ವಿಜಯಪುರ: ಮಕ್ಕಳಿಲ್ಲದೆ ಮಧ್ಯಾಹ್ನದ ಬಿಸಿಯೂಟ ಸ್ಥಗಿತ!

By Kannadaprabha News  |  First Published May 25, 2024, 7:03 AM IST

ಶೈಕ್ಷಣಿಕ ವರ್ಷ ಮುಗಿದು ಬೇಸಿಗೆ ರಜೆ ಆರಂಭವಾದಾಗ ಲಕ್ಷಾಂತರ ಮಕ್ಕಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಶಾಲೆಗಳಲ್ಲಿ ಬಿಸಿಯೂಟ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. ಆದರೆ, ಆರಂಭದಲ್ಲಿ ಉತ್ಸಾಹದಿಂದಲೇ ಶಾಲೆಯಲ್ಲಿನ ಬಿಸಿಯೂಟಕ್ಕೆ ಬರುತ್ತಿದ್ದ ಮಕ್ಕಳು ದಿನ ಕಳೆದಂತೆ ಊಟಕ್ಕೆ ಬರುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ಅರ್ಧಕ್ಕರ್ಧ ಶಾಲೆಗಳಲ್ಲಿ ಬಿಸಿಯೂಟ ಬಂದ್ ಆಗಿದೆ.


ಶಶಿಕಾಂತ ಮೆಂಡೆಗಾರ

ವಿಜಯಪುರ (ಮೇ.25) : ಶೈಕ್ಷಣಿಕ ವರ್ಷ ಮುಗಿದು ಬೇಸಿಗೆ ರಜೆ ಆರಂಭವಾದಾಗ ಲಕ್ಷಾಂತರ ಮಕ್ಕಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಶಾಲೆಗಳಲ್ಲಿ ಬಿಸಿಯೂಟ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. ಆದರೆ, ಆರಂಭದಲ್ಲಿ ಉತ್ಸಾಹದಿಂದಲೇ ಶಾಲೆಯಲ್ಲಿನ ಬಿಸಿಯೂಟಕ್ಕೆ ಬರುತ್ತಿದ್ದ ಮಕ್ಕಳು ದಿನ ಕಳೆದಂತೆ ಊಟಕ್ಕೆ ಬರುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ಅರ್ಧಕ್ಕರ್ಧ ಶಾಲೆಗಳಲ್ಲಿ ಬಿಸಿಯೂಟ ಬಂದ್ ಆಗಿದೆ.

Tap to resize

Latest Videos

undefined

ಈ ಹಿಂದೆ ಬೇಸಿಗೆ ರಜೆಯಲ್ಲಿ ಅದೆಷ್ಟೋ ಮಕ್ಕಳು ಕೂಲಿ ಕೆಲಸಕ್ಕೆ ಹೋದರೆ, ತಂದೆ-ತಾಯಿಗಳು ಕೆಲಸ ಅರಸಿ ಗುಳೆ ಹೋಗುತ್ತಿದ್ದರು. ಹೀಗಾಗಿ, ಪಾಲಕರು ಕೂಲಿ ಕೆಲಸಕ್ಕೆ ಹೋದರೂ ಮಕ್ಕಳಿಗೆ ಅನಾನುಕೂಲ ಆಗಬಾರದು ಎಂದು ಸಿಎಂ ಸಿದ್ದರಾಮಯ್ಯ ಅವರು ಸರ್ಕಾರಿ ಶಾಲೆಗಳಲ್ಲಿ ನಿತ್ಯ ಬಿಸಿಯೂಟ ಮುಂದುವರಿಸಲು ಸೂಚಿಸಿದ್ದರು. ಏಪ್ರಿಲ್ 10ಕ್ಕೆ ಶಾಲಾ ರಜೆ ಆರಂಭವಾಗಿದ್ದು, ಮೇ 29ಕ್ಕೆ ಶಾಲೆ ಪುನಾರಂಭಗೊಳ್ಳಲಿದೆ. ಈ ಅವಧಿಯಲ್ಲಿಯೂ ಮಧ್ಯಾಹ್ನ ಬಿಸಿಯೂಟ ಪೂರೈಸಲು ಸೂಚಿಸಲಾಗಿತ್ತು.

 

ಬರಗಾಲದ ಬಿಸಿಯೂಟ ಗದಗದಲ್ಲಿ ಯಶಸ್ವಿ: ನಿತ್ಯ 13 ಸಾವಿರ ಮಕ್ಕಳಿಗೆ ಊಟ

ಒಪ್ಪಿಗೆ ನೀಡಿದ್ದ ಮಕ್ಕಳು ಬರುತ್ತಿಲ್ಲ:

ಬೇಸಿಗೆ ರಜೆ ವೇಳೆ ಎಷ್ಟು ಮಕ್ಕಳು ಮಧ್ಯಾಹ್ನದ ಬಿಸಿಯೂಟಕ್ಕೆ ಬರುತ್ತಾರೆ ಎಂದು ಶಾಲೆಗಳು ರಜೆ ಕೊಡುವ ಮೊದಲೇ ವಿದ್ಯಾರ್ಥಿಗಳಿಂದ ಒಪ್ಪಿಗೆ ಪತ್ರ ಪಡೆದಿದ್ದವು. ಆರಂಭದಲ್ಲಿ ಉತ್ಸಾಹದಿಂದಲೇ ಶಾಲೆಯಲ್ಲಿನ ಬಿಸಿಯೂಟಕ್ಕೆ ಬರುತ್ತಿದ್ದ ಮಕ್ಕಳು ದಿನ ಕಳೆದಂತೆ ನಿರ್ಲಕ್ಷ್ಯ ಮಾಡಿದ್ದಾರೆ. ಕೆಲವು ಕಡೆ ಒಪ್ಪಿಗೆ ಪತ್ರ ಕೊಟ್ಟಿರುವ ಮಕ್ಕಳ ಪಾಲಕರು ಬೇರೆಡೆ ಉದ್ಯೋಗ ಅರಸಿ ಗುಳೆ ಹೋಗಿದ್ದರಿಂದ ಅವರೊಟ್ಟಿಗೆ ಮಕ್ಕಳು ಹೋಗಿದ್ದಾರೆ. ಇನ್ನು, ಕೆಲವು ಮಕ್ಕಳು ಬೇಸಿಗೆ ರಜೆ ಕಳೆಯಲು ಬೇರೆಡೆ ಹೋಗಿದ್ದಾರೆ. ಇದರಿಂದ ಅರ್ಧಕ್ಕರ್ಧ ಶಾಲೆಗಳಲ್ಲಿ ಬಿಸಿಯೂಟ ಬಂದ್ ಆಗಿದೆ. ಮಕ್ಕಳೇ ಇಲ್ಲದ ಮೇಲೆ ಬಿಸಿಯೂಟ ಯಾರಿಗೆ ಕೊಡಬೇಕು ಎಂದುಕೊಂಡು ಸ್ಥಗಿತವಾಗಿದೆ.

ಊಟಕ್ಕೆ ಬರುತ್ತಿರುವವರು ಎಷ್ಟು ಮಕ್ಕಳು?:

ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಸೇರಿ 2,309 ಶಾಲೆಗಳಿದ್ದು, ಅದರಲ್ಲಿ 1,400 ಶಾಲೆಗಳಿಂದ ಬಿಸಿಯೂಟಕ್ಕೆ ಬೇಡಿಕೆ ಬಂದಿತ್ತು. 1 ರಿಂದ 10ನೇ ತರಗತಿವರೆಗಿನ 2.56 ಲಕ್ಷ ಮಕ್ಕಳಲ್ಲಿ, 1.40 ಲಕ್ಷ ಮಕ್ಕಳ ಪಾಲಕರು ಬಿಸಿಯೂಟಕ್ಕೆ ಮಕ್ಕಳನ್ನು ಕಳುಹಿಸುತ್ತೇವೆ ಎಂದು ಒಪ್ಪಿಗೆ ಪತ್ರ ಕೊಟ್ಟಿದ್ದರು. ಆದರೆ ಪ್ರಸ್ತುತ ಕೇವಲ 83 ಸಾವಿರ ಮಕ್ಕಳು ಮಾತ್ರ ಬಿಸಿಯೂಟಕ್ಕೆ ಬರುತ್ತಿದ್ದಾರೆ.

ಗಂಗಾವತಿ: ಮಧ್ಯಾಹ್ನದ ಬಿಸಿಯೂಟ ಸೇವಿಸಿ 15ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥ!

ಸರ್ಕಾರವೇನೋ ಮಧ್ಯಾಹ್ನದ ಬಿಸಿಯೂಟ ಕೊಡುತ್ತಿದೆ. ಆದರೆ, ಇನ್ನುಳಿದ ಸಮಯಗಳಲ್ಲಿ ನಾವು ಮನೆಯಲ್ಲಿ ಇಲ್ಲದಿರುವುದರಿಂದ ಮಕ್ಕಳಿಗೆ ತೊಂದರೆ ಆಗುವ ಹಿನ್ನೆಲೆ ಜೊತೆಗೆ ಕರೆದುಕೊಂಡು ಬಂದಿದ್ದೇವೆ. ನಾವು ಕೆಲಸ ಮಾಡುವ ಸ್ಥಳದಲ್ಲಿ ಅಥವಾ ಸಂಬಂಧಿಕರ ಮನೆಗಳಲ್ಲಿ ಬಿಟ್ಟು ಕೆಲಸ ಮಾಡುತ್ತಿದ್ದೇವೆ.

- ಅನ್ನಪೂರ್ಣ ಚಿಕ್ಕೊಂಡ, ಮಗುವಿನ ತಾಯಿ.

ಸರ್ಕಾರದ ಸೂಚನೆಯಂತೆ ಆರಂಭದಲ್ಲಿ ಬಹಳಷ್ಟು ಮಕ್ಕಳು ಬಿಸಿಯೂಟ ಸೇವಿಸಲು ಬರುವುದಾಗಿ ಒಪ್ಪಿಕೊಂಡಿದ್ದರು. ಆದರೆ ಇದೀಗ ಒಪ್ಪಿಗೆ ಕೊಟ್ಟ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು ಶಾಲೆಗಳಿಗೆ ಬಾರದ ಹಿನ್ನೆಲೆ, ಯಾವ,ಯಾವ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲವೋ ಅಂತಹ ಶಾಲೆಗಳಲ್ಲಿ ಬಿಸಿಯೂಟ ನಿಲ್ಲಿಸಲಾಗಿದೆ. ನಿತ್ಯ ಮಕ್ಕಳು ಬರುವ ಶಾಲೆಗಳಲ್ಲಿ ತಪ್ಪದೆ ಅನ್ನ-ಸಾರು ಬಿಸಿಯೂಟ ನೀಡಲಾಗುತ್ತಿದೆ.

- ಶಂಕರ ಕುಂಬಾರ, ಶಿಕ್ಷಣಾಧಿಕಾರಿಗಳು, ಅಕ್ಷರ ದಾಸೋಹ ವಿಭಾಗ.

click me!