಿಲೇಕಣಿ ಗ್ರಾಮಕ್ಕೆ ಸೇರಿದೆ. ಅವರ ಪೂರ್ಣ ಹೆಸರು ನಂದನ್‌ ಮೋಹನ್‌ರಾವ್‌ ನಿಲೇಕಣಿ. ಅವರ ತಂದೆ ಮೋಹನ್‌ರಾವ್‌ ಹಾಗೂ ತಾಯಿ ದುರ್ಗಾ. ಇದೇ ಕಾರಣಕ್ಕೆ ನಂದನ್‌ ನಿಲೇಕಣಿ ಅವರನ್ನು ಉತ್ತರ ಕನ್ನಡದ ಶಿರಸಿ ಮೂಲದ ಹೆಮ್ಮೆಯ ಕನ್ನಡಿಗ ಎಂದು ಗುರುತಿಸಲಾಗುತ್ತದೆ.

ಬಿಷಪ್‌ ಕಾಟನ್‌ ಶಾಲೆಯಿಂದ ಐಐಟಿ ಬಾಂಬೆವರೆಗೆ

ನಂದನ್‌ ನಿಲೇಕಣಿ ತಮ್ಮ ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಬಿಷಪ್‌ ಕಾಟನ್‌ ಬಾಲಕರ ಶಾಲೆಯಲ್ಲಿ ಪಡೆದರು. ಬಳಿಕ ಧಾರವಾಡದ ಕರ್ನಾಟಕ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ನಂತರ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಐಐಟಿ ಬಾಂಬೆಯಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದರು.

1978ರಲ್ಲಿ ತಮ್ಮ ಎಂಜಿನಿಯರಿಂಗ್‌ ಪದವಿ ಪೂರ್ಣಗೊಳಿಸಿದ ಬಳಿಕ ಮುಂಬೈನ ಪಟ್ನಿ ಕಂಪ್ಯೂಟರ್‌ ಸಿಸ್ಟಮ್ಸ್‌ ಸಂಸ್ಥೆಯಲ್ಲಿ ವೃತ್ತಿಜೀವನ ಆರಂಭಿಸಿದರು. ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಎನ್‌.ಆರ್‌. ನಾರಾಯಣ ಮೂರ್ತಿ ಅವರನ್ನು ಭೇಟಿಯಾದರು. ಈ ಪರಿಚಯವೇ ಮುಂದೆ ಭಾರತದ ಐಟಿ ಕ್ಷೇತ್ರದ ಇತಿಹಾಸವನ್ನೇ ಬದಲಿಸುವಂತಹ ದೊಡ್ಡ ಬೆಳವಣಿಗೆಗೆ ಕಾರಣವಾಯಿತು.

1981ರಲ್ಲಿ ಇನ್ಫೋಸಿಸ್‌ ಸ್ಥಾಪನೆ

1981ರಲ್ಲಿ ನಂದನ್‌ ನಿಲೇಕಣಿ ಅವರು ಎನ್‌.ಆರ್‌. ನಾರಾಯಣ ಮೂರ್ತಿ ಸೇರಿದಂತೆ ಇತರ ಸಹೋದ್ಯೋಗಿಗಳೊಂದಿಗೆ ಸೇರಿ ಇನ್ಫೋಸಿಸ್‌ ಸಂಸ್ಥೆಯನ್ನು ಸ್ಥಾಪಿಸಿದರು. ಕಡಿಮೆ ಸಂಪನ್ಮೂಲಗಳಿಂದ ಆರಂಭವಾದ ಈ ಕಂಪನಿ ಮುಂದೆ ಜಾಗತಿಕ ಮಟ್ಟದ ಪ್ರಮುಖ ಐಟಿ ಸಂಸ್ಥೆಯಾಗಿ ಬೆಳೆದಿತು. ಇನ್ಫೋಸಿಸ್‌ನ ಬೆಳವಣಿಗೆಯಲ್ಲಿ ನಂದನ್‌ ನಿಲೇಕಣಿ ಅವರ ಪಾತ್ರವೂ ಮಹತ್ವದ್ದಾಗಿದೆ. 2002ರಿಂದ 2007ರವರೆಗೆ ಅವರು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರ ಅವಧಿಯಲ್ಲಿ ಕಂಪನಿಯ ಜಾಗತಿಕ ವಿಸ್ತರಣೆ ಮತ್ತಷ್ಟು ವೇಗ ಪಡೆದುಕೊಂಡಿತು. ನಂತರ 2007ರಿಂದ 2011ರವರೆಗೆ ಇನ್ಫೋಸಿಸ್‌ನ ಸಹ-ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ಆಧಾರ್‌ ಯೋಜನೆಯ ಜವಾಬ್ದಾರಿ

2009ರಲ್ಲಿ ನಂದನ್‌ ನಿಲೇಕಣಿ ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ಸಿಕ್ಕಿತು. ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅವರನ್ನು UIDAIನ ಮೊದಲ ಅಧ್ಯಕ್ಷರಾಗಿ ನೇಮಿಸಲಾಯಿತು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಆಧಾರ್‌ ಯೋಜನೆಯ ಅನುಷ್ಠಾನದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಕೋಟ್ಯಂತರ ಜನರನ್ನು ಒಳಗೊಂಡ ಇಂತಹ ಬೃಹತ್‌ ಡಿಜಿಟಲ್‌ ಗುರುತಿನ ವ್ಯವಸ್ಥೆಯನ್ನು ರೂಪಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ತಂತ್ರಜ್ಞಾನ ಮತ್ತು ಆಡಳಿತದ ಸಮನ್ವಯದ ಮೂಲಕ ಯೋಜನೆಯನ್ನು ಮುನ್ನಡೆಸುವಲ್ಲಿ ನಂದನ್‌ ನಿಲೇಕಣಿ ಪ್ರಮುಖ ಪಾತ್ರ ವಹಿಸಿದರು.

ರಾಜಕೀಯದಲ್ಲೂ ಅದೃಷ್ಟ ಪರೀಕ್ಷೆ

ಉದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದ ಜೊತೆಗೆ ನಂದನ್‌ ನಿಲೇಕಣಿ ರಾಜಕೀಯದಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಕುಟುಂಬದ ಆಸ್ತಿ ವಿವರಗಳನ್ನೂ ಅವರು ಘೋಷಿಸಿದ್ದರು.

ನಂದನ್‌ ನಿಲೇಕಣಿ ಆಸ್ತಿ ಎಷ್ಟು?

2014ರ ಚುನಾವಣಾ ಅಫಿಡವಿಟ್‌ನಲ್ಲಿ ನಂದನ್‌ ನಿಲೇಕಣಿ ಮತ್ತು ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ ಸುಮಾರು ₹8,000 ಕೋಟಿ ಎಂದು ಘೋಷಿಸಲಾಗಿತ್ತು ಎಂದು ವರದಿಯಾಗಿದೆ. ಅವರ ಸಂಪತ್ತಿನ ಪ್ರಮುಖ ಭಾಗ ಇನ್ಫೋಸಿಸ್‌ನಲ್ಲಿರುವ ಷೇರುಗಳಿಂದ ಬಂದಿದೆ. ಅವರ ಪತ್ನಿ ರೋಹಿಣಿ ನಿಲೇಕಣಿ ಅವರೂ ಖ್ಯಾತ ಸಮಾಜ ಸೇವಕಿ ಮತ್ತು ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. 

ಈಗ ಮತ್ತೆ ಮಹತ್ವದ ಜವಾಬ್ದಾರಿ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಿಗೆ ಸಂಬಂಧಿಸಿದ ವಿವಾದಗಳ ಬಳಿಕ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷಾ ಸುಧಾರಣೆಯ ಉನ್ನತ ಮಟ್ಟದ ಕಾರ್ಯಪಡೆಗೆ ನಂದನ್‌ ನಿಲೇಕಣಿ ನೇತೃತ್ವ ವಹಿಸಿರುವುದು ಮಹತ್ವ ಪಡೆದಿದೆ.

PREV
Read more Articles on
click me!

Recommended Stories

58 ವಿದ್ಯಾರ್ಥಿಗಳಿಗೆ 5 ಲಕ್ಷ ರು. ಸ್ಕಾಲರ್‌ಶಿಪ್ ವಿತರಣೆ; ಮಕ್ಕಳ ಕನಸಿಗೆ ಸಿಕ್ತು ಬಲ
ಜೀವಾವಧಿ ಶಿಕ್ಷೆ ಪ್ರಸ್ತಾಪ, 10 ಕೋಟಿ ದಂಡ! Anti-Paper Leak ಮಸೂದೆಯಲ್ಲಿ 6 ಪ್ರಮುಖ ಬದಲಾವಣೆ!