ಧಾರವಾಡ: ರಾಷ್ಟ್ರಪತಿಯಿಂದ ಐಐಐಟಿ ಹೊಸ ಕ್ಯಾಂಪಸ್‌ ಲೋಕಾರ್ಪಣೆ!

By Kannadaprabha News  |  First Published Sep 23, 2022, 7:00 AM IST

ಸೆ. 26ರಂದು ಲೋಕಾರ್ಪಣೆ, 61 ಎಕರೆಯಲ್ಲಿ ಪ್ರದೇಶದಲ್ಲಿ ತಲೆ ಎತ್ತಿರುವ ಐಐಐಟಿ, ಪಿಪಿಪಿ ಆಧಾರದ ಮೇಲೆ 128 ಕೋಟಿ ವೆಚ್ಚದಲ್ಲಿ ನಿರ್ಮಾಣ


ಬಸವರಾಜ ಹಿರೇಮಠ

ಧಾರವಾಡ(ಸೆ.23):  ವಿದ್ಯಾಕಾಶಿ ಎಂಬ ಧಾರವಾಡದ ಹಿರಿಮೆಗೆ ಇದೀಗ ಮತ್ತೊಂದು ಗರಿ. ಪ್ರತಿಷ್ಠಿತ ರಾಷ್ಟ್ರಮಟ್ಟದ ಶಿಕ್ಷಣ ಸಂಸ್ಥೆಯಾದ ‘ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ’ (ಐಐಐಟಿ) ಸತ್ತೂರಿನ ಉದಯಗಿರಿ ಬಳಿ ತಲೆ ಎತ್ತಿದೆ. ಅತ್ಯಾಧುನಿಕ ಸೌಕರ್ಯಗಳ ಕ್ಯಾಂಪಸ್‌ ಮತ್ತು ಕಟ್ಟಡಗಳನ್ನು ಹೊಂದಿ ಲೋಕಾರ್ಪಣೆಗೆ ಸಿದ್ಧವಾಗಿದೆ.

Latest Videos

undefined

ರಾಷ್ಟ್ರಪತಿ ದ್ರೌಪದಿ ಮುರ್ಮು ಸೆ. 26ರಂದು ಮಧ್ಯಾಹ್ನ ನೂತನ ಕ್ಯಾಂಪಸ್‌ ಉದ್ಘಾಟಿಸಲಿದ್ದಾರೆ. ಐಐಐಟಿ 2015ರಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಆಧಾರದ ಮೇಲೆ ಸ್ಥಾಪನೆಗೊಂಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಿ ಶಾಖೆ, ಕರ್ನಾಟಕ ಸರ್ಕಾರ ಮತ್ತು ಕೈಗಾರಿಕಾ ಪಾಲುದಾರರಾದ ಕಿಯೋನಿಕ್ಸ್‌ ಸಹಭಾಗಿತ್ವ ಹೊಂದಿವೆ. ಕ್ರಮವಾಗಿ 50:35:15 ಆಧಾರದ ಮೇಲೆ ಒಟ್ಟು . 128 ಕೋಟಿ ವೆಚ್ಚದಲ್ಲಿ ನೂತನ ಕ್ಯಾಂಪಸ್‌ ತಲೆ ಎತ್ತಿದೆ. ಒಟ್ಟು 1200 ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಸಕಲ ಸೌಕರ್ಯ ಹೊಂದಿದೆ. ವಿಶೇಷ ಎಂದರೆ, ಐಐಐಟಿ ಧಾರವಾಡದ ಆಡಳಿತ ಮಂಡಳಿಗೆ ಇಸ್ಫೋಸಿಸ್‌ ಫೌಂಡೇಶನ್‌ ಮುಖ್ಯಸ್ಥರಾದ ಸುಧಾಮೂರ್ತಿ ಕಾರ್ಯಾಧ್ಯಕ್ಷರು.

ಹಾಸ್ಟಲ್‌ಗಳಲ್ಲಿ ಹೆಚ್ಚುವರಿ ಶೇ.25 ರಷ್ಟುಸಂಖ್ಯಾಬಲ ಹೆಚ್ಚಳ

ಯಾವ್ಯಾವ ಕೋರ್ಸ್‌?:

ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌, ಡಾಟಾ ಸೈನ್ಸ್‌ ಮತ್ತು ಕೃತಕ ಬುದ್ಧಿಮತ್ತೆ ಹಾಗೂ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಶನ್‌ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಕೋರ್ಸ್‌ಗಳನ್ನು ಹೊಂದಿದೆ. ಕ್ರಮವಾಗಿ 150, 75 ಹಾಗೂ 75 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದ್ದು, ಜತೆಗೆ ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್‌, ಶೈಕ್ಷಣಿಕ ಕಟ್ಟಡ, ಮುಖ್ಯ ಕಟ್ಟಡ, ಆರೋಗ್ಯ ಮತ್ತು ಫಿಟನೆಸ್‌ ಕಟ್ಟಡ ಮತ್ತು ವಿವಿಧೋಪಯೋಗಿ ಸಭಾಗೃಹ ಹೊಂದಿದೆ. ಈ ಸಭಾಗೃಹದಲ್ಲಿ ವಿವಿಧ ಒಳಾಂಗಣ ಆಟಗಳಿಗೆ ಅವಕಾಶವಿದೆ. ಪರಿಸರ ಸ್ನೇಹಿ ವಾತಾವರಣದಲ್ಲಿ 61 ಎಕರೆ ಭೂಮಿಯಲ್ಲಿ ಕ್ಯಾಂಪಸ್‌ ತಲೆ ಎತ್ತಿದ್ದು, ರಾಜ್ಯ ಸರ್ಕಾರ ಭೂಮಿ ನೀಡಿದೆ. ಇ-ಬ್ಲಾಕ್‌ ಎಂದು ಕರೆಯಲ್ಪಡುವ ಆಡಳಿತ ಸೌಧದಲ್ಲಿ ಬೋಧಕರಿಗೆ ಕ್ಯಾಬಿನ್‌, ಪ್ರಯೋಗಶಾಲೆ ಮತ್ತು ವರ್ಗದ ಕೋಣೆಗಳಿವೆ.

ಶಾಲೆಗಳಲ್ಲಿ ಡಿಸೆಂಬರ್‌ನಿಂದ ಭಗವದ್ಗೀತೆ ಪಾಠ: ಸಚಿವ ನಾಗೇಶ್‌

ಸುಸಜ್ಜಿತ ಗ್ರಂಥಾಲಯ:

ಐಐಐಟಿ ಧಾರವಾಡ ಕುಲಸಚಿವ ಪ್ರೊ. ಅಕ್ಕಿ ಕ್ಯಾಂಪಸ್‌ನಲ್ಲಿರುವ ಸೌಕರ್ಯಗಳ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದು, ಒಂದು ಹೊಸ ಮಾದರಿ ಆವರಣವನ್ನು ಐಐಐಟಿ ನಿರ್ಮಿಸಿದ್ದು, ಇಲ್ಲಿ 80 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸುವ ವರ್ಗದ ಕೋಣೆ ಅಥವಾ ಪ್ರಯೋಗಾಲಯವಾಗಿ ಇದನ್ನು ಸುಲಭವಾಗಿ ಪರಿವರ್ತಿಸಬಹುದು. ಇದರ ಜತೆಗೆ 120 ಹಾಗೂ 240 ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಇರುವ ವರ್ಗದ ಕೋಣೆಗಳಿದ್ದು, ಇಲ್ಲಿ ಕಾರ್ಯಾಗಾರ, ಸಮ್ಮೇಳನ ಮತ್ತು ಹ್ಯಾಕಥಾನ್‌ ಏರ್ಪಡಿಸಬಹುದಾಗಿದೆ ಮತ್ತು ಕಾರ್ಯಕ್ರಮಗಳ ನೇರ ಪ್ರಸಾರ ಮಾಡಬಹುದು. ಇ-ಬ್ಲಾಕ್‌ನಲ್ಲಿ ಸುಸಜ್ಜಿತ ಗ್ರಂಥಾಲಯವಿದ್ದು ದಿನದ 24 ಗಂಟೆ ಮುಕ್ತವಾಗಿರುತ್ತದೆ. ಆರೋಗ್ಯ ಮತ್ತು ಫಿಟನೆಸ್‌ ಬ್ಲಾಕ್‌ನಲ್ಲಿ ಔಷಧಾಲಯ, ಚಿಕಿತ್ಸಾಲಯ, ಜಿಮ್ನಾಶಿಯಂ, ಯೋಗ, ಕ್ಲಬ್‌, ಸಂಗೀತ, ಕ್ಯಾಂಟೀನ್‌, ಸಲೂನ್‌ಗೆ ಪ್ರತ್ಯೇಕ ಕೋಣೆಗಳಿದ್ದು ಜತೆಗೆ ದಿನಸಿ ವಸ್ತುಗಳ ಮಾರಾಟಕ್ಕೆ ಸಣ್ಣ ಅಂಗಡಿಗಳಿವೆ. ಇಸ್ಫೋಸಿಸ್‌ ಫೌಂಡೇಶನ್‌ . 28.28 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್‌ ನಿರ್ಮಿಸಿದೆ.

ಎಚ್‌-ಬ್ಲಾಕ್‌ನಲ್ಲಿ ಸಣ್ಣ ಸಣ್ಣ ಸಭೆ, ಸಂಗೀತ ಕಾರ್ಯಕ್ರಮ ಮತ್ತು ಡಿಜಿಟಲ್‌ ಸ್ಕ್ರೀನಿಂಗ್‌ ಮಾಡಬಹುದಾಗಿದೆ. ಮುಖ್ಯ ಕಟ್ಟಡದಲ್ಲಿ 40 ಜನರಿಗೆ ಸ್ಥಳಾವಕಾಶ ಇರುವ ಸಿನೆಟ್‌ ಹಾಲ್‌, ಬೋರ್ಡ್‌ ರೂಂ, ಡಿಜಿಟಲ್‌ ರಿಕಾರ್ಡಿಂಗ್‌ ಸ್ಟುಡಿಯೋ, ಡಾಟಾ ಸೆಂಟರ್‌ ಹಾಗೂ ಇತರ ಆಡಳಿತದ ಕಚೇರಿ ಕೋಣೆಗಳಿವೆ. ಇ-ಬ್ಲಾಕ್‌ ಮತ್ತು ಎಂ-ಬ್ಲಾಕ್‌ ಮಧ್ಯೆ ಎರಡನೆ ಮಹಡಿಯಲ್ಲಿ ಕಟ್ಟಡಲಾಗಿರುವ ಸೇತುವೆ ಇನ್‌ಕ್ಯುಬೇಶನ್‌ಗೆ ಉಪಯುಕ್ತವಾಗಿದೆ. ಸದ್ಯ ಈ ಸಂಸ್ಥೆಯಲ್ಲಿ ಉನ್ನತ ಅರ್ಹತೆ ಹೊಂದಿರುವ 36 ಬೋಧಕರು ಹಾಗೂ 29 ಶಿಕ್ಷಕೇತರ ಸಿಬ್ಬಂದಿ ಇದ್ದಾರೆ.
 

click me!