ಖಾಸಗಿ ಶಾಲೆ ಸಂಘ ವಿರುದ್ಧ ಮಾನನಷ್ಟ ಕೇಸ್‌: ನಾಗೇಶ್‌ ಗರಂ

By Kannadaprabha NewsFirst Published Aug 30, 2022, 5:47 AM IST
Highlights

ಭ್ರಷ್ಟಾಚಾರದ ಆರೋಪ ಮಾಡಿದ್ದಕ್ಕೆ ಶಿಕ್ಷಣ ಸಚಿವ ನಾಗೇಶ್‌ ಆಕ್ರೋಶ, ರುಪ್ಸಾದಿಂದ ಬ್ಲ್ಯಾಕ್ಮೇಲ್‌ ವರ್ತನೆಗೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದ ಸಚಿವರು.

ಬೆಂಗಳೂರು (ಆ.30): ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘಟನೆ (ರುಪ್ಸಾ) ಮಾಡಿರುವ ಭ್ರಷ್ಟಾಚಾರ ಆರೋಪ ರಾಜಕೀಯ ಸ್ಟಂಟ್‌ ಆಗಿದ್ದು, ದಾಖಲೆ ಇಲ್ಲದೆ ಮಾಡಿರುವ ಬ್ಲ್ಯಾಕ್‌ಮೇಲ್‌ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಶೀಘ್ರದಲ್ಲೇ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್‌ ಹೇಳಿದ್ದಾರೆ. ಇತ್ತೀಚೆಗೆ ರುಪ್ಸಾ ಸಂಘಟನೆಯು ‘ಶಿಕ್ಷಣ ಇಲಾಖೆಯಲ್ಲಿ ಶಾಲೆಗಳ ಮಾನ್ಯತೆ ನವೀಕರಣ ಮಾಡಲು ಲಕ್ಷಾಂತರ ರು. ಲಂಚ ಕೇಳಲಾಗುತ್ತಿದೆ. ಆರ್‌ಟಿಇ ಶುಲ್ಕ ಮರು ಪಾವತಿಗೆ ಶೇ 30ರಿಂದ 40 ರಷ್ಟು ಕಮಿಷನ್‌ಗೆ ಬೇಡಿಕೆ ಇಡಲಾಗುತ್ತಿದೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ’ ಎಂದು ಆರೋಪಿಸಿತ್ತು. ಈ ಬಗ್ಗೆ ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಚಿವರು, ರುಪ್ಸಾ ಸಂಘಟನೆಯವರು ದಾಖಲೆ ಕೊಟ್ಟು ಮಾತನಾಡಬೇಕು. ಬದಲಿಗೆ ಬ್ಲ್ಯಾಕ್‌ಮೇಲ್‌ ಮಾಡುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಯಾರಾದರೂ ಒಬ್ಬರು ದಾಖಲೆ ಕೊಟ್ಟರೂ ತೆಗೆದುಕೊಂಡು ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ. ಯಾರ ಮೂಲಕ ಆದರೂ ದಾಖಲೆ ನೀಡಲಿ, ಮಾಧ್ಯಮಗಳ ಮೂಲಕ ದಾಖಲೆ ನೀಡಿದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬ್ಲ್ಯಾಕ್‌ಮೇಲ್‌ ತಂತ್ರ: ಇತ್ತೀಚೆಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿ ಯಾವ ಸಂಸ್ಥೆ ಮಾನ್ಯತೆ ಪಡೆಯದೆ, ದಾಖಲೆಗಳಿಲ್ಲದೆ ಶಾಲೆ ನಡೆಸುತ್ತವೆಯೋ ಅಂಥವುಗಳ ಪಟ್ಟಿನೀಡುವಂತೆ ಕೇಳಲಾಗಿತ್ತು. ಈಗಾಗಲೇ ದಾಖಲೆಗಳಿಲ್ಲದ ಎರಡು ಶಾಲೆಯ ವಿರುದ್ಧ ಎಫ್‌ಐಆರ್‌ ಸಹ ದಾಖಲಿಸಲಾಗಿದೆ. ಕೆಲ ಶಾಲೆಗಳನ್ನು ಮುಚ್ಚಲಾಗಿದೆ. ಈ ಕಾರಣದಿಂದ ಬ್ಲ್ಯಾಕ್‌ಮೇಲ್‌ ಮಾಡುವ ತಂತ್ರ ನಡೆಯುತ್ತಿದೆ. ಆರೋಪ ಸತ್ಯವಾಗಿದ್ದರೆ ದಾಖಲೆ ನೀಡಬೇಕಿತ್ತು, ಅದನ್ನು ಬಿಟ್ಟು ಈ ರೀತಿ ಬೇಜವಾಬ್ದಾರಿ ಆರೋಪ ಮಾಡುತ್ತಿರಲಿಲ್ಲ ಎಂದು ಕಿಡಿಕಾರಿದರು.

ಈಗ ಆರೋಪ ಮಾಡಿರುವವರು ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಆದರೆ ಬ್ಲ್ಯಾಕ್‌ಮೇಲ್‌ ಮಾಡುವವರು ಈ ರೀತಿ ದಾಖಲೆ ಇಲ್ಲದೆ ಆರೋಪಿಸುತ್ತಾರೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮದರಸ ಶಾಲೆ ಮಕ್ಕಳನ್ನು ಬುದ್ದಿವಂತರಾಗಿಸುವ ಆಸೆ: ಸಚಿವ ನಾಗೇಶ್‌

ಹೊಸದಾಗಿ ಶಾಲೆ ಆರಂಭಿಸುವವರಿಗೆ ಶಿಕ್ಷಣ ಇಲಾಖೆಯ ನಿಯಮದ ಪ್ರಕಾರ ದಾಖಲೆ ಕೇಳಿದ್ದೇವೆ. ದಾಖಲೆಗಳನ್ನು ಕೇಳುತ್ತಿರುವುದು ಮಕ್ಕಳ ದೃಷ್ಟಿಯಿಂದ ಮಾತ್ರ. ಹೊಸದಾಗಿ ಯಾವ ನಿಯಮವನ್ನೂ ಮಾಡಿಲ್ಲ. ಎಲ್ಲ ಶಾಲೆಗಳೂ ದಾಖಲೆ ಸಲ್ಲಿಸಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಮಂಡ್ಯ ವಿಶ್ವವಿದ್ಯಾಲಯ ಕನಸು-ನನಸು, ವಿವಿ ವ್ಯಾಪ್ತಿಯಲ್ಲಿ 47 ಪದವಿ ಕಾಲೇಜುಗಳು

ಏನಿದು ಜಟಾಪಟಿ?
- ಶಿಕ್ಷಣ ಇಲಾಖೆಯಲ್ಲಿ (Education Department) ಶಾಲೆಗಳ (School) ಮಾನ್ಯತೆ ನವೀಕರಣಕ್ಕೆ ಲಕ್ಷಾಂತರ ರು. ಲಂಚ ಕೇಳಲಾಗುತ್ತಿದೆ ಎಂದು ರುಪ್ಸಾ (RUPSA) ಆರೋಪ
- ಆರ್‌ಟಿಇ ಶುಲ್ಕ ಮರುಪಾವತಿಗೆ 30%, 40% ಕಮಿಷನ್‌ ಕೇಳುತ್ತಿದ್ದಾರೆ, ಭ್ರಷ್ಟಾಚಾರ ಹೆಚ್ಚಾಗಿದೆ ಎಂದೂ ಆರೋಪ
- ದಾಖಲೆ ಕೊಟ್ಟು ಮಾತಾಡಿ, ಬ್ಲ್ಯಾಕ್‌ಮೇಲ್‌ ಮಾಡುವ ರೀತಿಯಲ್ಲಿ ನಡೆದುಕೊಳ್ಳಬೇಡಿ ಎಂದು ಸಚಿವ ನಾಗೇಶ್‌ (minister B C Nagesh) ಕಿಡಿ

click me!