
ವಿಜಯನಗರ (ಏ.10): ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್ ರ‍್ಯಾಂಕ್ ಬಂದ ಕೊಟ್ಟೂರು ಇಂದು ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಬಾಯಿಗೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಟಿ. ಶ್ರೀನಿವಾಸ್ ಅವರು ಒಂದು ಲ್ಯಾಪ್‌ಟಾಪ್ ಹಾಗೂ 25 ಸಾವಿರ ರೂ. ನಗದು ಹಣವನ್ನು ನೀಡಿ ಗೌರವಿಸಿದ್ದಾರೆ.
ಪಿಯು ಫಲಿತಾಂಶ ಕಳೆದೆರಡು ದಿನಗಳ ಹಿಂದೆ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಇಂದು ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಬಾಯಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈ ಮಾಹಿತಿ ತಿಳಿದು ತಮ್ಮ ಕ್ಷೇತ್ರದ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂಧಿದ್ದರಿಂದ ಸಂತಸ ಹಂಚಿಕೊಂಡಿದ್ದಾರೆ. ಜೊತೆಗೆ, ವಿದ್ಯಾರ್ಥಿನಿಯ ಮನೆಗೆ ಹೋಗಿ ಗೌರವಿಸುವುದಾಗಿ ಕಾಲೇಜಿಗೆ ಹೋಗಿ ಮಾಹಿತಿ ಪಡೆದಿದ್ದರು. ಇದೀಗ ವಿದ್ಯಾರ್ಥಿನಿಯ ವಿಳಾಸವನ್ನು ಪಡೆದು ಗುರುವಾರ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಪಕ್ಕದ ಗುಂಡ ತಾಂಡಾ ಗ್ರಾಮದ ಸಂಜನಾಬಾಯಿ ಮನೆಗೆ ತೆರಳಿ ಗೌರವಿಸಿದ್ದಾರೆ.
ಮರಿಯಮ್ಮನಹಳ್ಳಿಯ ಪಕ್ಕದ ಗುಂಡ ತಾಂಡಾ ಗ್ರಾಮದ ಸಂಜನಾಬಾಯಿ ಮನೆಯಲ್ಲಿ ಬಡತನವಿದ್ದರೂ ಉತ್ತಮ ಅಂಕ ಗಳಿಸೋ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇನ್ನೂ ಸಾಧನೆ ಮಾಡಲು ಬಡತನ ಎಂಬುದು ಅಡ್ಡಿ ಬರುವುದಿಲ್ಲ ಗುರಿ ಒಂದಿದ್ದರೆ ಎಂತಹ ಕಷ್ಟಗಳನ್ನು ದಾಟಿ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಸಂಜನಾ ಬಾಯಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇತರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕೆನ್ನುವ ನಿಟ್ಟಿನಲ್ಲಿ ಲ್ಯಾಪ್‌ಟಾಪ್ ಹಾಗೂ ಹಣದ ಸಹಾಯ ಮಾಡಿರುವುದಾಗಿ ಶಾಸಕ ಶ್ರೀನಿವಾಸ ಹೇಳಿದ್ದಾರೆ. ಜೊತೆಗೆ, ವಿದ್ಯಾರ್ಥಿನಿಯ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಮಸ್ಯೆ ಬಂದಲ್ಲಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Karnataka 2nd PUC Result 2025: ಲಾರಿ ಚಾಲಕನ ಪುತ್ರಿ ರಾಜ್ಯಕ್ಕೆ ಟಾಪರ್!
ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಬಾಯಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 600 ಕ್ಕೆ 597 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಳು.
ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ಪ್ರತ್ಯೇಕವಾಗುವ ಮುನ್ನ ಕೂಡ್ಲಿ ತಾಲೂಕಿನ ಭಾಗವಾಗಿದ್ದ ಕೊಟ್ಟೂರು ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಲಾಗಿತ್ತು. ಇದೀಗ ಕೊಟ್ಟೂರು ತಾಲೂಕಿನ ಇಂದು ಪದವಿಪೂರ್ವ ಕಾಲೇಜು ಸತತ 10 ವರ್ಷದಿಂದ ರಾಜ್ಯಕ್ಕೆ ಕಲಾ ವಿಭಾಗದಲ್ಲಿ ರ‍್ಯಾಂಕ್ ಗಳಿಸುತ್ತಲೇ ಬಂದಿದೆ. ಈ ವರ್ಷ ಸಂಜನಾ ಬಾಯಿ 600ಕ್ಕೆ 597 ಅಂಕ ಗಳಿಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಇಂದು ಕಾಲೇಜು ಕಲಾ ವಿಭಾಗದಲ್ಲಿ 2015ರಿಂದ ಸತತವಾಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುತ್ತಿದ್ದು, ಆ ಪರಂಪರೆಯನ್ನು ಈ ವರ್ಷವೂ ಮುಂದುವರಿಸಿದೆ.
ಈ ವರ್ಷದ 2025ರಲ್ಲಿ ಇಂದು ಮಹಾವಿದ್ಯಾಲಯದ 13 ವಿದ್ಯಾರ್ಥಿಗಳು ರಾಜ್ಯಕ್ಕೆ ಟಾಪ್-10 ರ್‍ಯಾಂಕ್ ಪಟ್ಟಿಯಲ್ಲಿದ್ದಾರೆ. ಸಂಜನಾ ಬಾಯಿ ರಾಜ್ಯಕ್ಕೆ ಫಸ್ಟ್ ರ‍್ಯಾಂಕ್, ಗೌತಮಿ ಬಿ.(591 ಅಂಕ) 7ನೇ ರ‍್ಯಾಂಕ್, ಜಡೆಲಾಲಿ ಯಾದವ್, ನಾಗಲಕ್ಷ್ಮಿ ಒಡೆಯರ ಮತ್ತು ಯಲ್ಲಮ್ಮ 590 ಅಂಕ ಪಡೆದು 8ನೇ ಟಾಪರ್ ಆಗಿದ್ದಾರೆ. ಲಕ್ಷ್ಮಿ ಮತ್ತು ರಘುಪತಿ ಗೌಡ 588 ಅಂಕ ಪಡೆದು 9ನೇ ಟಾಪರ್ ಆಗಿದ್ದಾರೆ. ಅರುಣ, ಈ.ರಾಜೇಶ್ವರ, ಗುರುರಾಜ್ ಕುರಿಯವರ, ಜ್ಯೋತಿ ಸಂಕಲ್ಪ, ಪಿ.ಲತಾ ಮತ್ತು ಪ್ರವೀಣ 586 ಅಂಕ ಪಡೆದು 10ನೇ ರ್‍ಯಾಂಕ್ ಗಳಿಸಿದ್ದಾರೆ. ಈ ಮೂಲಕ ರಾಜ್ಯಕ್ಕೆ ಕಳೆದ 10 ವರ್ಷಗಳಿಂದ ಇಂದು ಕಾಲೇಜು ನಂಬರ್ 1 ಸ್ಥಾನವನ್ನು ಪಡೆಯುತ್ತಾ ಬಂದಿದೆ. ಇದಕ್ಕೆಲ್ಲ ಇಲ್ಲಿನ ಉತ್ತಮ ಅಧ್ಯಾಪಕ ವರ್ಗದ ಉತ್ತಮ ಬೋಧನೆ ಹಾಗೂ ಶಿಸ್ತಿನಿಂದ ಕಲಿಸುವುದು ಕಾಲೇಜಿನ ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸುವುದರ ಸೀಕ್ರೆಟ್ ಆಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ: Karnataka 2nd PUC Result 2025: 2015ರಿಂದ ಕೊಟ್ಟೂರಿನ ‘ಇಂದು ಕಾಲೇಜು’ ರಾಜ್ಯಕ್ಕೆ ಪ್ರಥಮ ಸ್ಥಾನ