ಕೊಪ್ಪಳಕ್ಕೆ ಶೀಘ್ರ ವಿಶ್ವವಿದ್ಯಾಲಯ ಮಂಜೂರು: ಸಚಿವ ಅಶ್ವಥನಾರಾಯಣ

By Kannadaprabha News  |  First Published Nov 11, 2020, 2:05 PM IST

ತಳಕಲ್‌ ಗ್ರಾಮದ ಎಂಜಿನಿಯರಿಂಗ್‌ ಕಾಲೇಜು ಪರಿಶೀಲಿಸಿದ ಡಿಸಿಎಂ ಡಾ. ಅಶ್ವಥನಾರಾಯಣ| ಗಂಗಾವತಿಯಲ್ಲಿ ಇರುವ ಎಂಜಿನಿಯರಿಂಗ್‌ ಕಾಲೇಜು ಪ್ರಾರಂಭಿಸುವ ಕುರಿತು ಅಲ್ಲಿನ ಶಾಸಕ ಪರಣ್ಣ ಮುನವಳ್ಳಿ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ| ತಳಕಲ್‌ ಗ್ರಾಮದಲ್ಲಿನ ಎಂಜಿನಿಯರಿಂಗ್‌ ಕಾಲೇಜು ಅತ್ಯುತ್ತಮವಾಗಿದ್ದು, ಇಲ್ಲಿ ಐಐಐಟಿಯ ಉಪಕೇಂದ್ರವನ್ನು ತೆರೆಯುವಂತೆ ಆಗ್ರಹಿಸಿದ ಸಂಸದ ಸಂಗಣ್ಣ ಕರಡಿ| 


ಕೊಪ್ಪಳ(ನ.11): ಜಿಲ್ಲೆ ತೀರಾ ಹಿಂದುಳಿದ ಪ್ರದೇಶವಾಗಿದೆ. ಉನ್ನತ ಶಿಕ್ಷಣ ತೀರಾ ಕಡಿಮೆ ಇದ್ದು, ಇಲ್ಲಿನ ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಯೊಂದನ್ನು ನೀಡಬೇಕು ಎನ್ನುವ ಬೇಡಿಕೆ ದೊಡ್ಡ ಮಟ್ಟದಲ್ಲಿಯೇ ಇದ್ದು, ಶೀಘ್ರದಲ್ಲಿಯೇ ಇಲ್ಲಿಗೊಂದು ವಿವಿ ಮಂಜೂರು ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ ಭರವಸೆ ನೀಡಿದರು.

ತಳಕಲ್‌ ಗ್ರಾಮದಲ್ಲಿ ಎಂಜಿನಿಯರಿಂಗ್‌ ಕಾಲೇಜು ಪರಿಶೀಲಿಸಿ ಬಳಿಕ ಮಂಗಳವಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಸಕ ಹಾಲಪ್ಪ ಆಚಾರ್‌ ಅವರು ಇಲ್ಲಿಗೊಂದು ವಿವಿ ನೀಡಬೇಕು ಎಂದು ಸುಮಾರು ದಿನಗಳಿಂದ ನನಗೆ ಒತ್ತಡ ತರುತ್ತಿದ್ದಾರೆ. ಈ ದಿಸೆಯಲ್ಲಿ ಸರ್ಕಾರ ಸ್ಪಂದನೆ ನೀಡಲಿದೆ ಎಂದರು. ಆದರೆ, ಯಾವ ವಿವಿ ಎನ್ನುವುದನ್ನು ಅವರು ಹೇಳಲೇ ಇಲ್ಲ.

Tap to resize

Latest Videos

ತಳಕಲ್‌ನಲ್ಲಿ ತಲೆ ಎತ್ತಿರುವ ಎಂಜಿನಿಯರಿಂಗ್‌ ಕಾಲೇಜು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದಕ್ಕೆ ಅಗತ್ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮಸ್ಯೆ ಎದುರಿಸುತ್ತಿರುವ ಎಂಜಿನಿಯರಿಂಗ್‌ ಕಾಲೇಜಿಗೆ ಅಗತ್ಯ ಮೂಲ ಸೌಕರ್ಯ ಮತ್ತು ಉಪನ್ಯಾಸಕರು ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ನೀಡಲಾಗುವುದು. ತಡಮಾಡದೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಕೇವಲ 5 ಸಾವಿರ ಕೋಟಿ ನೀಡಲಾಗುತ್ತದೆ. ಅದರಲ್ಲಿ 4300 ಕೋಟಿಗೂ ಹೆಚ್ಚು ವೇತನಕ್ಕೆ ಹೋಗುತ್ತದೆ. ಉಳಿದಿರುವುದು ಗುತ್ತಿಗೆದಾರರ ಸಿಬ್ಬಂದಿಗೂ ವೆಚ್ಚವಾಗಿ ಕೇವಲ .200 ಕೋಟಿ ಮಾತ್ರ ಉಳಿಯುತ್ತದೆ. ಅದರಲ್ಲಿಯೇ ಅಭಿವೃದ್ಧಿಯನ್ನು ಮಾಡಬೇಕಾಗಿದೆ. ಹೀಗಾಗಿ ಹೆಚ್ಚು ಹೆಚ್ಚು ಅನುದಾನವನ್ನು ಪಡೆಯುವ ಅಗತ್ಯವಿದೆ ಎಂದರು.

ನ.17ಕ್ಕೆ ವಿವಿ, ಕಾಲೇಜು ಪುನಾರಂಭಕ್ಕೆ ಭರದ ಸಿದ್ಧತೆ

ಗಂಗಾವತಿಯಲ್ಲಿ ಇರುವ ಎಂಜಿನಿಯರಿಂಗ್‌ ಕಾಲೇಜು ಪ್ರಾರಂಭಿಸುವ ಕುರಿತು ಅಲ್ಲಿನ ಶಾಸಕ ಪರಣ್ಣ ಮುನವಳ್ಳಿ ಅವರು ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆ ದಿಸೆಯಲ್ಲಿಯೂ ಕ್ರಮವಹಿಸುವ ಭರವಸೆ ನೀಡಿದರು. ತಳಕಲ್‌ ಗ್ರಾಮದಲ್ಲಿನ ಎಂಜಿನಿಯರಿಂಗ್‌ ಕಾಲೇಜು ಅತ್ಯುತ್ತಮವಾಗಿದ್ದು, ಇಲ್ಲಿ ಐಐಐಟಿಯ ಉಪಕೇಂದ್ರವನ್ನು ತೆರೆಯುವಂತೆ ಸಂಸದ ಸಂಗಣ್ಣ ಕರಡಿ ಅವರು ಆಗ್ರಹಿಸಿದರು. ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ಉನ್ನತ ಶಿಕ್ಷಣದ ಕೊರತೆ ವಿಪರೀತ ಇದ್ದು, ಇದನ್ನು ನೀಗಿಸುವ ದಿಸೆಯಲ್ಲಿ ಮುಂದಾಗುವಂತೆ ಮನವಿ ಮಾಡಿದರು.

ಶಾಸಕ ಅಮರೇಗೌಡ ಭಯ್ಯಾಪುರ ಮಾತನಾಡಿ, ಹಿಂದುಳಿದ ಕೊಪ್ಪಳ ಜಿಲ್ಲೆಯಲ್ಲಿ ಉನ್ನತ ಶಿಕ್ಷಣದ ಕೊರತೆ ಇದ್ದು, ಇಲ್ಲೊಂದು ತೋಟಗಾರಿಕಾ ಕಾಲೇಜನ್ನು ಸಹ ನೀಡುವ ಅಗತ್ಯವಿದೆ ಎಂದರು. ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ ಸುರಳ್ಕರ್‌, ಎಸ್ಪಿ ಟಿ. ಶ್ರೀಧರ್‌, ಜಿಪಂ ಸಿಇಒ ರಘುನಂದನ್‌ ಮೂರ್ತಿ ಸೇರಿದಂತೆ ಅನೇಕರು ಇದ್ದರು.

ಅಗತ್ಯ ಸಿಬ್ಬಂದಿ ತರಲಿಲ್ಲ: ಆಚಾರ್‌

ಕಾಲೇಜು ತಂದಿರುವವರು (ಬಸವರಾಜ ರಾಯರಡ್ಡಿ) ಅಗತ್ಯ ಉಪನ್ಯಾಸಕರನ್ನು ಹಾಗೂ ಸಿಬ್ಬಂದಿಯನ್ನು ತರಲಿಲ್ಲ. ಪರಿಣಾಮ ಸಮಸ್ಯೆಯಾಗಿದೆ. ಇದನ್ನು ಇತ್ಯರ್ಥ ಮಾಡಬೇಕಾಗಿದೆ ಎಂದು ಶಾಸಕ ಹಾಲಪ್ಪ ಆಚಾರ್‌ ಅವರು ಹೇಳಿದರು.

ರಾಯರಡ್ಡಿ ಅವರ ಹೆಸರು ಹೇಳದೆ, ಅವರೇ ಸಚಿವರಾಗಿದ್ದರೂ ಇಲ್ಲಿಗೆ ಸಿಬ್ಬಂದಿ ಮತ್ತು ಉಪನ್ಯಾಸಕರನ್ನು ಕೊಡಲು ಆಗಿಲ್ಲ. ಹೀಗಾಗಿ ಸಮಸ್ಯೆಯಾಗಿದೆ. ಆದ್ದರಿಂದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‌ನಾರಾಯಣ ಅವರಿಗೆ ಸಮಸ್ಯೆ ಬಗೆಹರಿಸಲು ಮನವಿ ಮಾಡಿಕೊಂಡಿದ್ದು, ಭರವಸೆಯೂ ಸಿಕ್ಕಿದೆ ಎಂದರು.

ರಾಜನಿಲ್ಲದ ಅರಮನೆ

ರಾಜನಿಲ್ಲದ, ಸೈನಿಕನಿಲ್ಲದ ಅರಮನೆಯಂತೆ ತಳಕಲ್‌ ಎಂಜಿನಿಯರಿಂಗ್‌ ಕಾಲೇಜು ಆಗಿದ್ದು, ಇಲ್ಲಿ ಬೋಧಕ- ಬೋಧಕೇತರ ಸಿಬ್ಬಂದಿಯನ್ನು ನೀಡುವ ಅಗತ್ಯವಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು. ಹಿಂದಿನವರು ಕೇವಲ ಕಟ್ಟಡ ನಿರ್ಮಾಣ ಮಾಡಿದರೆ ವಿನಃ ಅದಕ್ಕೆ ಅಗತ್ಯ ಸಿಬ್ಬಂದಿಯನ್ನು ನೀಡಿಲ್ಲ. ಈ ದಿಸೆಯಲ್ಲಿ ಈಗಿನ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
 

click me!