ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಸರ್ಕಾರಿ ಕೆಲಸ ಸಿಗಲಿದೆ ಎಂಬ ಭ್ರಮೆಯಲ್ಲಿರುವ ಪೋಷಕರು| ಇಂಗ್ಲಿಷ್ ಶಾಲೆಯಲ್ಲಿ ಓದಿದ ಎಷ್ಟು ಮಂದಿಗೆ ಸರ್ಕಾರಿ ಕೆಲಸ ಸಿಕ್ಕಿದೆ? ಇದನ್ನು ಪೋಷಕರು ಮೊದಲು ತಿಳಿದುಕೊಳ್ಳಬೇಕು| ಇಂಗ್ಲಿಷ್ ಎಂಬ ಭ್ರಮೆಯಿಂದ ಮೊದಲು ಹೊರಬರಬೇಕು: ಡಾ. ಎಲ್. ಹನುಮಂತಯ್ಯ|
ಬಳ್ಳಾರಿ(ಮಾ.08): ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತೀರಾ ಇಳಿಮುಖವಾದ ಕಾರಣಕ್ಕಾಗಿಯೇ ಇನ್ನು ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳು ಮುಚ್ಚುವ ಸಾಧ್ಯತೆಗಳಿವೆ. ಇದು ಸರ್ಕಾರವೇ ನೀಡಿದ ಅಂಕಿ ಅಂಶ ಎಂದು ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಚಿಂತಕ ಡಾ. ಎಲ್. ಹನುಮಂತಯ್ಯ ಹೇಳಿದ್ದಾರೆ.
ಸಿರಿಗೇರಿ ಅನ್ನಪೂರ್ಣ ಪ್ರಕಾಶನ ನಗರದ ಶ್ರೀ ತಿಪ್ಪೇರುದ್ರ ಪದವಿಪೂರ್ವ ಕಾಲೇಜಿನಲ್ಲಿ (ಎಸ್‌ಜಿಟಿ) ಹಮ್ಮಿಕೊಂಡಿದ್ದ ರಾ.ನಂ. ಚಂದ್ರಶೇಖರ ಹಾಗೂ ಡಾ. ಡಿ. ಸ್ಮಿತಾ ರೆಡ್ಡಿ ಸಂಪಾದನೆಯ ‘ಕನ್ನಡ ಕಾವಲಿಗೆ ಸಾಕ್ಷಿಕಲ್ಲು’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಸರ್ಕಾರಿ ಕೆಲಸ ಸಿಗಲಿದೆ ಎಂಬ ಭ್ರಮೆಯಲ್ಲಿ ಪೋಷಕರಿದ್ದಾರೆ. ಇಂಗ್ಲಿಷ್ ಶಾಲೆಯಲ್ಲಿ ಓದಿದ ಎಷ್ಟು ದಿಗೆ ಸರ್ಕಾರಿ ಕೆಲಸ ಸಿಕ್ಕಿದೆ? ಇದನ್ನು ಪೋಷಕರು ಮೊದಲು ತಿಳಿದುಕೊಳ್ಳಬೇಕು. ಇಂಗ್ಲಿಷ್ ಎಂಬ ಭ್ರಮೆಯಿಂದ ಮೊದಲು ಹೊರಬರಬೇಕು ಎಂದರು.
ದೇಶದ ಯಾವುದೇ ರಾಜ್ಯದಲ್ಲಿ ರಾಜ್ಯಭಾಷೆಯಾಗಿ ಅಭಿವೃದ್ಧಿ ಮಾಡಲು ಮಂಡಳಿ ಅಥವಾ ಪ್ರಾಧಿಕಾರವಿಲ್ಲ. ಕರ್ನಾಟಕದಲ್ಲಿ ಮಾತ್ರ ಇರುವುದು. ನಮ್ಮ ಸರ್ಕಾರಗಳು ಉತ್ತಮ ಕೆಲಸ ಮಾಡಿವೆ ಎಂದು ಖುಷಿಯಾಗಬಹುದು. ಆದರೆ, ಕರ್ನಾಟಕದಲ್ಲಿಯೇ ಕನ್ನಡಕ್ಕೆ ಎಂತಹ ದುಸ್ಥಿತಿ ಬಂದಿದೆ ಎಂಬ ನೋವು ಸಹ ಆಗುತ್ತದೆ. ನಮ್ಮ ಭಾಷೆಯನ್ನು ನಾವೇ ಅಭಿವೃದ್ಧಿ ಮಾಡಬೇಕಾದ ವಿಪರ್ಯಾಸ. ತೆಲುಗು, ತಮಿಳು ರಾಜ್ಯಗಳಲ್ಲಿ ಈ ರೀತಿಯ ಪರಿಸ್ಥಿತಿಯಿಲ್ಲ. ಆ ರಾಜ್ಯಗಳಲ್ಲಿ ಸಹಜವಾಗಿಯೇ ರಾಜ್ಯಭಾಷೆ ಪ್ರಗತಿ ಕಂಡಿವೆ. ನಮ್ಮಲ್ಲಿ ಮಾತ್ರ ಅದಾಗಿಲ್ಲ ಎಂದು ಬೇಸರಗೊಂಡರು.
ಕೃಷಿ ಪದವಿ ಶಿಕ್ಷಣಕ್ಕೆ ರೈತರ ಮಕ್ಕಳಿಗೆ ಶೇ. 50 ಮೀಸಲು: ಸಚಿವ ಬಿ.ಸಿ. ಪಾಟೀಲ
ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಕೆಲಸ ಸಿಗಬೇಕು ಎಂದಾದಲ್ಲಿ ಸರೋಜನಿ ಮಹಿಷಿ ವರದಿ ಜಾರಿಗೊಳಿಸಬೇಕು. ವರದಿಯನ್ನು ಪರಿಷ್ಕರಿಸಿ ಅದನ್ನು ಸಹ ರಾಜ್ಯ ಸರ್ಕಾರದ ಮುಂದೆ ಇಟ್ಟಿದ್ದೇವೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅನೇಕ ಕೆಲಸಗಳು ಮಾಡಲು ಸಾಧ್ಯವಾಗಿದೆ. ಕನ್ನಡ ಅಭಿವೃದ್ಧಿಯಾಗಬೇಕು ಎಂದು ಬರಿ ಬಾಯಿಮಾತಿನಲ್ಲಿ ಹೇಳಿದರೆ ಸಾಲದು. ಕನ್ನಡಕ್ಕಾಗಿ ಏನಾದರೂ ಕೆಲಸ ಮಾಡಬೇಕು. ನಮ್ಮ ಮಕ್ಕಳ ಭವಿಷ್ಯದ ಕಾಳಜಿ ಇಟ್ಟುಕೊಂಡು ಸರ್ಕಾರಗಳು ಪೂರಕ ಕ್ರಮಗಳನ್ನು ವಹಿಸಬೇಕು. ವಿದ್ಯಾರ್ಥಿಗಳು ಸರೋಜನಿ ಮಹಿಷಿ ವರದಿ ಜಾರಿಗೊಳಿಸಿ ಎಂದು ಹೋರಾಟಗಳನ್ನು ಕಟ್ಟಬೇಕು. ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳು ಬೀದಿಗೆ ಬಂದು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು.
ಹಿರಿಯ ಲೇಖಕ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಎಲ್. ಹನುಮಂತಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಅವರ ಕಾರ್ಯಸೂಚಿಗಳ ಅವಲೋಕನದ ‘ಕನ್ನಡ ಕಾವಲಿಗೆ ಸಾಕ್ಷಿಕಲ್ಲು’ ಕೃತಿ ಹನುಮಂತಯ್ಯ ಅವರ ಕಾರ್ಯವೈಖರಿ ಹಾಗೂ ಕನ್ನಡ ಮೇಲಿನ ಕಾಳಜಿಯನ್ನು ತೋರಿಸುತ್ತದೆ. ಸರೋಜನಿ ಮಹಿಷಿ ವರದಿ ಪರಿಷ್ಕರಣ ಸಮಿತಿ ರಚನೆ, ವೃತ್ತಿ ಕೋರ್ಸ್‌ಗಳಲ್ಲಿ ಕನ್ನಡ ಕಡ್ಡಾಯಗೊಳಿಸಿದ್ದು ಸೇರಿದಂತೆ ಕನ್ನಡಪರ ಅನೇಕ ಕಾರ್ಯಗಳನ್ನು ಕೈಗೊಂಡಿದ್ದರು. ಅವರ ಅಧಿಕಾರ ಅವಧಿಯ ಉಲ್ಲೇಖಾರ್ಹ ದಾಖಲೆಗಳು ಕೃತಿಯಲ್ಲಿ ಕಾಣಬಹುದಾಗಿದೆ ಎಂದರು.
ಲೇಖಕ ಹಾಗೂ ಕನ್ನಡಪರ ಹೋರಾಟಗಾರ ರಾ.ನಂ. ಚಂದ್ರಶೇಖರ, ಎಲ್. ಹನುಮಂತಯ್ಯ ಅವರ ಕನ್ನಡದ ಕೆಲಸ ಕುರಿತು ಮೆಲುಕು ಹಾಕಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕ ಕುಂ. ವೀರಭದ್ರಪ್ಪ ಅವರು ಕನ್ನಡಪರ ನೈಜ ಹೋರಾಟಗಾರ ರಾ.ನಂ. ಚಂದ್ರಶೇಖರ, ಹಿರಿಯ ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಎಲ್. ಹನುಮಂತಯ್ಯ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದಾಗ ಕೈಗೊಂಡ ಕಾರ್ಯಗಳು ಕುರಿತು ಸ್ಮರಿಸಿದರು. ಅನ್ನಪೂರ್ಣಾ ಪ್ರಕಾಶನದ ಸಿರಿಗೇರಿ ಎರಿಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಎಸ್‌ಜಿಟಿ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗರಾಜಗೌಡ ಕಾರ್ಯಕ್ರಮದ ಅತಿಥಿಗಳಾಗಿ ಉಪಸ್ಥಿತರಿದ್ದರು.
ಬಳ್ಳಾರಿಯಲ್ಲಿಯೇ ಸಾಯುತ್ತೇನೆ: ಕುಂವೀ
‘ನೀವು ಇನ್ನೂ ಬೆಂಗಳೂರಿಗೆ ಬಂದಿಲ್ವಾ ಎಂದು ಅನೇಕ ಸಾಹಿತಿಗಳು ಕೇಳುತ್ತಾರೆ. ಇಲ್ಲ ನಾನು ನಮ್ಮೂರು ಬಳ್ಳಾರಿಯಲ್ಲಿಯೇ ಸಾಯುತ್ತೇನೆ ಎಂದು ಹೇಳುತ್ತೇನೆ’ ಎಂದು ಹಿರಿಯ ಲೇಖಕ ಕುಂ. ವೀರಭದ್ರಪ್ಪ ಹೇಳಿದರು.
ನಾನು ಎಲ್ಲಿಗೆ ಹೋದರೂ ನನ್ನ ಜಿಲ್ಲೆ ಬಳ್ಳಾರಿ ಕಡೆ ನನ್ನ ಮನಸ್ಸು ಕರೆಯುತ್ತದೆ. ಹೀಗಾಗಿ ನಾನು ಎಲ್ಲೂ ಹೋಗೋದಿಲ್ಲ. ಇಲ್ಲಿಯೇ ಬರೆಯುತ್ತೇನೆ. ಇಲ್ಲಿಯೇ ಇರುತ್ತೇನೆ. ಇಲ್ಲಿಯೇ ಸಾಯುತ್ತೇನೆ. ನಮ್ಮೂರಲ್ಲಿಯೇ ಇರಬೇಕು. ನಮ್ಮೂರಲ್ಲಿಯೇ ಬರೆಯಬೇಕು ಎಂದ ಕುಂ.ವೀ., ಅನೇಕ ಸಾಹಿತಿಗಳು ಬೆಂಗಳೂರು, ಧಾರವಾಡ, ಶಿವಮೊಗ್ಗ ನೋಡಿಕೊಂಡರು, ನಾನು ನಮ್ಮೂರಲ್ಲಿಯೇ ಉಳಿದೆ ಎಂದರು.
ಸಿರಿಗೇರಿ ಎರ್ರಿಸ್ವಾಮಿಯ ಬಳ್ಳಾರಿ ಪ್ರೇಮ:
ಅನ್ನಪೂರ್ಣ ಪ್ರಕಾಶನದ ಮುಖ್ಯಸ್ಥ ಸಿರಿಗೇರಿ ಎರ್ರಿಸ್ವಾಮಿಯವರು ಕ್ರಿಯಾಶೀಲರು. ನಿರಂತರವಾಗಿ ಸಾಹಿತ್ಯ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಅನೇಕ ಹಿರಿಯ ಸಾಹಿತಿಗಳು, ಕಲಾವಿದರನ್ನು ಎರಿಸ್ವಾಮಿ ಬಳ್ಳಾರಿಗೆ ಕರೆಸುತ್ತಾರೆ. ಅವರು ಬೆಂಗಳೂರಿನಲ್ಲಿದ್ದಾರೆ. ಅಲ್ಲಿಯೇ ಕಾರ್ಯಕ್ರಮ ಮಾಡಬಹುದು. ಆದರೆ, ಅವರು ಬಳ್ಳಾರಿ ಜಿಲ್ಲೆಯಲ್ಲಿ ಸಾಹಿತ್ಯ ಕೆಲಸ ಕೈಗೊಳ್ಳುತ್ತಾರೆ ಎಂದು ಲೇಖಕ ಕುಂ. ವೀರಭದ್ರಪ್ಪ ಶ್ಲಾಘಿಸಿದರು.