ಬೇಸಿಗೆ ರಜೆ, ಪರೀಕ್ಷೆ ಇಲ್ಲದೇ ಪಾಸ್ ಸುದ್ದಿಗೆ ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್

By Suvarna NewsFirst Published Mar 13, 2021, 8:09 PM IST
Highlights

ಬೇಸಿಗೆ ರಜೆ ಘೋಷಣೆ ಹಾಗೂ ಪರೀಕ್ಷೆ ಇಲ್ಲದೇ‌ ಮುಂದಿನ ತರಗತಿಗೆ ಪಾಸ್ ಎಂಬ ಸುದ್ದಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಂಗಳೂರು, (ಮಾ.13) : ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಕಲಿಯುತ್ತಿರುವ 1ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ‌ ಬೇಸಿಗೆ ರಜೆ ಘೋಷಣೆ, ಪರೀಕ್ಷೆ ಇಲ್ಲದೇ‌ ಮುಂದಿನ ತರಗತಿಗೆ ಪಾಸ್ ಎಂಬ ಸುದ್ದಿ ದೃಶ್ಯ‌ಮಾಧ್ಯಮದ ಚಾನೆಲ್ ಒಂದರಲ್ಲಿ ಬಿತ್ತರವಾಗಿದ್ದು ಇದು ಸತ್ಯಕ್ಕೆ‌ ದೂರವಾದ ಸಂಗತಿ‌ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ‌ ಪರ್ಯಾಯ ಕಲಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬಗ್ಗೆ ಮುಕ್ತ ನಿಲುವನ್ನು ಹೊಂದಿದೆ. ಖಾಸಗಿ ಶಾಲೆಗಳು ಆನ್ ಲೈನ್ ಮೂಲಕ ಕಲಿಕೆಗೆ ಮುಂದಾಗಿವೆ. 1ರಿಂದ 5ರವರೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಆಕಾಶವಾಣಿಯಲ್ಲಿ ಕಲಿಯೋಣ ನಲಿಯೋಣ ಕಾರ್ಯಕ್ರಮ ಬಿತ್ತರ ಮಾಡಲಾಗುತ್ತಿದೆ ಎಂದು ಹೇಳಿದರು.

ಶಾಲಾ-ಕಾಲೇಜುಗಳಿಗೆ 15 ದಿನ ರಜೆನಾ? ಸುತ್ತೋಲೆ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ

ದೂರದರ್ಶನದಲ್ಲಿ‌ ಸಂವೇದಾ‌ ಕಾರ್ಯಕ್ರಮ‌ ಪ್ರಸಾರಗೊಂಡಿದೆ. ಶಿಕ್ಷಕರು ವಿದ್ಯಾರ್ಥಿಗಳ‌ ಕಲಿಕೆಯ ಪ್ರಗತಿಯನ್ನು ತಮ್ಮದೇ ಸ್ಥಳೀಯ‌ ಸಂಪನ್ಮೂಲಗಳ ನೆರವಿನಲ್ಲಿ‌ ಪರಾಮರ್ಶೆ ಮಾಡುತ್ತಿದ್ದಾರೆ. ಇದು ರಾಜ್ಯಾದ್ಯಂತ ಜಾರಿಯಲ್ಲಿದ್ದು, ಈ ಹಂತದಲ್ಲಿ ಬೇಸಿಗೆ ರಜೆಯನ್ನು ಘೋಷಿಸುವ ಪ್ರಸ್ತಾಪ ಇಲಾಖೆಯ ಮುಂದಿಲ್ಲ ಎಂದು ಅವರು ಸ್ಪಷ್ಟ‌ಪಡಿಸಿದರು.

ಇಂತಹ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಮಾಧ್ಯಮಗಳು ಈ ರೀತಿ ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದೆಂದು ಸಚಿವ ಸುರೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

click me!