Asianet Suvarna News Asianet Suvarna News

ಮಂಡ್ಯ ವಿಶ್ವವಿದ್ಯಾಲಯ ಕನಸು-ನನಸು, ವಿವಿ ವ್ಯಾಪ್ತಿಯಲ್ಲಿ 47 ಪದವಿ ಕಾಲೇಜುಗಳು

ಮಂಡ್ಯ ವಿಶ್ವವಿದ್ಯಾಲಯ ಕನಸು-ನನಸು.  ಶಿಕ್ಷಣ ಕ್ಷೇತ್ರಕ್ಕೆ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಕೊಡುಗೆ.  ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಯಲ್ಲಿ ಹೊಸ ಮೈಲಿಗಲ್ಲು.

47 colleges to come under Mandya University gow
Author
Bengaluru, First Published Aug 27, 2022, 1:58 PM IST

ಮಂಡ್ಯ ಮಂಜುನಾಥ

ಮಂಡ್ಯ (ಆ.27): ಮಂಡ್ಯ ವಿಶ್ವವಿದ್ಯಾಲಯದ ಕನಸು ಈಗ ನನಸಾಗಿದೆ. ಇದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರ ಶ್ರಮದ ಫಲ. ಮೈಸೂರು ವಿಶ್ವವಿದ್ಯಾಲಯದ ಅಧೀನದಲ್ಲಿದ್ದ ಮಂಡ್ಯ ಜಿಲ್ಲೆ ಪೂರ್ಣ ಪ್ರಮಾಣದ ವಿಶ್ವವಿದ್ಯಾನಿಲಯವಾಗಿ ಇದೀಗ ಹೊರಹೊಮ್ಮಿದೆ. 2019ರಲ್ಲಿ ಮಂಡ್ಯ ಸರ್ಕಾರಿ ಮಹಾ ವಿದ್ಯಾಲಯಕ್ಕೆ ಏಕೀಕೃತ ವಿಶ್ವವಿದ್ಯಾನಿಲಯದ ಸ್ಥಾನಮಾನವನ್ನು ಘೋಷಿಸಲಾಗಿತ್ತು. ಆದರೆ, ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳೆಲ್ಲವೂ ಬಹಳ ಹಿಂದಿನಿಂದಲೂ ಮೈಸೂರು ವಿಶ್ವವಿದ್ಯಾನಿಲಯದ ಅಧೀನದಲ್ಲೇ ಇದ್ದವು. ಮಂಡ್ಯದಲ್ಲಿ ಕೆಲವು ಆಯ್ದ ವಿಷಯಗಳನ್ನೊಳಗೊಂಡ ಸ್ನಾತಕೋತ್ತರ ಕೇಂದ್ರವನ್ನು ಬಿಟ್ಟರೆ ಹೆಚ್ಚಿನ ಶೈಕ್ಷಣಿಕ ಪ್ರಗತಿಯೇನೂ ಆಗಿರಲಿಲ್ಲ. ಇದರಿಂದಾಗಿ ಜಿಲ್ಲೆಯ ಯುವಕ-ಯುವತಿಯರು ಉನ್ನತ ಶಿಕ್ಷಣದಲ್ಲಿ ಸ್ನಾತಕೋತ್ತರ ಅಧ್ಯಯನ, ಡಾಕ್ಟರೇಟ್‌ ಅಧ್ಯಯನ ಇತ್ಯಾದಿಗಳಿಗೆ ಜಿಲ್ಲೆಯ ವಿಧ್ಯಾರ್ಥಿಗಳು ಮೈಸೂರು, ಬೆಂಗಳೂರು, ಹಾಸನ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿರುವ ವಿಶ್ವವಿದ್ಯಾಲಯ ಕಡೆ ತೆರಳುತ್ತಿದ್ದರು. ಈ ರೀತಿಯ ಪ್ರಾದೇಶಿಕ ಅಸಮತೋಲನ ನಿವಾರಿಸಲು ಸಚಿವ ಅಶ್ವತ್ಥನಾರಾಯಣ ಅವರ ರಚನಾತ್ಮಕ ಆಸಕ್ತಿಯಿಂದ ಅವೆಲ್ಲವೂ ಮಂಡ್ಯ ವಿಶ್ವ ವಿದ್ಯಾನಿಲಯದಲ್ಲೇ ದೊರಕುವಂತಾಗಿದೆ.

ಸಂಶೋಧನೆಗೆ ಮುಕ್ತ ಅವಕಾಶ: ಪ್ರಾದೇಶಿಕ ಸಮಾನತೆ ನೀಡುವ ದೃಷ್ಟಿಯಿಂದ ಮಂಡ್ಯ ಏಕೀಕೃತ ವಿಶ್ವ ವಿದ್ಯಾನಿಲಯವನ್ನು ಮಂಡ್ಯ ಜಿಲ್ಲಾ ವಿಶ್ವವಿದ್ಯಾನಿಲಯವಾಗಿ ಗುರುವಾರ (ಆ.25) ಸಚಿವ ಸಂಪುಟ ಪರಿವರ್ತಿಸಿ ಅನುಮೋದಿಸಿದೆ. ಇದರಿಂದ ಮಂಡ್ಯ ಜಿಲ್ಲಾ ವ್ಯಾಪ್ತಿಯ ಸುಮಾರು 47ಕ್ಕೂ ಹೆಚ್ಚಿನ ಪದವಿ ಕಾಲೇಜುಗಳು ಮಂಡ್ಯ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡಲಿವೆ. ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಈಗ ಕೌಶಲ್ಯಾಧಾರಿತ, ಸಂಶೋಧನಾತ್ಮಕ ಹಾಗೂ ತಾಂತ್ರಿಕವಾಗಿಯೂ ಶಿಕ್ಷಣವನ್ನು ಕಲಿಯುವುದಕ್ಕೆ ಪೂರಕವಾದ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಈ ಅವಕಾಶಗಳು ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಹೊರ ರಾಜ್ಯದ ಹಾಗೂ ವಿದೇಶ ವಿದ್ಯಾರ್ಥಿಗಳಿಗೂ ಸಂಶೋಧನೆಗೆ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಮುಕ್ತ ಅವಕಾಶ ಮಾಡಿ ಕೊಡಲಿದೆ.

ಸಂಯೋಜನಾ ವಿಶ್ವವಿದ್ಯಾಲಯದಿಂದ ಪೂರ್ಣ ಪ್ರಮಾಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, ಪ್ರಾದೇಶಿಕ ಅಸಮತೋಲನ ನಿವಾರಣೆ, ಒಂದು ಕೇಂದ್ರೀಕೃತ ಕಚೇರಿಯಿಂದ ಆಡಳಿತ, ಹೆಚ್ಚಿನ ಹಣದ ಸವಲತ್ತು, ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಅವಕಾಶ, ಸಂಶೋಧನಾ ಕೇಂದ್ರಗಳಿಂದ ಉನ್ನತ ಮಟ್ಟದ ಆವಿಷ್ಕಾರಗಳು ಅನೇಕ ಅನುಕೂಲತೆಗಳಿಗೆ ಕಾರಣವಾಗಿದೆ. ಹೀಗಾಗಿ ಮಂಡ್ಯ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಹೊಸ ಅಧ್ಯಾಯ ಶುರುವಾದಂತಾಗಿದೆ.

32 ಎಕರೆ ಭೂಮಿ: ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಮಂಡ್ಯ ಜಿಲ್ಲೆಯವರಾಗಿದ್ದು, ಮಂಡ್ಯ ವಿಶ್ವವಿದ್ಯಾನಿಲಯವನ್ನು ತವರಿಗೆ ಕೊಡುಗೆಯಾಗಿ ನೀಡಿದ್ದಾರೆ. 32 ಎಕರೆ ಭೂಮಿಯನ್ನು ಹೊಂದಿರುವ ಸರ್ಕಾರಿ ಮಹಾ ವಿದ್ಯಾಲಯವನ್ನು ಮಂಡ್ಯ ವಿಶ್ವವಿದ್ಯಾನಿಲಯವಾಗಿ ಪರಿವರ್ತಿಸಲು 55 ಕೋಟಿ ರು.ಹಣವನ್ನು ತಕ್ಷಣಕ್ಕೆ ಬಿಡುಗಡೆ ಮಾಡಿಸಿ ಸಚಿವ ಸಂಪುಟದ ಅನುಮೋದನೆ ದೊರಕಿಸಿಕೊಟ್ಟಿದ್ದಾರೆ. ಹೊಸ ಬಗೆಯ ಕೋರ್ಸ್‌ಗಳನ್ನು ಮಂಡ್ಯ ವಿಶ್ವವಿದ್ಯಾನಿಲಯಕ್ಕೆ ಅಳವಡಿಸುತ್ತಾ ಇತರೆ ವಿಶ್ವವಿದ್ಯಾನಿಲಯಗಳ ಮಾದರಿಯಲ್ಲೇ ಗೌರವ-ಘನತೆಗಳನ್ನು ಹೆಚ್ಚಿಸಿದ್ದಾರೆ.

ಈಗಾಗಲೇ ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಹೊಸ ಹೊಸ ಕೋರ್ಸ್‌ಗಳನ್ನು ಸೇರ್ಪಡೆ ಮಾಡುವ ಕಾರ್ಯ ಆರಂಭಗೊಂಡಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಮುಗಿದು ಅಕ್ಟೋಬರ್‌ನಲ್ಲಿ ಗೆಜೆಟ್‌ ನೋಟಿಫಿಕೇಷನ್‌ ಪ್ರಕಟವಾಗಲಿದೆ.

ಶೈಕ್ಷಣಿಕ ಬೆಳವಣಿಗೆಯ ತ್ರಿಮೂರ್ತಿಗಳು: ಮಂಡ್ಯ ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಯಲ್ಲಿ ನಿತ್ಯ ಸಚಿವ ಕೆ.ವಿ.ಶಂಕರಗೌಡರ ಕೊಡುಗೆ ದೊಡ್ಡದು. ಆ ನಂತರದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಿಸುವಲ್ಲಿ ನೆರವಾದವರು ಜಿ.ಮಾದೇಗೌಡರು. ಈಗ ಮಂಡ್ಯ ವಿಶ್ವವಿದ್ಯಾನಿಲಯದೊಂದಿಗೆ ಶೈಕ್ಷಣಿಕವಾಗಿ ಜಿಲ್ಲೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದವರು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ.

ಜಿಲ್ಲಾ ಕೇಂದ್ರದಿಂದ ನಾಲ್ಕು ದಿಕ್ಕುಗಳಲ್ಲೂ 70-80 ಕಿಲೋಮೀಟರ್‌ ಸುತ್ತಳತೆ ಹೊಂದಿರುವ ಜಿಲ್ಲೆಗೆ ಪೂರ್ಣಪ್ರಮಾಣದ ಒಂದು ಸ್ವತಂತ್ರ ವಿಶ್ವವಿದ್ಯಾಲಯದ ಅಗತ್ಯ ಇದ್ದೇ ಇತ್ತು. ಜಿಲ್ಲೆಯೊಳಗೆ ಸುಮಾರು ಒಂದು ಲಕ್ಷದಷ್ಟುವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ತೊಡಗಿಕೊಂಡಿದ್ದಾರೆ. ಅವರು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಬೇಕಾದರೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ. ಇದನ್ನು ಮನಗಂಡ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಒಮ್ಮೆಯಷ್ಟೇ ಕಾಲೇಜಿಗೆ ತೆರಳಿ ಎಲ್ಲರೊಂದಿಗೆ ಚರ್ಚಿಸಿದ್ದಷ್ಟೇ. ಅದೊಂದು ಚರ್ಚೆಯಿಂದಲೇ ವಿಶ್ವ ವಿದ್ಯಾನಿಲಯ ಮಾಡಬೇಕೆಂಬ ದೃಢಸಂಕಲ್ಪ ಮಾಡಿದರು. ಒಂದೇ ತಿಂಗಳಲ್ಲಿ ಕೊಟ್ಟಮಾತಿನಂತೆ ಸಚಿವ ಸಂಪುಟ ಒಪ್ಪಿಗೆಯನ್ನೂ ದೊರಕಿಸಿಕೊಟ್ಟರು.

ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ವಿನೂತನ ಮಾದರಿಯ ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶವಿದೆ. ಆ ಮೂಲಕ ಜಿಲ್ಲೆಯ ಸುಸ್ಥಿರ ಅಭಿವೃದ್ಧಿ, ಕೃಷಿ ಮಾರುಕಟ್ಟೆವಿಸ್ತರಣೆ, ಕೃಷಿ ಆಧಾರಿತ ಉದ್ಯಮಶೀಲತೆ, ಉದ್ಯೋಗಾವಕಾಶಗಳ ಸೃಷ್ಟಿಇವೆಲ್ಲವನ್ನೂ ಸಾಧಿಸಬಹುದು. ಗ್ರಾಮೀಣ ಪ್ರದೇಶದ ಮಕ್ಕಳು ಜೀವನೋಪಾಯಕ್ಕಾಗಿ ಅನಗತ್ಯವಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದೂ ತಪ್ಪುತ್ತದೆ. ನೂತನ ವಿಶ್ವ ವಿದ್ಯಾಲಯವು ಇವೆಲ್ಲವನ್ನೂ ತನ್ನ ಆಶಯ ಮತ್ತು ಗುರಿಗಳಲ್ಲಿ ಅಳವಡಿಸಿಕೊಳ್ಳಲಿದೆ.

- ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

1960ರ ದಶಕದಲ್ಲಿ ಸಚಿವರಾಗಿದ್ದ ಕೆ.ವಿ.ಶಂಕರಗೌಡರ ಕಂಡ ಕನಸು ಈಗ ನನಸಾಗಿದೆ. ವಿ.ಸಿ.ಫಾರಂನಲ್ಲಿ ಕೃಷಿ ಕಾಲೇಜು ಆಗಬೇಕು. ಮಂಡ್ಯ ವಿಶ್ವವಿದ್ಯಾನಿಲಯವಾಗಬೇಕು ಎಂದಿದ್ದರು. ವಿಶ್ವವಿದ್ಯಾನಿಲಯದಿಂದ ಪಿಜಿ ಕೋರ್ಸ್‌ಗಳು ತೆರೆದು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಹೆಚ್ಚಿನ ಅನುಕೂಲವಾಗಿದೆ. ಸ್ನಾತಕೋತ್ತರ ಪದವಿಗಳಿಗಾಗಿ ಹೊರ ಜಿಲ್ಲೆಗಳಿಗೆ ಅಲೆಯುವುದು ತಪ್ಪಿದೆ. ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಿದರಷ್ಟೇ ಸಾಲದು. ಅದಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ದೊರಕಿಸಿಕೊಡಬೇಕು.

- ಪ್ರೊ.ಬಿ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ

Follow Us:
Download App:
  • android
  • ios