ಪ್ರತಿಭಾನ್ವಿತ ಶಿಕ್ಷಕಿಯರಿದ್ದಾರೆ. ಕಲಿಕಾ ಉಪಕರಣಗಳಿಗೂ ಕೊರತೆಯಿಲ್ಲ. ವಿಶಾಲವಾದ ಆಟದ ಮೈದಾನವಿದೆ. ಶಾಲೆಗೆ ಗಟ್ಟಿಮುಟ್ಟಾದ ಆವರಣವಿದೆ. ಇಷ್ಟೆಲ್ಲಾ ಇದ್ದರೂ ಮಕ್ಕಳು ಬೆರಳಣಿಕೆಯಷ್ಟು ಮಾತ್ರ.
ದೀಪಕ್ ಅಳದಂಗಡಿ
ಬೆಳ್ತಂಗಡಿ(ಸೆ.23): ತರಗತಿಗಳಿಗೆ ಬೇಕಾದ ಪೀಠೋಪಕರಣಗಳಿವೆ. ವ್ಯವಸ್ಥಿತ ಗ್ರಂಥಾಲಯವಿದೆ. ಸಾಕಷ್ಟು ದೊಡ್ಡದಾದ ಕಟ್ಟಡವಿದ್ದು, ಕೋಣೆಗಳಿವೆ. ಬಿಸಿಯೂಟದ ವ್ಯವಸ್ಥೆ ಇದೆ. ಪ್ರತಿಭಾನ್ವಿತ ಶಿಕ್ಷಕಿಯರಿದ್ದಾರೆ. ಕಲಿಕಾ ಉಪಕರಣಗಳಿಗೂ ಕೊರತೆಯಿಲ್ಲ. ವಿಶಾಲವಾದ ಆಟದ ಮೈದಾನವಿದೆ. ಶಾಲೆಗೆ ಗಟ್ಟಿಮುಟ್ಟಾದ ಆವರಣವಿದೆ. ಇಷ್ಟೆಲ್ಲಾ ಇದ್ದರೂ ಮಕ್ಕಳು ಬೆರಳಣಿಕೆಯಷ್ಟು ಮಾತ್ರ. ಇದು ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಜೆಯಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಣ. ಏಳು ತರಗತಿಗಳಿಗೆ ಹತ್ತು ಮಂದಿ ಮಕ್ಕಳು! ಒಂದನೇ ತರಗತಿಯಲ್ಲಿ ಒಂದು ವಿದ್ಯಾರ್ಥಿ, ಎರಡನೇ ತರಗತಿಯಲ್ಲಿ ಯಾರೂ ಇಲ್ಲ. ಮೂರನೇ ತರಗತಿಯಲ್ಲಿ ಎರಡು ಮಕ್ಕಳು, ನಾಲ್ಕನೇ ತರಗತಿಯಲ್ಲಿ ಇಬ್ಬರು, ಐದನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ, ಆರನೇ ತರಗತಿಯಲ್ಲಿ ಇಬ್ಬರು, ಏಳನೇ ತರಗತಿಯಲ್ಲಿ ಇಬ್ಬರು ಇದ್ದಾರೆ. ಹೀಗೆ 7 ಹುಡುಗ ಮತ್ತು 3
ಹುಡುಗಿಯರಿರುವ ಶಾಲೆ ಫಂಡಿಜೆ ಶಾಲೆ.
ಒಂದಾನೊಂದು ಕಾಲದಲ್ಲಿ ಅತ್ಯುತ್ತಮ ಶಾಲೆಯೆಂದು ಪ್ರಸಿದ್ಧವಾಗಿತ್ತು. ಕಳೆದ ಏಳೆಂಟು ವರ್ಷಗಳಿಂದೀಚೆಗೆ ಆಂಗ್ಲ ಮಾಧ್ಯಮದ ಪ್ರಭಾವದಿಂದ ಮತ್ತು ಎರಡು ಕಿ.ಮೀ. ಅಂತರದಲ್ಲಿ ಇನ್ನೊಂದು ಶಾಲೆ ಇರುವುದರಿಂದ ಮಕ್ಕಳ ಸಂಖ್ಯೆ ಕ್ಷೀಣವಾಗತೊಡಗಿತು. ಅಲ್ಲದೆ ಶಾಲೆ ರಕ್ಷಿತಾರಣ್ಯದ ಮಧ್ಯೆ ಇದೆ. ಜನಸಂಖ್ಯೆ ಕಡಿಮೆ. ಸುತ್ತಲಿನ ಪ್ರದೇಶದಲ್ಲಿ ಈ ಶಾಲೆಗೆ ಬರುವಂತಹ ಮಕ್ಕಳಿಲ್ಲ. ಹೀಗಾಗಿ ನಾಲ್ಕು ವರ್ಷದ ಹಿಂದೆ 29 ಇದ್ದ ಮಕ್ಕಳ ಸಂಖ್ಯೆ ಬರಬರುತ್ತಾ 25, 18, 14ಕ್ಕೆ ಇಳಿದು ಈಗ 10 ಕ್ಕೆ ಬಂದು ನಿಂತಿದೆ. ಪಕ್ಕದಲ್ಲಿರುವ ಅಂಗನವಾಡಿಗೆ ಮೂರು ಮಕ್ಕಳು ಮಾತ್ರ ಲಭ್ಯವಾಗಿವೆ.
ಮಕ್ಕಳಲ್ಲಿ ಗಣಿತದ ಆಸಕ್ತಿ ಮೂಡಿಸುವುದು ಅಗತ್ಯ; ಪ್ರಲ್ಹಾದ್ ಜೋಶಿ
ಇದೀಗ 5-9-1960ರಲ್ಲಿ ಪ್ರಾರಂಭವಾದ ಶಾಲೆಯ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಮಕ್ಕಳ ಕೊರತೆಯಿಂದಾಗಿ ವಾರ್ಷಿಕೋತ್ಸವ, ಕ್ರೀಡಾಕೂಟಗಳನ್ನು ಮಾಡುವ ಹಾಗಿಲ್ಲ. ಪ್ರವಾಸಕ್ಕೆ ಆರ್ಥಿಕ ಅಡಚಣೆ. ಬೇರೆ ಯಾವುದೇ ಕಾರ್ಯಕ್ರಮಗಳನ್ನು ಮಾಡದೇ ಇರುವಂತಹ ಸ್ಥಿತಿ. ಇನ್ನೊಂದು ಹತ್ತು ಮಕ್ಕಳು ಈ ಶಾಲೆಗೆ ಸೇರ್ಪಡೆಯಾದರೆ ಒಂದಷ್ಟುಕಳೆ ಬಂದೀತು ಎನ್ನುತ್ತಾರೆ ಇಲ್ಲಿನ ಮುಖ್ಯ ಶಿಕ್ಷಕಿ ಫ್ಲೇವಿಯಾ ಡಿಸೋಜ. ಪ್ರತಿ ಶನಿವಾರ ಇದ್ದ ಮಕ್ಕಳಿಂದ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಎಲ್ಲವನ್ನೂ ಮಕ್ಕಳೇ ನಿರ್ವಹಿಸುವಂತೆ ಮಾಡಿದ್ದಾರೆ ಡಿಸೋಜ ಅವರು.
ಸ್ಥಳೀಯರಾದ ಪೂರ್ಣಿಮಾ ಹೆಬ್ಬಾರ ಅವರು ಅತಿಥಿ ಶಿಕ್ಷಕಿಯಾಗಿ ಕಳೆದೆರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ ಎಲ್ಲ ಪಾಠಗಳನ್ನು ಮಾಡಲೇಬೇಕಾದ ಅನಿವಾರ್ಯತೆ ಇವರಿಗಿದೆ. ಹೀಗಾಗಿ ಒಬ್ಬೊಬ್ಬರಿಗೆ 20 ವಿಷಯಗಳಲ್ಲಿ ಪಾಠ ಮಾಡಬೇಕಾಗುವಂತಹ ಸ್ಥಿತಿ ಇದೆ. ಕನಿಷ್ಠ ಮೂರು ಹುದ್ದೆ ಇಲ್ಲಿ ಬೇಕು. ನಲಿಕಲಿಗೆ ಶಿಕ್ಷಕರೇ ಇಲ್ಲ. ಅಂತೂ ಹಲ್ಲಿದ್ದರೆ ಕಡಲೇ ಇಲ್ಲ. ಕಡಲೇ ಇದ್ದರೆ ಹಲ್ಲಿಲ್ಲ ಎನ್ನುವಂತಹ ಸ್ಥಿತಿ ಫಂಡಿಜೆ ಶಾಲೆಯದು.
ಶಾಲೆ ಸ್ಥಿತಿ ಹೀಗಿದೆ. ಆದರೆ ಇಲ್ಲಿನ ಶಿಕ್ಷಕಿ ಫ್ಲೇವಿಯಾ ಡಿಸೋಜ ಬೆಸ್ಟ್ ಟೀಚರ್ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಮಕ್ಕಳ ಅತ್ಯಂತ ಪ್ರೀತಿಯ ಟೀಚರ್ ಆಗಿದ್ದಾರೆ. ನಾಲ್ಕು ವರ್ಷದ ಹಿಂದೆ ಅವರು ಸರ್ಕಾರಿ ಶಿಕ್ಷಕಿಯಾಗಿ ಫಂಡಿಜೆ ಶಾಲೆಗೆ ಆಯ್ಕೆಯಾದವರು. ಒಂದನೇ ತರಗತಿಗೆ ಸೇರಿಕೊಂಡ ಮಗು ಏಳನೇ ತರಗತಿಯಿಂದ ಹೊರ ಬರುವಾಗ ಆಂಗ್ಲ ಭಾಷೆಯನ್ನು ಸರಾಗವಾಗಿ ಮಾತನಾಡುವಂತೆ ಮಾಡಬಲ್ಲ ನಿಪುಣತೆ ಇವರಲ್ಲಿದೆ. ಹತ್ತು ಮಕ್ಕಳು ಮಾತ್ರ ಇರುವುದರಿಂದ ವೈಯಕ್ತಿಕ ಗಮನ ಕೊಡಲು ಸಾಧ್ಯವಾಗುತ್ತಿದೆ. ಈಚೆಗೆ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇಲ್ಲಿನ ಮಕ್ಕಳು 8 ಸ್ಪರ್ಧೆಗಳಲ್ಲಿ 6 ರಲ್ಲಿ ಬಹುಮಾನ ಪಡೆದಿದ್ದಾರೆ. ನಾಲ್ಕು ಮಕ್ಕಳು ತಾಲೂಕು ಮಟ್ಟಕ್ಕೆ ಸ್ಪರ್ಧಿಸಲಿದ್ದಾರೆ.
ಶಾಲೆಯಲ್ಲಿ ಒಳ್ಳೆಯ ಟೀಚರ್ ಇದ್ದಾರೆ. ಆದರೆ ಮಕ್ಕಳು ಇಲ್ಲದಿರುವುದು ಬೇಸರದ ಸಂಗತಿ. ಫ್ಲೇವಿಯಾ ಅವರ ಕರ್ತವ್ಯ ನಿಷ್ಠೆಯನ್ನು ಗಮನಿಸಿ ಸನಿಹದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಫಂಡಿಜೆ ಶಾಲೆಗೆ ಸೇರಿಸಿದರೆ ಉತ್ತಮ ಶಿಕ್ಷಣವನ್ನೂ ಪಡೆಯಬಹುದು, ಶಾಲೆಯನ್ನೂ ಉಳಿಸಬಹುದು ಅಂತ ಫಂಡಿಜೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸ್ವಾತಿ ತಿಳಿಸಿದ್ದಾರೆ.