ಮೈಸೂರು (ಡಿ.24): ಮೈಸೂರು ವಿವಿಯು (Mysuru VV) ಕಾನೂನು ವಿಷಯಗಳ ಪರೀಕ್ಷೆಯನ್ನು (Law Exams) ಕನ್ನಡದಲ್ಲಿ ಬರೆಯಲು ಅವಕಾಶ ನೀಡಿದೆ. ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿವಿ ಶೈಕ್ಷಣಿಕ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪರ, ವಿರೋಧ ಚರ್ಚೆ ನಡೆಯಿತು. ಮೊದಲಿಗೆ ಕನ್ನಡದಲ್ಲಿ (Kannada) ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ, ಒಂದು ವೇಳೆ ಪರೀಕ್ಷೆಗೆ ಅವಕಾಶ ನೀಡಿದರೆ ಬೋಧನೆಯನ್ನೂ ಕನ್ನಡದಲ್ಲಿಯೇ ಮಾಡುವಂತೆ ಒತ್ತಾಯ ಕೇಳಿ ಬರುತ್ತದೆ. ಇದರಿಂದ ವಿದೇಶಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಅಲ್ಲದೆ ಕನ್ನಡದಲ್ಲಿ ಪುಸ್ತಕಗಳ ಕೊರತೆ ಇದೆ. ಇದ್ದರೂ ಐದಾರು ಪುಸ್ತಕ ಮಾತ್ರ ಇದೆ. ಅವುಗಳೂ ಕೂಡ ಸರಿಯಾಗಿ ಅನುವಾದವಾಗಿಲ್ಲ. ಇಂತಹ ಪುಸ್ತಕಗಳ ಅಧ್ಯಯನದಿಂದ ವಿದ್ಯಾರ್ಥಿಗಳ (Students) ಬೌದ್ಧಿಕ ಮಟ್ಟ ಕೆಳಕ್ಕೆ ಇಳಿಯಲಿದೆ. ಕೋರ್ಟ್‌ನ ತೀರ್ಪುಗಳು ಇಂಗ್ಲಿಷ್‌ನಲ್ಲಿಯೇ ಇರುತ್ತವೆ. ಅವುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ಕಷ್ಟದ ಕೆಲಸ. ಆದ್ದರಿಂದ ಇಂಗ್ಲಿಷ್‌ನಲ್ಲೇ (English) ಬೋಧನೆ, ಪರೀಕ್ಷೆ ನಡೆಸಲಾಗುತ್ತಿದೆ ಎಂದು ಕಾನೂನು ನಿಕಾಯದ ಡೀನ್ ಪ್ರೊ. ರಮೇಶ್ (Ramesh) ಹೇಳಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಒಂದೆರಡು ಸಂಖ್ಯೆಯಲ್ಲಿರುವ ವಿದೇಶಿ ವಿದ್ಯಾರ್ಥಿಗಳಿಗಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಸ್ಥಳೀಯ ವಿದ್ಯಾರ್ಥಿಗಳು (Students) ಬಹುಪಾಲು ಹಳ್ಳಿಗಾಡಿನಿಂದ ಬಂದಿರುತ್ತಾರೆ. ಅವರಿಗೆ ಇಂಗ್ಲಿಷ್‌ಗಿಂತ ಕನ್ನಡದಲ್ಲಿ (Kannada) ಬೋಧಿಸಿದರೆ ಹೆಚ್ಚು ಸೂಕ್ತ ಎನಿಸುತ್ತದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.
undefined
ಕಾನೂನು ನಿಕಾಯ ಸಭೆಯಲ್ಲಿ ಕೈಗೊಂಡಿರುವ ಶಿಫಾರಸುಗಳ ಅನುಮೋದನೆಗಾಗಿ ಕಾನೂನು ನಿಕಾಯದ ಡೀನ್ ಪ್ರೊ. ರಮೇಶ್ ಈ ವಿಷಯ ಮಂಡಿಸಿದರು. ಆಗ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ನಾಮ ನಿರ್ದೇಶನಗೊಂಡಿರುವ ರಾಜಶೇಖರ್ ಅವರು, ಬಿಎ ಎಲ್‌ಎಲ್‌ಎಂ (BALLM) ಮತ್ತು ಎಲ್‌ಎಲ್‌ಎಂ (LLM) ಬೋಧನೆ ಮತ್ತು ಪ್ರಶ್ನೆಪತ್ರಿಕೆ ಇಂಗ್ಲಿಷ್‌ನಲ್ಲಿ ಮಾತ್ರ ಇದೆ. ಇದರಿಂದ ಕನ್ನಡದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಕನ್ನಡ ಭಾಷೆಯಲ್ಲೂ ಪ್ರಶ್ನೆಪತ್ರಿಕೆ ನೀಡಬೇಕು ಎಂದು ಆಗ್ರಹಿಸಿದರು.
ಕೆಲ ಡೀನ್‌ಗಳು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಷಯಗಳನ್ನು ಈಗಾಗಲೇ ಕನ್ನಡದಲ್ಲೇ ಬೋಧನೆ ಮತ್ತು ಪರೀಕ್ಷೆ ನಡೆಸಲಾಗುತ್ತದೆ. ಅಂತಹದಲ್ಲಿ ಕಾನೂನು ವಿಷಯದಲ್ಲಿ ಇದನ್ನು ಅಳವಡಿಕೆಗೆ ಅಂತಹ ಕಷ್ಟವಾಗುವುದಿಲ್ಲ ಎಂದರು.
ಆಗ ಮಧ್ಯಪ್ರವೇಶಿಸಿದ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್, ಕಾನೂನು ವಿಷಯಗಳ ಬೋಧನೆ ಇಂಗ್ಲಿಷ್‌ನಲ್ಲಿ ಮತ್ತು ಪ್ರಶ್ನೆ ಪತ್ರಿಕೆಗಳು ಇಂಗ್ಲಿಷ್ (English) ಮತ್ತು ಕನ್ನಡ ಭಾಷೆಯಲ್ಲಿ ಅವಕಾಶ ನೀಡಲಾಗುವುದು. ಕರ್ನಾಟಕ (Karnataka) ಕಾನೂನು ವಿಶ್ವವಿದ್ಯಾಲಯದಲ್ಲೂ ಇದೇ ಪದ್ಧತಿ ಅನುಸರಿಸಲಾಗುತ್ತಿದೆ. ಅದೇ ರೀತಿ ನಮ್ಮಲ್ಲೂ ಜಾರಿ ಮಾಡಲಾಗುವುದು. ಭಾಷೆ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ಬಿಡೋಣ ಎಂದು ಚರ್ಚೆಗೆ ತೆರೆ ಎಳೆದರು.
ಉಳಿದಂತೆ ಎನ್‌ಇಪಿ (NEP) ಅಡಿ ಪಠ್ಯಕ್ರಮ ಅಳವಡಿಸಿಕೊಂಡಿರುವ ಕುರಿತು ಅನುಮೋದನೆ ನೀಡಲಾಯಿತು. ಹೊಸದಾಗಿ ಸ್ಥಾಪಿಸಿರುವ ದತ್ತಿ ಚಿನ್ನದ ಪದಕ ಮತ್ತು ಹಲವು ಕಾಲೇಜಿಗೆ ಸಂಯೋಜನೆ ಮುಂದುವರೆಸುವುದಕ್ಕೆ ಅನುಮೋದನೆ ನೀಡಲಾಯಿತು.
ಕುಲಪತಿ, ಇಬ್ಬರು ಕುಲಸಚಿವರು ಮಾಸ್ಕ್ ಧಾರಣೆ ಮಾಡದಿರುವುದಕ್ಕೆ ವಾಣಿಜ್ಯ ನಿಕಾಯದ ಪ್ರೊ.ಎಚ್. ರಾಜಶೇಖರ್ ಅಸಮಾಧಾನ ವ್ಯಕ್ತಪಡಿಸಿದರು. ಕ್ರಾಫರ್ಡ್ ಹಾಲ್‌ನಲ್ಲೇ ಏಕೆ ಈ ಸಭೆಯನ್ನು ನಡೆಸುತ್ತಿಲ್ಲ ಎಂದು ಕುಲಸಚಿವರನ್ನು ಪ್ರಶ್ನಿಸಿದ್ದೆ. ಕೊರೋನಾ ಇರುವ ಕಾರಣಕ್ಕೆ ವಿಜ್ಞಾನಭವನದಲ್ಲಿ ಆಯೋಜಿಸಲಾಗಿದೆ ಎಂದು ಅವರು ಉತ್ತರ ನೀಡಿದ್ದಾರೆ. ಇಲ್ಲಿ ಬಂದು ನೋಡಿದರೆ ವಿಸಿ, ಕುಲಸಚಿವರೇ ಮಾಸ್ಕ್ ಹಾಕಿಲ್ಲ ಎಂದು ಚಾಟಿ ಬೀಸಿದರು. ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಮಾಸ್ಕ್ ಧಾರಣೆ ಹೋಗಲಿ ಪರಸ್ಪರ ಅಂತರವಾದರೂ ಇರಬೇಕು ಎಂದರು.
ಸಭೆಯಲ್ಲಿ ಕುಲಸಚಿವರಾದ ಪ್ರೊ.ಆರ್. ಶಿವಪ್ಪ, ಪ್ರೊ.ಎ.ಪಿ. ಜ್ಞಾನಪ್ರಕಾಶ್ ಮೊದಲಾದವರು ಇದ್ದರು.