ಶಾಸಕರು ಹೇಳಿದ್ದನ್ನೆಲ್ಲ ಜನ ಕೇಳಬೇಕಿಲ್ಲ: ಸಚಿವ ನಾಗೇಶ್‌

By Kannadaprabha News  |  First Published Nov 30, 2022, 7:30 AM IST

ಪ್ರಶ್ನಿಸುವ ಮನೋಭಾವ ಬೆಳಸಿಕೊಳ್ಳಿ, ಶಾಸಕರು ಹೇಳಿದಂತೆ ಕೇಳುವ ಮನಸ್ಥಿತಿ ಬದಲಾಗಬೇಕು, ವಿದ್ಯಾರ್ಥಿಗಳು ಪ್ರಶ್ನಿಸುವ ಛಾತಿ ಹೊಂದಬೇಕು: ನಾಗೇಶ್‌


ಬೆಂಗಳೂರು(ನ.30):  ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಶಾಸಕರು, ಅಧಿಕಾರಿಗಳು ಹೇಳಿದಂತೆ ಕೇಳುವ ಮನಸ್ಥಿತಿ ಬದಲಾಗಬೇಕು, ತಪ್ಪುಗಳನ್ನು ತೋರಿಸಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಶಿಕ್ಷಕರ ಸದನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 2022 ನೇ ಸಾಲಿನ ‘ರಾಜ್ಯಮಟ್ಟದ ಯುವ ಸಂಸತ್‌ ಸ್ಪರ್ಧೆ’ಯಲ್ಲಿ ವಿಜೇತರಾದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಹಕ್ಕುಗಳ ಬಗ್ಗೆ ಮಾತನಾಡುವ ನಾವು ಕರ್ತವ್ಯಗಳ ಬಗ್ಗೆಯೂ ಮಾತನಾಡಬೇಕು ಎಂದರು.

Tap to resize

Latest Videos

Hijab Case: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಬ್ಯಾನ್‌ ಮುಂದುವರಿಯುತ್ತೆ!

ದುರಹಂಕಾರದ ಮಾತು:

ಪ್ರಧಾನಿ ನರೇಂದ್ರ ಮೋದಿಯವರು ಸಂಸತ್‌ ಪ್ರವೇಶಿಸುವಾಗ ಚಪ್ಪಲಿ ಬಿಟ್ಟು ನಮಸ್ಕರಿಸಿ ಒಳ ನಡೆದರು. ಸಂಸತ್‌ ಅನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಹೇಳಿದರು. ಅದೇ ರೀತಿ ನಾವು ಬೇರೆ ಆಹಾರ ಸೇವಿಸಿದರೆ ದೇವಸ್ಥಾನಕ್ಕೆ ಹೋಗುವುದಿಲ್ಲ. ಆದರೆ ಕೆಲವರು ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗುತ್ತೇವೆ ಎಂದು ದುರಹಂಕಾರದಿಂದ ಹೇಳಿಕೆ ನೀಡುತ್ತಾರೆ ಎಂದು ತರಾಟೆ ತೆಗೆದುಕೊಂಡರು.

ಬ್ರಿಟಿಷರು ಜಾರಿಗೆ ತಂದ ಮೆಕಾಲೆ ಶಿಕ್ಷಣ ಪದ್ಧತಿಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಾಣಬಹುದು ಎಂದು ಕೆಲವರು ವಾದಿಸುತ್ತಾರೆ. ಇದು ತಪ್ಪು. ನಮ್ಮ ರಕ್ತ, ಮಣ್ಣಿನಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಯಿದೆ. ಹಿಂದಿನ ಕಾಲದಲ್ಲಿ ರಾಜರು ಪ್ರಜೆಗಳ ಅಭಿಪ್ರಾಯಕ್ಕೆ ಬೆಲೆ ಕೊಡುತ್ತಿದ್ದರು. ಗೂಢಚಾರರಿಂದ ಮಾಹಿತಿ ಪಡೆಯುತ್ತಿದ್ದರು. ಯಾವುದೇ ಮಹತ್ವದ ಕಾರ್ಯಕ್ಕಾದರೂ ಮಂತ್ರಿಗಳ ಸಲಹೆ ಪಡೆದು ಕಾರ್ಯೋನ್ಮುಖವಾಗುತ್ತಿದ್ದರು ಎಂದು ವ್ಯಾಖ್ಯಾನಿಸಿದರು.
ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಜಿ.ಶ್ರೀಧರ್‌ ಮತ್ತಿತರರು ಉಪಸ್ಥಿತರಿದ್ದರು.

ಯುವ ಸಂಸತ್‌ ವಿಜೇತರು:

ಯುವ ಸಂಸತ್‌ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೃತಸ್ವರ ದೀಪ್ತ ಪ್ರಥಮ ಸ್ಥಾನ ಪಡೆದರು. ಚಿಕ್ಕೋಡಿಯ ನಾಗನೂರ ಮುರಾರ್ಜಿ ವಸತಿ ಶಾಲೆಯ ಶುಭಂ ಅಣ್ಣಾಸಾಬ ವಾನನ್ನವರ ದ್ವಿತೀಯ, ಬಾಗಲಕೋಟೆಯ ಬೀಳಗಿಯ ಆದರ್ಶ ವಿದ್ಯಾಲಯದ ಅರ್ಪಿತಾ ಎಸ್‌.ಕುಬಕಡ್ಡಿ ತೃತೀಯ ಸ್ಥಾನ ಪಡೆದರು.

Department of Education: ಅನುದಾನಿತ ಪ್ರೌಢಶಾಲೆ ಖಾಲಿ ಹುದ್ದೆ ಭರ್ತಿಗೆ ಕ್ರಮ: ನಾಗೇಶ್‌

ನಮ್ಮ ಸಂವಿಧಾನ ನಮ್ಮ ಹೆಮ್ಮೆಯಾಗಿದೆ. ವಿಶ್ವವೇ ಬೆರಗಿನಿಂದ ನೋಡುವಂತಹ ಸಂವಿಧಾನ ನಮ್ಮದಾಗಿದ್ದು ಇದನ್ನು ಪಾಕಿಸ್ತಾನ, ಬರ್ಮಾ, ಶ್ರೀಲಂಕಾ, ನೇಪಾಳದಲ್ಲಿ ಕಾಣಲು ಸಾಧ್ಯವಿಲ್ಲ ಅಂತ ಶಾಸಕ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿ ರಾಜ್ಯಮಟ್ಟದ ಯುವ ಸಂಸತ್‌ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಬಹುಮಾನ ವಿತರಿಸಿದರು. ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಜಿ.ಶ್ರೀಧರ್‌ ಮತ್ತಿತರರು ಉಪಸ್ಥಿತರಿದ್ದರು.
 

click me!