ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್‌ ಕಾಲೇಜು: ಸಿಎಂ ಇಂಗಿತ

Published : Jan 18, 2025, 05:00 AM IST
ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್‌ ಕಾಲೇಜು: ಸಿಎಂ ಇಂಗಿತ

ಸಾರಾಂಶ

ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಮೆಡಿಕಲ್‌ ಕಾಲೇಜು ಆಗಬೇಕು. ಇದು ಸಾಧ್ಯವಾದರೆ ಮಾತ್ರ ಬಡವರು, ಹಳ್ಳಿಗಾಡಿನ ಮಕ್ಕಳು ಕೂಡ ವೈದ್ಯರಾಗಬಹುದು. ಬಡತನ ಗೊತ್ತಿರುವವರಿಗೆ ಮಾತ್ರ ಬಡವರ ಕಷ್ಟಗಳಿಗೆ ಸ್ಪಂದಿಸಲು, ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ನೀಡಲು ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ 

ಮಂಗಳೂರು(ಜ.18):  ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಮೆಡಿಕಲ್‌ ಕಾಲೇಜು ಹಾಗೂ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲುವು ಪ್ರಕಟಿಸಿದ್ದಾರೆ. ನಗರದ ಹೊರವಲಯದ ಮೇರಿಹಿಲ್‌ನಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಕ್ಕೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನಾನು ಹಣಕಾಸು ಸಚಿವನಾಗಿದ್ದಾಗಲೇ ಪ್ರತಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್‌ ಕಾಲೇಜು ಮತ್ತು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಯ ತೀರ್ಮಾನ ಮಾಡಿದ್ದೆ. ಆದರೆ, ಇಂದಿಗೂ ದ.ಕ., ಉಡುಪಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಾಡಲು ಆಗಿಲ್ಲ. ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಮೆಡಿಕಲ್‌ ಕಾಲೇಜು ಆಗಬೇಕು. ಇದು ಸಾಧ್ಯವಾದರೆ ಮಾತ್ರ ಬಡವರು, ಹಳ್ಳಿಗಾಡಿನ ಮಕ್ಕಳು ಕೂಡ ವೈದ್ಯರಾಗಬಹುದು. ಬಡತನ ಗೊತ್ತಿರುವವರಿಗೆ ಮಾತ್ರ ಬಡವರ ಕಷ್ಟಗಳಿಗೆ ಸ್ಪಂದಿಸಲು, ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಹೇಳಿದರು.

ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ 6ನೇ ವೈದ್ಯಕೀಯ ಕಾಲೇಜು ಆರಂಭಕ್ಕೆ ಸಿದ್ಧತೆ

ಮಂಗಳೂರಿನಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಪ್ರಾದೇಶಿಕ ಕೇಂದ್ರವನ್ನು ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೆ. ಅದರಂತೆ ಈಗ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇನ್ನೂ ಕೆಲವು ಕಡೆಗಳಲ್ಲಿ ಪ್ರಾದೇಶಿಕ ಕೇಂದ್ರಗಳ ಸ್ಥಾಪನೆ ಆಗಲಿದೆ. ಇದರಿಂದ ವಿದ್ಯಾರ್ಥಿಗಳು, ಪೋಷಕರಿಗೆ ಪ್ರತಿಯೊಂದಕ್ಕೂ ವಿವಿಯ ಮುಖ್ಯ ಕಚೇರಿಯನ್ನು ಅವಲಂಬಿಸುವುದು ತಪ್ಪಲಿದೆ ಎಂದು ಹೇಳಿದರು.

ಉಚಿತ ಚಿಕಿತ್ಸೆ:

ರಾಜೀವ್‌ ಗಾಂಧಿ ಆರೋಗ್ಯ ವಿವಿಗೆ ಏಷ್ಯಾ ಖಂಡದಲ್ಲೇ ಅತಿದೊಡ್ಡ ಆರೋಗ್ಯ ವಿವಿ ಎನ್ನುವ ಹೆಗ್ಗಳಿಕೆಯಿದೆ. ಈ ವಿವಿ ಬಡವರ ಪರ ಕೆಲಸ ಮಾಡಲಿ. ಸರ್ಕಾರ, ವಿಶ್ವವಿದ್ಯಾನಿಲಯಗಳು, ಆರೋಗ್ಯ ಇಲಾಖೆ ದುರ್ಬಲ ವರ್ಗಗಳಿಗಾಗಿಯೇ ಇರುವುದು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆ ಹಾಗೂ ನೆಫ್ರಾಲಜಿ ಇನ್‌ಸ್ಟಿಟ್ಯೂಟ್‌ ಗಳಿಗೆ ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ, ಎಪಿಎಲ್‌ ಕಾರ್ಡ್‌ದಾರರಿಗೆ ಅವರ ಜೀವನಮಟ್ಟಕ್ಕೆ ತಕ್ಕಂತೆ ಬಿಲ್‌ ಹೊಂದಾಣಿಕೆ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಉದ್ಘಾಟನೆಯಾದ ಒಂದೇ ವರ್ಷಕ್ಕೆ ಸೋರುತ್ತಿರುವ ಕಾಫಿನಾಡಿನ ಮೆಡಿಕಲ್ ಕಾಲೇಜ್: ತೀವ್ರ ಆಕ್ರೋಶ

ನಾನು ರಕ್ತನಾಳ ಬ್ಲಾಕ್‌ ಆದಾಗ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಕೊರೋನಾ ಬಂದಾಗಲೂ ದಾಖಲಾದದ್ದು ಮಣಿಪಾಲ್‌ ಆಸ್ಪತ್ರೆಗೆ. ಸರ್ಕಾರಿ ಆಸ್ಪತ್ರೆಗಳಿಗೆ ಎಲ್ಲ ವರ್ಗದ ಜನರು ಬರುವ ರೀತಿ ವ್ಯವಸ್ಥಿತ ಸೇವೆ ನೀಡಿದಾಗ ಮಾತ್ರ ಅವು ಸಮಾಜಮುಖಿಯಾಗಿವೆ ಎನ್ನಬಹುದು. ಎಷ್ಟು ಆಸ್ಪತ್ರೆಗಳಿವೆ ಅನ್ನೋದು ಮುಖ್ಯವಲ್ಲ, ಆಸ್ಪತ್ರೆಗಳು ಎಷ್ಟು ಜನಪರವಾಗಿವೆ ಎನ್ನುವುದು ಮುಖ್ಯ. ವೈದ್ಯರಾದವರು ಈ ಎಲ್ಲ ಸೂಕ್ಷ್ಮತೆಗಳನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ಹೇಳಿದರು.

ಶ್ರೀಮಂತರು ದುಬಾರಿ ಹಣ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಬಡವರು ಮತ್ತು ಹಳ್ಳಿಗಾಡಿನ ಜನರ ಆರೋಗ್ಯ ರಕ್ಷಣೆ ಸರ್ಕಾರಿ ಆಸ್ಪತ್ರೆ ವೈದ್ಯರ ಜವಾಬ್ದಾರಿ. ವೈದ್ಯೋ ನಾರಾಯಣೋ ಹರಿಃ ಎಂದು ಹೇಳುವ ಕಾಲವೊಂದಿತ್ತು. ಈಗ ಜನಪರವಾಗಿರುವ ಒಳ್ಳೆಯ ವೈದ್ಯರಿಗೆ ಮಾತ್ರ ಈ ಮಾತನ್ನು ಹೇಳುತ್ತಾರೆ. ಒಳ್ಳೆ ವೈದ್ಯರು ಇರುವಂತೆ ಕೆಟ್ಟ ವೈದ್ಯರೂ ಇರುತ್ತಾರೆ. ಆದರೆ, ಬಡವರ ಮೇಲೆ ಕಾಳಜಿ ವಹಿಸಿ ಅವರಿಗೆ ಆರೋಗ್ಯ ಸೇವೆ ನೀಡುವುದು ಮುಖ್ಯ. ಇದು ಸಾಧ್ಯವಾದರೆ ಸರ್ಕಾರಿ ಆಸ್ಪತ್ರೆಗಳನ್ನು ಮಾಡಿದ್ದು ಸಾರ್ಥಕ ಆಗುತ್ತದೆ. ಸರ್ಕಾರಿ ಆಸ್ಪತ್ರೆಗಳು ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ